1
|
ಆದುದರಿಂದ ಇತರ ಜನರಿಗೆ ಕೇಡು ಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ. |
2
|
ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ. |
3
|
ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ. |
4
|
ಪ್ರಭುವಾದ ಯೇಸುವೇ ಜೀವವುಳ್ಳ ‘‘ಕಲ್ಲು.’’ ಈ ಲೋಕದ ಜನರು ತಮಗೆ ಆ ‘‘ಕಲ್ಲು’’ (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ ‘‘ಕಲ್ಲು.’’ ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದುದರಿಂದ ಆತನ ಹತ್ತಿರಕ್ಕೆ ಬನ್ನಿರಿ. |
5
|
ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ. |
6
|
ಪವಿತ್ರ ಗ್ರಂಥವು ಹೇಳುವುದೇನಂದರೆ, ‘‘ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ. ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು; ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ’’ ಯೆಶಾಯ 28:16 |
7
|
ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ: ‘‘ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.’’ ಕೀರ್ತನೆ 118:22 |
8
|
ನಂಬದಿರುವ ಜನರಿಗೆ ಆತನು: ‘‘ಜನರನ್ನು ಮುಗ್ಗರಿಸುವ ಕಲ್ಲೂ ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.’’ ಯೆಶಾಯ 8:14 ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು. |
9
|
ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು. |
10
|
ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ. ಆದರೆ ಈಗ ನೀವು ದೇವರ ಜನರಾಗಿದ್ದೀರಿ. ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ. ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ. |
11
|
ಪ್ರಿಯ ಸ್ನೇಹಿತರೇ, ನೀವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಪರದೇಶದವರಂತೆ ಇದ್ದೀರಿ. ಆದುದರಿಂದ ನಿಮ್ಮ ದೇಹಗಳಿಗೆ ಇಷ್ಟವಾದ ಕೆಟ್ಟಸಂಗತಿಗಳಿಂದ ದೂರವಾಗಿರಿ. ಇವು ನಿಮ್ಮ ಜೀವಾತ್ಮಕ್ಕೆ ವಿರುದ್ಧವಾಗಿ ಹೋರಾಡುತ್ತವೆ. |
12
|
ನಂಬಿಕೆಯಿಲ್ಲದ ಜನರು ನಿಮ್ಮ ಸುತ್ತಮುತ್ತಲೆಲ್ಲಾ ವಾಸಿಸುತ್ತಿದ್ದಾರೆ. ನೀವು ತಪ್ಪು ಮಾಡುತ್ತಿರುವಿರೆಂದು ಅವರು ಹೇಳುವ ಸಾಧ್ಯತೆಯಿದೆ. ಆದ್ದರಿಂದ ಒಳ್ಳೆಯವರಾಗಿ ಬಾಳಿರಿ. ನೀವು ಮಾಡುವ ಒಳ್ಳೆಯ ಕಾರ್ಯಗಳನ್ನು ಅವರು ನೋಡುವರು ಮತ್ತು ದೇವರು ಪ್ರತ್ಯಕ್ಷನಾದ ದಿನದಂದು ಆತನನ್ನು ಕೊಂಡಾಡುವರು. |
13
|
ಈ ಲೋಕದ ಅಧಿಕಾರಿಗಳಿಗೆ ವಿಧೇಯರಾಗಿರಿ. ಪ್ರಭುವಿಗಾಗಿ ಇದನ್ನು ಮಾಡಿರಿ. ಸರ್ವಾಧಿಕಾರಿಯಾದ ರಾಜನಿಗೆ ವಿಧೇಯರಾಗಿರಿ. |
14
|
ರಾಜನು ಕಳುಹಿಸುವ ಅಧಿಕಾರಿಗಳಿಗೆ ವಿಧೇಯರಾಗಿರಿ. ತಪ್ಪು ಮಾಡಿದವರನ್ನು ದಂಡಿಸಲೂ ಒಳ್ಳೆಯದನ್ನು ಮಾಡಿದವರನ್ನು ಹೊಗಳಲೂ ಅವರನ್ನು ಕಳುಹಿಸಲಾಗಿದೆ. |
15
|
ನೀವು ಒಳ್ಳೆಯದನ್ನು ಮಾಡುವಾಗ ನಿಮ್ಮನ್ನು ಕುರಿತು ಕೆಟ್ಟಮಾತುಗಳನ್ನು ಆಡಲು ಮೂಢರಿಗೆ ಸಾಧ್ಯವಾಗುವುದಿಲ್ಲ. ದೇವರ ಅಪೇಕ್ಷೆಯೂ ಇದೇ ಆಗಿದೆ. |
16
|
ಸ್ವತಂತ್ರ ಹೊಂದಿದವರಂತೆ ಜೀವಿಸಿರಿ. ಆದರೆ ನೀವು ಮಾಡುವ ಕೆಟ್ಟಕಾರ್ಯಗಳನ್ನು ಮರೆಮಾಡಲು ಆ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿ. ನೀವು ದೇವರ ಸೇವೆಯನ್ನು ಮಾಡುತ್ತಾ ಜೀವಿಸಿರಿ. |
17
|
ಜನರೆಲ್ಲರಿಗೂ ಗೌರವವನ್ನು ತೋರಿಸಿರಿ. ದೇವರ ಕುಟುಂಬದ ಸಹೋದರ ಸಹೋದರಿಯರೆಲ್ಲರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ ಮತ್ತು ರಾಜನನ್ನು ಗೌರವಿಸಿರಿ. |
18
|
ಸೇವಕರೇ, ನಿಮ್ಮ ಒಡೆಯರ ಅಧಿಕಾರವನ್ನು ಒಪ್ಪಿಕೊಳ್ಳಿರಿ. ಇದನ್ನು ತುಂಬಾ ಗೌರವದಿಂದ ಮಾಡಿರಿ. ಒಳ್ಳೆಯವರಾದ ಮತ್ತು ದಯಾಪರರಾದ ಒಡೆಯರಿಗೆ ನೀವು ವಿಧೇಯರಾಗಿರಬೇಕು ಮತ್ತು ಕೆಟ್ಟವರಾದ ಒಡೆಯರಿಗೂ ವಿಧೇಯರಾಗಿರಬೇಕು. |
19
|
ಒಬ್ಬನು ಅನ್ಯಾಯವಾಗಿ ಸಂಕಟಕ್ಕೆ ಒಳಗಾದಾಗ ದೇವರಿಗಾಗಿ ಅದನ್ನು ಸಹಿಸಿಕೊಂಡರೆ ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. |
20
|
ಆದರೆ ನಿಮ್ಮ ತಪ್ಪಿಗಾಗಿ ನೀವು ದಂಡಿಸಲ್ಪಟ್ಟರೆ ಆ ದಂಡನೆಯನ್ನು ನೀವು ಅನುಭವಿಸಿದ್ದಕ್ಕೆ ನಿಮಗೇನೂ ಕೀರ್ತಿ ಬರುವುದಿಲ್ಲ. ಆದರೆ ನೀವು ಒಳ್ಳೆಯದನ್ನು ಮಾಡಿದ್ದರಿಂದ ಸಂಕಟಕ್ಕೆ ಒಳಗಾಗಿ ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಅದು ದೇವರನ್ನು ಸಂತೋಷ ಪಡಿಸುತ್ತದೆ. |
21
|
ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು. ನೀವು ಅನುಸರಿಸತಕ್ಕ ಮಾದರಿಯು ಕ್ರಿಸ್ತನೇ ಆಗಿದ್ದಾನೆ. ಆತನು ಮಾಡಿದಂತೆ ನೀವೂ ಮಾಡಿರಿ. ನೀವು ಸಂಕಟವನ್ನು ಅನುಭವಿಸುವಾಗ ತಾಳ್ಮೆಯಿಂದಿರಬೇಕು, ಏಕೆಂದರೆ ಕ್ರಿಸ್ತನು ನಿಮಗಾಗಿ ಸಂಕಟಪಟ್ಟನು. |
22
|
‘‘ಆತನು (ಕ್ರಿಸ್ತನು) ಪಾಪವನ್ನು ಮಾಡಲಿಲ್ಲ. ಆತನ ಬಾಯಿಂದ ಯಾವ ಸುಳ್ಳು ಮಾತೂ ಬರಲಿಲ್ಲ.’’ ಯೆಶಾಯ 53:9 |
23
|
ಜನರು ಕ್ರಿಸ್ತನನ್ನು ಬಯ್ದರೂ ಆತನು ಅವರನ್ನು ಬಯ್ಯಲಿಲ್ಲ. ಆತನು ಸಂಕಟವನ್ನು ಅನುಭವಿಸಿದರೂ ಜನರನ್ನು ಹೆದರಿಸಲಿಲ್ಲ. ಆತನು ತನ್ನ ಕಾರ್ಯವನ್ನು ದೇವರಿಗೆ ವಹಿಸಿದನು. ಸರಿಯಾದ ನ್ಯಾಯತೀರ್ಪು ನೀಡುವಾತನು ದೇವರೊಬ್ಬನೇ. |
24
|
ಕ್ರಿಸ್ತನು ನಮ್ಮ ಪಾಪಗಳನ್ನೆಲ್ಲಾ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನೇರಿದನು. ನಾವು ಪಾಪಕ್ಕೋಸ್ಕರ ಜೀವಿಸದೆ, ನೀತಿವಂತರಾಗಿ ಜೀವಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಆತನ (ಕ್ರಿಸ್ತನ) ಬಾಸುಂಡೆಗಳಿಂದ ನಿಮಗೆ ಗುಣವಾಯಿತು. |
25
|
ನೀವು ದಾರಿ ತಪ್ಪಿದ ಕುರಿಗಳಾಗಿದ್ದಿರಿ. ಆದರೆ ಈಗ ನೀವು ನಿಮ್ಮ ಕುರುಬನ ಬಳಿಗೆ ಅಂದರೆ ನಿಮ್ಮ ಆತ್ಮಗಳನ್ನು ಕಾಪಾಡುವಾತನ ಬಳಿಗೆ ಹಿಂತಿರುಗಿ ಬಂದಿರುವಿರಿ. |
1-Peter 2:1 Kannada Language Bible Words basic statistical display
COMING SOON ...