Bible Languages

Indian Language Bible Word Collections

Bible Versions

Books

Judges Chapters

Judges 19 Verses

Bible Versions

Books

Judges Chapters

Judges 19 Verses

1 ಆಗಿನ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಎಫ್ರಾಯೀಮ್ ಬೆಟ್ಟಪ್ರದೇಶದ ಒಂದು ಮೂಲೆಯಲ್ಲಿ ಒಬ್ಬ ಲೇವಿಯು ವಾಸಮಾಡುತ್ತಿದ್ದನು. ಆ ಮನುಷ್ಯನಿಗೆ ಒಬ್ಬ ಉಪಪತ್ನಿ ಇದ್ದಳು. ಅವಳು ಯೆಹೂದದ ಬೇತ್ಲೆಹೇಮಿನವಳಾಗಿದ್ದಳು.
2 ಒಮ್ಮೆ ಅವಳಿಗೂ ಆ ಲೇವಿಗೂ ಜಗಳವಾಯಿತು. ಅವಳು ಅವನನ್ನು ಬಿಟ್ಟು ಯೆಹೂದದ ಬೇತ್ಲೆಹೇಮಿನಲ್ಲಿದ್ದ ತನ್ನ ತಂದೆಯ ಮನೆಗೆ ಹೋದಳು. ಅವಳು ಅಲ್ಲಿ ನಾಲ್ಕು ತಿಂಗಳು ಇದ್ದುಬಿಟ್ಟಳು.
3 ಆಗ ಆಕೆಯ ಗಂಡನು ಅವಳ ಬಳಿಗೆ ಹೋದನು; ಅವಳೊಂದಿಗೆ ಪ್ರೀತಿಯಿಂದ ಮಾತನಾಡಿ ಅವಳನ್ನು ಕರೆದುಕೊಂಡು ಬರಬೇಕೆಂಬುದು ಅವನ ಆಲೋಚನೆಯಾಗಿತ್ತು. ಆದ್ದರಿಂದ ಅವನು ತನ್ನ ಸೇವಕನೊಡನೆ ಎರಡು ಕತ್ತೆಗಳನ್ನೂ ತೆಗೆದುಕೊಂಡು ಹೋದನು. ಆ ಲೇವಿಯನು ಆಕೆಯ ತಂದೆಯ ಮನೆಗೆ ಬಂದನು. ಅವಳ ತಂದೆಯು ಆ ಲೇವಿಯನನ್ನು ನೋಡಿ ಅವನನ್ನು ಸ್ವಾಗತಿಸಲು ಮನೆಯ ಹೊರಗೆ ಬಂದನು. ಅವಳ ತಂದೆಗೆ ಬಹಳ ಸಂತೋಷವಾಯಿತು.
4 ಅವಳ ತಂದೆಯು ಆ ಲೇವಿಯನನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ, ಅಲ್ಲೇ ಇರುವಂತೆ ಕೇಳಿಕೊಂಡನು. ಆದುದರಿಂದ ಆ ಲೇವಿಯು ಅಲ್ಲಿ ಮೂರು ದಿನ ಇದ್ದನು. ಅವನು ಅನ್ನಪಾನಮಾಡಿ ಮಾವನ ಮನೆಯಲ್ಲಿ ಮಲಗುತ್ತಿದ್ದನು.
5 ನಾಲ್ಕನೆಯ ದಿನ ಅವರು ಬೆಳಗಿನ ಜಾವ ಬೇಗ ಎದ್ದರು. ಆ ಲೇವಿಯು ಹೊರಡುವದಕ್ಕೆ ಸಿದ್ಧನಾಗುತ್ತಿದ್ದನು. ಆದರೆ ಮಾವನು ತನ್ನ ಅಳಿಯನಿಗೆ, “ಸ್ವಲ್ಪ ಊಟಮಾಡು; ಆಮೇಲೆ ಹೋಗುವಿಯಂತೆ” ಎಂದನು.
6 ಆದುದರಿಂದ ಆ ಲೇವಿಯು ಮತ್ತು ಅವನ ಮಾವನು ಒಟ್ಟಿಗೆ ಅನ್ನಪಾನಗಳನ್ನು ತೆಗೆದುಕೊಂಡರು. ಬಳಿಕ ಆ ಸ್ತ್ರೀಯ ತಂದೆಯು, “ದಯವಿಟ್ಟು ಈ ರಾತ್ರಿ ಇದ್ದುಬಿಡು. ವಿಶ್ರಮಿಸಿಕೋ, ಸಂತೋಷಪಡು” ಎಂದನು.
7 ಆದರೂ ಆ ಲೇವಿಯು ಹೊರಡುವುದಕ್ಕೆ ಎದ್ದನು. ಆದರೆ ಅವನ ಮಾವನು ಆ ರಾತ್ರಿಯೂ ಅಲ್ಲಿಯೇ ಇರುವಂತೆ ಒತ್ತಾಯ ಮಾಡಿದನು.
8 ಐದನೆಯ ದಿನ ಆ ಲೇವಿಯು ಬೆಳಗಿನ ಜಾವ ಬೇಗ ಎದ್ದು ಹೊರಡಲು ಸಿದ್ಧನಾಗಿದ್ದನು. ಆದರೆ ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಮೊದಲು ಊಟಮಾಡು; ವಿಶ್ರಾಂತಿ ತೆಗೆದುಕೋ. ಈ ರಾತ್ರಿ ಇಲ್ಲಿಯೇ ಇರು” ಎಂದು ಕೇಳಿಕೊಂಡನು. ಅವರಿಬ್ಬರು ಮತ್ತೆ ಊಟ ಮಾಡಿದರು.
9 ಆಮೇಲೆ ಆ ಲೇವಿಯೂ ಅವನ ಉಪಪತ್ನಿಯೂ ಅವನ ಆಳೂ ಹೊರಡಲು ಎದ್ದರು. ಆದರೆ ಆ ಸ್ತ್ರೀಯ ತಂದೆಯು, “ಈಗ ಕತ್ತಲಾಗುತ್ತಾ ಬಂತು, ಹೊತ್ತು ಮುಳುಗುವುದರಲ್ಲಿದೆ. ಈ ರಾತ್ರಿ ಇಲ್ಲಿಯೇ ಸಂತೋಷದಿಂದ ಕಾಲ ಕಳೆಯಿರಿ. ನಾಳೆ ಬೆಳಿಗ್ಗೆ ನೀವು ಬೇಗನೆ ಎದ್ದು ಪ್ರಯಾಣಮಾಡಬಹುದು” ಎಂದನು.
10 ಆದರೆ ಆ ಲೇವಿಯು ಇನ್ನೊಂದು ರಾತ್ರಿ ಅಲ್ಲಿ ಇರಲು ಇಷ್ಟಪಡಲಿಲ್ಲ. ಅವನು ತನ್ನ ಎರಡು ಕತ್ತೆಗಳನ್ನು ತೆಗೆದುಕೊಂಡು ಮತ್ತು ತನ್ನ ಉಪಪತ್ನಿಯನ್ನು ಕರೆದುಕೊಂಡು ಹೊರಟನು. ಅವನು ಜೆರುಸಲೇಮ್ ಎಂದು ಕರೆಯಲ್ಪಡುವ ಯೆಬೂಸ್ ನಗರದವರೆಗೆ ಪ್ರಯಾಣ ಮಾಡಿದನು.
11 ಹೊತ್ತು ಮುಳುಗುವುದರಲ್ಲಿತ್ತು. ಅವರು ಯೆಬೂಸ್ ನಗರದ ಹತ್ತಿರ ಬಂದಿದ್ದರು. ಆಗ ಅವನ ಸೇವಕನು ತನ್ನ ಒಡೆಯನಾದ ಆ ಲೇವಿಯನಿಗೆ, “ಈ ಯೆಬೂಸಿಯರ ನಗರದಲ್ಲಿ ಇದ್ದು ಬಿಡೋಣ, ಈ ರಾತ್ರಿ ಇಲ್ಲಿಯೇ ಕಳೆಯೋಣ” ಎಂದನು.
12 ಆದರೆ ಆ ಲೇವಿಯು, “ಬೇಡ, ನಾವು ಪರಿಚಯವಿಲ್ಲದವರ ನಗರದಲ್ಲಿ ಇರುವುದು ಬೇಡ. ಆ ಜನರು ಇಸ್ರೇಲರಲ್ಲ. ನಾವು ಗಿಬೆಯ ನಗರಕ್ಕೆ ಹೋಗೋಣ” ಎಂದನು.
13 ಆ ಲೇವಿಯು ಮತ್ತೆ ತನ್ನ ಸೇವಕನಿಗೆ, “ಬಾ ಹೋಗೋಣ, ಗಿಬೆಯದಲ್ಲಾಗಲಿ ಅಥವಾ ರಾಮದಲ್ಲಾಗಲಿ ಈ ರಾತ್ರಿ ಇಳಿದುಕೊಳ್ಳುವ ಪ್ರಯತ್ನ ಮಾಡೋಣ” ಎಂದು ಹೇಳಿದನು.
14 ಆ ಲೇವಿಯು ಮತ್ತು ಅವನ ಸಂಗಡ ಇದ್ದ ಜನರು ಪ್ರಯಾಣ ಮುಂದುವರಿಸಿದರು. ಅವರು ಗಿಬೆಯ ನಗರವನ್ನು ಪ್ರವೇಶ ಮಾಡಿದ ಸಮಯದಲ್ಲಿ ಸೂರ್ಯನು ಮುಳುಗುತ್ತಿದ್ದನು. ಗಿಬೆಯ ನಗರವು ಬೆನ್ಯಾಮೀನ್ಯರ ಪ್ರದೇಶದಲ್ಲಿದೆ.
15 ಅವರು ಗಿಬೆಯದಲ್ಲಿ ತಮ್ಮ ಪ್ರಯಾಣವನ್ನು ನಿಲ್ಲಿಸಿದರು. ಅಂದು ರಾತ್ರಿ ಆ ನಗರದಲ್ಲಿ ಇರುವುದಕ್ಕೆ ನಿರ್ಧಾರ ಮಾಡಿದರು. ಅವರು ನಗರದ ಬೀದಿಯ ಮುಖ್ಯಸ್ಥಳಕ್ಕೆ ಬಂದು ಅಲ್ಲಿ ಕುಳಿತುಕೊಂಡರು. ಯಾರೂ ಅವರನ್ನು ಆ ರಾತ್ರಿ ತಮ್ಮ ಮನೆಯಲ್ಲಿ ಇರಲು ಕರೆಯಲಿಲ್ಲ.
16 ಆ ಸಾಯಂಕಾಲ ಒಬ್ಬ ವೃದ್ಧನು ಹೊಲದಿಂದ ಮನೆಗೆ ಬರುತ್ತಿದ್ದನು. ಅವನು ಎಫ್ರಾಯೀಮ್ ಬೆಟ್ಟಪ್ರದೇಶದವನಾಗಿದ್ದು, ಈಗ ಗಿಬೆಯ ನಗರದಲ್ಲಿ ವಾಸಮಾಡುತ್ತಿದ್ದನು. (ಗಿಬೆಯದ ನಿವಾಸಿಗಳು ಬೆನ್ಯಾಮೀನ್ಯರಾಗಿದ್ದರು.)
17 ಆ ವೃದ್ಧನು ಬೀದಿಯ ಮುಖ್ಯಸ್ಥಳದಲ್ಲಿ ಪ್ರಯಾಣಿಕನನ್ನು (ಲೇವಿಯನ್ನು) ನೋಡಿದನು. ಆ ವೃದ್ಧನು, “ನೀನು ಎಲ್ಲಿಗೆ ಹೋಗಬೇಕು? ಎಲ್ಲಿಂದ ಬಂದಿರುವೆ?” ಎಂದು ಅವನನ್ನು ಕೇಳಿದನು.
18 ಅದಕ್ಕೆ ಲೇವಿಯು, “ನಾವು ಯೆಹೂದದ ಬೇತ್ಲೆಹೇಮಿನಿಂದ ಹೊರಟಿದ್ದೇವೆ. ಎಫ್ರಾಯೀಮ್ ಬೆಟ್ಟಪ್ರದೇಶದ ಒಂದು ಮೂಲೆಯಲ್ಲಿರುವ ನಮ್ಮ ಮನೆಗೆ ಹೋಗುತ್ತಿದ್ದೇವೆ. ಆದರೆ ಈ ರಾತ್ರಿ ಇಲ್ಲಿ ತಂಗಲು ಯಾರೂ ನಮ್ಮನ್ನು ತಮ್ಮ ಮನೆಗೆ ಆಹ್ವಾನಿಸಲಿಲ್ಲ. ನಾನು ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆ. ಈಗ ನಾನು ನಮ್ಮ ಮನೆಗೆ ಹೋಗುತ್ತಿದ್ದೇನೆ.
19 ನಮ್ಮ ಕತ್ತೆಗಳಿಗೆ ಮೇವು ಮತ್ತು ಹುಲ್ಲು ಇವೆ. ನನಗೂ ಈ ಸ್ತ್ರೀಗೂ ನನ್ನ ಸೇವಕನಿಗೂ ರೊಟ್ಟಿ ಮತ್ತು ದ್ರಾಕ್ಷಾರಸ ಇವೆ. ನಮಗೆ ಏನೂ ಬೇಕಾಗಿಲ್ಲ” ಎಂದು ಉತ್ತರಕೊಟ್ಟನು.
20 ಅದಕ್ಕೆ ಆ ವೃದ್ಧನು, “ನೀನು ನನ್ನ ಮನೆಗೆ ಬಂದು ಈ ರಾತ್ರಿ ಇಳಿದುಕೋ. ನಿನಗೆ ಬೇಕಾದುದನ್ನು ನಾನು ಕೊಡುವೆ. ನೀನು ಬೀದಿಯಲ್ಲಿ ಮಾತ್ರ ಇರಬೇಡ” ಎಂದು ಹೇಳಿದನು;
21 ಬಳಿಕ ಆ ವೃದ್ಧನು ಆ ಲೇವಿಯನನ್ನು ಮತ್ತು ಅವನ ಸಂಗಡ ಇದ್ದ ಜನರನ್ನು ತನ್ನ ಮನೆಗೆ ಕರೆದುಕೊಂಡು ಹೋದನು; ಅವರ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡರು. ಆಮೇಲೆ ಅವರು ಅನ್ನಪಾನಗಳನ್ನು ತೆಗೆದುಕೊಂಡರು.
22 ಲೇವಿಯು, ಮತ್ತು ಅವನ ಸಂಗಡಿಗರು ಸಂತೋಷದಿಂದ ಅಲ್ಲಿದ್ದಾಗ ಆ ನಗರದ ಕೆಲವು ಜನರು ಆ ಮನೆಗೆ ಮುತ್ತಿಗೆ ಹಾಕಿದರು. ಅವರು ಮಹಾ ನೀಚಜನರಾಗಿದ್ದರು. ಅವರು ಬಾಗಿಲು ತಟ್ಟತೊಡಗಿದರು. ಆ ಮನೆಯ ಯಜಮಾನನಾದ ವೃದ್ಧನಿಗೆ, “ನಿನ್ನ ಮನೆಗೆ ಬಂದ ಆ ಮನುಷ್ಯನನ್ನು ಹೊರಗೆ ಕರೆದುಕೊಂಡು ಬಾ. ನಾವು ಅವನೊಂದಿಗೆ ಸಂಭೋಗ ಮಾಡಬೇಕು”ಎಂದು ಕೂಗಾಡಿದರು.
23 ಆ ವೃದ್ಧನು ಮನೆಯಿಂದ ಹೊರಗೆ ಬಂದು ಆ ನೀಚರ ಜೊತೆ ಮಾತನಾಡಿ, “ಬೇಡ, ನನ್ನ ಮಿತ್ರರೇ, ಅಂಥ ಪಾಪದ ಕೆಲಸವನ್ನು ಮಾಡಬೇಡಿ. ಆ ಮನುಷ್ಯ ನನ್ನ ಅತಿಥಿಯಾಗಿದ್ದಾನೆ. ಈ ಭಯಂಕರ ಪಾಪವನ್ನು ಮಾಡಬೇಡಿ.
24 ಇಲ್ಲಿ ನೋಡಿರಿ, ನನ್ನ ಮಗಳಿದ್ದಾಳೆ. ಅವಳು ಯಾರೊಂದಿಗೂ ಈವರೆಗೆ ಸಂಭೋಗ ಮಾಡಿಲ್ಲ. ನಾನು ಅವಳನ್ನೂ ಅವನ ಉಪಪತ್ನಿಯನ್ನೂ ಹೊರಗೆ ಕರೆದುಕೊಂಡು ಬರುತ್ತೇನೆ. ನಿಮ್ಮ ಮನಸ್ಸಿಗೆ ಬಂದಂತೆ ಅವರನ್ನು ಬಳಸಿಕೊಳ್ಳಿ. ನೀವು ಅವರನ್ನು ಹಿಂಸಿಸಿದರೂ ಆ ಮನುಷ್ಯನ ವಿರೋಧವಾಗಿ ಅಂಥ ಭಯಂಕರ ಪಾಪವನ್ನು ಮಾಡಬೇಡಿ” ಎಂದು ಅವರನ್ನು ಬೇಡಿಕೊಂಡನು.
25 ಆದರೆ ಆ ನೀಚರು ಆ ವೃದ್ಧನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆಗ ಆ ಲೇವಿಯು ತನ್ನ ಉಪಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿ ಆ ನೀಚರಿಗೆ ಒಪ್ಪಿಸಿದನು. ಆ ನೀಚರು ಅವಳನ್ನು ಪೀಡಿಸಿ ಇಡೀ ರಾತ್ರಿ ಅವಳನ್ನು ಸಂಭೋಗಿಸಿದರು. ಬೆಳಗಿನ ಜಾವ ಅವಳನ್ನು ಹೋಗಲು ಬಿಟ್ಟರು.
26 ಬೆಳಗಿನ ಜಾವ ಅವಳು ತನ್ನ ಒಡೆಯನಿದ್ದ ಮನೆಗೆ ಬಂದಳು. ಅವಳು ಮನೆಯ ಮುಖ್ಯದ್ವಾರದಲ್ಲಿ ಬಿದ್ದುಬಿಟ್ಟಳು. ಬೆಳಗಾಗುವವರೆಗೂ ಅವಳು ಅಲ್ಲಿಯೇ ಬಿದ್ದಿದ್ದಳು.
27 ಆ ಲೇವಿಯನು ಮರುದಿನ ಬೆಳಿಗ್ಗೆ ಬೇಗ ಎದ್ದನು. ಅವನು ತನ್ನ ಮನೆಗೆ ಹೋಗಬೇಕೆಂದಿದ್ದನು. ಆದ್ದರಿಂದ ಹೊರಗೆ ಹೋಗಲು ಬಾಗಿಲು ತೆರೆದನು. ಬಾಗಿಲ ಮುಂದೆ ಹೊಸ್ತಿಲದ ಮೇಲೆ ಕೈಚಾಚಿ ಬಿದ್ದಿದ್ದ ತನ್ನ ಉಪಪತ್ನಿಯನ್ನು ಕಂಡನು.
28 ಆಗ ಲೇವಿಯು ಅವಳಿಗೆ, “ಏಳು, ಹೋಗೋಣ” ಎಂದು ಎಬ್ಬಿಸಿದನು. ಆದರೆ ಅವಳು ಉತ್ತರಕೊಡಲಿಲ್ಲ. ಅವಳು ಸತ್ತುಹೋಗಿದ್ದಳು. ಆ ಲೇವಿಯು, ಅವಳನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ಮನೆಗೆ ಹೋದನು.
29 ಅವನು ಮನೆಗೆ ಬಂದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹನ್ನೆರಡು ಹೋಳಾಗಿ ಕತ್ತರಿಸಿದನು. ಆಮೇಲೆ ಅವನು ಆ ಸ್ತ್ರೀಯ ದೇಹದ ಹನ್ನೆರಡು ಹೋಳುಗಳನ್ನು ಇಸ್ರೇಲರು ವಾಸಮಾಡುವ ಎಲ್ಲ ಪ್ರದೇಶಗಳಿಗೆ ಕಳುಹಿಸಿಕೊಟ್ಟನು.
30 ಇದನ್ನು ನೋಡಿದ ಪ್ರತಿಯೊಬ್ಬರು, “ಈ ಮುಂಚೆ ಇಸ್ರೇಲಿನಲ್ಲಿ ಇಂಥದ್ದು ಆಗಿಲ್ಲ. ನಾವು ಈಜಿಪ್ಟಿನಿಂದ ಹೊರಬಂದಾಗಿನಿಂದ ಇಂಥದನ್ನು ನೋಡಿಲ್ಲ. ಇದಕ್ಕೆ ತಕ್ಕಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ” ಎಂದು ಅಂದುಕೊಂಡರು.

Judges 19:1 Kannada Language Bible Words basic statistical display

COMING SOON ...

×

Alert

×