Bible Languages

Indian Language Bible Word Collections

Bible Versions

Books

John Chapters

John 9 Verses

Bible Versions

Books

John Chapters

John 9 Verses

1 ಯೇಸು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು.
2 ಯೇಸುವಿನ ಶಿಷ್ಯರು ಆತನಿಗೆ, “ಗುರುವೇ, ಈ ಮನುಷ್ಯನು ಹುಟ್ಟು ಕುರುಡನಾಗಲು ಯಾರ ಪಾಪ ಕಾರಣ? ಅವನ ಸ್ವಂತ ಪಾಪವೇ ಅಥವಾ ಅವನ ತಂದೆತಾಯಿಗಳ ಪಾಪವೇ?” ಎಂದು ಕೇಳಿದರು.
3 ಯೇಸು, “ಅವನ ಪಾಪವಾಗಲಿ ಅವನ ತಂದೆತಾಯಿಗಳ ಪಾಪವಾಗಲಿ ಇದಕ್ಕೆ ಕಾರಣವಲ್ಲ. ದೇವರ ಕಾರ್ಯವು ಅವನಲ್ಲಿ ತೋರಿಬಲೆಂದು ಹೀಗಾಗಿದ್ದಾನೆ.
4 ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು.
5 ನಾನು ಈ ಲೋಕದಲ್ಲಿರುವಾಗ, ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು.
6 ಯೇಸು ಈ ಮಾತನ್ನು ಹೇಳಿದ ಮೇಲೆ ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿಕೊಂಡು ಆ ಮನುಷ್ಯನ ಕಣ್ಣುಗಳಿಗೆ ಹಚ್ಚಿದನು.
7 ಯೇಸು ಆ ಮನುಷ್ಯನಿಗೆ, “ಹೋಗಿ ಶಿಲೋಮ್ ಕೊಳದಲ್ಲಿ (ಶಿಲೋಮ್ ಅಂದರೆ “ಕಳುಹಿಸಲ್ಪಟ್ಟವನು.”) ತೊಳೆದುಕೊ” ಎಂದು ಹೇಳಿದನು. ಅಂತೆಯೇ ಅವನು ಹೋಗಿ ತೊಳೆದುಕೊಂಡನು. ಆ ಕೂಡಲೇ ಅವನಿಗೆ ದೃಷ್ಟಿಬಂದಿತು.
8 ಈ ಮನುಷ್ಯನು ಮೊದಲು ಭಿಕ್ಷೆ ಬೇಡುತ್ತಿದ್ದುದನ್ನು ನೋಡಿದ್ದ ಕೆಲವರು ಮತ್ತು ಅವನ ನೆರೆಯವರು. “ನೋಡಿ! ಯಾವಾಗಲೂ ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ” ಎಂದು ವಿಚಾರಿಸಿದರು.
9 [This verse may not be a part of this translation]
10 ಜನರು, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.
11 ಆ ಮನುಷ್ಯನು, “ಯೇಸು ಎಂಬವನು ಸ್ವಲ್ಪ ಕೆಸರನ್ನು ಮಾಡಿ ನನ್ನ ಕಣ್ಣುಗಳಿಗೆ ಹಚ್ಚಿ, ಶಿಲೋಮ್ ಕೊಳಕ್ಕೆ ಹೋಗಿ ತೊಳೆದುಕೊಳ್ಳಲು ಹೇಳಿದನು. ಅಂತೆಯೇ ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
12 ಜನರು ಆ ಮನುಷ್ಯನಿಗೆ, “ಆ ವ್ಯಕ್ತಿ ಎಲ್ಲಿದ್ದಾನೆ?” ಎಂದು ಕೇಳಿದರು. ಆ ಮನುಷ್ಯನು, “ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.
13 ಬಳಿಕ ಜನರು ಆ ಮನುಷ್ಯನನ್ನು ಫರಿಸಾಯರ ಬಳಿಗೆ ಕರೆದು ತಂದರು. ಮೊದಲು ಕುರುಡನಾಗಿದ್ದವನು ಅವನೇ.
14 ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್‌ದಿನದಲ್ಲಿ.
15 ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು. ಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
16 ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು (ಯೇಸು) ಸಬ್ಬತ್‌ದಿನದ ವಿಷಯದಲ್ಲಿ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ಆದ್ದರಿಂದ ಇವನು ದೇವರಿಂದ ಬಂದಿಲ್ಲ” ಎಂದು ಹೇಳಿದರು. ಇತರರು, “ಇವನು ಪಾಪಿಯಾಗಿದ್ದರೆ ಇಂಥ ಅದ್ಭುತಕಾರ್ಯಗಳನ್ನು ಹೇಗೆ ಮಾಡಲಾದೀತು?” ಎಂದರು. ಹೀಗೆ ಯೆಹೂದ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಯಿತು.
17 ಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು. ಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
18 ಈ ಮನುಷ್ಯನು ಮೊದಲು ಕುರುಡನಾಗಿದ್ದನು. ಆದರೆ ಈಗ ಇವನಿಗೆ ಗುಣವಾಗಿದೆ ಎಂದು ಯೆಹೂದ್ಯನಾಯಕರುಗಳು ನಂಬಲಿಲ್ಲ. ಆದ್ದರಿಂದ ಅವರು ಅವನ ತಂದೆ ತಾಯಿಗಳನ್ನು ಕರೆಯಿಸಿದರು.
19 ಅವರು ಅವನ ತಂದೆತಾಯಿಗಳಿಗೆ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೆಂದು ನೀವು ಹೇಳುತ್ತೀರಿ. ಹಾಗಾದರೆ ಇವನಿಗೆ ಈಗ ಹೇಗೆ ಕಣ್ಣು ಕಾಣಿಸುತ್ತದೆ?” ಎಂದು ಕೇಳಿದರು.
20 ತಂದೆತಾಯಿಗಳು, “ಇವನು ನಮ್ಮ ಮಗನೆಂದು ನಮಗೆ ಗೊತ್ತು. ಇವನು ಹುಟ್ಟುಕುರುಡನೆಂಬುದೂ ನಮಗೆ ಗೊತ್ತು.
21 ಆದರೆ ಈಗ ಅವನಿಗೆ ಹೇಗೆ ಕಣ್ಣು ಕಾಣಿಸುತ್ತದೆಯೋ ಯಾರು ಗುಣಪಡಿಸಿದರೋ ನಮಗೆ ತಿಳಿಯದು. ಅವನನ್ನೇ ಕೇಳಿ. ಇವನು ತನ್ನ ವಿಷಯವಾಗಿ ಹೇಳುವಷ್ಟು ಪ್ರಾಯಸ್ಥನಾಗಿದ್ದಾನೆ” ಎಂದು ಉತ್ತರಕೊಟ್ಟರು.
22 ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಹೆದರಿಕೊಂಡಿದ್ದರಿಂದ ಹಾಗೆ ಹೇಳಿದರು. ಯೇಸುವನ್ನು ಕ್ರಿಸ್ತನೆಂದು ಹೇಳುವ ಯಾರನ್ನೇ ಆಗಲಿ ಸಭಾಮಂದಿರದಿಂದ ಬಹಿಷ್ಕರಿಸುವುದಾಗಿ ಯೆಹೂದ್ಯನಾಯಕರುಗಳು ಪ್ರಕಟಿಸಿದ್ದರು.
23 ಆದಕಾರಣವೇ ಅವನ ತಂದೆ ತಾಯಿಗಳು, “ಅವನು ಪ್ರಾಯಸ್ಥನಾಗಿದ್ದಾನೆ. ಅವನನ್ನೇ ಕೇಳಿ” ಎಂದು ಹೇಳಿದರು.
24 ಯೆಹೂದ್ಯ ನಾಯಕರು ಕುರುಡನಾಗಿದ್ದ ಆ ಮನುಷ್ಯನನ್ನು ಒಳಗೆ ಕರೆದು, “ನೀನು ದೇವರನ್ನು ಮಹಿಮೆಪಡಿಸಬೇಕು. ಈ ಮನುಷ್ಯನು (ಯೇಸು) ಪಾಪಿಯೆಂದು ನಮಗೆ ಗೊತ್ತಿದೆ” ಎಂದರು.
25 ಆ ಮನುಷ್ಯನು, “ಅವನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಕುರುಡನಾಗಿದ್ದೆನು; ಈಗ ನನಗೆ ದೃಷ್ಟಿ ಬಂದಿದೆ ಎಂಬುದಂತೂ ನನಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.
26 ಯೆಹೂದ್ಯನಾಯಕರು, “ಅವನು (ಯೇಸು) ನಿನಗೇನು ಮಾಡಿದನು? ಅವನು ನಿನ್ನ ಕಣ್ಣುಗಳನ್ನು ಹೇಗೆ ಗುಣಪಡಿಸಿದನು?” ಎಂದು ಕೇಳಿದರು.
27 ಆ ಮನುಷ್ಯನು, “ಆಗಲೇ ನಿಮಗೆ ಅದನ್ನು ತಿಳಿಸಿದ್ದೇನೆ. ಆದರೆ ನೀವು ನನಗೆ ಕಿವಿಗೊಡಲಿಲ್ಲ. ಈಗ ಅದನ್ನು ಮತ್ತೆ ಏಕೆ ಕೇಳಬೇಕೆಂದಿದ್ದೀರಿ? ನೀವು ಸಹ ಆತನ ಹಿಂಬಾಲಕರಾಗ ಬೇಕೆಂದಿದ್ದೀರೋ?” ಎಂದು ಉತ್ತರಕೊಟ್ಟನು.
28 ಯೆಹೂದ್ಯನಾಯಕರು ಕೋಪಗೊಂಡು ಆ ಮನುಷ್ಯನನ್ನು ಅಪಹಾಸ್ಯಮಾಡಿ, “ನೀನು ಅವನ (ಯೇಸು) ಹಿಂಬಾಲಕನಾಗಿರುವೆ. ನಾವು ಮೋಶೆಯ ಹಿಂಬಾಲಕರಾಗಿದ್ದೇವೆ.
29 ದೇವರು ಮೋಶೆಯೊಂದಿಗೆ ಮಾತಾಡಿದನೆಂಬುದನ್ನು ನಾವು ಬಲ್ಲೆವು. ಆದರೆ ಆ ಮನುಷ್ಯನು (ಯೇಸು) ಎಲ್ಲಿಂದ ಬಂದನೆಂಬುದು ಸಹ ನಮಗೆ ಗೊತ್ತಿಲ್ಲ!” ಎಂದು ಹೇಳಿದರು.
30 ಆ ಮನುಷ್ಯನು, “ಇದು ಬಹು ಆಶ್ಚರ್ಯಕರವಾದ ಸಂಗತಿ. ಯೇಸು ಎಲ್ಲಿಂದ ಬಂದನೆಂಬುದು ನಿಮಗೆ ಗೊತ್ತಿಲ್ಲ. ಆದರೆ ಆತನು ನನ್ನ ಕಣ್ಣುಗಳನ್ನು ಗುಣಪಡಿಸಿದನು.
31 ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲವೆಂಬುದು ನಮ್ಮೆಲರಿಗೂ ಗೊತ್ತಿದೆ. ಆದರೆ ದೇವರು ತನ್ನನ್ನು ಆರಾಧಿಸುವವನಿಗೂ ಮತ್ತು ತನಗೆ ವಿಧೇಯನಾಗುವವನಿಗೂ ಕಿವಿಗೊಡುತ್ತಾನೆ.
32 ಹುಟ್ಟುಕುರುಡನೊಬ್ಬನನ್ನು ಯಾರಾದರೂ ಎಂದಾದರೂ ಗುಣಪಡಿಸಿರುವುದು ಇದೇ ಮೊದಲನೆ ಸಲ.
33 ಆ ಮನುಷ್ಯನು (ಯೇಸು) ದೇವರಿಂದಲೇ ಬಂದಿರಬೇಕು. ಆತನು ದೇವರಿಂದ ಬಂದಿಲ್ಲದಿದ್ದರೆ, ಇಂಥ ಕಾರ್ಯಗಳನ್ನು ಮಾಡಲಾಗುತ್ತಿರಲಿಲ್ಲ” ಎಂದು ಉತ್ತರಕೊಟ್ಟನು.
34 ಯೆಹೂದ್ಯನಾಯಕರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು! ನಮಗೇ ಉಪದೇಶಮಾಡುವಿಯಾ?” ಎಂದು ಉತ್ತರಕೊಟ್ಟರು. ಅಲ್ಲದೆ ಅವರು ಅವನನ್ನು ಬಲವಂತವಾಗಿ ಹೊರಗಟ್ಟಿದರು.
35 ಯೆಹೂದ್ಯನಾಯಕರು ಆ ಮನುಷ್ಯನನ್ನು ಹೊರಗಟ್ಟಿದ್ದು ಯೇಸುವಿಗೆ ತಿಳಿಯಿತು. ಯೇಸು ಆ ಮನುಷ್ಯನನ್ನು ಕಂಡು, “ನೀನು ಮನುಷ್ಯಕುಮಾರನಲ್ಲಿ ನಂಬಿಕೆಯಿಡುವಿಯಾ?” ಎಂದು ಕೇಳಿದನು.
36 ಆ ಮನುಷ್ಯನು, “ಸ್ವಾಮೀ, ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು. ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದನು.
37 ಯೇಸು, “ನೀನು ಆತನನ್ನು ಈಗಾಗಲೇ ನೋಡಿರುವೆ. ಈಗ ನಿನ್ನೊಂದಿಗೆ ಮಾತಾಡುತ್ತಿರುವಾತನೇ ಮನುಷ್ಯಕುಮಾರನು” ಎಂದು ಹೇಳಿದನು.
38 ಆ ಮನುಷ್ಯನು, “ಹೌದು ಪ್ರಭುವೇ, ನಾನು ನಂಬುತ್ತೇನೆ!” ಎಂದು ಉತ್ತರಕೊಟ್ಟನು. ಬಳಿಕ ಅವನು ಯೇಸುವಿಗೆ ಅಡ್ಡಬಿದ್ದು ಆರಾಧಿಸಿದನು.
39 ಯೇಸು, “ಈ ಲೋಕಕ್ಕೆ ತೀರ್ಪಾಗಲೆಂದು ನಾನು ಈ ಲೋಕಕ್ಕೆ ಬಂದೆನು. ಕುರುಡರು ಕಾಣವಂತಾಗಲೆಂದೂ ಕಣ್ಣುಳ್ಳವರು ಕುರುಡರಾಗಲೆಂದೂ ನಾನು ಬಂದೆನು” ಎಂದು ಹೇಳಿದನು.
40 ಅಲ್ಲಿದ್ದ ಫರಿಸಾಯರು ಇದನ್ನು ಕೇಳಿ, “ಏನು? ನಮ್ಮನ್ನು ಸಹ ಕುರುಡರೆಂದು ಹೇಳುತ್ತಿರುವೆಯಾ?” ಎಂದು ಪ್ರಶ್ನಿಸಿದರು.
41 ಯೇಸು, “ನೀವು ನಿಜವಾಗಿಯೂ ಕುರುಡರಾಗಿದ್ದರೆ ಪಾಪವೆಂಬ ಅಪರಾಧಕ್ಕೆ ಗುರಿಯಾಗುತ್ತಿರಲಿಲ್ಲ. ಆದರೆ ನೀವು, ؅ನಮಗೆ ಕಣ್ಣು ಕಾಣುತ್ತದೆ؆ ಎಂದು ಹೇಳುತ್ತೀರಿ. ಆದ್ದರಿಂದ ನೀವು ಪಾಪಿಗಳೇ ಆಗಿದ್ದೀರಿ” ಎಂದು ಹೇಳಿದನು.

John 9:1 Kannada Language Bible Words basic statistical display

COMING SOON ...

×

Alert

×