Bible Languages

Indian Language Bible Word Collections

Bible Versions

Books

Isaiah Chapters

Isaiah 42 Verses

Bible Versions

Books

Isaiah Chapters

Isaiah 42 Verses

1 “ನನ್ನ ಸೇವಕನನ್ನು ನೋಡಿರಿ! ನಾನು ಆತನಿಗೆ ಬೆಂಬಲ ನೀಡುತ್ತೇನೆ. ನಾನು ಆರಿಸಿಕೊಂಡಿದ್ದು ಆತನನ್ನೇ. ನಾನು ಆತನನ್ನು ಮೆಚ್ಚಿಕೊಂಡಿದ್ದೇನೆ. ನನ್ನ ಆತ್ಮವನ್ನು ಆತನಲ್ಲಿರಿಸುವೆನು. ಆತನು ಜನಾಂಗಗಳನ್ನು ನ್ಯಾಯವಾಗಿ ತೀರ್ಪು ಮಾಡುವನು.
2 ಆತನು ಬೀದಿಗಳಲ್ಲಿ ಗಟ್ಟಿಯಾಗಿ ಮಾತನಾಡನು, ಗಟ್ಟಿಯಾಗಿ ಕರೆಯುವದಿಲ್ಲ, ಕೂಗುವದಿಲ್ಲ.
3 ಮೃದುವಾಗಿರುವ ಆತನು ಹುಲ್ಲಿನ ಕಡ್ಡಿಯನ್ನೂ ತುಂಡು ಮಾಡುವದಿಲ್ಲ. ಕಿಡಿ ಬೆಂಕಿಯನ್ನೂ ಆತನು ಆರಿಸನು. ಆತನು ನೀತಿಯಿಂದ ನ್ಯಾಯವಿಚಾರಣೆ ಮಾಡಿ ಸತ್ಯವನ್ನು ಕಂಡುಕೊಳ್ಳುವನು.
4 ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವತನಕ ಆತನು ಬಲಹೀನನಾಗುವದಿಲ್ಲ; ಮುಗ್ಗರಿಸುವುದೂ ಇಲ್ಲ. ದೂರದೇಶದಲ್ಲಿರುವವರು ಸಹ ಆತನ ಬೋಧನೆಯನ್ನು ನಂಬುವರು.
5 ನಿಜದೇವರಾದ ಯೆಹೋವನು ಇಂತೆನ್ನುತ್ತಾನೆ: “ಆಕಾಶವನ್ನು ನಿರ್ಮಿಸಿ ಅದನ್ನು ಭೂಮಿಯ ಮೇಲೆ ಹರಡಿದಾತನು ಯೆಹೋವನೇ. ಭೂಮಿಯ ಮೇಲಿರುವದನ್ನೆಲ್ಲಾ ಸೃಷ್ಟಿಸಿದಾತನು ಯೆಹೋವನೇ. ಭೂಮಿಯ ಮೇಲಿರುವ ಮನುಷ್ಯರಿಗೆಲ್ಲಾ ಜೀವಶ್ವಾಸವನ್ನು ಕೊಟ್ಟವನು ಆತನೇ. ಭೂಮಿಯ ಮೇಲೆ ನಡೆಯುವ ಪ್ರತಿಯೊಬ್ಬನಿಗೂ ಪ್ರಾಣವನ್ನು ಕೊಟ್ಟವನು ಆತನೇ.
6 “ಯೆಹೋವನೆಂಬ ನಾನು ನ್ಯಾಯವನ್ನು ಸ್ಥಾಪಿಸಲು ನಿನ್ನನ್ನು ಕರೆದೆನು. ನಾನು ನಿನ್ನ ಕೈಗಳನ್ನು ಹಿಡಿದು ಸಂರಕ್ಷಿಸುವೆನು. ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆ ನನ್ನಲ್ಲಿದೆಯೆಂಬುದಕ್ಕೆ ನೀನು ಗುರುತಾಗಿರುವೆ. ಎಲ್ಲಾ ಜನರಿಗೆ ನೀನು ಹೊಳೆಯುವ ಪ್ರಕಾಶವಾಗಿರುವೆ.
7 ನೀನು ಕುರುಡರ ಕಣ್ಣುಗಳಿಗೆ ದೃಷ್ಟಿಯನ್ನು ಕೊಡುವೆ; ಸೆರೆಮನೆಯಲ್ಲಿರುವ ಎಷ್ಟೋ ಜನರನ್ನು ನೀನು ಬಿಡಿಸುವೆ. ಕತ್ತಲೆಯಲ್ಲಿ ವಾಸಿಸುವ ಎಷ್ಟೋ ಜನರನ್ನು ನೀನು ಸೆರೆಮನೆಯಿಂದ ಬಿಡಿಸುವೆ.
8 ನಾನೇ ಕರ್ತನು. ಯೆಹೋವನೆಂಬುದೇ ನನ್ನ ಹೆಸರು. ನನ್ನ ಮಹಿಮೆಯನ್ನು ನಾನು ಇತರರಿಗೆ ಕೊಡೆನು. ನನಗೆ ಸಲ್ಲತಕ್ಕ ಮಹಿಮೆಯನ್ನು ಸುಳ್ಳುದೇವರ ವಿಗ್ರಹಗಳಿಗೆ ಬಿಟ್ಟುಕೊಡೆನು.
9 ಇಗೋ, ಆದಿಯಲ್ಲಿಯೇ ಮುಂದಿನ ಸಂಗತಿಗಳನ್ನು ತಿಳಿಸಿದೆನು. ಅವೆಲ್ಲವೂ ಸಂಭವಿಸಿದವು. ಈಗ ಕೆಲವು ವಿಷಯಗಳು ನಿನಗೆ ಪ್ರಕಟಿಸುತ್ತೇನೆ; ಸಂಭವಿಸುವ ಮೊದಲೇ ಅವುಗಳನ್ನು ನಿನಗೆ ತಿಳಿಸುವೆನು.”
10 ದೂರದೇಶಗಳಲ್ಲಿರುವ ಜನರೇ, ಯೆಹೋವನಿಗೆ ಹೊಸ ಗೀತೆಯನ್ನು ಹಾಡಿರಿ. ಸಾಗರಗಳಲ್ಲಿ ಪ್ರಯಾಣಿಸುವ ಜನರೆಲ್ಲರೂ ಸಮುದ್ರ ಜೀವಿಗಳೆಲ್ಲವೂ ದೂರದೇಶಗಳವರೆಲ್ಲರೂ ದೇವರಿಗೆ ಸ್ತೋತ್ರ ಮಾಡಲಿ.
11 ಮರುಭೂಮಿಗಳೂ ನಗರಗಳೂ ಕೇದಾರಿನ ಹಳ್ಳಿಗಳೂ ಯೆಹೋವನನ್ನು ಸ್ತುತಿಸಲಿ. ಸೆಲಾ ಪಟ್ಟಣವಾಸಿಗಳೇ, ಹರ್ಷದಿಂದ ಹಾಡಿರಿ. ನಿಮ್ಮ ಪರ್ವತಗಳ ತುದಿಯಿಂದ ಗಾನ ಮಾಡಿರಿ.
12 ಯೆಹೋವನನ್ನು ಘನಪಡಿಸಿರಿ. ದೂರದೇಶಗಳ ಜನರೆಲ್ಲರೇ, ಆತನನ್ನು ಸ್ತುತಿಸಿರಿ.
13 ಯೆಹೋವನು ಯುದ್ಧವೀರನಂತೆ ಹೊರಡುವನು. ಆತನು ಯುದ್ಧಮಾಡಲು ತಯಾರಾಗಿರುವ ಶೂರನಂತಿದ್ದಾನೆ. ಆತನು ಉತ್ಸಾಹದಿಂದ ಗಟ್ಟಿಯಾಗಿ ಕೂಗುತ್ತಾ ತನ್ನ ವೈರಿಗಳನ್ನು ಸೋಲಿಸುವನು.
14 “ನಾನು ಬಹುಕಾಲದಿಂದ ಮೌನವಾಗಿದ್ದೆನು. ನಾನು ಏನೂ ಹೇಳದ ಹಾಗೆ ನನ್ನನ್ನು ನಿಯಂತ್ರಿಸಿಕೊಂಡಿದ್ದೆನು. ಈಗ ನಾನು ಹೆರಿಗೆ ಬೇನೆಯನ್ನು ಅನುಭವಿಸುವ ಹೆಂಗಸಿನಂತೆ ಕಿರುಚುವೆನು; ಗಟ್ಟಿಯಾಗಿ ಏದುಸಿರುಬಿಡುವೆನು.
15 ಬೆಟ್ಟಗಳನ್ನೂ ಪರ್ವತಗಳನ್ನೂ ನಾಶಪಡಿಸುವೆನು. ಅಲ್ಲಿ ಬೆಳೆಯುವ ಸಸ್ಯಗಳನ್ನೆಲ್ಲಾ ಒಣಗಿಸಿ ಬಿಡುವೆನು. ನದಿಗಳನ್ನು ಒಣ ನೆಲವನ್ನಾಗಿ ಮಾರ್ಪಡಿಸುವೆನು; ನೀರಿನ ಹಳ್ಳಗಳನ್ನು ಒಣಗಿಸಿ ಬಿಡುವೆನು.
16 ಅವರು ಹಿಂದೆಂದೂ ತಿಳಿಯದ ರೀತಿಯಲ್ಲಿ ನಾನು ಕುರುಡರನ್ನು ನಡೆಸುವೆನು. ಕುರುಡರು ಹೋಗಿರದ ಸ್ಥಳಕ್ಕೆ ನಾನು ಅವರನ್ನು ನಡಿಸುವೆನು. ನಾನು ಅವರಿಗಾಗಿ ಕತ್ತಲೆಯನ್ನು ಬೆಳಕಾಗಿ ಮಾರ್ಪಡಿಸುವೆನು. ನಾನು ಕೊರಕಲು ನೆಲವನ್ನು ಸಮತಟ್ಟಾಗಿ ಮಾಡುವೆನು. ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು. ನನ್ನ ಜನರನ್ನು ನಾನು ಎಂದಿಗೂ ತೊರೆಯುವದಿಲ್ಲ.
17 ಆದರೆ ಕೆಲವರು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಅವರ ಬಳಿಯಲ್ಲಿ ಬಂಗಾರದ ತಗಡಿನಿಂದ ಹೊದಿಸಿದ ವಿಗ್ರಹಗಳಿವೆ. ಅವರು ಆ ವಿಗ್ರಹಗಳಿಗೆ, ‘ನೀನೇ ನಮ್ಮ ದೇವರು’ ಎಂದು ಹೇಳುವರು. ಸುಳ್ಳುದೇವರುಗಳನ್ನು ಅವರು ಅವಲಂಬಿಸಿರುವದರಿಂದ ನಿರಾಶರಾಗುವರು.
18 “ಕಿವುಡರೇ, ನನ್ನ ಮಾತನ್ನು ಕೇಳಿರಿ. ಕುರುಡರೇ ನನ್ನ ಕಡೆಗೆ ನೋಡಿರಿ.
19 ಬೇರೆ ಎಲ್ಲರಿಗಿಂತ ನನ್ನ ಸೇವಕನು ಕುರುಡನಾಗಿದ್ದಾನೆ. ಬೇರೆ ಎಲ್ಲರಿಗಿಂತ ನನ್ನ ದೂತನು ಕಿವುಡನಾಗಿದ್ದಾನೆ. ನಾನು ಒಡಂಬಡಿಕೆ ಮಾಡಿಕೊಂಡ ನನ್ನ ಸೇವಕನು ಪೂರ್ಣ ಕುರುಡನಾಗಿದ್ದಾನೆ.
20 ತಾನು ಮಾಡತಕ್ಕದ್ದನ್ನು ಕಣ್ಣಾರೆಕಂಡರೂ ಅವನು ನನಗೆ ವಿಧೇಯನಾಗುವುದಿಲ್ಲ. ಅವನು ಕಿವಿಯಾರೆ ಕೇಳಿದರೂ ನನ್ನ ಮಾತುಗಳಿಗೆ ವಿಧೇಯನಾಗುವದಿಲ್ಲ; ಅದನ್ನು ಕೇಳಿಸಿಕೊಳ್ಳುವದೂ ಇಲ್ಲ.”
21 ತನ್ನ ಸೇವಕನು ನೀತಿವಂತನಾಗಿರಬೇಕೆಂದೂ ತನ್ನ ಉತ್ಕೃಷ್ಟವಾದ ಉಪದೇಶವನ್ನು ಗೌರವಿಸಬೇಕೆಂದೂ ಯೆಹೋವನು ಬಯಸುತ್ತಾನೆ.
22 ಆದರೆ, ಜನರನ್ನು ನೋಡಿರಿ. ಅವರನ್ನು ಬೇರೆಯವರು ಸೋಲಿಸಿದ್ದಾರೆ. ಅವರಿಂದ ವಸ್ತುಗಳನ್ನು ದೋಚಿದ್ದಾರೆ. ತರುಣರೆಲ್ಲರೂ ಭಯಪಟ್ಟಿದ್ದಾರೆ; ಅವರನ್ನು ಸೆರೆಮನೆಯಲ್ಲಿ ಬಂಧಿಸಿದ್ದಾರೆ. ಅವರಿಂದ ಹಣವನ್ನು ಜನರು ಕಿತ್ತುಕೊಂಡಿದ್ದಾರೆ. ಅವರನ್ನು ರಕ್ಷಿಸಲು ಯಾರೂ ಇಲ್ಲ. ಅವರಲ್ಲಿ ಹಣವನ್ನು “ಹಿಂದಕ್ಕೆ ಕೊಡು” ಎಂದು ಹೇಳುವವರೇ ಇಲ್ಲ.
23 ನನ್ನ ಜನರಲ್ಲಿ ಯಾರಾದರೂ ದೇವರ ಮಾತನ್ನು ಕೇಳಿದ್ದಾರೋ? ಇಲ್ಲ! ಆದರೆ ನೀವು ಆತನ ಮಾತುಗಳಿಗೆ ಲಕ್ಷ್ಯಗೊಟ್ಟು ಕೇಳಿ ಸಂಭವಿಸಿರುವದನ್ನು ಗಮನಿಸಬೇಕು.
24 ಯಾಕೋಬ್ ಮತ್ತು ಇಸ್ರೇಲ್ ಜನರಿಂದ ಅವರ ಸಂಪತ್ತನ್ನು ದೋಚಿಕೊಳ್ಳಲು ಅವರನ್ನು ಬಿಟ್ಟವರು ಯಾರು? ಯೆಹೋವನು ತಾನೇ ಅವರಿಗೆ ಹಾಗೆ ಮಾಡಿಬಿಟ್ಟನು. ನಾವು ಆತನ ವಿರುದ್ಧವಾಗಿ ಪಾಪಮಾಡಿದೆವು. ಆದುದರಿಂದ, ಆತನು ನಮ್ಮ ಆಸ್ತಿಯನ್ನು ದೋಚಿ ಹೋಗುವಂತೆ ಮಾಡಿದನು. ಯೆಹೋವನು ಬಯಸಿದ ರೀತಿಯಲ್ಲಿ ನಡೆಯಲು ಇಸ್ರೇಲರಿಗೆ ಇಷ್ಟವಿರಲಿಲ್ಲ, ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
25 ಆದುದರಿಂದ ಯೆಹೋವನು ಅವರ ಮೇಲೆ ಕೋಪಗೊಂಡನು. ಅವರಿಗೆ ವಿರುದ್ಧವಾಗಿ ಬಲವಾದ ಯುದ್ಧಗಳು ನಡೆಯುವಂತೆ ಮಾಡಿದನು. ಇಸ್ರೇಲ್ ಜನರ ಸುತ್ತಲೂ ಬೆಂಕಿಯು ಆವರಿಸಿಕೊಂಡಿರುವಂತಿದ್ದರೂ ಅವರಿಗೆ ಅದರ ಪ್ರಜ್ಞೆಯಿರಲಿಲ್ಲ. ಅವರೇ ಉರಿಯುತ್ತಿರುವಂತೆ ಅದಿತ್ತು. ಆದರೆ ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ.

Isaiah 42:1 Kannada Language Bible Words basic statistical display

COMING SOON ...

×

Alert

×