ಅದು ಕೂಡಾ ಸೈನ್ಯದವರಿಗೆ ಒಂದು ಕನಸಿನಂತಿರುವದು. ಅವರಿಗೆ ಬೇಕಾದದ್ದು ದೊರಕುವದಿಲ್ಲ. ಹಸಿವೆಯಲ್ಲಿರುವ ಒಬ್ಬನು ಆಹಾರದ ಕನಸು ಕಂಡಂತಿರುವದು. ಅವನು ಎಚ್ಚರವಾದಾಗ ಹಸಿವಿನಿಂದಲೇ ಇರುವನು. ಬಾಯಾರಿದ ಮನುಷ್ಯನು ನೀರಿಗಾಗಿ ಕಾಣುವ ಕನಸಿನಂತಿರುವುದು. ಅವನು ಎಚ್ಚರಗೊಂಡಾಗ ಬಾಯಾರಿಕೆಯು ಇನ್ನೂ ಇರುವದು. ಚೀಯೋನಿಗೆ ವಿರುದ್ಧ ಯುದ್ಧಮಾಡುವ ಆ ಜನಾಂಗಗಳ ಗತಿಯು ಅಂತೆಯೇ ಇರುವದು. ಅವರು ತಾವು ಆಶಿಸುವ ವಸ್ತುಗಳನ್ನು ಹೊಂದುವದಿಲ್ಲ.
ಯೆಹೋವನು ನಿಮಗೆ ತೂಕಡಿಕೆ ಬರಮಾಡುವನು. ಆತನು ನಿಮ್ಮ ಕಣ್ಣುಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ಕಣ್ಣುಗಳಾಗಿದ್ದಾರೆ.) ಯೆಹೋವನು ನಿಮ್ಮ ತಲೆಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ತಲೆಗಳಾಗಿದ್ದಾರೆ.)
ನಾನು ಖಂಡಿತವಾಗಿ ಹೇಳುತ್ತೇನೆ, ಈ ಸಂಗತಿಗಳು ನೆರವೇರುವವು. ಆದರೆ ನೀವು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ನನ್ನ ಮಾತುಗಳು ಒಂದು ಪುಸ್ತಕದಲ್ಲಿ ಬರೆದು ಮುಚ್ಚಿ ಅದಕ್ಕೆ ಮುದ್ರೆಹಾಕಿ ಇರಿಸಿದಂತಿರುವದು.
ಓದುಬರುವವನಿಗೆ ಇದನ್ನು ಓದು ಎಂದು ಹೇಳಿದರೆ ಅವನು, “ಈ ಪುಸ್ತಕ ಮುಚ್ಚಲ್ಪಟ್ಟಿದೆ, ನನಗೆ ತೆರೆಯಲು ಸಾಧ್ಯವಿಲ್ಲ” ಎಂದು ಹೇಳುವನು. ಓದುಬಾರದ ಒಬ್ಬನಿಗೆ ಕೊಟ್ಟರೆ ಅವನು, “ನನಗೆ ಓದಲು ಬರುವದಿಲ್ಲ” ಎಂದು ಹೇಳಿ ಪುಸ್ತಕವನ್ನು ಹಿಂದಕ್ಕೆ ಕೊಡುವನು.
ನನ್ನ ಒಡೆಯನು ಹೇಳುವುದೇನೆಂದರೆ, “ನನ್ನನ್ನು ಪ್ರೀತಿಸುವದಾಗಿ ಇವರು ಹೇಳುತ್ತಾರೆ. ಅವರು ತಮ್ಮ ಮಾತುಗಳಿಂದ ನನ್ನನ್ನು ಗೌರವಿಸುತ್ತಾರೆ. ಆದರೆ ಅವರ ಹೃದಯಗಳು ನನ್ನಿಂದ ದೂರವಾಗಿವೆ. ಅವರು ನನಗೆ ತೋರಿಸುವ ಗೌರವವು ಅವರು ಬಾಯಿಪಾಠ ಮಾಡಿದ ಮಾನವ ನಿರ್ಮಿತವಾದ ನಿಯಮಗಳಾಗಿವೆ.
ಯೆಹೋವನಿಗೆ ತಮ್ಮ ಆಲೋಚನೆಗಳು ತಿಳಿಯಬಾರದೆಂದು ಕುತಂತ್ರೋಪಾಯಗಳನ್ನು ಮಾಡಿ, ಕತ್ತಲೆಯಲ್ಲಿ ದುಷ್ಕೃತ್ಯಗಳನ್ನು ಮಾಡುತ್ತಾ, “ನಮ್ಮನ್ನು ಯಾರು ನೋಡಬಲ್ಲರು, ನಮ್ಮನ್ನು ಯಾರು ಗುರುತಿಸಬಲ್ಲರು?” ಎಂದುಕೊಳ್ಳುವವರ ಗತಿಯನ್ನು ಏನು ಹೇಳಲಿ.
ನೀವು ಗಲಿಬಿಲಿಗೊಂಡಿದ್ದೀರಿ. ಜೇಡಿಮಣ್ಣು ಕುಂಬಾರನಿಗೆ ಸಮಾನವಾಗಿದೆ ಎಂದು ಯೋಚಿಸುತ್ತೀರಿ. ಒಂದು ವಸ್ತು ಅದರ ನಿರ್ಮಾಣಿಕನಿಗೆ, “ನೀನು ನನ್ನನ್ನು ನಿರ್ಮಿಸಲಿಲ್ಲ” ಎಂದು ಕೇಳಬಹುದು ಎಂದು ನೆನಸುತ್ತೀರಿ. ಒಂದು ಮಡಿಕೆಯು ಅದನ್ನು ಮಾಡಿದವನಿಗೆ, “ನಿನಗೆ ಏನೂ ಗೊತ್ತಿಲ್ಲ” ಎಂದು ಹೇಳಿದ ಹಾಗಾಯಿತು.
ಅವನು ತನ್ನ ಎಲ್ಲಾ ಮಕ್ಕಳನ್ನು ನೋಡಿ ‘ಪವಿತ್ರ ಎಂಬುದೇ ನನ್ನ ಹೆಸರು’ ಎಂದು ಹೇಳುವನು. ನನ್ನ ಕೈಗಳಿಂದ ನಾನು ಆ ಮಕ್ಕಳನ್ನು ನಿರ್ಮಿಸಿದೆನು. ಆ ಮಕ್ಕಳು ಯಾಕೋಬನ ಪರಿಶುದ್ಧ ದೇವರು ವಿಶೇಷವಾದವನು ಎಂದು ಹೇಳುವರು. ಆ ಮಕ್ಕಳು ಇಸ್ರೇಲರ ದೇವರನ್ನು ಗೌರವಿಸುವರು.