1
|
ಇಗೋ, ನಿಮ್ಮನ್ನು ರಕ್ಷಿಸಲು ಯೆಹೋವನು ಶಕ್ತನಾಗಿದ್ದಾನೆ. ನೀವು ಸಹಾಯಕ್ಕಾಗಿ ಪ್ರಾರ್ಥಿಸುವಾಗ ಆತನು ನಿಮ್ಮನ್ನು ಆಲೈಸುವನು. |
2
|
ಆದರೆ ನಿಮ್ಮ ಪಾಪಗಳೇ ನಿಮ್ಮನ್ನು ದೇವರಿಂದ ದೂರ ಮಾಡಿರುತ್ತವೆ. ಯೆಹೋವನು ತನ್ನ ಮುಖವನ್ನು ಮರೆ ಮಾಡಿಕೊಳ್ಳುವಂತೆ ನೀವು ಪಾಪಗಳನ್ನು ಮಾಡಿದ್ದರಿಂದ, ಆತನು ನಿಮಗೆ ಕಿವಿಗೊಡುವುದಿಲ್ಲ. |
3
|
ನಿಮ್ಮ ಕೈಗಳು ಮಲಿನವಾಗಿವೆ; ಅವು ರಕ್ತಮಯವಾಗಿವೆ. ನಿಮ್ಮ ಬೆರಳುಗಳು ಅಪರಾಧಗಳಿಂದ ಅಶುದ್ಧವಾಗಿವೆ. ನಿಮ್ಮ ಬಾಯಿಗಳಿಂದ ನೀವು ಸುಳ್ಳಾಡುತ್ತೀರಿ. ನಿಮ್ಮ ನಾಲಿಗೆಯು ಕೆಟ್ಟ ಮಾತುಗಳನ್ನಾಡುತ್ತದೆ. |
4
|
ನೆರೆಯವನ ಬಗ್ಗೆ ಯಾರೂ ಸತ್ಯವನ್ನಾಡುವದಿಲ್ಲ. ಜನರು ನ್ಯಾಯಾಲಯಗಳಲ್ಲಿ ಪರಸ್ಪರ ವ್ಯಾಜ್ಯ ಮಾಡುವರು. ತಾವು ಗೆಲ್ಲಬೇಕೆಂಬ ಉದ್ದೇಶದಿಂದ ಸುಳ್ಳುಸಾಕ್ಷಿಯ ಮೇಲೆ ಅವಲಂಬಿಸುವರು. ಅವರು ಒಬ್ಬರ ಮೇಲೊಬ್ಬರು ಸುಳ್ಳು ಹೇಳುತ್ತಾರೆ; ಅವರು ಕೇಡಿನಿಂದ ತುಂಬಿದವರಾಗಿದ್ದು ಕೇಡನ್ನೇ ಹೆರುತ್ತಾರೆ. |
5
|
ವಿಷದ ಹಾವಿನ ಮೊಟ್ಟೆಯಿಂದ ವಿಷದ ಹಾವಿನ ಮರಿಗಳು ಹೊರಬರುವಂತೆ ಅವರ ದುಷ್ಟತನವು ಹೊರಬರುವದು. ಆ ಮೊಟ್ಟೆಯನ್ನು ನೀವು ತಿಂದರೆ ಸಾಯುವಿರಿ. ಆ ಮೊಟ್ಟೆಯನ್ನು ಒಡೆದರೆ ವಿಷದ ಹಾವು ಹೊರಬರುವದು. ಜನರು ಹೇಳುವ ಸುಳ್ಳು ಜೇಡರ ಬಲೆಯಂತಿರುವದು. |
6
|
ಜೇಡರ ಬಲೆಗಳ ನೂಲಿನಿಂದ ಬಟ್ಟೆ ನೇಯಲಾಗದು. ಆ ಬಲೆಯಿಂದ ನಿಮ್ಮ ಶರೀರವನ್ನು ಮುಚ್ಚಲಾಗುವದಿಲ್ಲ. ಕೆಲವರು ತಮ್ಮ ಕೈಗಳಿಂದ ಇತರರಿಗೆ ಕೇಡುಮಾಡುವರು. |
7
|
ಅವರು ತಮ್ಮ ಕಾಲುಗಳಿಂದ ಓಡುತ್ತಾ ದುಷ್ಟಕಾರ್ಯಗಳನ್ನು ಮಾಡುವರು; ನಿರಪರಾಧಿಗಳನ್ನು ಕೊಲ್ಲಲು ಆತುರಪಡುವರು. ಅವರ ಆಲೋಚನೆಯು ಕೆಟ್ಟದ್ದೇ. ದೊಂಬಿ, ಲೂಟಿಗಳೇ ಅವರ ಜೀವನಶೈಲಿಯಾಗಿವೆ. |
8
|
ಅವರಿಗೆ ಸಮಾಧಾನದ ದಾರಿಯೇ ತಿಳಿಯದು. ಅವರ ಜೀವಿತದಲ್ಲಿ ಒಳ್ಳೆಯತನವೆಂಬುದು ಇಲ್ಲ. ಅವರ ಮಾರ್ಗವು ಕಪಟತನದಿಂದ ತುಂಬಿದೆ. ಅವರಂತೆ ಜೀವಿಸುವವರಿಗೆ ಶಾಂತಿಯೇ ಇರದು. |
9
|
ಎಲ್ಲಾ ನ್ಯಾಯನೀತಿಗಳು ಇಲ್ಲವಾಗಿವೆ. ನಮ್ಮ ಬಳಿಯಲ್ಲಿ ಅಂಧಕಾರವು ಇರುವದರಿಂದ ನಾವು ಬೆಳಕಿಗಾಗಿ ಕಾಯಬೇಕಾಗಿದೆ. ಪ್ರಕಾಶಮಾನವಾದ ಬೆಳಕಿಗಾಗಿ ಆಶಿಸುತ್ತಿರುವಾಗ ನಮಗೆ ಸಿಕ್ಕಿದ್ದು ಕೇವಲ ಕತ್ತಲೆಯೇ. |
10
|
ನಾವು ಕಣ್ಣಿಲ್ಲದವರಂತಿದ್ದೇವೆ. ಕುರುಡರಂತೆ ಗೋಡೆಗೆ ತಾಕುತ್ತಿದ್ದೇವೆ. ರಾತ್ರಿಯಲ್ಲಿ ಎಡವಿಬೀಳುವಂತೆ ಬೀಳುತ್ತಿದ್ದೇವೆ. ಹಗಲಿನಲ್ಲಿಯೂ ನಮಗೆ ಕಾಣದು. ಮಧ್ಯಾಹ್ನದ ಸಮಯದಲ್ಲೂ ಸತ್ತವರಂತೆ ಬೀಳುತ್ತೇವೆ. |
11
|
ನಾವೆಲ್ಲಾ ಗುಣುಗುಟ್ಟುತ್ತೇವೆ. ನಾವು ಕರಡಿಗಳಂತೆ ಗುರುಗುಟ್ಟುತ್ತಿದ್ದೇವೆ, ಪಾರವಾಳಗಳಂತೆ ಮೂಲುಗುತ್ತಿದ್ದೇವೆ. ಜನರು ಧರ್ಮವನ್ನು ಅನುಸರಿಸುವ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ. ಆದರೆ ಧರ್ಮವೇ ಇಲ್ಲ. ನಾವು ರಕ್ಷಣೆಗಾಗಿ ಕಾಯುತ್ತಿದ್ದೇವೆ. ಆದರೆ ರಕ್ಷಣೆಯು ಬಹುದೂರವಿದೆ. |
12
|
ಯಾಕೆಂದರೆ ನಾವು ಲೆಕ್ಕವಿಲ್ಲದಷ್ಟು ದ್ರೋಹಗಳನ್ನು ದೇವರಿಗೆ ವಿರುದ್ಧವಾಗಿ ಮಾಡಿರುತ್ತೇವೆ. ನಾವು ಮಾಡಿದ್ದು ತಪ್ಪೆಂದು ನಮ್ಮ ಪಾಪಗಳೇ ತೋರಿಸುತ್ತವೆ. ಹೌದು, ನಾವು ಈ ಕಾರ್ಯಗಳನ್ನು ಮಾಡಿ ದೋಷಿಗಳಾಗಿದ್ದೇವೆ. |
13
|
ನಾವು ಪಾಪಮಾಡಿ ಯೆಹೋವನಿಂದ ದೂರ ಹೋಗಿದ್ದೇವೆ. ಆತನಿಂದ ದೂರವಾಗಿ ಆತನನ್ನು ತೊರೆದುಬಿಟ್ಟಿದ್ದೇವೆ. ನಾವು ದುಷ್ಟತನವನ್ನೂ ದೇವರಿಗೆ ವಿರುದ್ಧವಾದ ಕಾರ್ಯಗಳನ್ನೂ ಆಲೋಚಿಸಿದ್ದೇವೆ. ನಮ್ಮ ಹೃದಯಗಳಲ್ಲಿ ದುಷ್ಟ ಯೋಜನೆಗಳನ್ನು ಹಾಕಿರುತ್ತೇವೆ. |
14
|
ನ್ಯಾಯವು ನಮ್ಮಿಂದ ತೊಲಗಿಹೋಗಿದೆ. ಸತ್ಯವು ಬೀದಿ ಪಾಲಾಗಿದೆ. ನೀತಿಯು ಪಟ್ಟಣದೊಳಕ್ಕೆ ಪ್ರವೇಶಿಸಲಾರದು. |
15
|
ಸತ್ಯವು ಹೊರಟು ಹೋಯಿತು. ಒಳ್ಳೆಯದನ್ನು ಮಾಡುವವರು ಲೂಟಿಗೆ ಗುರಿಯಾಗಿದ್ದಾರೆ. ಒಳ್ಳೆಯವರು ಇಲ್ಲದೆ ಇರುವುದನ್ನು ಕಂಡು ಯೆಹೋವನು ಬೇಸರಗೊಂಡಿದ್ದಾನೆ. |
16
|
ಜನರಿಗೆ ಸಹಾಯ ಮಾಡುವವರು ಇಲ್ಲದೆ ಇರುವುದನ್ನು ಕಂಡು ಯೆಹೋವನು ಆಶ್ಚರ್ಯಚಕಿತನಾಗಿದ್ದಾನೆ. ಆದುದರಿಂದ ಯೆಹೋವನು ತನ್ನ ಸ್ವಂತ ಶಕ್ತಿಯನ್ನೂ ನೀತಿಯನ್ನೂ ಬಳಸಿ ಜನರನ್ನು ರಕ್ಷಿಸಿದನು. |
17
|
ಯೆಹೋವನು ಯುದ್ಧ ಸನ್ನದ್ಧನಾದನು. ಆತನು ಒಳ್ಳೆಯತನವೆಂಬ ಕವಚ, ರಕ್ಷಣೆಯೆಂಬ ಶಿರಸ್ತ್ರಾಣ, ಶಿಕ್ಷೆಯೆಂಬ ಬಟ್ಟೆ ಮತ್ತು ಗಾಢವಾದ ಪ್ರೇಮವೆಂಬ ಮೇಲ್ಹೊದಿಕೆಯನ್ನು ಧರಿಸಿದ್ದಾನೆ. |
18
|
ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ಅವರಿಗೆ ಸರಿಯಾದ ದಂಡನೆಯನ್ನು ಕೊಡುವನು; ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ದೂರದೇಶಗಳಲ್ಲಿರುವ ಜನರನ್ನೆಲ್ಲಾ ಸರಿಯಾಗಿ ದಂಡಿಸುವನು. |
19
|
ಆಗ ಪಶ್ಚಿಮದಲ್ಲಿರುವ ಜನರು ಯೆಹೋವನ ನಾಮಕ್ಕೆ ಭಯಪಟ್ಟು ಗೌರವಿಸುವರು. ಪೂರ್ವದಲ್ಲಿದ್ದ ಜನರು ಆತನ ಮಹಿಮೆಯನ್ನು ಭಯಭಕ್ತಿಯಿಂದ ಕಾಣುವರು. ಬಿರುಗಾಳಿಯಿಂದ ರಭಸವಾಗಿ ಹರಿದುಬರುವ ಹೊಳೆಯಂತೆ ಯೆಹೋವನು ಬೇಗನೆ ಬರುವನು. |
20
|
ಆಗ ಒಬ್ಬ ರಕ್ಷಕನು ಚೀಯೋನಿಗೆ ಬರುವನು. ಜನರು ಪಾಪಮಾಡಿದ್ದರೂ ದೇವರ ಬಳಿಗೆ ಹಿಂತಿರುಗಿ ಬಂದ ಯಾಕೋಬನ ಜನರ ಬಳಿಗೆ ಆತನು ಬರುವನು. |
21
|
ಯೆಹೋವನು ಹೇಳುವದೇನೆಂದರೆ: “ನಾನಂತೂ ಆ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುವೆನು. ನನ್ನ ವಾಗ್ದಾನದ ಮಾತುಗಳೂ ನಾನು ಇರಿಸಿದ ನನ್ನ ಆತ್ಮವೂ ನಿಮ್ಮಿಂದ ಎಂದಿಗೂ ತೊಲಗದು. ಅವು ನಿಮ್ಮ ಮೊಮ್ಮಕ್ಕಳ ತನಕವೂ ಇರುವವು. ಅವು ನಿನ್ನೊಂದಿಗೆ ಈಗಲೂ ಸದಾಕಾಲವೂ ಇರುವವು.” |
Isaiah 59:1 Kannada Language Bible Words basic statistical display
COMING SOON ...