Bible Languages

Indian Language Bible Word Collections

Bible Versions

Books

1 Samuel Chapters

1 Samuel 13 Verses

Bible Versions

Books

1 Samuel Chapters

1 Samuel 13 Verses

1 ಆ ಸಮಯದಲ್ಲಿ ಸೌಲನು ರಾಜನಾಗಿ ಒಂದು ವರ್ಷವಾಗಿತ್ತು. ಸೌಲನು ಎರಡು ವರ್ಷಗಳ ಕಾಲ ಇಸ್ರೇಲನ್ನು ಆಳಿದ ನಂತರ,
2 ಅವನು ಮೂರು ಸಾವಿರ ಇಸ್ರೇಲ್ ಗಂಡಸರನ್ನು ಆರಿಸಿಕೊಂಡನು. ಅವರಲ್ಲಿ ಎರಡು ಸಾವಿರ ಗಂಡಸರು ಗುಡ್ಡಗಾಡು ಪ್ರದೇಶವಾದ ಬೇತೇಲಿನಲ್ಲಿಯೂ ಮಿಕ್ಮಾಷಿನಲ್ಲಿಯೂ ಅವನೊಂದಿಗೆ ಇದ್ದರು. ಉಳಿದ ಒಂದು ಸಾವಿರ ಗಂಡಸರು ಬೆನ್ಯಾಮೀನನ ಗಿಬೆಯದಲ್ಲಿ ಯೋನಾತಾನನೊಂದಿಗೆ ಇದ್ದರು. ಸೌಲನು ಸೈನ್ಯದಲ್ಲಿದ್ದ ಇತರರನ್ನು ಅವರವರ ಮನೆಗಳಿಗೆ ಮರಳಿ ಕಳುಹಿಸಿದನು.
3 ಯೋನಾತಾನನು ಫಿಲಿಷ್ಟಿಯರನ್ನು ಅವರ ಶಿಬಿರವಿದ್ದ ಗೆಬದಲ್ಲಿ ಸೋಲಿಸಿದನು. ಫಿಲಿಷ್ಟಿಯರು ಈ ವಿಚಾರವನ್ನು ಕೇಳಿ, “ಇಬ್ರಿಯರು ದಂಗೆ ಎದ್ದಿದ್ದಾರೆ” ಎಂದು ಹೇಳಿದರು. ಸೌಲನು, “ಏನು ನಡೆಯಿತೆಂಬುದು ಇಬ್ರಿಯರಿಗೆ ತಿಳಿಯಲಿ” ಎಂದು ಹೇಳಿದನು. ಆದುದರಿಂದ ಸೌಲನು ಇಸ್ರೇಲ್ ದೇಶದಲ್ಲೆಲ್ಲಾ ಕೊಂಬೂದಿಸಬೇಕೆಂದು ಜನರಿಗೆ ಹೇಳಿದನು.
4 ಇಸ್ರೇಲರೆಲ್ಲರೂ ಈ ಸುದ್ದಿಯನ್ನು ಕೇಳಿ, “ಸೌಲನು ಫಿಲಿಷ್ಟಿಯರ ನಾಯಕನನ್ನು ಕೊಂದನು. ಈಗ ಫಿಲಿಷ್ಟಿಯರು ಇಸ್ರೇಲರನ್ನು ನಿಜವಾಗಿಯೂ ದ್ವೇಷಿಸುತ್ತಾರೆ” ಎಂದು ಹೇಳಿದರು. ಇಸ್ರೇಲರೆಲ್ಲ ಗಿಲ್ಗಾಲಿನಲ್ಲಿ ಸೌಲನನ್ನು ಜೊತೆಸೇರಲು ಕರೆಹೋಯಿತು.
5 ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಒಟ್ಟುಗೂಡಿದರು. ಫಿಲಿಷ್ಟಿಯರಲ್ಲಿ ಮೂರು ಸಾವಿರ ರಥಗಳಿದ್ದವು; ಆರು ಸಾವಿರ ಅಶ್ವಸೈನಿಕರಿದ್ದರು. ಫಿಲಿಷ್ಟಿಯರಲ್ಲಿ ನದಿದಂಡೆಯ ಮರಳಿನ ಕಣಗಳಷ್ಟು ಯೋಧರಿದ್ದರು. ಫಿಲಿಷ್ಟಿಯರು ಬೇತಾವೆನಿನ ಪೂರ್ವ ದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು.
6 ಇಸ್ರೇಲರು ತಾವು ತೊಂದರೆಗೆ ಒಳಗಾಗಿರುವುದನ್ನೂ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿರುವುದನ್ನೂ ತಿಳಿದುಕೊಂಡರು. ಅವರು ಗವಿಗಳಲ್ಲಿ ಮತ್ತು ಬಂಡೆಗಲ್ಲುಗಳ ಸಂಧಿಗಳಲ್ಲಿ ಅಡಗಿಕೊಳ್ಳಲು ಓಡಿಹೋದರು. ಅವರು ಬಂಡೆಗಳ ಮಧ್ಯದಲ್ಲಿಯೂ ಬಾವಿಗಳಲ್ಲಿಯೂ ಮತ್ತು ನೆಲದ ಕುಳಿಗಳಲ್ಲಿಯೂ ಅಡಗಿಕೊಂಡರು.
7 ಇಬ್ರಿಯರಲ್ಲಿ ಕೆಲವರು ಜೋರ್ಡನ್ ನದಿಯನ್ನು ದಾಟಿ ಗಾದ್ ಮತ್ತು ಗಿಲ್ಯಾದ್ ಪ್ರದೇಶಕ್ಕೆ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸೈನ್ಯದಲ್ಲಿದ್ದ ಜನರೆಲ್ಲ ಭಯದಿಂದ ನಡುಗತೊಡಗಿದರು.
8 ಸಮುವೇಲನು ತಾನು ಸೌಲನನ್ನು ಗಿಲ್ಗಾಲಿನಲ್ಲಿ ಭೇಟಿಮಾಡುವುದಾಗಿ ಹೇಳಿಕಳುಹಿಸಿದನು. ಆದ್ದರಿಂದ ಸೌಲನು ಏಳು ದಿನಗಳವರೆಗೆ ಅಲ್ಲಿ ಕಾದುಕೊಂಡಿದ್ದನು. ಆದರೆ ಸಮುವೇಲನು ಗಿಲ್ಗಾಲಿಗೆ ಬರುವುದಕ್ಕಿಂತ ಮೊದಲೇ ಸೈನಿಕರು ಸೌಲನನ್ನು ಬಿಟ್ಟುಹೋಗ ತೊಡಗಿದರು.
9 ಆದುದರಿಂದ ಸೌಲನು, “ಸರ್ವಾಂಗಹೋಮಕ್ಕೂ ಸಮಾಧಾನಯಜ್ಞಕ್ಕೂ ಬೇಕಾದವುಗಳನ್ನು ತನ್ನಿ” ಎಂದು ಹೇಳಿದನು. ಬಳಿಕ ಸೌಲನು ಸರ್ವಾಂಗ ಹೋಮವನ್ನು ಅರ್ಪಿಸಿದನು.
10 ಸೌಲನು ಸರ್ವಾಂಗಹೋಮವನ್ನು ಅರ್ಪಿಸಿ ಮುಗಿಸುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸಲು ಹೊರಗೆ ಹೋದನು.
11 ಸಮುವೇಲನು, “ನೀನು ಮಾಡಿದ್ದೇನು?” ಎಂದು ಕೇಳಿದನು. ಸೌಲನು, “ಸೈನಿಕರು ನನ್ನನ್ನು ಬಿಟ್ಟುಹೋಗುತ್ತಿರುವುದನ್ನೂ ನೀನು ನಿಯಮಿತಕಾಲದಲ್ಲಿ ಇಲ್ಲಿ ಇಲ್ಲದಿರುವುದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಒಟ್ಟುಗೂಡುತ್ತಿರುವುದನ್ನೂ ನೋಡಿದೆನು.
12 ನಾನು ನನ್ನಲ್ಲಿಯೇ ಯೋಚಿಸುತ್ತಾ, ‘ಫಿಲಿಷ್ಟಿಯರು ಇಲ್ಲಿಗೆ ಬಂದು ಗಿಲ್ಗಾಲಿನಲ್ಲಿ ನನ್ನ ಮೇಲೆ ಆಕ್ರಮಣ ಮಾಡುತ್ತಾರೆ. ನಮಗೆ ಸಹಾಯ ಮಾಡುವಂತೆ ನಾನು ದೇವರಲ್ಲಿ ಇನ್ನೂ ಪ್ರಾರ್ಥಿಸಿಲ್ಲ. ಆದುದರಿಂದ ನನ್ನಲ್ಲಿಯೇ ಆದ ಒತ್ತಡದಿಂದ ಸರ್ವಾಂಗಹೋಮವನ್ನು ಅರ್ಪಿಸಿದೆನು” ಎಂದನು.
13 ಸಮುವೇಲನು, “ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ. ನಿನ್ನ ದೇವರಾದ ಯೆಹೋವನ ಆಜ್ಞೆಗೆ ನೀನು ವಿಧೇಯನಾಗಲಿಲ್ಲ. ನೀನು ಯೆಹೋವನ ಆಜ್ಞೆಗೆ ವಿಧೇಯನಾಗಿದ್ದರೆ, ನಿನ್ನ ಕುಟುಂಬವು ಇಸ್ರೇಲನ್ನು ಶಾಶ್ವತವಾಗಿ ಆಳುವಂತೆ ಯೆಹೋವನು ಮಾಡುತ್ತಿದ್ದನು.
14 ಆದರೆ ಈಗ ನಿನ್ನ ಆಳ್ವಿಕೆಯು ಮುಂದುವರಿಯುವುದಿಲ್ಲ. ಯೆಹೋವನು ತನಗೆ ವಿಧೇಯನಾಗಿರುವಂತಹ ಮನುಷ್ಯನಿಗಾಗಿ ಹುಡುಕುತ್ತಿದ್ದನು. ಯೆಹೋವನಿಗೆ ಅಂತಹ ಮನುಷ್ಯನು ಸಿಕ್ಕಿದ್ದಾನೆ. ತನ್ನ ಜನರನ್ನು ಆಳಲು ಯೆಹೋವನು ಅವನನ್ನು ಹೊಸ ನಾಯಕನನ್ನಾಗಿ ನೇಮಿಸುತ್ತಾನೆ. ನೀನು ಯೆಹೋವನ ಆಜ್ಞೆಗೆ ವಿಧೇಯನಾಗಲಿಲ್ಲ. ಆದ್ದರಿಂದ ಯೆಹೋವನು ಹೊಸ ನಾಯಕನನ್ನು ಆರಿಸಿಕೊಳ್ಳುವನು” ಎಂದು ಹೇಳಿದನು.
15 ನಂತರ ಸಮುವೇಲನು ಎದ್ದು ಗಿಲ್ಗಾಲನ್ನು ಬಿಟ್ಟುಹೊರಟನು. ಸೌಲನು ತನ್ನ ಸೈನ್ಯಸಮೇತವಾಗಿ ಗಿಲ್ಗಾಲಿನಿಂದ ಹೊರಟನು. ಅವರು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯಕ್ಕೆ ಹೋದರು. ಸೌಲನು ತನ್ನೊಂದಿಗೆ ಇನ್ನೂ ಇದ್ದ ಜನರನ್ನು ಲೆಕ್ಕ ಹಾಕಿದನು. ಅವನ ಜೊತೆಯಲ್ಲಿ ಆರುನೂರು ಜನರಿದ್ದರು.
16 ಸೌಲನು ಮತ್ತು ಅವನ ಮಗನಾದ ಯೋನಾತಾನನು ಮತ್ತು ಸೈನಿಕರು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯಕ್ಕೆ ಹೋದರು. ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು.
17 ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಸ್ರೇಲರನ್ನು ಶಿಕ್ಷಿಸಲು ಫಿಲಿಷ್ಟಿಯರು ತೀರ್ಮಾನಿಸಿದ್ದರು. ಆದುದರಿಂದ ಅವರ ಬಲಿಷ್ಠ ಸೈನ್ಯವು ಆಕ್ರಮಣಕ್ಕಾಗಿ ಆ ಸ್ಥಳವನ್ನು ಬಿಟ್ಟುಹೊರಟಿತು. ಫಿಲಿಷ್ಟಿಯ ಸೈನ್ಯವನ್ನು ಮೂರು ಗುಂಪುಗಳನ್ನಾಗಿ ಮಾಡಲಾಯಿತು. ಒಂದು ಗುಂಪು ಉತ್ತರದಿಕ್ಕಿನ ಒಫ್ರದ ಮಾರ್ಗವಾಗಿ ಶುವಲ್ ದೇಶಕ್ಕೆ ಹೊರಟಿತು.
18 ಎರಡನೆ ಗುಂಪು ಈಶಾನ್ಯ ದಿಕ್ಕಿನ ಮಾರ್ಗವಾಗಿ ಬೇತ್‌ಹೋರೋನಿನ ಕಡೆಗೆ ಹೊರಟಿತು. ಆ ಮೂರನೆಯ ಗುಂಪು ಪೂರ್ವದಿಕ್ಕಿನ ಗಡಿಪ್ರದೇಶದ ಕಡೆಗೆ ಹೊರಟಿತು. ಆ ರಸ್ತೆಯು ಜೆಬೋಯೀಮ್ ಕಣಿವೆಯ ಮರುಭೂಮಿಯ ಕಡೆಗೆ ಹೋಗುತ್ತಿತ್ತು.
19 ಕಬ್ಬಿಣದಿಂದ ಆಯುಧಗಳನ್ನು ತಯಾರಿಸಲು ಇಸ್ರೇಲರಿಗೆ ಗೊತ್ತಿರಲಿಲ್ಲ. ಇಸ್ರೇಲಿನಲ್ಲಿ ಯಾವ ಕಮ್ಮಾರರೂ ಇರಲಿಲ್ಲ. ಇಸ್ರೇಲರು ಕಬ್ಬಿಣದಿಂದ ಕತ್ತಿಗಳನ್ನು ಮತ್ತು ಈಟಿಗಳನ್ನು ತಯಾರಿಸಬಹುದೆಂಬ ಭೀತಿಯು ಫಿಲಿಷ್ಟಿಯರಿಗೆ ಇದ್ದಕಾರಣ ಅವರು ಇಸ್ರೇಲರಿಗೆ ಕಬ್ಬಿಣದಿಂದ ತಯಾರಿಸುವ ವಸ್ತುಗಳ ಬಗ್ಗೆ ತಿಳುವಳಿಕೆ ನೀಡಿರಲಿಲ್ಲ.
20 ಫಿಲಿಷ್ಟಿಯರು ಮಾತ್ರ ಕಬ್ಬಿಣದ ವಸ್ತುಗಳನ್ನು ಹರಿತಗೊಳಿಸುತ್ತಿದ್ದರು. ಆದುದರಿಂದ ಇಸ್ರೇಲರು ತಮ್ಮ ನೇಗಿಲುಗಳನ್ನು, ಗುದ್ದಲಿಗಳನ್ನು, ಸಲಿಕೆಗಳನ್ನು ಮತ್ತು ಕೊಡಲಿಗಳನ್ನು ಹರಿತಗೊಳಿಸಲು ಫಿಲಿಷ್ಟಿಯರ ಹತ್ತಿರಕ್ಕೆ ಹೋಗಬೇಕಾಗಿತ್ತು.
21 ಫಿಲಿಷ್ಟಿಯರ ಕಮ್ಮಾರರು ನೇಗಿಲನ್ನಾಗಲೀ ಕಳೆಗುದ್ದಲಿಗಳನ್ನಾಗಲೀ ಹರಿತಗೊಳಿಸಲು 1/3 ತೊಲ ಬೆಳ್ಳಿಯನ್ನು ದರವಾಗಿ ತೆಗೆದುಕೊಳ್ಳುತ್ತಿದ್ದರು; ಸಲಿಕೆಯನ್ನಾಗಲೀ ಕೊಡಲಿಯನ್ನಾಗಲೀ ನೇಗಿಲಿನ ಗುಳವನ್ನಾಗಲೀ ಹರಿತಗೊಳಿಸಲು 1/6 ತೊಲ ಬೆಳ್ಳಿಯನ್ನು ತೆಗೆದುಕೊಳ್ಳುತ್ತಿದ್ದರು.
22 ಆದುದರಿಂದ ಯುದ್ಧದ ದಿನ ಸೌಲನ ಬಳಿಯಿದ್ದ ಸೈನಿಕರಲ್ಲಿ ಯಾರ ಹತ್ತಿರವೂ ಕತ್ತಿಯಾಗಲೀ ಈಟಿಯಾಗಲೀ ಇರಲಿಲ್ಲ. ಸೌಲ ಮತ್ತು ಅವನ ಮಗನಾದ ಯೋನಾತಾನನ ಹತ್ತಿರ ಮಾತ್ರ ಕಬ್ಬಿಣದ ಆಯುಧಗಳಿದ್ದವು.
23 ಫಿಲಿಷ್ಟಿಯರ ಸೈನ್ಯದ ಒಂದು ಗುಂಪು ಮಿಕ್ಮಾಷಿನ ಕಣಿವೆಗೆ ಕಾವಲಾಗಿತ್ತು.

1-Samuel 13:1 Kannada Language Bible Words basic statistical display

COMING SOON ...

×

Alert

×