“ಆಗ ಯೆಹೋವನು ನನಗೆ ಆಜ್ಞಾಪಿಸಿದಂತೆ ನಾವು ಮರುಭೂಮಿಗೆ ತಿರುಗಿಹೋದೆವು. ಆ ಮಾರ್ಗವು ಕೆಂಪುಸಮುದ್ರದ ಕಡೆ ಹೋಗುತ್ತಿತ್ತು. ಸೇಯೀರ್ ಬೆಟ್ಟವನ್ನು ಸುತ್ತಿಕೊಂಡು ಹೋಗುವುದಕ್ಕೆ ನಮಗೆ ತುಂಬಾ ದಿವಸಗಳಾದವು.
ಇದನ್ನು ಜನರಿಗೆ ತಿಳಿಸು: ನೀವು ಸೇಯೀರ್ ದೇಶದ ಮೂಲಕ ದಾಟಿಹೋಗುವಿರಿ. ಇದು ನಿಮ್ಮ ಸಂಬಂಧಿಕರ ದೇಶ. ಇವರು ಏಸಾವನ ಸಂತತಿಯವರು. ಅವರು ನಿಮಗೆ ಭಯಪಡುವರು; ಆದರೆ ನೀವು ಅವರ ವಿಷಯದಲ್ಲಿ ಎಚ್ಚರಿಕೆಯಾಗಿರಿ.
ಅವರ ವಿರುದ್ಧ ಯುದ್ಧ ಮಾಡಬಾರದು. ನಾನು ನಿಮಗೆ ಅವರ ದೇಶದಲ್ಲಿ ಯಾವ ಪಾಲನ್ನೂ ಕೊಡುವುದಿಲ್ಲ. ಅದರ ಒಂದು ಅಡಿ ಜಾಗವನ್ನೂ ಕೊಡುವುದಿಲ್ಲ. ಯಾಕೆಂದರೆ ಸೇಯೀರ್ ಬೆಟ್ಟಪ್ರದೇಶವನ್ನು ಏಸಾವನ ಸ್ವಂತ ದೇಶವನ್ನಾಗಿ ಕೊಟ್ಟಿರುತ್ತೇನೆ.
ನಿಮ್ಮ ದೇವರಾದ ಯೆಹೋವನು ಪ್ರತಿಯೊಂದು ವಿಷಯದಲ್ಲಿ ನಿಮ್ಮನ್ನು ಆಶೀರ್ವದಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ. ಈ ಮಹಾ ಮರುಭೂಮಿಯ ಮೂಲಕ ನೀವು ನಡೆದುಹೋದದ್ದರ ಬಗ್ಗೆಯೂ ಆತನಿಗೆ ತಿಳಿದಿದೆ. ಕಳೆದ ನಲವತ್ತು ವರ್ಷಗಳಿಂದ ದೇವರು ನಿಮ್ಮೊಂದಿಗಿದ್ದು ನಿಮ್ಮನ್ನು ನಡಿಸಿದ್ದಾನೆ. ನಿಮಗೆ ಬೇಕಾದವುಗಳನ್ನೆಲ್ಲಾ ಒದಗಿಸಿರುತ್ತಾನೆ.’
“ಹಾಗೆ ನಾವು ನಮ್ಮ ಸಂಬಂಧಿಕರಾದ ಏಸಾವನ ಜನರ ದೇಶದ ಮೂಲಕ ಪ್ರಯಾಣ ಬೆಳೆಸಿದೆವು. ಜೋರ್ಡನ್ ಕಣಿವೆಯಿಂದ ಏಲತ್ ಮತ್ತು ಎಚ್ಯೋನ್ಗೆಬೆರ್ ಪಟ್ಟಣಗಳಿಗೆ ಹೋಗುವ ಮಾರ್ಗವನ್ನು ಬಿಟ್ಟು, ನಾವು ಮೋವಾಬ್ ದೇಶದ ಮರುಭೂಮಿಗೆ ಹೋಗುವ ರಸ್ತೆಯಲ್ಲಿ ನಡೆದೆವು. ಆರ್‌ನಲ್ಲಿ ಇಸ್ರೇಲರು
“ಯೆಹೋವನು ನನಗೆ ಹೀಗೆ ಹೇಳಿದನು: ‘ಮೋವಾಬಿನ ಜನರಿಗೆ ತೊಂದರೆ ಕೊಡಬೇಡ. ಅವರ ವಿರುದ್ಧ ಯುದ್ಧಕ್ಕೆ ಹೋಗಬೇಡ; ಅವರ ದೇಶದಲ್ಲಿ ನಿಮಗೆ ಯಾವ ಪಾಲೂ ಸಿಗದು. ಅವರು ಲೋಟನ ಸಂತತಿಯವರು. ನಾನು ಅವರಿಗೆ ಆರ್ ಪಟ್ಟಣವನ್ನು ಕೊಟ್ಟಿರುತ್ತೇನೆ.’ ”
ಹೋರಿಯರು ಕೂಡಾ ಸೇಯೀರ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು. ಆದರೆ ಏಸಾವನ ಜನರು ಅವರಿಂದ ದೇಶವನ್ನು ವಶಮಾಡಿಕೊಂಡು, ಹೋರಿಯರನ್ನು ಸಂಹರಿಸಿ ಆ ದೇಶದಲ್ಲಿ ನೆಲೆಸಿದರು. ಇಸ್ರೇಲರೂ ಅದೇ ರೀತಿಯಲ್ಲಿ ಯೆಹೋವನು ವಾಗ್ದಾನ ಮಾಡಿದ ದೇಶದಲ್ಲಿದ್ದ ನಿವಾಸಿಗಳನ್ನು ಸೋಲಿಸಿ ಅವರ ದೇಶವನ್ನು ಸ್ವಾಧೀನ ಮಾಡಿಕೊಂಡರು.)
ಕಾದೇಶ್‌ಬರ್ನೇಯದಿಂದ ಜೆರೆದ್ ಕಣಿವೆಯನ್ನು ದಾಟಿ ಆಗಲೇ ಮೂವತ್ತೆಂಟು ವರ್ಷಗಳು ದಾಟಿದ್ದವು. ನಮ್ಮ ಸಮೂಹದಲ್ಲಿದ್ದ ಯುದ್ಧಭಟರೆಲ್ಲಾ ಸತ್ತುಹೋಗಿದ್ದರು. ಹೀಗೆ ಆಗುವುದೆಂದು ದೇವರು ಪ್ರಮಾಣ ಮಾಡಿದ್ದನು.
ನೀನು ಅಮ್ಮೋನಿಯರ ಬಳಿಗೆ ಹೋಗಬೇಕು. ಆದರೆ ಅವರಿಗೆ ತೊಂದರೆ ಕೊಡಬೇಡ. ಅವರೊಂದಿಗೆ ಯುದ್ಧಮಾಡಬೇಡ. ಯಾಕೆಂದರೆ ಅವರ ದೇಶದಲ್ಲಿ ನಿನಗೆ ಪಾಲಿಲ್ಲ. ಅವರು ಲೋಟನ ಸಂತತಿಯವರು, ಆ ದೇಶವನ್ನು ನಾನು ಅವರಿಗೆ ಕೊಟ್ಟಿರುತ್ತೇನೆ.’ ”
ಜಮ್‌ಜುಮ್ಯರು ತುಂಬಾ ಬಲಶಾಲಿಗಳಾಗಿದ್ದರು; ಅನಾಕ್ಯರಂತೆ ಉನ್ನತ ಪುರುಷರಾಗಿದ್ದರು. ಆದರೆ ಯೆಹೋವನು ಜಮ್‌ಜುಮ್ಯರನ್ನು ಸೋಲಿಸಲು ಅಮೋರಿಯರಿಗೆ ಸಹಾಯ ಮಾಡಿದನು. ಅಮೋರಿಯರು ಆ ದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಈಗ ಅದರಲ್ಲಿ ನೆಲೆಸಿರುತ್ತಾರೆ.
ಏಸಾವನ ಜನರಿಗೂ ದೇವರು ಅದೇ ರೀತಿ ಮಾಡಿದನು. ಹಿಂದಿನ ಕಾಲದಲ್ಲಿ ಹೋರಿಯರು ಸೇಯೀರ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಏಸಾವನ ಜನರು ಅವರನ್ನು ಸೋಲಿಸಿದರು. ಅವನ ಸಂತತಿಯವರು ಈಗಲೂ ಅಲ್ಲಿ ವಾಸಮಾಡುತ್ತಿದ್ದಾರೆ.
ಕಫ್ತೋರ್ಯದವರಿಗೂ ದೇವರು ಅದೇ ರೀತಿ ಮಾಡಿದ್ದನು. ಗಾಜಾದ ಸುತ್ತಲಿನ ಪಟ್ಟಣಗಳಲ್ಲಿ ಅವ್ವಿಯ ಜನರು ವಾಸಿಸುತ್ತಿದ್ದರು. ಆದರೆ ಕಫ್ತೋರ್ಯದಿಂದ ಬಂದ ಜನರು ಅವ್ವಿಯರನ್ನು ನಾಶಮಾಡಿ ಅವರ ದೇಶದಲ್ಲಿ ಈಗಲೂ ಅವರು ವಾಸಿಸಿರುತ್ತಾರೆ.)
“ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಅರ್ನೋನ್ ಕಣಿವೆಯನ್ನು ದಾಟಲು ಸಿದ್ಧಪಡಿಸಿಕೊ. ಅಮೋರಿಯನೂ ಹೆಷ್ಬೋನಿನ ರಾಜನೂ ಆಗಿರುವ ಸೀಹೋನನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುವೆನು. ಅವನ ರಾಜ್ಯವನ್ನು ನಾನು ನಿನಗೆ ಕೊಡುವೆನು. ಆದುದರಿಂದ ಅವನಿಗೆ ವಿರುದ್ಧವಾಗಿ ಯುದ್ಧಮಾಡಿ ದೇಶವನ್ನು ಸ್ವಾಧೀನಪಡಿಸಿಕೊ.
ನಾವೇನಾದರೂ ನಿನ್ನ ದೇಶದ ಆಹಾರಪದಾರ್ಥಗಳನ್ನು ತೆಗೆದುಕೊಂಡರೆ, ನೀರನ್ನು ಉಪಯೋಗಿಸಿದರೆ ಅದಕ್ಕೆ ಪ್ರತಿಯಾಗಿ ಬೆಳ್ಳಿಯನ್ನು ಪಾವತಿ ಮಾಡುವೆವು. ನಿಮ್ಮ ದೇಶದ ಮೂಲಕ ನಾವು ಹಾದುಹೋಗಬೇಕಾಗಿದೆಯಷ್ಟೇ.
ನಾವು ಜೋರ್ಡನ್ ನದಿಯನ್ನು ದಾಟುವವರೆಗೆ ನಿಮ್ಮ ದೇಶದ ಮೂಲಕ ಹೋಗಿ, ನಮ್ಮ ದೇವರಾದ ಯೆಹೋವನು ಕೊಡಲಿರುವ ದೇಶವನ್ನು ಪ್ರವೇಶಿಸುತ್ತೇವೆ. ಸೇಯೀರ್‌ನಲ್ಲಿ ವಾಸಿಸುವ ಏಸಾವನ ಜನರೂ, ಆರ್‌ನಲ್ಲಿ ವಾಸಿಸುವ ಮೋವಾಬ್ಯರೂ ತಮ್ಮ ದೇಶಗಳ ಮೂಲಕ ಹೋಗಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.
“ಆದರೆ ಸೀಹೋನನು ನಮಗೆ ದಾಟಿಹೋಗಲು ಬಿಡಲಿಲ್ಲ. ನಮ್ಮ ದೇವರಾದ ಯೆಹೋವನು ಅವನ ಹೃದಯವನ್ನು ಕಠಿಣಗೊಳಿಸಿದನು. ನಾವು ಅವನನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಳ್ಳಬೇಕೆಂದು ಯೆಹೋವನು ಹಾಗೆ ಮಾಡಿದನು. ಆ ರಾಜ್ಯವು ಇಂದಿಗೂ ನಮ್ಮ ವಶದಲ್ಲಿದೆ.
ಅವನಿಗೆ ಒಳಪಟ್ಟ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡೆವು. ಪ್ರತಿಯೊಂದು ಪಟ್ಟಣದಲ್ಲಿದ್ದ ಗಂಡಸರು, ಹೆಂಗಸರು, ಮಕ್ಕಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ.
ನಾವು ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಎಂಬ ಊರನ್ನು ಮತ್ತು ಆ ಕಣಿವೆಯ ಮಧ್ಯದಲ್ಲಿದ್ದ ಇನ್ನೊಂದು ಊರನ್ನು ವಶಪಡಿಸಿಕೊಂಡೆವು. ಅರ್ನೋನ್ ಕಣಿವೆ ಮತ್ತು ಗಿಲ್ಯಾದ್‌ಗಳ ನಡುವೆ ಇರುವ ಎಲ್ಲಾ ಪಟ್ಟಣಗಳನ್ನು ಸೋಲಿಸಲು ಯೆಹೋವನು ಅವಕಾಶ ಮಾಡಿಕೊಟ್ಟನು. ಯಾವ ಪಟ್ಟಣವೂ ನಮಗೆ ಅಸಾಧ್ಯವಾಗಿ ಕಂಡುಬರಲಿಲ್ಲ.
ಆದರೆ ಅಮ್ಮೋನಿಯರಿಗೆ ಸೇರಿದ ದೇಶದ ಸಮೀಪಕ್ಕೆ ನಾವು ಹೋಗಲಿಲ್ಲ: ಯಬ್ಬೋಕ್ ನದಿಯ ಬದಿಗೂ ನಾವು ಹೋಗಲಿಲ್ಲ: ಬೆಟ್ಟಪ್ರದೇಶಗಳ ಪಟ್ಟಣಗಳಿಗೂ ನಾವು ಹೋಗಲಿಲ್ಲ: ನಮ್ಮ ದೇವರಾದ ಯೆಹೋವನು ನಮಗೆ ಕೊಡದೆ ಇರುವ ದೇಶಗಳ ಬಳಿಗೆ ನಾವು ಹೋಗಲೇ ಇಲ್ಲ.