ಅದಕ್ಕೆ ಕಾರಣವೇನೆಂದರೆ: ಪರಭಾಷೆಯಲ್ಲಿ ಮಾತಾಡುವ ವರವನ್ನು ಹೊಂದಿರುವವನು ಜನರೊಂದಿಗೆ ಮಾತಾಡುವುದಿಲ್ಲ. ಅವನು ದೇವರೊಂದಿಗೆ ಮಾತಾಡುತ್ತಾನೆ. ಯಾರೂ ಅವನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಪವಿತ್ರಾತ್ಮನ ಮೂಲಕವಾಗಿ ರಹಸ್ಯ ಸಂಗತಿಗಳನ್ನು ಮಾತಾಡುತ್ತಿರುತ್ತಾನೆ.
ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ನೀವೆಲ್ಲರೂ ಹೊಂದಿರಬೇಕೆಂದು ನನ್ನ ಅಪೇಕ್ಷೆಯಾಗಿದೆ. ಆದರೆ ನೀವು ಪ್ರವಾದಿಸಬೇಕೆಂದು ನಾನು ಇನ್ನೂ ಹೆಚ್ಚಾಗಿ ಅಪೇಕ್ಷಿಸುತ್ತೇನೆ. ಕೇವಲ ವಿವಿಧ ಭಾಷೆಗಳನ್ನು ಮಾತನಾಡುವವನಿಗಿಂತಲೂ ಪ್ರವಾದಿಸುವವನು ಹೆಚ್ಚು ಶ್ರೇಷ್ಠನಾಗಿದ್ದಾನೆ. ಆದರೆ ವಿವಿಧ ಭಾಷೆಗಳಲ್ಲಿ ಮಾತಾಡುವವನು ಆ ಭಾಷೆಗಳನ್ನು ಅನುವಾದಿಸಬಲ್ಲವನಾಗಿದ್ದರೆ, ಅವನು ಪ್ರವಾದಿಸುವವನಷ್ಟೇ ಶ್ರೇಷ್ಠನಾಗುತ್ತಾನೆ. ಆಗ ಅವನು ಹೇಳುವ ಸಂಗತಿಗಳ ಮೂಲಕ ಸಭೆಗೆ ಸಹಾಯವಾಗುವುದು.
ಸಹೋದರ ಸಹೋದರಿಯರೇ, ನಾನು ವಿವಿಧ ಭಾಷೆಗಳನ್ನು ಮಾತಾಡುವವನಾಗಿ ನಿಮ್ಮ ಬಳಿಗೆ ಬಂದರೆ ಅದರಿಂದ ನಿಮಗೆ ಸಹಾಯವಾಗುವುದೇ? ಇಲ್ಲ! ನಾನು ನಿಮಗೆ ಹೊಸ ಸತ್ಯವನ್ನು, ಜ್ಞಾನವನ್ನು, ಪ್ರವಾದನೆಯನ್ನು ಮತ್ತು ಉಪದೇಶವನ್ನು ತಂದರೆ ಮಾತ್ರ ನಿಮಗೆ ಸಹಾಯವಾಗುತ್ತದೆ.
ನಾದವನ್ನು ಹೊರಹೊಮ್ಮಿಸುವ ಕೊಳಲು ಅಥವಾ ವೀಣೆ ಮುಂತಾದ ನಿರ್ಜೀವ ವಸ್ತುಗಳಿಗೆ ಇದು ಸರಿಹೋಲುತ್ತದೆ. ವಿವಿಧ ಧ್ವನಿಗಳು ಸ್ಪಷ್ಟವಾಗಿಲ್ಲದಿದ್ದರೆ ಯಾವ ಹಾಡನ್ನು ನುಡಿಸಲಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಪ್ರತಿಯೊಂದು ಧ್ವನಿಯನ್ನು ಸ್ಪಷ್ಟವಾಗಿ ನುಡಿಸಿದಾಗ ಮಾತ್ರ ನೀವು ಸ್ವರವನ್ನು ಅರ್ಥಮಾಡಿಕೊಳ್ಳುವಿರಿ.
ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮ ನಾಲಿಗೆಯಿಂದ ಮಾತಾಡುವ ಪದಗಳು ಸ್ಪಷ್ಟವಾಗಿರಬೇಕು. ನೀವು ಸ್ಪಷ್ಟವಾಗಿ ಮಾತಾಡದಿದ್ದರೆ, ನೀವು ಏನು ಮಾತಾಡುತ್ತಿದ್ದೀರೆಂಬುದನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಗಾಳಿಯೊಂದಿಗೆ ಮಾತಾಡುತ್ತಿರುವಂತೆ ತೋರುವುದು.
ಇದು ನಿಮಗೂ ಅನ್ವಯಿಸುತ್ತದೆ. ನೀವು ಆತ್ಮಿಕ ವರಗಳನ್ನು ಬಹಳವಾಗಿ ಅಪೇಕ್ಷಿಸುತ್ತೀರಿ. ಆದ್ದರಿಂದ, ಸಭೆಯು ದೃಢವಾಗಿ ಬೆಳೆಯಲು ಸಹಾಯಕರವಾದ ವರಗಳನ್ನು ಹೊಂದಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿರಿ.
ನೀನು ನಿನ್ನ ಜೀವಾತ್ಮದಿಂದ ಸುತ್ತಿಸಬಹದು. ಆದರೆ ಅಲ್ಲಿರುವ ಒಬ್ಬನು ನಿನ್ನ ಕೃತಜ್ಞತಾಸ್ತುತಿಯನ್ನು ಅರ್ಥಮಾಡಿಕೊಳ್ಳದ ಹೊರತು “ಆಮೆನ್” ಎಂದು ಹೇಳಲಾರನು. ಏಕೆಂದರೆ ನೀನು ಹೇಳುತ್ತಿರುವುದು ಅವನಿಗೆ ತಿಳಿಯುವುದಿಲ್ಲ.
ಆದರೆ ಸಭಾಕೂಟಗಳಲ್ಲಿ ಅರ್ಥವಾಗದಂಥ ಪರಭಾಷೆಯಲ್ಲಿ ಸಾವಿರಾರು ಮಾತುಗಳನ್ನು ಹೇಳುವುದಕ್ಕಿಂತ ಅರ್ಥವಾಗುವಂಥ ಕೆಲವೇ ಮಾತುಗಳನ್ನು ಹೇಳಲು ಇಷ್ಟಪಡುತ್ತೇನೆ. ಇತರರಿಗೆ ಉಪದೇಶ ಮಾಡುವುದಕ್ಕಾಗಿ ನಾನು ತಿಳುವಳಿಕೆಯಿಂದ ಮಾತಾಡುವೆನು.
ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ: “ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ ವಿದೇಶಿಯರ ನಾಲಿಗೆಯ ಮೂಲಕವೂ ನಾನು ಈ ಜನರೊಂದಿಗೆ ಮಾತಾಡುವೆನು; ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.” ಯೆಶಾಯ 28:11-12 ಪ್ರಭುವು ಹೇಳುವುದು ಅದನ್ನೇ.
ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು.
ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.
ಆದ್ದರಿಂದ ಸಹೋದರ ಸಹೋದರಿಯರೇ, ನೀವು ಮಾಡತಕ್ಕದ್ದೇನು? ನೀವು ಸಭೆಸೇರಿದಾಗ, ಒಬ್ಬನು ಹಾಡುತ್ತಾನೆ; ಒಬ್ಬನು ಉಪದೇಶ ಮಾಡುತ್ತಾನೆ; ಒಬ್ಬನು ದೇವರಿಂದ ಹೊಸ ಸತ್ಯವನ್ನು ತಿಳಿಸುತ್ತಾನೆ; ಒಬ್ಬನು ಪರಭಾಷೆಯಲ್ಲಿ ಮಾತಾಡುತ್ತಾನೆ; ಒಬ್ಬನು ಆ ಪರಭಾಷೆಯನ್ನು ಅನುವಾದಿಸುತ್ತಾನೆ. ಸಭೆಯು ದೃಢವಾಗಿ ಬೆಳೆಯಬೇಕೆಂಬುದೇ ಇವುಗಳ ಉದ್ದೇಶವಾಗಿರಬೇಕು.
ನೀವು ಸಭೆಸೇರಿರುವಾಗ, ಯಾರಾದರೂ ಪರಭಾಷೆಯಲ್ಲಿ ಮಾತಾಡಲು ಬಯಸಿದರೆ, ಇಬ್ಬರು ಅಥವಾ ಮೂವರಿಗಿಂತಲೂ ಹೆಚ್ಚು ಜನರು ಪರಭಾಷೆಯಲ್ಲಿ ಮಾತಾಡಬಾರದು. ಅವರು ಹೇಳುವುದನ್ನು ಮತ್ತೊಬ್ಬ ವ್ಯಕ್ತಿಯು ಅನುವಾದಿಸಬೇಕು.
ಸ್ತ್ರೀಯರು ಸಭಾಕೂಟಗಳಲ್ಲಿ ಮೌನವಾಗಿರಬೇಕು. ದೇವಮಕ್ಕಳ ಎಲ್ಲಾ ಸಭೆಗಳಲ್ಲಿಯೂ ಇದೇ ಪದ್ಧತಿ ರೂಢಿಯಲ್ಲಿದೆ. ಸ್ತ್ರೀಯರಿಗೆ ಮಾತಾಡಲು ಅನುಮತಿಯಿಲ್ಲ. ಅವರು ಅಧೀನರಾಗಿರಬೇಕು. ಮೋಶೆಯ ಧರ್ಮಶಾಸ್ತ್ರವು ಸಹ ಇದನ್ನೇ ಹೇಳುತ್ತದೆ.
ಆದ್ದರಿಂದ ಸಹೋದರ ಸಹೋದರಿಯರೇ, ನೀವು ಪ್ರವಾದನಾ ವರವನ್ನು ನಿಜವಾಗಿಯೂ ಬಯಸಿರಿ. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ಹೊಂದಿರುವವರು ತಮ್ಮ ವರವನ್ನು ಉಪಯೋಗಿಸಲಿ. ಅವರನ್ನು ತಡೆಯಬೇಡಿರಿ.