1
|
ದಮಸ್ಕಕ್ಕೆ ಇದು ದುಃಖಕರವಾದ ಸಂದೇಶ. ಯೆಹೋವನು ಹೇಳುವದೇನೆಂದರೆ, “ದಮಸ್ಕವು ಈಗ ಒಂದು ದೊಡ್ಡ ನಗರವಾಗಿದೆ. ಆದರೆ ಅದು ನಾಶವಾಗುವದು. ಕೆಡವಲ್ಪಟ್ಟ ಕಟ್ಟಡಗಳು ಮಾತ್ರವೇ ದಮಸ್ಕದಲ್ಲಿರುವವು. |
2
|
ಅರೋಯೇರ್ ಪ್ರಾಂತ್ಯದ ನಗರಗಳನ್ನು ಜನರು ಬಿಟ್ಟು ಹೋಗುವರು. ಆ ಪಾಳುಬಿದ್ದ ನಗರಗಳಲ್ಲಿ ಕುರಿಮಂದೆಗಳು ತಿರುಗಾಡುವವು. ಅವುಗಳಿಗೆ ತೊಂದರೆ ಕೊಡಲು ಯಾರೂ ಇರುವದಿಲ್ಲ. |
3
|
ಕೋಟೆಗೋಡೆಯುಳ್ಳ ಎಫ್ರಾಯೀಮನ ಪಟ್ಟಣಗಳು ನಾಶವಾಗುವವು. ದಮಸ್ಕದಲ್ಲಿರುವ ಸರ್ಕಾರವು ಕೊನೆಗೊಳ್ಳುವದು. ಇಸ್ರೇಲರಿಗೆ ಆದಂತೆಯೇ ಅರಾಮ್ಯರಿಗೂ ಆಗುವದು. ಪ್ರಮುಖ ನಗರವಾಸಿಗಳು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು” ಇದು ಸರ್ವಶಕ್ತನಾದ ಯೆಹೋವನ ನುಡಿ. |
4
|
“ಆ ಸಮಯದಲ್ಲಿ ಯಾಕೋಬಿನ ಸಂಪತ್ತೆಲ್ಲಾ ಕೊಳ್ಳೆಹೊಡೆಯಲ್ಪಡುವದು. ಯಾಕೋಬನು ರೋಗಗ್ರಸ್ಥನಾದವನಂತೆ ಬಲಹೀನನಾಗಿಯೂ ತೆಳುವಾಗಿಯೂ ಇರುವನು. |
5
|
“ಆ ಸಮಯದಲ್ಲಿ ರೆಫಾಯೀಮ್ ಕಣಿವೆಯಲ್ಲಿ ಧಾನ್ಯದ ಸುಗ್ಗಿಯಂತಿರುವದು. ಕೆಲಸಗಾರರು ಹೊಲಗಳಲ್ಲಿ ಬೆಳೆಯನ್ನು ಕೊಯ್ದು ಧಾನ್ಯವನ್ನು ಶೇಖರಿಸುವರು. |
6
|
“ಆ ಸಮಯವು ಆಲೀವ್ ಬೀಜಗಳನ್ನು ಜನರು ಕೂಡಿಸಿಕೊಳ್ಳುವಂತೆ ಇರುವದು. ಆಲೀವ್ ಮರಗಳಿಂದ ಜನರು ಕಾಯಿಗಳನ್ನು ಉದುರಿಸುವರು. ಆದರೆ ಕೆಲವು ಕಾಯಿಗಳು ಮರಗಳ ತುದಿಯಲ್ಲಿ ಉಳಿದುಕೊಳ್ಳುವವು. ಎತ್ತರದ ಕೊಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿಯುವವು. ಅದೇ ರೀತಿಯಲ್ಲಿ ಆ ನಗರಗಳ ಸ್ಥಿತಿಯೂ ಇರುವದು,” ಇದು ಸರ್ವಶಕ್ತನಾದ ಯೆಹೋವನ ನುಡಿಗಳು. |
7
|
ಮಯಗಳಲ್ಲಿ ಜನರು ತಮ್ಮ ನಿರ್ಮಾಣಿಕನಾದ ದೇವರ ಕಡೆಗೆ ದೃಷ್ಟಿಸಿ ನೋಡುವರು. ಅವರ ಕಣ್ಣುಗಳು ಇಸ್ರೇಲಿನ ಪರಿಶುದ್ಧನನ್ನು ನೋಡುತ್ತವೆ. |
8
|
ಜನರು ತಮ್ಮ ಮಹಾಕಾರ್ಯಗಳ ಮೇಲೆ ನಂಬಿಕೆ ಇಡುವದಿಲ್ಲ. ಸುಳ್ಳುದೇವರುಗಳಿಗೆ, ತಾವು ಮಾಡಿದ ಬಲಿಪೀಠಗಳಿಗೆ, ಪೂಜಾಸ್ಥಳಗಳಿಗೆ ಅವರು ಹೋಗುವದಿಲ್ಲ. |
9
|
ಆ ಸಮಯದಲ್ಲಿ ಕೋಟೆಗೋಡೆಗಳಿರುವ ಎಲ್ಲಾ ಪಟ್ಟಣಗಳು ನಿರ್ಜನವಾಗುವದು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವ ಕಾಲದಲ್ಲಿ ಹೇಗೆ ಅಡವಿಗಳಂತೆಯೂ ಬೆಟ್ಟಗಳಂತೆಯೂ ಇದ್ದವೋ ಅದೇ ರೀತಿಯಲ್ಲಿ ಇರುವವು. ಆ ಸಮಯದಲ್ಲಿ ಇಸ್ರೇಲರು ದೇಶದೊಳಗೆ ಪ್ರವೇಶಿಸುವಾಗ ಅಲ್ಲಿಯ ನಿವಾಸಿಗಳೆಲ್ಲರೂ ಓಡಿಹೋದರು. ಮುಂಬರುವ ದಿವಸಗಳಲ್ಲಿ ದೇಶವು ಮತ್ತೆ ನಿರ್ಜನವಾಗುವದು. |
10
|
ನೀವು ನಿಮ್ಮ ರಕ್ಷಕನಾದ ದೇವರನ್ನು ಮರೆತುಬಿಟ್ಟಿದ್ದರಿಂದ ನಿಮಗೆ ಹೀಗೆ ಆಗುವದು. ದೇವರು ನಿಮ್ಮ ಆಶ್ರಯದುರ್ಗವಾಗಿದ್ದಾನೆಂಬುದನ್ನು ನೀವು ನೆನಪು ಮಾಡಿಕೊಳ್ಳಲಿಲ್ಲ. ದೂರದ ಪ್ರಾಂತ್ಯದಿಂದ ನೀವು ಉತ್ತಮ ತಳಿಯ ದ್ರಾಕ್ಷಿಯನ್ನು ತಂದಿರಿ. ಅದನ್ನು ನೀವು ನೆಟ್ಟರೂ ಅವು ಚಿಗುರುವದಿಲ್ಲ. |
11
|
ಒಂದು ದಿವಸ ಆ ಕೊಂಬೆಗಳನ್ನು ನೆಟ್ಟು ಅದು ಚಿಗುರುವಂತೆ ಮಾಡುವಿರಿ. ಮರುದಿವಸ ಅದು ಚಿಗುರುವದು. ಸುಗ್ಗಿಯ ಕಾಲದಲ್ಲಿ ನೀವು ದ್ರಾಕ್ಷಿತೋಟಕ್ಕೆ ಹೋದಾಗ ದ್ರಾಕ್ಷಿಬಳ್ಳಿಗಳೆಲ್ಲಾ ರೋಗದಿಂದ ಸತ್ತುಹೋಗಿರುವವು. |
12
|
ಇಗೋ! ಸಮುದ್ರವು ಭೋರ್ಗರೆಯುವ ಶಬ್ದದಂತೆ ಅನೇಕ ಜನಾಂಗಗಳು ರೋಧಿಸುವ ಶಬ್ದ ಕೇಳಿಸುತ್ತದೆ. ಆ ಶಬ್ದವು ಸಮುದ್ರದ ತೆರೆಗಳು ದಡಕ್ಕೆ ಅಪ್ಪಳಿಸುವಂತಿದೆ. |
13
|
ದೇವರು ಗದರಿಸಿದಾಗ ಜನರು ಓಡಿಹೋಗುವರು. ಆ ಜನರು ಗಾಳಿಯಲ್ಲಿ ಹಾರಿಹೋಗುವ ಹೊಟ್ಟಿನಂತಿರುವರು; ಬಿರುಗಾಳಿಯು ಬಹು ದೂರಕ್ಕೆ ಕೊಂಡೊಯ್ಯುವ ಬೇರಿಲ್ಲದ ಹಣಜಿಗಳಂತಿರುವರು. |
14
|
ಆ ರಾತ್ರಿ ಜನರು ಭಯಗ್ರಸ್ತರಾಗುವರು. ಬೆಳಗಾಗುವದರೊಳಗೆ ಏನೂ ಉಳಿಯುವದಿಲ್ಲ. ಹಾಗೆಯೇ ನಮ್ಮ ವೈರಿಗಳಿಗೆ ಏನೂ ದೊರಕುವದಿಲ್ಲ. ಅವರು ನಮ್ಮ ದೇಶಕ್ಕೆ ನುಗ್ಗಿದರೂ ಅವರಿಗೆ ಏನೂ ಸಿಗದು. |
Isaiah 17:8 Kannada Language Bible Words basic statistical display
COMING SOON ...