English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Deuteronomy Chapters

Deuteronomy 21 Verses

1 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಒಬ್ಬ ವ್ಯಕ್ತಿ ಕೊಲೆಯಾಗಿ ಹೊಲದಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಮತ್ತು ಅವನನ್ನು ಕೊಲೆ ಮಾಡಿದ್ದು ಯಾರು ಎಂದು ನಿಮಗೆ ಗೊತ್ತಿಲ್ಲದಿದ್ದರೆ,
2 ಆಗ ಆ ಪಟ್ಟಣದ ನಾಯಕರು ಮತ್ತು ನ್ಯಾಯಾಧೀಶರು ಬಂದು ಪಟ್ಟಣಕ್ಕೂ ಆ ಶವದ ಸ್ಥಳಕ್ಕೂ ಎಷ್ಟು ದೂರವಿದೆ ಎಂದು ಅಳೆಯಬೇಕು.
3 ಯಾವ ಪಟ್ಟಣವು ಕೊಲೆಯಾದ ವ್ಯಕ್ತಿಯ ಶವಕ್ಕೆ ಹತ್ತಿರವಾಗಿದೆಯೋ ಆ ಪಟ್ಟಣದ ನಾಯಕರು ಮತ್ತು ನ್ಯಾಯಾಧೀಶರು ತಮ್ಮ ಹಟ್ಟಿಯಿಂದ ಎಂದೂ ಕರು ಈಯದ, ಕೆಲಸಕ್ಕೆ ಉಪಯೋಗಿಸದ ಒಂದು ಹಸುವನ್ನು ತೆಗೆದುಕೊಂಡು
4 ಹರಿಯುವ ನೀರಿರುವ ತಗ್ಗಿಗೆ ಅಟ್ಟಿಕೊಂಡು ಹೋಗಬೇಕು. ಆ ತಗ್ಗು ಉಳಿಮೆ ಮಾಡಿದ ಜಾಗವಾಗಿರಬಾರದು ಮತ್ತು ಆ ಸ್ಥಳದಲ್ಲಿ ಯಾವ ಸಸಿಯೂ ನೆಟ್ಟಿರಬಾರದು. ಅಲ್ಲಿ ಊರ ಹಿರಿಯರು ಆ ಹಸುವಿನ ಕುತ್ತಿಗೆ ಮುರಿಯಬೇಕು.
5 ಊರಿನಲ್ಲಿದ್ದ ಲೇವಿಯರೂ ಅಲ್ಲಿಗೆ ಹೋಗಬೇಕು. ಯೆಹೋವನು ಅವರ ಜನರನ್ನು ಆತನ ಹೆಸರಿನಲ್ಲಿ ಆಶೀರ್ವದಿಸುವುದಕ್ಕಾಗಿಯೂ ತನ್ನ ಸೇವೆ ಮಾಡುವುದಕ್ಕಾಗಿಯೂ ಆರಿಸಿದ್ದಾನೆ. ಎಲ್ಲಾ ವಾಗ್ವಾದಗಳನ್ನು ಯಾಜಕನೇ ಇತ್ಯರ್ಥಮಾಡುವನು.
6 ಕೊಲೆಯಾದವನ ದೇಹದ ಸಮೀಪವಿರುವ ಪಟ್ಟಣದ ಹಿರಿಯರು ಕುತ್ತಿಗೆ ಮುರಿಯಲ್ಪಟ್ಟ ಹಸುವಿನ ಮೇಲೆ ತಮ್ಮತಮ್ಮ ಕೈಗಳನ್ನು ತೊಳೆಯಬೇಕು.
7 ಆ ಹಿರಿಯರು ಹೀಗೆನ್ನಬೇಕು: ‘ನಾವು ಈ ವ್ಯಕ್ತಿಯನ್ನು ಹತ್ಯೆ ಮಾಡಲಿಲ್ಲ ಮತ್ತು ಅವನು ಕೊಲೆ ಮಾಡಲ್ಪಟ್ಟದ್ದನ್ನು ನಾವು ನೋಡಿಲ್ಲ.
8 ಯೆಹೋವನೇ, ನೀನು ಇಸ್ರೇಲನ್ನು ರಕ್ಷಿಸಿರುವೆ, ನಾವು ನಿನ್ನ ಜನಗಳಾಗಿದ್ದೇವೆ. ಈಗ ನೀನು ನಮ್ಮನ್ನು ಶುದ್ಧೀಕರಿಸು; ನಿರ್ದೋಷಿಯ ಕೊಲೆಗೆ ನಮ್ಮನ್ನು ಕಾರಣರನ್ನಾಗಿ ಮಾಡಬೇಡ!’
9 ಹೀಗೆ ನೀವು ಯೆಹೋವನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ನಿಮ್ಮ ಸಮೂಹದಿಂದ ದೋಷವನ್ನು ತೆಗೆದುಹಾಕುವಿರಿ.
10 “ನೀವು ನಿಮ್ಮ ಶತ್ರುಗಳೊಂದಿಗೆ ಯುದ್ಧಮಾಡಿ ದೇವರ ಸಹಾಯದಿಂದ ಅವರನ್ನು ಸೋಲಿಸುವಿರಿ. ನೀವು ನಿಮ್ಮ ಶತ್ರುಗಳನ್ನು ಸೆರೆಹಿಡಿದು ಕೊಂಡೊಯ್ಯುವಿರಿ.
11 ಸೆರೆಹಿಡಿಯಲ್ಪಟ್ಟವರಲ್ಲಿ ಸುಂದರಿಯಾದ ಸ್ತ್ರೀಯನ್ನು ನೋಡಿ ಆಕೆಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳ ಬಯಸಿದರೆ
12 ಆಕೆಯನ್ನು ನಿನ್ನ ಮನೆಯೊಳಗೆ ಕರೆದುಕೊಂಡು ಬರಬೇಕು. ಆಕೆಯು ತಲೆಯನ್ನು ಬೋಳಿಸಿಕೊಂಡು ಉಗುರನ್ನು ಕತ್ತರಿಸಿಕೊಳ್ಳಬೇಕು.
13 ಆಕೆಯು ತನ್ನ ಸೆರೆವಾಸದ ಬಟ್ಟೆಯನ್ನು ತೆಗೆದಿಟ್ಟು ಒಂದು ತಿಂಗಳು ಪೂರ್ತಿ ತನ್ನ ತಂದೆತಾಯಿಗಳಿಗಾಗಿ ಶೋಕಿಸಬೇಕು. ಅನಂತರ ನೀನು ಆಕೆಯ ಬಳಿಗೆ ಹೋಗಿ ಆಕೆಯನ್ನು ವರಿಸಿ ಗಂಡನಾಗಬಹುದು. ಆಕೆಯು ನಿನ್ನ ಹೆಂಡತಿಯಾಗುವಳು.
14 ಆಕೆಯನ್ನು ನೀನು ಮೆಚ್ಚದಿದ್ದರೆ ವಿವಾಹವಿಚ್ಛೇದನೆ ಮಾಡಿ ಆಕೆಯನ್ನು ಸ್ವತಂತ್ರಳಾಗುವಂತೆ ಬಿಟ್ಟುಬಿಡಬಹುದು. ಆದರೆ ನೀನು ಆಕೆಯನ್ನು ಮಾರಬಾರದು. ಆಕೆಯನ್ನು ಗುಲಾಮಳಂತೆ ನೋಡಬಾರದು. ಯಾಕೆಂದರೆ ನೀನು ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದಿಯಲ್ಲಾ.
15 “ಒಬ್ಬ ಮನುಷ್ಯನಿಗೆ ಇಬ್ಬರು ಹೆಂಡತಿಯರಿದ್ದರೆ ಅವರಲ್ಲಿ ಒಬ್ಬಾಕೆಯನ್ನು ಅವನು ಹೆಚ್ಚಾಗಿ ಪ್ರೀತಿಸಿದರೂ ಪ್ರೀತಿಸಬಹುದು. ಆ ಇಬ್ಬರು ಅವನಿಗೆ ಮಕ್ಕಳನ್ನು ಹೆರುವರು. ಹಿರಿಮಗನು ತಾನು ಪ್ರೀತಿಸಿದ ಹೆಂಡತಿಯಲ್ಲಿ ಹುಟ್ಟಿದರೆ
16 ಆ ಮನುಷ್ಯನು ತನ್ನ ಆಸ್ತಿಯನ್ನು ತನ್ನ ಮಕ್ಕಳಿಗೆ ಪಾಲುಮಾಡಿ ಕೊಡುವಾಗ ಚೊಚ್ಚಲಮಗನಿಗೆ ಸಿಗಬೇಕಾದ ಆಸ್ತಿಯನ್ನು ತಾನು ಪ್ರೀತಿಸುವ ಹೆಂಡತಿಯ ಮಗನಿಗೆ ಕೊಡಬಾರದು.
17 ತಾನು ಪ್ರೀತಿಸದೆ ಇರುವ ಹೆಂಡತಿಯ ಚೊಚ್ಚಲಮಗನನ್ನು ಅವನು ಸ್ವೀಕರಿಸಬೇಕು. ಆ ಚೊಚ್ಚಲಮಗನಿಗೆ ಬೇರೆ ಮಕ್ಕಳಿಗಿಂತ ಎರಡು ಪಾಲು ಆಸ್ತಿಯನ್ನು ಕೊಡಬೇಕು. ಯಾಕೆಂದರೆ ಅವನು ನಿಮ್ಮ ಚೊಚ್ಚಲ ಮಗನು. ಚೊಚ್ಚಲ ಮಗನ ಹಕ್ಕು ಅವನಿಗೆ ಸೇರಿದ್ದು.
18 “ಒಬ್ಬ ಮನುಷ್ಯನಿಗೆ ಹಠಮಾರಿಯಾದ ಅವಿಧೇಯ ಮಗನಿರಬಹುದು. ಈ ಮಗನು ತಂದೆಯ ಮಾತನ್ನಾಗಲಿ ತಾಯಿಯ ಮಾತನ್ನಾಗಲಿ ಕೇಳದವನಾಗಿದ್ದರೆ ಅವನಿಗೆ ಅವರು ಶಿಕ್ಷೆ ಕೊಟ್ಟರೂ ಅವನು ಅವರಿಗೆ ವಿಧೇಯನಾಗದಿದ್ದರೆ, ಅವರ ಮಾತುಗಳನ್ನು ಕೇಳದಿದ್ದರೆ,
19 ಆಗ ಅವನ ತಂದೆತಾಯಿಗಳು ಆ ಮಗನನ್ನು ಪಟ್ಟಣದ ಹಿರಿಯರು ಸೇರಿಬರುವ ಸ್ಥಳಕ್ಕೆ ಕರೆದುಕೊಂಡು ಹೋಗಿ
20 ಪಟ್ಟಣದ ಹಿರಿಯರಿಗೆ ಹೀಗೆ ಹೇಳಬೇಕು: ‘ನಮ್ಮ ಮಗನು ಹಠಮಾರಿಯೂ ಅವಿಧೇಯನೂ ಆಗಿರುತ್ತಾನೆ. ನಾವು ಹೇಳಿದ ಮಾತುಗಳೊಂದನ್ನೂ ಅವನು ಕೇಳುವುದಿಲ್ಲ. ಅವನು ಬಹಳವಾಗಿ ತಿಂದು ಕುಡಿಯುತ್ತಾನೆ.’
21 ಆಗ ಆ ಪಟ್ಟಣದ ಜನರು ಸೇರಿ ಆ ಮಗನನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ನಿಮ್ಮಲ್ಲಿರುವ ದುಷ್ಟತನವನ್ನು ತೆಗೆದುಹಾಕಬೇಕು. ಎಲ್ಲಾ ಇಸ್ರೇಲರು ಇದನ್ನು ಕೇಳಿ ಭಯಗ್ರಸ್ತರಾಗುವರು.
22 “ಒಬ್ಬ ಮನುಷ್ಯನು ಮರಣಶಿಕ್ಷೆಗೆ ಯೋಗ್ಯವಾದ ಅಪರಾಧವನ್ನು ಮಾಡಿದ್ದಿರಬಹುದು. ಅವನಿಗೆ ಮರಣಶಿಕ್ಷೆ ಕೊಟ್ಟ ನಂತರ ಅವನ ದೇಹವನ್ನು ಒಂದು ಮರಕ್ಕೆ ತೂಗುಹಾಕಿದರೆ
23 ಇಡೀ ರಾತ್ರಿ ಆ ಮರದಲ್ಲಿ ಅವನ ಶರೀರ ನೇತಾಡುವಂತೆ ಮಾಡಬಾರದು. ಅದೇ ದಿವಸದಲ್ಲಿ ಅವನ ಶವವು ಹೂಳಲ್ಪಡಬೇಕು. ಯಾಕೆಂದರೆ ಮರದಲ್ಲಿ ತೂಗುಹಾಕಲ್ಪಟ್ಟ ಮನುಷ್ಯನು ದೇವರಿಂದ ಶಪಿಸಲ್ಪಟ್ಟವನು. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ನೀವು ಹೊಲಸು ಮಾಡಬೇಡಿರಿ.
×

Alert

×