1
|
“ನಾನು ಹೇಳಿದಂಥ ಎಲ್ಲಾ ಧರ್ಮಶಾಸ್ತ್ರವನ್ನು ಅನುಸರಿಸಿ ಅದಕ್ಕೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ಪ್ರಪಂಚದ ಎಲ್ಲಾ ದೇಶಗಳಿಗಿಂತ ನಿಮ್ಮ ದೇಶವನ್ನು ಅತೀ ಉನ್ನತಸ್ಥಾನದಲ್ಲಿರುವ ದೇಶವನ್ನಾಗಿ ಮಾಡುವನು. |
2
|
ನೀವು ದೇವರಿಗೆ ವಿಧೇಯರಾದರೆ ಈ ಎಲ್ಲಾ ಆಶೀರ್ವಾದಗಳು ನಿಮ್ಮದಾಗುವವು. |
3
|
“ಯೆಹೋವನು ನಿಮ್ಮನ್ನು ಹೊಲಗಳಲ್ಲಿಯೂ ಪಟ್ಟಣಗಳಲ್ಲಿಯೂ ಆಶೀರ್ವದಿಸುವನು. |
4
|
“ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ಹೊಲಗಳನ್ನು ಆಶೀರ್ವದಿಸಿ ಒಳ್ಳೆಯ ಬೆಳೆಯನ್ನು ಅನುಗ್ರಹಿಸುವನು. ನಿಮ್ಮ ಪಶುಪ್ರಾಣಿಗಳನ್ನು ಆಶೀರ್ವದಿಸಿ ಅವು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. ಆತನು ನಿಮ್ಮ ಎಲ್ಲಾ ದನಕರು, ಕುರಿಮರಿಗಳನ್ನು ಆಶೀರ್ವದಿಸುವನು. |
5
|
“ಯೆಹೋವನು ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ ಆಶೀರ್ವದಿಸಿ ಅವು ಯಾವಾಗಲೂ ಆಹಾರ ಪದಾರ್ಥಗಳಿಂದ ತುಂಬಿರುವಂತೆ ಮಾಡುವನು. |
6
|
“ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಸಫಲ ಹೊಂದುವಂತೆ ಆಶೀರ್ವದಿಸುವನು. |
7
|
“ವೈರಿಗಳು ನಿಮ್ಮೆದುರಾಗಿ ಯುದ್ಧಮಾಡಲು ಬಂದಾಗ ನಿಮಗೆ ಆತನು ಸಹಾಯ ಮಾಡುವನು. ವೈರಿಗಳು ಒಂದು ದಿಕ್ಕಿನಿಂದ ಬಂದರೆ ಏಳು ದಾರಿಯಲ್ಲಿ ಪಲಾಯನ ಮಾಡುವರು. |
8
|
“ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮ್ಮ ಕಣಜಗಳನ್ನು ಆಶೀರ್ವದಿಸುವನು. ನೀವು ಮಾಡುವ ಕಾರ್ಯಗಳನ್ನೆಲ್ಲಾ ಆಶೀರ್ವದಿಸುವನು. ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ನಿಮ್ಮನ್ನು ಆಶೀರ್ವದಿಸುವನು. |
9
|
ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ತನ್ನ ವಾಗ್ದಾನಕ್ಕನುಸಾರವಾಗಿ ವಿಶೇಷವಾದ ಸ್ವಕೀಯ ಪ್ರಜೆಯನ್ನಾಗಿ ಮಾಡುವನು. |
10
|
ಆಗ ನಿಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ನೀವು ದೇವರ ಹೆಸರಿನಿಂದ ಕರೆಯಲ್ಪಟ್ಟವರೆಂಬುದನ್ನು ನೋಡುವಾಗ ನಿಮಗೆ ಭಯಪಡುವರು. |
11
|
“ನಿಮ್ಮ ದೇವರಾದ ಯೆಹೋವನು ನಿಮಗೆ ಒಳ್ಳೆಯ ವಸ್ತುಗಳನ್ನು ಕೊಡುವನು; ನಿಮಗೆ ಹೆಚ್ಚು ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ಪಶುಗಳು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. ಯೆಹೋವನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶದಲ್ಲಿ ನಿಮ್ಮ ಹೊಲವು ಒಳ್ಳೆಯ ಬೆಳೆಗಳನ್ನು ಫಲಿಸುತ್ತದೆ. |
12
|
ಯೆಹೋವನು ತನ್ನ ಆಶೀರ್ವಾದಗಳೆಂಬ ಭಂಡಾರವನ್ನೇ ನಿಮಗೆ ತೆರೆಯುವನು. ಕಾಲಕ್ಕೆ ತಕ್ಕ ಹಾಗೆ ಮಳೆ ಸುರಿಯುವಂತೆ ಮಾಡುವನು; ನಿಮ್ಮ ಕಾರ್ಯವನ್ನೆಲ್ಲಾ ಸಫಲ ಮಾಡುವನು. ಇತರ ದೇಶಗಳಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದು; ಬೇರೆಯವರಿಂದ ಸಾಲ ತೆಗೆದುಕೊಳ್ಳುವ ಅವಶ್ಯಕತೆ ನಿಮಗೆ ಬಾರದು. |
13
|
ಯೆಹೋವನು ನಿಮ್ಮನ್ನು ತಲೆಯನ್ನಾಗಿ ಮಾಡಲು ಬಯಸುತ್ತಾನೆಯೇ ಹೊರತು ಬಾಲವನ್ನಾಗಿಯಲ್ಲ. ನೀವು ಮೇಲಿನ ಅಂತಸ್ತಿನಲ್ಲಿರುವಿರಿ, ಕೆಳಗಿನದರಲ್ಲಿ ಅಲ್ಲ. ನೀವು ಯೆಹೋವನ ಆಜ್ಞೆಯನ್ನು ಪಾಲಿಸಿದಾಗ ನಿಮಗೆ ಹೀಗೆ ಆಗುವುದು. |
14
|
ನಾನು ಈ ಹೊತ್ತು ಬೋಧಿಸುವ ಯಾವುದನ್ನೂ ನೀವು ಉಲ್ಲಂಘಿಸಬಾರದು. ಇತರ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಪೂಜಿಸಬಾರದು. |
15
|
“ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಆಜ್ಞೆ, ಕಟ್ಟಳೆಗಳಿಗೆ ನೀವು ವಿಧೇಯರಾಗದಿದ್ದರೆ ಈ ಕೆಟ್ಟ ಸಂಗತಿಗಳು ನಿಮಗೆ ತಟ್ಟುವವು: |
16
|
“ನಿಮ್ಮ ಹೊಲದಲ್ಲಿಯೂ ನೀವು ವಾಸಿಸುವ ಪಟ್ಟಣದಲ್ಲಿಯೂ ಯೆಹೋವನು ನಿಮ್ಮನ್ನು ಶಪಿಸುವನು. |
17
|
“ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ ಆಹಾರವಿಲ್ಲದಂತೆ ಬರಿದಾಗಿ ಮಾಡುವನು. |
18
|
“ನಿಮಗೆ ಹೆಚ್ಚು ಮಕ್ಕಳಿಲ್ಲದಂತೆ ಮಾಡುವನು. ನಿಮ್ಮ ಹೊಲಗಳನ್ನು ಶಪಿಸಿ ನಿಮಗೆ ಹೆಚ್ಚು ಬೆಳೆಯಾಗದಂತೆ ಮಾಡುವನು. ನಿಮ್ಮ ಪಶುಪ್ರಾಣಿಗಳನ್ನು ಶಪಿಸಿ ಅವುಗಳು ಮರಿಗಳನ್ನು ಈಯದಂತೆ ಮಾಡುವನು. ಆತನು ನಿಮ್ಮ ಎಲ್ಲಾ ಮರಿಗಳನ್ನು ಕರುಗಳನ್ನು ಶಪಿಸುವನು. |
19
|
“ನೀವು ಎಲ್ಲಾ ಸಮಯಗಳಲ್ಲಿ ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ದೇವರಾದ ಯೆಹೋವನು ಶಪಿಸುವನು. |
20
|
“ನೀವು ಕೆಟ್ಟಕಾರ್ಯಗಳನ್ನು ಮಾಡಿ ಯೆಹೋವನಿಂದ ದೂರವಾಗಿ ಹೋದರೆ ನಿಮಗೆ ಕೆಟ್ಟಸಂಗತಿಗಳು ಉಂಟಾಗುವವು. ನಿಮಗೆ ಉಪದ್ರವಗಳೂ ಮನಸ್ಸಿಗೆ ಅಸಮಾಧಾನವೂ ಉಂಟಾಗುವವು. ನೀವು ಸಂಪೂರ್ಣವಾಗಿ ನಾಶವಾಗುವ ತನಕ ಈ ಸಂಗತಿಗಳು ನಿಮ್ಮನ್ನು ಬಾಧಿಸುವವು. ನೀವು ಆತನನ್ನು ತೊರೆದದ್ದರಿಂದ ನಿಮಗೆ ಹಾಗೆ ಮಾಡುವನು. |
21
|
ನೀವು ಸ್ವಾಸ್ತ್ಯವಾಗಿ ಹೊಂದಲಿರುವ ದೇಶದಿಂದ ನೀವು ನಾಶವಾಗುವವರೆಗೆ, ನಿಮ್ಮ ದೇವರಾದ ಯೆಹೋವನು ನಿಮಗೆ ಭಯಂಕರವಾದ ರೋಗಗಳನ್ನು ಬರಮಾಡುವನು. |
22
|
ಜ್ವರ, ಬಾಧೆ, ದೇಹ ಊದಿಕೊಳ್ಳುವಿಕೆ ಇವುಗಳಿಂದ ನಿಮ್ಮನ್ನು ಶಿಕ್ಷಿಸುವನು. ನಿಮ್ಮ ದೇಶದೊಳಗೆ ಸಹಿಸಲಾರದ ಉಷ್ಣವನ್ನು ಕಳುಹಿಸಿ ಮಳೆಬೀಳದಂತೆ ಮಾಡುವನು. ನಿಮ್ಮ ಬೆಳೆ ರೋಗದಿಂದಲೂ ಬಿಸಿಲಿನಿಂದಲೂ ನಾಶವಾಗುವುದು. ಇವೆಲ್ಲಾ ನಿಮಗೆ ಉಂಟಾಗಿ ನೀವು ನಾಶವಾಗುವ ತನಕ ಮುಂದುವರಿಯುವವು. |
23
|
ಆಕಾಶವು ಮೋಡಗಳೇ ಇರದ ಕಾದ ಹಿತ್ತಾಳೆಯಂತಿರುವುದು. ಕಾಲಿನಡಿಯಲ್ಲಿರುವ ನೆಲವು ಕಬ್ಬಿಣದಂತೆ ಗಟ್ಟಿಯಾಗಿರುವುದು. |
24
|
ಯೆಹೋವನು ನಿಮಗೆ ಮಳೆಯನ್ನು ಬೀಳಮಾಡುವುದಿಲ್ಲ; ಕೇವಲ ಧೂಳು ಮತ್ತು ಮರಳು ಆಕಾಶದಿಂದ ಬೀಳುವುದು. ನೀವು ನಾಶವಾಗುವವರೆಗೆ ಅದು ಮೇಲಿನಿಂದ ಬೀಳುತ್ತಿರುವುದು. |
25
|
“ನಿಮ್ಮ ವೈರಿಗಳು ಬಂದು ನಿಮ್ಮನ್ನು ಸೋಲಿಸಿಬಿಡುವಂತೆ ಮಾಡುವನು. ನೀವು ಒಂದು ದಾರಿಯಿಂದ ನಿಮ್ಮ ವೈರಿಗೆ ಎದುರಾಗಿ ಯುದ್ಧಕ್ಕೆ ಇಳಿದರೆ ಏಳುದಾರಿಗಳಿಂದ ರಣರಂಗದಿಂದ ಪಲಾಯನ ಮಾಡುವಿರಿ. ನಿಮಗೆ ಸಂಭವಿಸುವ ಬಾಧೆಗಳನ್ನು ನೋಡಿ ಇತರ ಜನಾಂಗದವರು ಭಯಪಡುವರು. |
26
|
ಕಾಡುಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ನಿಮ್ಮ ಹೆಣಗಳು ಆಹಾರವಾಗುವವು. ಅವುಗಳನ್ನು ಓಡಿಸಲು ಯಾರೂ ಇರುವುದಿಲ್ಲ. |
27
|
“ಈಜಿಪ್ಟಿನವರಿಗೆ ಕಳುಹಿಸಿದಂತೆ ನಿಮಗೂ ಮೈಯಲ್ಲಿ ಬಾಧಿಸುವ ಹುಣ್ಣುಗಳನ್ನು ಕಳುಹಿಸುವನು. ದೇಹದಲ್ಲಿ ಗಡ್ಡೆಗಳುಂಟಾಗುವವು. ಕೀವುಸೋರುವ ಹುಣ್ಣುಗಳು, ಗುಣವಾಗದ ತುರಿಸುವ ಕಜ್ಜಿಗಳು ಉಂಟಾಗುವವು. |
28
|
ಯೆಹೋವನು ನಿಮ್ಮನ್ನು ದಿಗ್ಬ್ರಾಂತರನ್ನಾಗಿ ಮಾಡುವನು; ನಿಮ್ಮನ್ನು ಕುರುಡರನ್ನಾಗಿ ಮಾಡಿ ಗಲಿಬಿಲಿ ಮಾಡುವನು. |
29
|
“ಹಗಲಿನಲ್ಲೂ ಕುರುಡರಂತೆ ನೀವು ತಡವರಿಸುವಿರಿ. ನೀವು ಮಾಡುವ ಕಾರ್ಯವೆಲ್ಲವೂ ನಿಷ್ಫಲವಾಗುವವು. ಜನರು ನಿಮ್ಮನ್ನು ಬಾಧಿಸಿ ನಿಮ್ಮಲ್ಲಿರುವದನ್ನೆಲ್ಲಾ ದೋಚಿಕೊಂಡು ಹೋಗುವರು. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ. |
30
|
“ನೀವು ಮದುವೆಯಾಗಲು ಕನ್ನಿಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಿರಿ. ಆದರೆ ಬೇರೊಬ್ಬನು ಆಕೆಯನ್ನು ಕೂಡುವನು. ನೀವೊಂದು ಮನೆಯನ್ನು ಕಟ್ಟುವಿರಿ. ಆದರೆ ಬೇರೊಬ್ಬನು ಅದರಲ್ಲಿ ವಾಸಿಸುವನು. ನೀವು ದ್ರಾಕ್ಷಾತೋಟ ಮಾಡಿ ದ್ರಾಕ್ಷಾಲತೆಗಳನ್ನು ನೆಡುವಿರಿ. ಆದರೆ ಅದರ ಫಲಗಳನ್ನು ನೀವು ಕೂಡಿಸುವುದಿಲ್ಲ. |
31
|
ನಿಮ್ಮ ದನಗಳನ್ನು ನಿಮ್ಮೆದುರಿನಲ್ಲಿ ಜನರು ಕೊಯ್ಯುವರು. ಆದರೆ ನೀವು ಅದರ ಮಾಂಸವನ್ನು ತಿನ್ನುವುದಿಲ್ಲ. ನಿಮ್ಮ ಕತ್ತೆಗಳನ್ನು ಜನರು ನಿಮ್ಮಿಂದ ತೆಗೆದುಕೊಂಡು ಹೋಗುವರು. ಆದರೆ ಅವುಗಳನ್ನು ಹಿಂದಕ್ಕೆ ಕೊಡರು. ನಿಮ್ಮ ಕುರಿಗಳನ್ನು ವೈರಿಗಳು ಕೊಂಡೊಯ್ಯುವರು. ನಿಮ್ಮನ್ನು ರಕ್ಷಿಸಲು ಯಾರೂ ಬರಲಾರರು. |
32
|
“ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಬೇರೆಯವರು ಎತ್ತಿಕೊಂಡು ಹೋಗುವರು. ನೀವು ಹಗಲುರಾತ್ರಿ ನಿಮ್ಮ ಮಕ್ಕಳಿಗಾಗಿ ಹುಡುಕಾಡುವಿರಿ. ಹುಡುಕಾಡುತ್ತಾ ನಿಮ್ಮ ಕಣ್ಣುಗಳು ಕಂಗೆಡುವವು; ಆದರೆ ಅವರು ನಿಮಗೆ ದೊರಕುವುದಿಲ್ಲ. ಯೆಹೋವನು ನಿಮಗೆ ಸಹಾಯ ಮಾಡುವುದಿಲ್ಲ. |
33
|
“ನೀವು ಅರಿಯದಿರುವ ದೇಶದವರು ಬಂದು ನಿಮ್ಮ ಪೈರನ್ನು ಕೊಯ್ದುಕೊಂಡು ಹೋಗುವರು; ನೀವು ದುಡಿದು ಸಂಪಾದಿಸಿದವುಗಳನ್ನು ಎತ್ತಿಕೊಂಡು ಹೋಗುವರು. ಜನರು ನಿಮ್ಮನ್ನು ಕುಗ್ಗಿಸಿ ಬಲಹೀನರನ್ನಾಗಿ ಮಾಡುವರು. |
34
|
ನೀವು ನೋಡುವ ಸಂಗತಿಗಳು ನಿಮ್ಮನ್ನು ಹುಚ್ಚರನ್ನಾಗಿ ಮಾಡುತ್ತವೆ. |
35
|
ಯೆಹೋವನು ನಿಮ್ಮನ್ನು ಉರಿಯುವ ಹುಣ್ಣುಗಳಿಂದ ಬಾಧಿಸುವನು; ಅವುಗಳು ಗುಣವಾಗುವುದಿಲ್ಲ. ಈ ಹುಣ್ಣುಗಳು ನಿಮ್ಮ ದೇಹದ ಎಲ್ಲಾ ಭಾಗಗಳಲ್ಲಿ ಅಂದರೆ ನಿಮ್ಮ ಪಾದದಿಂದ ಹಿಡಿದು ನಡುನೆತ್ತಿಯ ತನಕ ಇರುವವು. |
36
|
“ಯೆಹೋವನು ನಿಮ್ಮನ್ನೂ ನಿಮ್ಮ ಅರಸನನ್ನೂ ನೀವು ಅರಿಯದ ದೇಶಕ್ಕೆ ಅಟ್ಟಿಬಿಡುವನು. ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಆ ದೇಶವನ್ನು ಎಂದೂ ನೋಡಲಿಲ್ಲ. ಅಲ್ಲಿ ಮರ, ಕಲ್ಲುಗಳಿಂದ ಮಾಡಿದ ಸುಳ್ಳುದೇವರನ್ನು ಆರಾಧಿಸುವಿರಿ. |
37
|
ನೀವು ಯಾವ ದೇಶಕ್ಕೆ ಕಳುಹಿಸಲ್ಪಡುವಿರೋ ಆ ದೇಶದವರು ನಿಮ್ಮ ದುರವಸ್ಥೆಯನ್ನು ನೋಡಿ ನಗುವರು; ಕೆಟ್ಟಮಾತುಗಳನ್ನಾಡುವರು. |
38
|
“ಹೊಲದಲ್ಲಿ ಧಾನ್ಯ ಯಥೇಚ್ಛವಾಗಿ ಬೆಳೆದರೂ ನೀವು ಮನೆಯೊಳಗೆ ತರುವುದು ಸ್ವಲ್ಪ ಮಾತ್ರ. ಮಿಡತೆಯು ನಿಮ್ಮ ಬೆಳೆಯನ್ನು ತಿಂದು ಬಿಡುವದು. |
39
|
ನೀವು ದ್ರಾಕ್ಷಾತೋಟ ಮಾಡಿ ಪ್ರಯಾಸಪಟ್ಟು ಅದರಲ್ಲಿ ಕೆಲಸ ಮಾಡುವಿರಿ. ಆದರೆ ಅದರ ಫಲವನ್ನು ಹುಳುಗಳು ತಿಂದುಬಿಡುವುದರಿಂದ ನೀವು ದ್ರಾಕ್ಷಿಯನ್ನು ಸಂಗ್ರಹಿಸುವುದಿಲ್ಲ; ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. |
40
|
ನಿಮ್ಮ ಭೂಮಿಯಲ್ಲಿ ಆಲಿವ್ ಮರಗಳು ತುಂಬಿದ್ದರೂ ಎಣ್ಣೆಯ ಬರದಲ್ಲಿ ಸಂಕಟಪಡುವಿರಿ. ಯಾಕೆಂದರೆ ಆಲಿವ್ ಕಾಯಿಗಳು ಭೂಮಿಯ ಮೇಲೆ ಉದುರಿಬಿದ್ದು ಹಾಳಾಗುವವು. |
41
|
ನಿಮಗೆ ಗಂಡುಹೆಣ್ಣು ಮಕ್ಕಳು ಹುಟ್ಟುವರು. ಆದರೆ ಅವರು ನಿಮ್ಮೊಂದಿಗೆ ಇರುವುದಿಲ್ಲ. ಅವರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. |
42
|
ನಿಮ್ಮ ತೋಟದ ಎಲ್ಲಾ ಮರಗಳನ್ನೂ ಹೊಲದ ಪೈರುಗಳನ್ನೂ ಮಿಡತೆಗಳು ತಿಂದುಬಿಡುವವು. |
43
|
ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯರು ಬಲಿಷ್ಠರಾಗುವರು. ನೀವಾದರೋ ಬಲಹೀನರಾಗುವಿರಿ. |
44
|
ನಿಮಗೆ ಸಾಲ ಕೊಡಲು ವಿದೇಶಿಯರಿಗೆ ಹಣವಿರುವುದು. ಆದರೆ ಅವರಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದಿಲ್ಲ. ತಲೆಯು ದೇಹವನ್ನು ಹೇಗೆ ಹಿಡಿತದಲ್ಲಿಟ್ಟುಕೊಂಡಿರುತ್ತದೋ ಹಾಗೆಯೇ ಅವರು ನಿಮ್ಮನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವರು. ನೀವು ಅವರಿಗೆ ಬಾಲದಂತಿರುವಿರಿ. |
45
|
“ನಿಮ್ಮ ದೇವರಾದ ಯೆಹೋವನು ಹೇಳಿದ ಸಂಗತಿಗಳಿಗೆ ನೀವು ಕಿವಿಗೊಡದೆ ಹೋದದ್ದರಿಂದ, ಆತನು ಕೊಟ್ಟ ಆಜ್ಞೆಗಳಿಗೂ ನಿಯಮಗಳಿಗೂ ನೀವು ವಿಧೇಯರಾಗದಿದ್ದ ಕಾರಣ ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬರುತ್ತವೆ. ನೀವು ನಾಶವಾಗುವವರೆಗೂ ಅವು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ. |
46
|
ನೀವೂ ನಿಮ್ಮ ಸಂತತಿಯವರೂ ದೇವರ ಶಾಶ್ವತವಾದ ತೀರ್ಪನ್ನು ಹೊಂದಿದ್ದೀರೆಂಬುದಕ್ಕೆ ಬೇರೆಯವರಿಗೆ ಈ ಶಾಪಗಳೇ ಸೂಚನೆಯಾಗಿಯೂ ರುಜುವಾತಾಗಿಯೂ ಇರುತ್ತವೆ. |
47
|
“ನಿಮ್ಮದೇವರಾದ ಯೆಹೋವನು ನಿಮಗೆ ಹೆಚ್ಚಾದ ಆಶೀರ್ವಾದವನ್ನು ಕೊಟ್ಟನು. ಆದರೆ ನೀವು ಸಂತೋಷ ಮತ್ತು ಉಪಕಾರದ ಹೃದಯದಿಂದ ಆತನ ಸೇವೆಮಾಡಲಿಲ್ಲ. |
48
|
ಆದುದರಿಂದ ಆತನು ನಿಮ್ಮ ವೈರಿಗಳನ್ನು ಕಳುಹಿಸಿ ಅವರ ಸೇವೆ ನೀವು ಮಾಡುವಂತೆ ಮಾಡುವನು. ನೀವು ಹಸಿವು ಬಾಯಾರಿಕೆಗಳಿಂದ ಬಳಲುವಿರಿ; ಬಟ್ಟೆಯಿಲ್ಲದೆ ಬಡವರಾಗಿ ಜೀವಿಸುವಿರಿ. ನಿಮ್ಮ ಯೆಹೋವನು ನಿಮ್ಮ ಮೇಲೆ ಭಾರವನ್ನು ಹೊರಿಸುವನು. ಆ ಭಾರವನ್ನು ನಿಮ್ಮಿಂದ ತೆಗೆಯಲಾಗುವುದಿಲ್ಲ; ನೀವು ನಾಶವಾಗುವಿರಿ. |
49
|
“ಬಹಳ ದೂರದಿಂದ ಒಂದು ಜನಾಂಗವು ನಿಮ್ಮೊಂದಿಗೆ ಯುದ್ಧಮಾಡಲು ಬರುವಂತೆ ಯೆಹೋವನು ಮಾಡುವನು. ನೀವು ಅವರ ಭಾಷೆಯನ್ನು ಅರಿಯದಿರುವಿರಿ. ಆಕಾಶದಿಂದ ಹದ್ದು ಹಾರಿಬರುವಂತೆ ಅತೀ ವೇಗವಾಗಿ ಅವರು ನಿಮ್ಮ ಮೇಲೆ ಬೀಳುವರು. |
50
|
ಅವರು ಮಹಾಕ್ರೂರಿಗಳು. ಅವರು ನಿಮ್ಮಲ್ಲಿರುವ ಮುದುಕರಿಗೆ ಅಥವಾ ಎಳೆಗೂಸುಗಳಿಗೆ ಕರುಣೆ ತೋರಿಸರು. |
51
|
ಅವರು ನಿಮ್ಮ ಪಶುಗಳನ್ನು ಅಟ್ಟಿಸಿಕೊಂಡು ಹೋಗುವರು; ನೀವು ಬೆಳೆದ ಬೆಳೆಯನ್ನು ಕೊಂಡೊಯ್ಯುವರು. ನಿಮ್ಮನ್ನು ನಾಶಪಡಿಸುವ ತನಕ ಅವರು ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು. ಅವರು ನಿಮಗೆ ದವಸಧಾನ್ಯವನ್ನಾಗಲಿ ದ್ರಾಕ್ಷಾರಸವನ್ನಾಗಲಿ ಎಣ್ಣೆಯನ್ನಾಗಲಿ ಹಸುಗಳನ್ನಾಗಲಿ ಕುರಿಗಳನ್ನಾಗಲಿ ಮೇಕೆಗಳನ್ನಾಗಲಿ ಬಿಟ್ಟು ಹೋಗುವುದಿಲ್ಲ. ಅವರು ನಿಮ್ಮನ್ನು ನಾಶಪಡಿಸುವ ತನಕ ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು. |
52
|
“ಆ ವೈರಿಗಳು ನಿಮ್ಮ ಪಟ್ಟಣಗಳನ್ನೆಲ್ಲಾ ಮುತ್ತಿ ವಶಪಡಿಸಿಕೊಳ್ಳುವರು. ಆ ಪಟ್ಟಣಗಳಿಗೆ ಎತ್ತರದ ಪೌಳಿಗೋಡೆಗಳಿವೆ. ಆದುದರಿಂದ ನಮಗೆ ಭಯವಿಲ್ಲವೆಂದು ನೀವು ಭರವಸೆಯಿಂದಿರುವಿರಿ. ಆದರೆ ಅವರು ಪೌಳಿಗೋಡೆಗಳನ್ನು ಕೆಡವಿ ನೆಲಸಮ ಮಾಡುವರು. ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೆಲ್ಲಾ ತೊಂದರೆ ಮಾಡುವರು. |
53
|
ವೈರಿಗಳು ನಿಮ್ಮ ಪಟ್ಟಣವನ್ನು ಮುತ್ತಿಗೆ ಹಾಕಿದಾಗ ನೀವು ಸಂಕಟ ಅನುಭವಿಸುವಿರಿ. ಆಗ ನೀವು ಊಟಕ್ಕೆ ಇಲ್ಲದೆ ತೊಂದರೆಗೊಳಗಾಗುವಿರಿ; ಹಸಿವು ತಾಳಲಾರದೆ ನಿಮ್ಮ ಮಕ್ಕಳನ್ನೇ ತಿನ್ನುವಿರಿ. |
54
|
“ನಿಮ್ಮಲ್ಲಿರುವ ಮೃದುವಾದ ಮತ್ತು ಕನಿಕರವುಳ್ಳ ಮನುಷ್ಯನೂ ಬೇರೆಯವರಿಗೆ ಕ್ರೂರಿಯಾಗುವನು; ತನ್ನನ್ನು ಬಹಳವಾಗಿ ಪ್ರೀತಿಸುವ ಹೆಂಡತಿಗೂ ಅವನು ಕ್ರೂರಿಯಾಗುವನು; ಇನ್ನೂ ಜೀವಂತವಾಗಿರುವ ತನ್ನ ಮಕ್ಕಳಿಗೂ ಅವನು ಕ್ರೂರಿಯಾಗುವನು. |
55
|
ಅವನಿಗೆ ಊಟಕ್ಕೇನೂ ಇಲ್ಲದಿರುವುದರಿಂದ ಸ್ವಂತ ಮಕ್ಕಳನ್ನೇ ತಿನ್ನುವನು. ಅವರನ್ನು ಇತರರೊಂದಿಗೆ ಹಂಚಿಕೊಳ್ಳದೆ, ತನ್ನ ಸ್ವಂತ ಕುಟುಂಬದವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ತಿನ್ನುವನು. ನಿಮ್ಮ ವೈರಿಗಳು ಬಂದು ನಿಮ್ಮ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ನಿಮಗೆ ಇವೆಲ್ಲಾ ಸಂಭವಿಸುತ್ತವೆ. |
56
|
“ನಿಮ್ಮಲ್ಲಿರುವ ಅತ್ಯಂತ ಮೃದುವಾದ ಮತ್ತು ಕನಿಕರವುಳ್ಳ ಸ್ತ್ರೀಯೂ ಕ್ರೂರಿಯಾಗುವಳು. ನೆಲದ ಮೇಲೆ ಬರಿಗಾಲಿನಲ್ಲಿ ಎಂದೂ ನಡೆಯದಷ್ಟು ಮೃದುವೂ ಕೋಮಲೆಯೂ ಆಗಿದ್ದ ಆಕೆ ತನ್ನನ್ನು ಬಹಳವಾಗಿ ಪ್ರೀತಿಸುವ ಗಂಡನಿಗೇ ಕ್ರೂರಿಯಾಗುವಳು; ಅವಳು ತನ್ನ ಸ್ವಂತ ಮಗನಿಗೂ ಮಗಳಿಗೂ ಕ್ರೂರಿಯಾಗುವಳು. |
57
|
ಅವಳು ಅಡಗಿಕೊಂಡು ಮಗುವನ್ನು ಹೆರುವಳು. ಬಳಿಕ ಆ ಮಗುವನ್ನೂ ಅದರೊಡನೆ ಬರುವುದೆಲ್ಲವನ್ನೂ ಭಯಂಕರವಾದ ಹಸಿವೆಯಿಂದಾಗಿ ತಿಂದುಬಿಡುವಳು. ನಿಮ್ಮ ಶತ್ರುವು ಬಂದು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಸಂಕಟಕ್ಕೆ ಗುರಿ ಮಾಡಿದಾಗ ಈ ಕೆಟ್ಟ ಸಂಗತಿಗಳೆಲ್ಲಾ ನಿಮಗೆ ಸಂಭವಿಸುತ್ತವೆ. |
58
|
“ಈ ಪುಸ್ತಕದಲ್ಲಿ ಬರೆದಿರುವ ಎಲ್ಲಾ ಆಜ್ಞೆಗಳಿಗೂ ಉಪದೇಶಗಳಿಗೂ ನೀವು ವಿಧೇಯರಾಗಬೇಕು. ನಿಮ್ಮ ದೇವರಾದ ಯೆಹೋವನು ಅದ್ಭುತನೂ ಭಯಂಕರನೂ ಆಗಿರುವುದರಿಂದ ಆತನ ಹೆಸರನ್ನು ನೀವು ಗೌರವಿಸಬೇಕು. |
59
|
ನಿಮಗೂ ನಿಮ್ಮ ಸಂತತಿಯವರಿಗೂ ಅನೇಕ ತೊಂದರೆಗಳನ್ನು ಕೊಡುವನು. ಆ ತೊಂದರೆಗಳು ಮತ್ತು ರೋಗಗಳು ಭಯಂಕರವಾಗಿವೆ. |
60
|
ನೀವು ಈಜಿಪ್ಟಿನಲ್ಲಿರುವಾಗ ದೇವರು ಅವರಿಗೆ ಕಳುಹಿಸಿದ ವ್ಯಾಧಿಸಂಕಟಗಳನ್ನು ನೋಡಿ ಭಯಗ್ರಸ್ತರಾದಿರಿ. ಅಂಥ ಸಂಕಟಗಳು ನಿಮಗೆ ಬರುವವು. |
61
|
ಈ ಪುಸ್ತಕದಲ್ಲಿ ಬರೆದಿಲ್ಲದ ಸಂಕಟಗಳೂ ರೋಗಗಳೂ ನಿಮಗೆ ಪ್ರಾಪ್ತಿಯಾಗುವವು. ನೀವು ನಾಶವಾಗುವ ತನಕ ಅವೆಲ್ಲಾ ನಿಮಗೆ ಬರುತ್ತವೆ. |
62
|
ನೀವು ಆಕಾಶದ ನಕ್ಷತ್ರದಷ್ಟು ಅಸಂಖ್ಯಾತರಾಗಿದ್ದರೂ ನಿಮ್ಮಲ್ಲಿ ಕೆಲವರೇ ಉಳಿದುಕೊಳ್ಳುವರು. ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಕಿವಿಗೊಡಲಿಲ್ಲ. |
63
|
“ಯೆಹೋವನು ನಿಮ್ಮ ಅಭಿವೃದ್ದಿಯಲ್ಲಿ ಸಂತೋಷಪಡುವಂತೆ ನಿಮ್ಮ ಅವನತಿಯಲ್ಲಿಯೂ ನಿಮ್ಮ ನಾಶನದಲ್ಲಿಯೂ ಸಂತೋಷಪಡುವನು. ನೀವು ಆ ದೇಶವನ್ನು ನಿಮ್ಮದನ್ನಾಗಿಸಿಕೊಳ್ಳಲು ಹೋಗುವಿರಿ. ಆದರೆ ಜನರು ನಿಮ್ಮನ್ನು ದೇಶದಿಂದ ಹೊರಡಿಸಿ ಅಟ್ಟಿಬಿಡುವರು. |
64
|
ಯೆಹೋವನು ನಿಮ್ಮನ್ನು ಲೋಕದ ಎಲ್ಲಾ ದೇಶಗಳಿಗೆ ಚದರಿಸಿಬಿಡುವನು. ಆತನು ಪ್ರಪಂಚದ ಒಂದು ಕಡೆಯಿಂದ ಇನ್ನೊಂದು ಕಡೆಯ ತನಕ ನಿಮ್ಮನ್ನು ಚದರಿಸುವನು. ಅಲ್ಲಿ ನೀವು ಕಲ್ಲುಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಆ ಸುಳ್ಳುದೇವರುಗಳನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಎಂದೂ ಪೂಜಿಸಿರಲಿಲ್ಲ. |
65
|
“ಆ ಜನಾಂಗದವರೊಂದಿಗೆ ಜೀವಿಸುವಾಗ ನಿಮಗೆ ಸಮಾಧಾನವಿರುವುದಿಲ್ಲ; ನಿಮಗೆ ವಿಶ್ರಾಂತಿ ಇರುವುದಿಲ್ಲ. ನಿಮ್ಮ ಯೆಹೋವನು ನಿಮಗೆ ಚಿಂತೆಬೇಸರಗಳನ್ನು ತಂದು ತುಂಬಿಸುವನು. ನಿಮ್ಮ ಕಣ್ಣುಗಳು ಆಯಾಸದಿಂದ ತುಂಬಿರುವವು; ನೀವು ಕಳವಳದಿಂದಿರುವಿರಿ. |
66
|
ನೀವು ಹಗಲಿರುಳು ಭಯದಿಂದಿರುವಿರಿ ಮತ್ತು ಅಪಾಯದಲ್ಲಿ ಜೀವಿಸುವಿರಿ. ನಿಮ್ಮ ಜೀವಿತದ ಬಗ್ಗೆ ನಿಮಗೆಂದಿಗೂ ನಿಶ್ಚಯತ್ವವಿರುವುದಿಲ್ಲ. |
67
|
ಮುಂಜಾನೆಯಲ್ಲಿ ನೀವು, ‘ಇದು ಸಾಯಂಕಾಲವಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ಸಾಯಂಕಾಲದಲ್ಲಿ, ‘ಇದು ಮುಂಜಾನೆಯಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ನಿಮ್ಮ ಹೃದಯದಲ್ಲಿರುವ ಭಯ ಮತ್ತು ನೀವು ಕಣ್ಣಾರೆ ಕಾಣುವ ಭಯಂಕರ ಸಂಗತಿಗಳೇ ಇದಕ್ಕೆ ಕಾರಣ. |
68
|
ಯೆಹೋವನು ನಿಮ್ಮನ್ನು ಹಡಗುಗಳ ಮುಖಾಂತರ ಈಜಿಪ್ಟಿಗೆ ಕೊಂಡೊಯ್ಯುವನು. ನೀವು ಅಲ್ಲಿಗೆ ಹೋಗುವುದೇ ಇಲ್ಲವೆಂದು ನಾನು ಹೇಳಿದ್ದೆನು. ಆದರೆ ದೇವರು ನಿಮ್ಮನ್ನು ಅಲ್ಲಿಗೆ ಕಳುಹಿಸುವನು. ಈಜಿಪ್ಟಿನಲ್ಲಿ ನಿಮ್ಮನ್ನು ನೀವೇ ಗುಲಾಮರನ್ನಾಗಿ ನಿಮ್ಮ ವೈರಿಗಳಿಗೆ ಮಾರಿಕೊಳ್ಳುವಿರಿ; ಆದರೆ ಯಾರೂ ನಿಮ್ಮನ್ನು ಕೊಂಡುಕೊಳ್ಳುವವರಿರುವುದಿಲ್ಲ.” |
Deuteronomy 28:1 Kannada Language Bible Words basic statistical display
COMING SOON ...