“ನೀವು ನಿಮಗಿಂತ ಬಲಿಷ್ಠರಾದ ವೈರಿಗಳ ಮೇಲೆ ಯುದ್ಧಕ್ಕೆ ಹೋದಾಗ ಅವರ ರಥಾಶ್ವಗಳನ್ನು ಮತ್ತು ನಿಮಗಿಂತಲೂ ಹೆಚ್ಚಾದ ಸೈನ್ಯಬಲವನ್ನು ನೋಡಿ ನೀವು ಭಯಗ್ರಸ್ತರಾಗಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ತಂದವನು ಆತನೇ.
‘ಇಸ್ರೇಲ್ ಜನರೇ, ನನ್ನ ಮಾತನ್ನು ಆಲಿಸಿರಿ. ಈ ದಿವಸ ನಿಮ್ಮ ವೈರಿಗಳೊಂದಿಗೆ ಕಾದಾಡಲು ಹೋಗುತ್ತಿದ್ದೀರಿ. ನೀವು ಅಧೈರ್ಯಗೊಳ್ಳಬೇಡಿರಿ. ಗಲಿಬಿಲಿಗೆ ಸಿಕ್ಕಿಕೊಳ್ಳಬೇಡಿ; ವೈರಿಗಳಿಗೆ ಭಯಪಡಬೇಡಿರಿ.
“ಆ ಲೇವಿಯ ಅಧಿಕಾರಿಗಳು ಸೈನಿಕರಿಗೆ, ‘ನಿಮ್ಮಲ್ಲಿ ಯಾರಾದರೂ ಹೊಸಮನೆಯನ್ನು ಕಟ್ಟಿ ಗೃಹಪ್ರವೇಶ ಮಾಡಿರದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಒಂದುವೇಳೆ ಅವನು ರಣರಂಗದಲ್ಲಿ ಸತ್ತರೆ ಇನ್ನೊಬ್ಬನು ಅವನ ಮನೆಗೆ ಸೇರಿಕೊಳ್ಳಬಹುದು.
ನಿಮ್ಮಲ್ಲಿ ಯಾವನಾದರೂ ದ್ರಾಕ್ಷಿತೋಟವನ್ನು ಮಾಡಿ ಅದರ ಫಲವನ್ನು ಕೂಡಿಸಿಲ್ಲದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನು ರಣರಂಗದಲ್ಲಿ ಮಡಿದರೆ ಅವನ ದ್ರಾಕ್ಷಿತೋಟದ ಫಲಗಳು ಬೇರೊಬ್ಬನ ಪಾಲಾಗುವುದು.
ನಿಮ್ಮಲ್ಲಿ ಯಾರಾದರೂ ಮದುವೆಯಾಗಲು ಹೆಣ್ಣನ್ನು ನಿಶ್ಚಯಿಸಿದ್ದರೆ ಅವನು ತನ್ನ ಮನೆಗೆ ಹಿಂತಿರುಗಿಹೋಗಲಿ; ಯಾಕೆಂದರೆ ಅವನು ರಣರಂಗದಲ್ಲಿ ಮಡಿದರೆ ಅವನಿಗೆ ನಿಶ್ಚಯವಾದ ಹೆಣ್ಣನ್ನು ಇನ್ನೊಬ್ಬನು ಮದುವೆ ಮಾಡಿಕೊಳ್ಳಬಹುದು’ ಎಂದು ಹೇಳುವರು.
“ಆ ಲೇವಿಯ ಅಧಿಕಾರಿಗಳು ಹೇಳಬೇಕಾದದ್ದೇನೆಂದರೆ: ‘ನಿಮ್ಮಲ್ಲಿ ಯಾರಾದರೂ ತಮ್ಮ ಧೈರ್ಯವನ್ನು ಕಳೆದುಕೊಂಡಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನಿಂದಾಗಿ ಇತರ ಸೈನಿಕರೂ ತಮ್ಮ ಧೈರ್ಯವನ್ನು ಕಳೆದುಕೊಳ್ಳಬಹುದು.’
ಹೆಂಗಸರನ್ನು, ಮಕ್ಕಳನ್ನು, ದನಕುರಿಗಳನ್ನು ಮತ್ತು ಪಟ್ಟಣದೊಳಗಿದ್ದವುಗಳನ್ನೆಲ್ಲಾ ನಿಮ್ಮ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವನು ಅವುಗಳನ್ನು ನಿಮಗೆ ಕೊಟ್ಟಿದ್ದಾನೆ.
ನೀವು ಹಿತ್ತಿಯರನ್ನು, ಅಮೋರಿಯರನ್ನು, ಕಾನಾನ್ಯರನ್ನು, ಪೆರಿಜ್ಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ಸಂಪೂರ್ಣವಾಗಿ ಹತ್ಯೆ ಮಾಡಬೇಕು. ಇದು ನಿಮ್ಮ ದೇವರಾದ ಯೆಹೋವನ ಅಪ್ಪಣೆ.
ಯಾಕೆಂದರೆ ಆಗ ಅವರು ನಿಮ್ಮ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ; ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ಮಾಡುವ ಭಯಂಕರ ಕೃತ್ಯಗಳನ್ನು ಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ.
“ನೀವು ಒಂದು ಪಟ್ಟಣವನ್ನು ಬಹುಕಾಲದಿಂದ ಮುತ್ತಿಗೆ ಹಾಕಿದರೆ ಸುತ್ತಮುತ್ತಲಿರುವ ಮರಗಳನ್ನು ಕಡಿದುಹಾಕಬಾರದು. ಅವುಗಳ ಫಲಗಳನ್ನು ತಿನ್ನಬಹುದು; ಆದರೆ ಕಡಿಯಬಾರದು. ಅವು ನಿಮ್ಮ ವೈರಿಗಳಲ್ಲವಲ್ಲಾ? ಅವು ನಿಮ್ಮೊಂದಿಗೆ ಯುದ್ಧ ಮಾಡುವುದಿಲ್ಲವಲ್ಲಾ?
ಹಣ್ಣುಗಳನ್ನು ಕೊಡದ ಮರಗಳನ್ನು ಕಡಿಯಬಹುದು. ಆ ಮರಗಳಿಂದ ಆಯುಧಗಳನ್ನು ತಯಾರಿಸಿ [*ಆಯುಧಗಳನ್ನು ತಯಾರಿಸಿ ಅಕ್ಷರಶಃ, “ಪಟ್ಟಣಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ಬೇಕಾದ ಮರದ ಉಪಕರಣಗಳನ್ನು ಶೇಖರಿಸಿಟ್ಟುಕೊಳ್ಳಬಹುದು.”] ಆ ಪಟ್ಟಣದ ಜನರೊಂದಿಗೆ ಯುದ್ಧ ಮಾಡಬಹುದು. ಆ ಪಟ್ಟಣವು ನಿಮ್ಮ ಕೈವಶವಾಗುವ ತನಕ ನೀವು ಅದನ್ನು ಉಪಯೋಗಿಸಬಹುದು.