ದಮಸ್ಕಕ್ಕೆ ಇದು ದುಃಖಕರವಾದ ಸಂದೇಶ. ಯೆಹೋವನು ಹೇಳುವುದೇನೆಂದರೆ, “ದಮಸ್ಕವು ಈಗ ಒಂದು ದೊಡ್ಡ ನಗರವಾಗಿದೆ. ಆದರೆ ಅದು ನಾಶವಾಗುವದು. ಕೆಡವಲ್ಪಟ್ಟ ಕಟ್ಟಡಗಳು ಮಾತ್ರವೇ ದಮಸ್ಕದಲ್ಲಿರುವವು.
“ಆ ಸಮಯವು ಆಲೀವ್ ಬೀಜಗಳನ್ನು ಜನರು ಕೂಡಿಸಿಕೊಳ್ಳುವಂತೆ ಇರುವುದು. ಆಲೀವ್ ಮರಗಳಿಂದ ಜನರು ಕಾಯಿಗಳನ್ನು ಉದುರಿಸುವರು. ಆದರೆ ಕೆಲವು ಕಾಯಿಗಳು ಮರಗಳ ತುದಿಯಲ್ಲಿ ಉಳಿದುಕೊಳ್ಳುವವು. ಎತ್ತರದ ಕೊಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿಯುವವು. ಅದೇ ರೀತಿಯಲ್ಲಿ ಆ ನಗರಗಳ ಸ್ಥಿತಿಯೂ ಇರುವುದು” ಇದು ಸರ್ವಶಕ್ತನಾದ ಯೆಹೋವನ ನುಡಿಗಳು.
ಆ ಸಮಯದಲ್ಲಿ ಕೋಟೆಗೋಡೆಗಳಿರುವ ಎಲ್ಲಾ ಪಟ್ಟಣಗಳು ನಿರ್ಜನವಾಗುವದು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವ ಕಾಲದಲ್ಲಿ ಹೇಗೆ ಅಡವಿಗಳಂತೆಯೂ ಬೆಟ್ಟಗಳಂತೆಯೂ ಇದ್ದವೋ ಅದೇ ರೀತಿಯಲ್ಲಿ ಇರುವವು. ಆ ಸಮಯದಲ್ಲಿ ಇಸ್ರೇಲರು ದೇಶದೊಳಗೆ ಪ್ರವೇಶಿಸುವಾಗ ಅಲ್ಲಿಯ ನಿವಾಸಿಗಳೆಲ್ಲರೂ ಓಡಿಹೋದರು. ಮುಂಬರುವ ದಿವಸಗಳಲ್ಲಿ ದೇಶವು ಮತ್ತೆ ನಿರ್ಜನವಾಗುವದು.
ನೀವು ನಿಮ್ಮ ರಕ್ಷಕನಾದ ದೇವರನ್ನು ಮರೆತುಬಿಟ್ಟಿದ್ದರಿಂದ ನಿಮಗೆ ಹೀಗೆ ಆಗುವದು. ದೇವರು ನಿಮ್ಮ ಆಶ್ರಯದುರ್ಗವಾಗಿದ್ದಾನೆಂಬುದನ್ನು ನೀವು ನೆನಪು ಮಾಡಿಕೊಳ್ಳಲಿಲ್ಲ. ದೂರದ ಪ್ರಾಂತ್ಯದಿಂದ ನೀವು ಉತ್ತಮ ತಳಿಯ ದ್ರಾಕ್ಷಿಯನ್ನು ತಂದಿರಿ. ಅದನ್ನು ನೀವು ನೆಟ್ಟರೂ ಅವು ಚಿಗುರುವದಿಲ್ಲ.
ಒಂದು ದಿವಸ ಆ ಕೊಂಬೆಗಳನ್ನು ನೆಟ್ಟು ಅದು ಚಿಗುರುವಂತೆ ಮಾಡುವಿರಿ. ಮರುದಿವಸ ಅದು ಚಿಗುರುವದು. ಸುಗ್ಗಿಯ ಕಾಲದಲ್ಲಿ ನೀವು ದ್ರಾಕ್ಷಿತೋಟಕ್ಕೆ ಹೋದಾಗ ದ್ರಾಕ್ಷಿಬಳ್ಳಿಗಳೆಲ್ಲಾ ರೋಗದಿಂದ ಸತ್ತುಹೋಗಿರುವವು.