1
|
ತರುವಾಯ, ಯೇಸು ಗಲಿಲಾಯ ಸರೋವರವನ್ನು (ತಿಬೇರಿಯ ಸರೋವರ) ದಾಟಿ ಆಚೆಯ ದಡಕ್ಕೆ ಹೋದನು. |
2
|
ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಏಕೆಂದರೆ ಯೇಸು ರೋಗಿಗಳನ್ನು ಗುಣಪಡಿಸುವುದರ ಮೂಲಕ ತನ್ನ ಅಧಿಕಾರವನ್ನು ತೋರಿಸಿದ್ದನು. ಅವರೆಲ್ಲರೂ ಅದನ್ನು ನೋಡಿದ್ದರು. |
3
|
ಆಗ ಯೇಸು ಬೆಟ್ಟವನ್ನು ಹತ್ತಿ ತನ್ನ ಶಿಷ್ಯರ ಸಂಗಡ ಕುಳಿತುಕೊಂಡನು. |
4
|
ಯೆಹೂದ್ಯರ ಪಸ್ಕಹಬ್ಬವೂ ಬಹು ಸಮೀಪವಾಗಿತ್ತು. |
5
|
ಯೇಸು ಕಣ್ಣೆತ್ತಿ ನೋಡಿದಾಗ, ತನ್ನ ಬಳಿಗೆ ಬರುತ್ತಿದ್ದ ಜನಸಮೂಹವನ್ನು ಕಂಡು ಫಿಲಿಪ್ಪನಿಗೆ, “ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿ ಕೊಂಡುಕೊಳ್ಳೋಣ?” ಎಂದು ಕೇಳಿದನು. |
6
|
(ಫಿಲಿಪ್ಪನನ್ನು ಪರೀಕ್ಷಿಸುವುದಕ್ಕಾಗಿ ಆತನು ಈ ಪ್ರಶ್ನೆಯನ್ನು ಕೇಳಿದನು. ತಾನು ಮಾಡಲಿದ್ದ ಕಾರ್ಯ ಯೇಸುವಿಗೆ ಮೊದಲೇ ತಿಳಿದಿತ್ತು.) |
7
|
ಫಿಲಿಪ್ಪನು, “ಇಲ್ಲಿರುವ ಪ್ರತಿಯೊಬ್ಬರಿಗೆ ರೊಟ್ಟಿಯ ಒಂದು ತುಂಡನ್ನು ಕೊಡಬೇಕಾದರೆ, ಇನ್ನೂರು ದಿನಾರಿ ನಾಣ್ಯಗಳಾದರೂ ಬೇಕು” ಎಂದು ಉತ್ತರಕೊಟ್ಟನು. |
8
|
ಅಂದ್ರೆಯನೆಂಬ ಮತ್ತೊಬ್ಬ ಶಿಷ್ಯನು ಅಲ್ಲಿದ್ದನು. ಅಂದ್ರೆಯನು ಸೀಮೋನ್ ಪೇತ್ರನ ಸಹೋದರ. |
9
|
ಅಂದ್ರೆಯನು, “ಇಲ್ಲಿರುವ ಒಬ್ಬ ಹುಡಗನ ಬಳಿ ಜವೆಗೋದಿಯ ಐದು ರೊಟ್ಟಿಗಳಿವೆ ಮತ್ತು ಎರಡು ಚಿಕ್ಕ ಮೀನುಗಳಿವೆ. ಆದರೆ ಅವು ಈ ಜನಸಮೂಹಕ್ಕೆ ಸಾಕಾಗುವುದಿಲ್ಲ” ಎಂದು ಹೇಳಿದನು. |
10
|
ಯೇಸು, “ಜನರಿಗೆ ಕುಳಿತುಕೊಳ್ಳಲು ಹೇಳಿರಿ” ಎಂದು ತಿಳಿಸಿದನು. ಆ ಸ್ಥಳದಲ್ಲಿ ಹುಲ್ಲು ಹುಲುಸಾಗಿ ಬೆಳೆದಿತ್ತು. ಅಲ್ಲಿ ಕುಳಿತುಕೊಂಡವರಲ್ಲಿ ಸುಮಾರು ಐದುಸಾವಿರ ಮಂದಿ ಗಂಡಸರಿದ್ದರು. |
11
|
ಬಳಿಕ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ಕುಳಿತುಕೊಂಡಿದ್ದ ಜನರಿಗೆ ಕೊಟ್ಟನು. ಆತನು ಮೀನುಗಳನ್ನು ಕೊಡುವಾಗಲೂ ಅದೇರೀತಿ ಮಾಡಿದನು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು. |
12
|
ಅವರೆಲ್ಲರೂ ಊಟ ಮಾಡಿ ತೃಪ್ತರಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಉಳಿದುಹೋದ ರೊಟ್ಟಿ ಮತ್ತು ಮೀನುಗಳ ತುಂಡುಗಳನ್ನು ಒಟ್ಟುಗೂಡಿಸಿರಿ. ಯಾವುದನ್ನೂ ಹಾಳುಮಾಡಬೇಡಿ” ಎಂದು ಹೇಳಿದನು. |
13
|
ಆದ್ದರಿಂದ ಶಿಷ್ಯರು ಉಳಿದುಹೋಗಿದ್ದ ತುಂಡುಗಳನ್ನು ಒಟ್ಟುಗೂಡಿಸಿದರು. ಜನರು ತಿನ್ನಲು ಆರಂಭಿಸಿದಾಗ ಕೇವಲ ಐದು ಜವೆಗೋದಿಯ ರೊಟ್ಟಿಗಳಿದ್ದವು. ಆದರೆ ಶಿಷ್ಯರು ಉಳಿದುಹೋದ ಆಹಾರದ ತುಂಡುಗಳನ್ನು ಒಟ್ಟುಗೂಡಿಸಿದಾಗ ಹನ್ನೆರಡು ದೊಡ್ಡ ಬುಟ್ಟಿಗಳು ತುಂಬಿಹೋದವು. |
14
|
ಯೇಸು ಮಾಡಿದ ಈ ಸೂಚಕಕಾರ್ಯವನ್ನು ಕಂಡ ಜನರು, “ಈ ಲೋಕಕ್ಕೆ ಬರಲಿರುವ ಪ್ರವಾದಿ ನಿಜವಾಗಿಯೂ ಈತನೇ ಇರಬೇಕು” ಎಂದು ಹೇಳತೊಡಗಿದರು. |
15
|
ತನ್ನನ್ನು ಬಲವಂತದಿಂದ ರಾಜನನ್ನಾಗಿ ಮಾಡಲು ಜನರು ಯೋಚಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅಲ್ಲಿಂದ ತಾನೊಬ್ಬನೇ ಬೆಟ್ಟಕ್ಕೆ ಮತ್ತೆ ಹೋದನು. |
16
|
ಆ ಸಾಯಂಕಾಲ ಯೇಸುವಿನ ಶಿಷ್ಯರು ಸರೋವರಕ್ಕೆ (ಗಲಿಲಾಯ) ಹೋದರು. |
17
|
ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಆದ್ದರಿಂದ ಶಿಷ್ಯರು ದೋಣಿಯನ್ನು ಹತ್ತಿ ಸರೋವರದ ಆಚೆಯ ಕಡೆಯಿದ್ದ ಕಪೆರ್ನೌಮಿಗೆ ಹೊರಟರು. |
18
|
ಗಾಳಿಯು ಬಹು ರಭಸವಾಗಿ ಬೀಸುತ್ತಿತ್ತು. ಸರೋವರದ ಅಲೆಗಳು ದೊಡ್ಡದಾಗುತ್ತಿದ್ದವು. |
19
|
ಅವರು ಹುಟ್ಟು ಹಾಕುತ್ತಾ ಸುಮಾರು ಮೂರು ಅಥವಾ ನಾಲ್ಕು ಮೈಲಿಗಳವರೆಗೆ ದೋಣಿಯನ್ನು ನಡೆಸಿದ ನಂತರ ಯೇಸುವನ್ನು ಕಂಡರು. ಆತನು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುತ್ತಿರುವುದನ್ನು ಕಂಡು ಅವರಿಗೆ ಭಯವಾಯಿತು. |
20
|
ಯೇಸು ಅವರಿಗೆ, “ಹೆದರಬೇಡಿರಿ, ನಾನೇ” ಎಂದು ಹೇಳಿದನು. |
21
|
ಆಗ ಅವರು ಯೇಸುವನ್ನು ದೋಣಿಯೊಳಗೆ ಬರಮಾಡಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲೇ, ಅವರು ಹೋಗಬೇಕೆಂದಿದ್ದ ಸ್ಥಳದ ದಡಕ್ಕೆ ದೋಣಿಯು ತಲುಪಿತು. |
22
|
ಮರುದಿನವಾಯಿತು. ಕೆಲವು ಜನರು ಸರೋವರದ ಮತ್ತೊಂದು ಕಡೆಯಲ್ಲಿ ಉಳಿದುಕೊಂಡಿದ್ದರು. ಯೇಸು ತನ್ನ ಶಿಷ್ಯರೊಂದಿಗೆ ದೋಣಿಯಲ್ಲಿ ಹೋಗಲಿಲ್ಲ ಎಂಬುದು ಈ ಜನರಿಗೆ ತಿಳಿದಿತ್ತು. ಯೇಸುವಿನ ಶಿಷ್ಯರು ಮಾತ್ರ ದೋಣಿಯಲ್ಲಿ ಹೋದರೆಂಬುದೂ ಮತ್ತು ಅದೊಂದು ದೋಣಿ ಮಾತ್ರ ಅಲ್ಲಿತ್ತೆಂಬುದೂ ಅವರಿಗೆ ಗೊತ್ತಿತ್ತು. |
23
|
ಆದರೆ ಅಷ್ಟರಲ್ಲಿಯೇ, ಕೆಲವು ದೋಣಿಗಳು ತಿಬೇರಿಯಾದಿಂದ ಬಂದವು. ಅವರು ಊಟ ಮಾಡಿದ ಸ್ಥಳಕ್ಕೆ ಸಮೀಪದ ದಡದಲ್ಲಿಯೇ ಆ ದೋಣಿಗಳು ನಿಂತುಕೊಂಡವು. ಪ್ರಭುವು (ಯೇಸು) ಸ್ತೋತ್ರ ಮಾಡಿದ ಮೇಲೆ ಅವರು ರೊಟ್ಟಿಯನ್ನು ಆ ಸ್ಥಳದಲ್ಲೇ ತಿಂದಿದ್ದರು. |
24
|
ಯೇಸು ಮತ್ತು ಆತನ ಶಿಷ್ಯರು ಅಲ್ಲಿಲ್ಲದಿರುವುದನ್ನು ಜನರು ಕಂಡು ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಹೋದರು. ಅವರು ಯೇಸುವನ್ನು ಕಂಡುಕೊಳ್ಳಬೇಕೆಂದಿದ್ದರು. |
25
|
ಜನರು ಯೇಸುವನ್ನು ಸರೋವರದ ಆಚೆಯ ದಡದಲ್ಲಿ ಕಂಡುಕೊಂಡರು. ಅವರು ಆತನಿಗೆ, “ಗುರುವೇ, ನೀನು ಇಲ್ಲಿಗೆ ಯಾವಾಗ ಬಂದೆ?” ಎಂದು ಕೇಳಿದರು. |
26
|
ಯೇಸು, “ನೀವು ನನ್ನನ್ನು ಏಕೆ ಹುಡುಕುತ್ತಿದ್ದೀರಿ? ನನ್ನ ಅಧಿಕಾರವನ್ನು ನಿರೂಪಿಸುವ ನನ್ನ ಅದ್ಭುತಕಾರ್ಯಗಳನ್ನು ಕಂಡು ನೀವು ನನ್ನನ್ನು ಹುಡುಕುತ್ತಿದ್ದೀರೋ? ಇಲ್ಲ! ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ರೊಟ್ಟಿಯನ್ನು ತೃಪ್ತಿಯಾಗುವಷ್ಟು ತಿಂದಕಾರಣ ನನ್ನನ್ನು ಹುಡುಕುತ್ತಿದ್ದೀರಿ. |
27
|
ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು. |
28
|
ಜನರು ಯೇಸುವಿಗೆ, “ನಾವು ಯಾವ ಕಾರ್ಯಗಳನ್ನು ಮಾಡಬೇಕೆಂದು ದೇವರು ಬಯಸುತ್ತಾನೆ?” ಎಂದು ಕೇಳಿದರು. |
29
|
ಯೇಸು, “ದೇವರು ಕಳುಹಿಸಿದಾತನನ್ನು ನೀವು ನಂಬಬೇಕು. ಈ ಕಾರ್ಯವನ್ನೇ ದೇವರು ನಿಮ್ಮಿಂದ ಅಪೇಕ್ಷಿಸುತ್ತಾನೆ” ಎಂದು ಉತ್ತರಕೊಟ್ಟನು. |
30
|
ಆದ್ದರಿಂದ ಜನರು, “ದೇವರಿಂದ ಕಳುಹಿಸಲ್ಪಟ್ಟಾತನು ನೀನೇ ಎಂಬುದನ್ನು ನಿರೂಪಿಸುವುದಕ್ಕಾಗಿ ನೀನು ಯಾವ ಸೂಚಕಕಾರ್ಯವನ್ನು ಮಾಡುವೆ? |
31
|
ನಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು (ಆಹಾರವನ್ನು) ತಿಂದರು. ದೇವರು ಅವರಿಗೆ ತಿನ್ನಲು ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ؆” ಎಂದು ಹೇಳಿದರು. |
32
|
ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ಜನರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ. ಆದರೆ ನನ್ನ ತಂದೆಯು ನಿಮಗೆ ಪರಲೋಕದಿಂದ ನಿಜವಾದ ರೊಟ್ಟಿಯನ್ನು ಕೊಡುವನು. |
33
|
ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು. |
34
|
ಜನರು, “ಅಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದು ಕೇಳಿಕೊಂಡರು. |
35
|
ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು. |
36
|
ನಾನು ನಿಮಗೆ ಮೊದಲೇ ಹೇಳಿದಂತೆ, ನೀವು ನನ್ನನ್ನು ನೋಡಿದ್ದರೂ ಇನ್ನೂ ನನ್ನನ್ನು ನಂಬುತ್ತಿಲ್ಲ. |
37
|
ತಂದೆಯು ನನ್ನ ಜನರನ್ನು ನನಗೆ ಕೊಡುತ್ತಾನೆ. ಆ ಜನರಲ್ಲಿ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ. ನನ್ನಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ನಾನು ಖಂಡಿತವಾಗಿ ಸ್ವೀಕರಿಸಿಕೊಳ್ಳುವೆನು, ಅವರನ್ನೆಂದಿಗೂ ತಳ್ಳಿಬಿಡುವುದಿಲ್ಲ. |
38
|
ನಾನು ಪರಲೋಕದಿಂದ ಇಳಿದು ಬಂದದ್ದು ದೇವರ ಚಿತ್ತಕ್ಕನುಸಾರವಾಗಿ ಮಾಡುವುದಕ್ಕಾಗಿಯೇ ಹೊರತು ನನ್ನ ಚಿತ್ತಕ್ಕನುಸಾರವಾಗಿಯಲ್ಲ. |
39
|
ದೇವರು ನನಗೆ ಕೊಟ್ಟಿರುವ ಯಾವ ವ್ಯಕ್ತಿಯನ್ನೂ ನಾನು ಕಳೆದುಕೊಳ್ಳಕೂಡದು. ಅಲ್ಲದೆ ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸಬೇಕು. ನನ್ನನ್ನು ಕಳುಹಿಸಿದಾತನು ಆ ಕಾರ್ಯವನ್ನೇ ನನ್ನಿಂದ ಅಪೇಕ್ಷಿಸುತ್ತಾನೆ. |
40
|
ಮಗನನ್ನು ನೋಡಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. ನನ್ನ ತಂದೆಯು ಬಯಸುವುದು ಇದನ್ನೇ” ಎಂದನು. |
41
|
ಯೆಹೂದ್ಯರು ಯೇಸುವಿನ ಬಗ್ಗೆ ಗುಣಗುಟ್ಟಿದರು. “ಪರಲೋಕದಿಂದ ಇಳಿದುಬರುವ ರೊಟ್ಟಿಯೇ ನಾನು” ಎಂದು ಆತನು ಹೇಳಿದ್ದರಿಂದ ಅವರು ಆಕ್ಷೇಪಿಸಿದರು. |
42
|
ಯೆಹೂದ್ಯರು, “ಇವನು ಯೇಸು. ಇವನ ತಂದೆತಾಯಿಗಳನ್ನು ನಾವು ಬಲ್ಲೆವು. ಇವನು ಕೇವಲ ಯೋಸೇಫನ ಮಗನು. ನಾನು ಪರಲೋಕದಿಂದ ಇಳಿದುಬಂದೆನು؆ ಎಂದು ಇವನು ಹೇಳುವುದಕ್ಕೆ ಹೇಗೆ ಸಾಧ್ಯ?” ಎಂದರು. |
43
|
ಅದಕ್ಕೆ ಯೇಸು, “ನೀವು ಗುಣಗುಟ್ಟುತ್ತಿರುವುದನ್ನು ನಿಲ್ಲಿಸಿರಿ. |
44
|
ತಂದೆಯೇ ನನ್ನನ್ನು ಕಳುಹಿಸಿದನು ಮತ್ತು ತಂದೆಯೇ ನನ್ನ ಬಳಿಗೆ ಜನರನ್ನು ಕರೆತರುವನು. ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸುವೆನು. ತಂದೆಯು ನನ್ನ ಬಳಿಗೆ ಕರೆದುಕೊಂಡು ಬರದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. |
45
|
”ದೇವರು ಎಲ್ಲಾ ಜನರಿಗೆ ಉಪದೇಶಿಸುವನು؆ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಜನರು ತಂದೆಗೆ ಕಿವಿಗೊಟ್ಟು ಆತನಿಂದ ಕಲಿತು ಕೊಳ್ಳುವರು. ಆ ಜನರು ನನ್ನ ಬಳಿಗೆ ಬರುವರು. |
46
|
ತಂದೆಯಿಂದ ಬಂದಿರುವಾತನು ಮಾತ್ರ ತಂದೆಯನ್ನು ನೋಡಿದವನಾಗಿದ್ದಾನೆ. ಬೇರೆ ಯಾವ ವ್ಯಕ್ತಿಯೂ ತಂದೆಯನ್ನು ಎಂದೂ ನೋಡಿಲ್ಲ. |
47
|
ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನನ್ನು ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆ. |
49
|
ನಿಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು ತಿಂದರು. ಆದರೆ ಎಲ್ಲಾ ಜನರಂತೆ ಅವರೂ ಸತ್ತುಹೋದರು. |
50
|
ಪರಲೋಕದಿಂದ ಇಳಿದು ಬರುವ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಎಂದಿಗೂ ಸಾಯುವುದಿಲ್ಲ. |
51
|
ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಶಾಶ್ವತವಾಗಿ ಜೀವಿಸುವನು. ಈ ರೊಟ್ಟಿಯೇ ನನ್ನ ದೇಹ. ಈ ಲೋಕದಲ್ಲಿರುವ ಜನರು ಜೀವವನ್ನು ಹೊಂದಿಕೊಳ್ಳಲೆಂದು ನಾನು ನನ್ನ ದೇಹವನ್ನೇ ಕೊಡುತ್ತೇನೆ” ಎಂದು ಉತ್ತರಕೊಟ್ಟನು. |
52
|
ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ದೇಹವನ್ನು ನಮಗೆ ತಿನ್ನಲು ಹೇಗೆ ಕೊಡಲಾದೀತು?” ಎಂದು ತಮ್ಮ ತಮ್ಮೊಳಗೆ ವಾಗ್ವಾದ ಮಾಡತೊಡಗಿದರು. |
53
|
ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಮನುಷ್ಯಕುಮಾರನ ದೇಹವನ್ನು ತಿನ್ನಲೇಬೇಕು. ಆತನ ರಕ್ತವನ್ನು ಕುಡಿಯಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮಲ್ಲಿ ನಿಜವಾದ ಜೀವ ಇರುವುದಿಲ್ಲ. |
54
|
ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. |
55
|
ನನ್ನ ದೇಹವು ನಿಜವಾದ ಆಹಾರವಾಗಿದೆ. ನನ್ನ ರಕ್ತವು ನಿಜವಾದ ಪಾನೀಯವಾಗಿದೆ. |
56
|
ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ. ನಾನು ಅವನಲ್ಲಿ ವಾಸಿಸುತ್ತೇನೆ. |
57
|
ತಂದೆಯೇ ನನ್ನನ್ನು ಕಳುಹಿಸಿದನು. ತಂದೆಯು ಜೀವ ಸ್ವರೂಪನಾಗಿದ್ದಾನೆ. ನಾನು ತಂದೆಯಿಂದಲೇ ಜೀವಿಸುತ್ತೇನೆ. ಆದ್ದರಿಂದ ನನ್ನನ್ನು ತಿನ್ನುವವನು ನನ್ನಿಂದಲೇ ಜೀವಿಸುವನು. |
58
|
ನಮ್ಮ ಪಿತೃಗಳು ತಿಂದ ರೊಟ್ಟಿಯಂತಲ್ಲ ನಾನು. ಅವರು ಆ ರೊಟ್ಟಿಯನ್ನು ತಿಂದರೂ ಎಲ್ಲಾ ಜನರಂತೆ ಸತ್ತು ಹೋದರು. ನಾನು ಪರಲೋಕದಿಂದ ಇಳಿದುಬಂದ ರೊಟ್ಟಿ. ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು,” ಎಂದು ಹೇಳಿದನು. |
59
|
ಯೇಸು ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶಿಸುತ್ತಿದ್ದಾಗ ಈ ಸಂಗತಿಗಳನ್ನೆಲ್ಲಾ ಹೇಳಿದನು. |
60
|
ಇದನ್ನು ಕೇಳಿದ ಆತನ ಶಿಷ್ಯರಲ್ಲಿ ಅನೇಕರು, “ಈ ಉಪದೇಶವು ಕಠಿಣವಾಗಿದೆ. ಇದನ್ನು ಯಾರು ಗ್ರಹಿಸಿಕೊಳ್ಳಬಲ್ಲರು?” ಎಂದರು. |
61
|
ತನ್ನ ಶಿಷ್ಯರು ಆಕ್ಷೇಪಿಸುತ್ತಿರುವುದನ್ನು ತಿಳಿದಿದ್ದ ಯೇಸು, “ಈ ಉಪದೇಶದಿಂದ ನಿಮಗೆ ಬೇಸರವಾಯಿತೇ? |
62
|
ಹಾಗಾದರೆ ಮನುಷ್ಯಕುಮಾರನು ತಾನು ಬಿಟ್ಟುಬಂದ ಸ್ಥಳಕ್ಕೆ ಮರಳಿಹೋಗುವುದನ್ನು ನೀವು ನೋಡುವಾಗ ಬೇಸರ ಪಡುವಿರಾ? |
63
|
ಒಬ್ಬನಿಗೆ ಜೀವವನ್ನು ಕೊಡುವಂಥದ್ದು ದೈಹಿಕ ಸಂಗತಿಗಳಲ್ಲ. ಜೀವವನ್ನು ಕೊಡುವಂಥದ್ದು ದೇವರಾತ್ಮ. ನಾನು ನಿಮಗೆ ಹೇಳಿದ ಸಂಗತಿಗಳು ಆತ್ಮಿಕ ಸಂಗತಿಗಳಾಗಿವೆ. ಆದ್ದರಿಂದ ಈ ಸಂಗತಿಗಳೇ ಜೀವವನ್ನು ಕೊಡುತ್ತವೆ. |
64
|
ಆದರೆ ನಿಮ್ಮಲ್ಲಿ ಕೆಲವರು ನಂಬುವುದಿಲ್ಲ” ಎಂದು ಹೇಳಿದನು. (ತನ್ನನ್ನು ಯಾರೂ ನಂಬಿಲ್ಲವೆಂದು ಯೇಸುವಿಗೆ ತಿಳಿದಿತ್ತು. ಆತನಿಗೆ ಅದು ಮೊದಲಿನಿಂದಲೂ ತಿಳಿದಿತ್ತು. ತನಗೆ ಯಾವ ವ್ಯಕ್ತಿ ದ್ರೋಹ ಮಾಡುತ್ತಾನೆ ಎಂಬುದೂ ಆತನಿಗೆ ಗೊತ್ತಿತ್ತು.) |
65
|
ಯೇಸು, “ತಂದೆಯ ಅನುಮತಿ ಇಲ್ಲದೆ ಯಾವನೂ ನನ್ನ ಬಳಿಗೆ ಬರಲಾರನು ಎಂದು ನಾನು ನಿಮಗೆ ಹೇಳಿದ್ದಕ್ಕೆ ಅದೇ ಕಾರಣ” ಎಂದನು. |
66
|
ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತನ ಹಿಂಬಾಲಕರಲ್ಲಿ ಅನೇಕರು ಆತನನ್ನು ತೊರೆದುಬಿಟ್ಟರು. ಅವರು ಆತನನ್ನು ಹಿಂಬಾಲಿಸಲಿಲ್ಲ. |
67
|
ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ನನ್ನನ್ನು ಬಿಟ್ಟುಹೋಗಬೇಕೆಂದಿರುವಿರಾ?” ಎಂದು ಕೇಳಿದನು. |
68
|
ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನಾವೆಲ್ಲಿಗೆ ಹೋಗೋಣ? ನಿತ್ಯಜೀವವನ್ನು ಕೊಡುವ ಸಂಗತಿಗಳು ನಿನ್ನಲ್ಲಿವೆ. |
69
|
ನಾವು ನಿನ್ನಲ್ಲಿ ನಂಬಿಕೆ ಇಡುತ್ತೇವೆ. ನೀನು ದೇವರಿಂದ ಬಂದ ಪರಿಶುದ್ಧನೆಂದು ನಮಗೆ ಗೊತ್ತಿದೆ” ಎಂದು ಉತ್ತರಕೊಟ್ಟನು. |
70
|
ಬಳಿಕ ಯೇಸು, “ನಾನು ಆರಿಸಿಕೊಂಡ ಹನ್ನೆರಡು ಮಂದಿ ನೀವೇ. ಆದರೆ ನಿಮ್ಮಲ್ಲಿರುವ ಒಬ್ಬನು ಸೈತಾನನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟನು. |
71
|
ಯೇಸು ಸಿಮೋನನ ಮಗನಾದ ಇಸ್ಕರಿಯೋತ ಯೂದನ ಬಗ್ಗೆ ಮಾತಾಡುತ್ತಿದ್ದನು. ಯೂದನು ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದನು. ಆದರೆ ಮುಂದೆ ಯೇಸುವಿಗೆ ದ್ರೋಹ ಮಾಡಿದ ವ್ಯಕ್ತಿ ಇವನೇ. |
John 6:1 Kannada Language Bible Words basic statistical display
COMING SOON ...