“ಒಬ್ಬಾಕೆಯನ್ನು ಒಬ್ಬನು ಮದುವೆಯಾದ ಬಳಿಕ, ಅವಳಲ್ಲಿ ನಾಚಿಕೆಕರವಾದದ್ದೇನಾದರೂ ಇದ್ದರೆ ಅವನು ವಿವಾಹವಿಚ್ಛೇದನಾ ಪತ್ರಗಳಿಗೆ ಸಹಿಹಾಕಿ ಅವಳ ಕೈಯಲ್ಲಿ ಕೊಡಬೇಕು. ಆಮೇಲೆ ಆಕೆಯನ್ನು ತನ್ನ ಮನೆಯಿಂದ ಹೊರಗೆ ಕಳುಹಿಸಬೇಕು.
(3-4) ಆಕೆಯ ಹೊಸ ಗಂಡನೂ ಆಕೆಯನ್ನು ಇಷ್ಟಪಡದೆ ಮನೆಯಿಂದ ಹೊರಗೆ ಕಳುಹಿಸಿದರೆ ಅಥವಾ ಎರಡನೆ ಗಂಡನು ಸತ್ತುಹೋದರೆ ಆಕೆಯ ಮೊದಲನೆಯ ಗಂಡನು ಆಕೆಯನ್ನು ಮತ್ತೆ ಮದುವೆಯಾಗಬಾರದು. ಅವನಿಗೆ ಆಕೆಯು ಅಶುದ್ಧಳಾದಳು. ಅವನು ಆಕೆಯನ್ನು ಮತ್ತೆ ಮದುವೆಯಾದಲ್ಲಿ ಅವನು ಯೆಹೋವನಿಗೆ ಅಸಹ್ಯವಾದದ್ದನ್ನು ಮಾಡುವವನಾಗಿದ್ದಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಇಂಥ ಪಾಪಗಳನ್ನು ಮಾಡಬಾರದು.
“ಒಬ್ಬನು ಹೊಸದಾಗಿ ಮದುವೆಯಾಗಿದ್ದಲ್ಲಿ ಅವನನ್ನು ಸೈನ್ಯಕ್ಕೆ ಕಳುಹಿಸಬಾರದು; ವಿಶೇಷವಾದ ಜವಾಬ್ದಾರಿಯನ್ನು ಅವನಿಗೆ ಕೊಡಬಾರದು. ಒಂದು ವರ್ಷ ಅವನು ಮನೆಯಲ್ಲಿದ್ದುಕೊಂಡು ತನ್ನ ಹೆಂಡತಿಯನ್ನು ಸಂತೋಷಪಡಿಸಬೇಕು.
“ಒಬ್ಬನು ನಿಮ್ಮಿಂದ ಏನಾದರೊಂದು ವಸ್ತುವನ್ನು ಎರವಲಾಗಿ ತೆಗೆದುಕೊಳ್ಳುವುದಾದರೆ ಅವನ ಬೀಸುವ ಕಲ್ಲಿನ ಒಂದು ಭಾಗವನ್ನು ಒತ್ತೆಯಾಗಿಟ್ಟುಕೊಳ್ಳಬಾರದು. ಇಲ್ಲವಾದರೆ ಅವನ ಆಹಾರವನ್ನೇ ಅವನಿಂದ ಕಿತ್ತುಕೊಂಡ ಹಾಗಾಯಿತು.
ಪ್ರತೀ ಸಾಯಂಕಾಲ ಆ ಕಂಬಳಿಯನ್ನು ಹಿಂದಕ್ಕೆ ಕೊಡಬೇಕು. ಆಗ ಅವನಿಗೆ ರಾತ್ರಿ ಹೊದ್ದುಕೊಳ್ಳಲು ಇರುವುದು. ಅವನು ನಿನ್ನನ್ನು ಆಶೀರ್ವದಿಸುವನು. ಅಲ್ಲದೆ ದೇವರಾದ ಯೆಹೋವನು ನಿಮ್ಮ ಆ ಒಳ್ಳೆಯ ಕಾರ್ಯವನ್ನು ಗಣನೆಗೆ ತರುವನು.
ಸೂರ್ಯ ಮುಳುಗುವುದರೊಳಗೆ ಅವನಿಗೆ ಸಲ್ಲಬೇಕಾದ ಕೂಲಿಯನ್ನು ಕೊಟ್ಟುಬಿಡು, ಅವನು ಬಡವನಾಗಿದ್ದಾನೆ. ನೀನು ಕೊಡುವ ಕೂಲಿಯಿಂದಲೇ ಅವನು ತನ್ನ ಹಸಿವನ್ನು ನೀಗಿಸಿಕೊಳ್ಳಬೇಕು. ನೀನು ಅವನ ಕೂಲಿ ಕೊಡದಿದ್ದಲ್ಲಿ ಅವನು ದೇವರಾದ ಯೆಹೋವನಿಗೆ ದೂರು ಹೇಳುವನು. ಆಗ ನೀನು ಪಾಪಮಾಡುವವನಾಗಿರುವೆ.
“ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣ ಶಿಕ್ಷೆಯಾಗಬೇಕು.
ನೀವು ಈಜಿಪ್ಟಿನಲ್ಲಿ ಬಡ ಗುಲಾಮರಾಗಿದ್ದುದನ್ನು ಸ್ಮರಿಸಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ನೀವು ಬಡವರಿಗೆ ದಯೆ ತೋರಿಸಬೇಕು.
“ನೀವು ಹೊಲದಲ್ಲಿ ಬೆಳೆದ ಬೆಳೆಯನ್ನು ಕೊಯ್ದು ಮನೆಗೆ ತರುವಾಗ ಕೆಲವು ಸಿವುಡುಗಳನ್ನು ನೀವು ಹೊಲದಲ್ಲಿಯೇ ಬಿಟ್ಟು ಬಂದಿದ್ದರೆ ಅದನ್ನು ತರಲು ಹಿಂದಕ್ಕೆ ಹೋಗಬೇಡಿ. ಅದನ್ನು ನಿಮ್ಮ ಊರಿನಲ್ಲಿರುವ ಅನಾಥರಿಗೂ ವಿಧವೆಯರಿಗೂ ಪರದೇಶಸ್ಥರಿಗೂ ಬಿಡಿರಿ. ನೀವು ಹಾಗೆ ಮಾಡಿದರೆ ದೇವರಾದ ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವನು.
ನಿಮ್ಮ ತೋಟದಿಂದ ಹಣ್ಣುಗಳನ್ನು ಕೂಡಿಸುವಾಗ ಉಳಿದ ಹಣ್ಣುಗಳನ್ನು ಶೇಖರಿಸಲು ಹಿಂತಿರುಗಬೇಡಿ; ಆ ಉಳಿದ ದ್ರಾಕ್ಷಿಹಣ್ಣುಗಳು ಊರಲ್ಲಿರುವ ಅನಾಥರಿಗೂ ವಿಧವೆಯರಿಗೂ ಮತ್ತು ಪರದೇಶಸ್ಥರಿಗೂ ಬಿಡಿರಿ.