English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Genesis Chapters

Genesis 18 Verses

1 ಅಬ್ರಹಾಮನು ಮಮ್ರೆಯಲ್ಲಿದ್ದ ಓಕ್ ಮರಗಳ ತೋಪಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಯೆಹೋವನು ಅವನಿಗೆ ಕಾಣಿಸಿಕೊಂಡನು. ಅಂದು ಬಿಸಿಲಿನ ತಾಪದಿಂದಾಗಿ ಅಬ್ರಹಾಮನು ತನ್ನ ಗುಡಾರದ ಬಾಗಿಲ ಬಳಿ ಕುಳಿತಿದ್ದನು.
2 ಅಬ್ರಹಾಮನು ದೃಷ್ಟಿಸಿ ನೋಡಿದಾಗ ತನ್ನ ಮುಂದೆ ಮೂವರು ಪುರುಷರು ನಿಂತಿರುವುದನ್ನು ಕಂಡನು. ಕೂಡಲೇ ಅವರ ಬಳಿಗೆ ಓಡಿಹೋಗಿ ಅವರಿಗೆ ಸಾಷ್ಟಾಂಗನಮಸ್ಕಾರ ಮಾಡಿ ಅವರಿಗೆ,
3 “ಸ್ವಾಮಿಗಳೇ, ನಿಮ್ಮ ಸೇವಕನಾದ ನನ್ನ ಜೊತೆಯಲ್ಲಿ ಸ್ವಲ್ಪ ಸಮಯವಿರಿ.
4 ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಲು ನೀರನ್ನು ತಂದುಕೊಡುವೆನು. ನೀವು ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳಿರಿ.
5 ನಾನು ನಿಮಗೆ ಊಟವನ್ನು ತಂದುಕೊಡುವೆನು. ನೀವು ಬೇಕಾದಷ್ಟು ಊಟ ಮಾಡಿದ ನಂತರ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು. ಆ ಮೂವರು ಪುರಷರು, “ಸರಿ, ನೀನು ಹೇಳಿದಂತೆಯೇ ಮಾಡು” ಅಂದರು.
6 ಅಬ್ರಹಾಮನು ಗುಡಾರಕ್ಕೆ ಬೇಗನೆ ಹೋಗಿ ಸಾರಳಿಗೆ, “ಮೂರು ದೊಡ್ಡ ರೊಟ್ಟಿಗಳಿಗೆ ಬೇಕಾಗುವಷ್ಟು ಗೋಧಿ ಹಿಟ್ಟನ್ನು ಬೇಗನೆ ನಾದು” ಎಂದು ಹೇಳಿದನು.
7 ಬಳಿಕ ಅವನು ತನ್ನ ಪಶುಗಳಿದ್ದಲ್ಲಿಗೆ ಓಡಿಹೋಗಿ ಉತ್ತಮವಾದ ಎಳೆಕರುವನ್ನು ತೆಗೆದು ಸೇವಕನಿಗೆ ಕೊಟ್ಟು, “ಬೇಗನೇ ಕರುವನ್ನು ಕೊಯ್ದು, ಊಟಕ್ಕೆ ಸಿದ್ಧಮಾಡು” ಎಂದು ಹೇಳಿದನು.
8 ಅಬ್ರಹಾಮನು ಆ ಮೂವರಿಗೆ ಮಾಂಸದ ಅಡಿಗೆಯನ್ನು ಬಡಿಸಿದನು. ಇದಲ್ಲದೆ ಅವನು ಹಾಲನ್ನೂ ಬೆಣ್ಣೆಯನ್ನೂ ಕೊಟ್ಟನು. ಆ ಮೂವರು ಊಟ ಮಾಡುವಾಗ ಅಬ್ರಹಾಮನು ಅವರ ಸಮೀಪದಲ್ಲಿ ಮರದ ಕೆಳಗೆ ನಿಂತುಕೊಂಡಿದ್ದನು.
9 ಆ ಪುರುಷರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ ಸಾರಳು ಎಲ್ಲಿ?” ಎಂದು ಕೇಳಿದರು. ಅಬ್ರಹಾಮನು ಅವರಿಗೆ, “ಆಕೆ ಗುಡಾರದಲ್ಲಿ ಇದ್ದಾಳೆ” ಅಂದನು.
10 ಆಗ ಯೆಹೋವನು ಅವನಿಗೆ, “ನಾನು ಮತ್ತೆ ವಸಂತಕಾಲದಲ್ಲಿ ಬರುತ್ತೇನೆ. ಆ ಸಮಯದಲ್ಲಿ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿರುವನು” ಎಂದು ಹೇಳಿದನು. ಸಾರಳು ಗುಡಾರದಲ್ಲಿದ್ದುಕೊಂಡು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದಳು. ಅವಳಿಗೆ ಈ ಸಂಗತಿಯೂ ಕೇಳಿಸಿತು.
11 ಅಬ್ರಹಾಮನೂ ಮತ್ತು ಸಾರಳೂ ತುಂಬ ವೃದ್ಧರಾಗಿದ್ದರು. ಸಾರಳಿಗೂ ಮಕ್ಕಳು ಹುಟ್ಟುವ ಕಾಲ ಆಗಿಹೋಗಿತ್ತು.
12 ಆದ್ದರಿಂದ ಸಾರಳಿಗೆ ನಂಬಲಾಗಲಿಲ್ಲ. ಆಕೆ ತನ್ನೊಳಗೆ, “ಈಗಾಗಲೇ ನನಗೆ ವಯಸ್ಸಾಗಿದೆ; ನನ್ನ ಗಂಡನಿಗೂ ವಯಸ್ಸಾಗಿದೆ” ಅಂದುಕೊಂಡಳು.
13 ಆಗ ಯೆಹೋವನು ಅಬ್ರಹಾಮನಿಗೆ, “ನಾನು ಹೇಳುವುದನ್ನು ಸಾರಳು ನಂಬುತ್ತಿಲ್ಲ. ಆಕೆಯು ನಗುತ್ತಾ ತನ್ನೊಳಗೆ, ‘ನನಗೆ ಮಕ್ಕಳಾಗದಷ್ಟು ವಯಸ್ಸಾಗಿದೆ’ ಎಂದು ಹೇಳಿದ್ದೇಕೆ?
14 ಯೆಹೋವನಿಗೆ ಅಸಾಧ್ಯವಾದುದುಂಟೇ? ನಾನು ಮತ್ತೆ ವಸಂತಕಾಲದಲ್ಲಿ ಬರುವೆನು. ಆಗ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿದ್ದೇ ಇರುವನು” ಅಂದನು.
15 ಆದರೆ ಸಾರಳು ಭಯಪಟ್ಟು, “ನಾನು ನಗಲಿಲ್ಲ” ಅಂದಳು. ಅದಕ್ಕೆ ಯೆಹೋವನು, “ಇಲ್ಲ, ನೀನು ನಕ್ಕಿದ್ದು ನಿಜ!” ಅಂದನು.
16 ಆಮೇಲೆ ಆ ಪುರುಷರು ಹೋಗಲು ಎದ್ದುನಿಂತರು. ಅವರು ಸೊದೋಮಿನ ಕಡೆಗೆ ಕಣ್ಣೆತ್ತಿ ನೋಡಿ ಆ ಕಡೆಗೆ ನಡೆಯಲಾರಂಭಿಸಿದರು. ಅವರನ್ನು ಕಳುಹಿಸಿಕೊಡಲು ಅಬ್ರಹಾಮನು ಅವರ ಸಂಗಡ ಸ್ವಲ್ಪದೂರ ಹೋದನು.
17 ಯೆಹೋವನು ತನ್ನೊಳಗೆ ಹೀಗೆಂದುಕೊಂಡನು: “ನಾನು ಈಗ ಮಾಡುವ ಕಾರ್ಯವನ್ನು ಅಬ್ರಹಾಮನಿಗೆ ತಿಳಿಸಲೇ?
18 ಅಬ್ರಹಾಮನಿಂದ ಬಲಿಷ್ಠವಾದ ಮಹಾಜನಾಂಗ ಹುಟ್ಟುವುದು; ಅವನ ಮೂಲಕ ಈ ಲೋಕದ ಜನರೆಲ್ಲರೂ ಆಶೀರ್ವಾದ ಹೊಂದುವರು.
19 ನಾನು ಅವನೊಡನೆ ವಿಶೇಷವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವನು ತನ್ನ ಮಕ್ಕಳಿಗೂ ಸಂತತಿಯವರಿಗೂ ನನಗೆ ವಿಧೇಯರಾಗುವಂತೆ ಮತ್ತು ನ್ಯಾಯನೀತಿಗಳಿಂದ ಜೀವಿಸುವಂತೆ ಆಜ್ಞಾಪಿಸಲೆಂದು ನಾನು ಅವನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡೆನು. ಅವರು ಹೀಗೆ ಜೀವಿಸಿದರೆ, ನನ್ನ ವಾಗ್ದಾನಗಳನ್ನೆಲ್ಲಾ ನೆರವೇರಿಸುವೆನು.”
20 ಇದಲ್ಲದೆ ಯೆಹೋವನು, “ಸೊದೋಮ್ ಮತ್ತು ಗೊಮೋರಗಳ ಜನರು ಬಹಳ ಕೆಟ್ಟವರೆಂದು ಅನೇಕ ಸಲ ಕೇಳಿದ್ದೇನೆ.
21 ಆದ್ದರಿಂದ ನಾನು ಕೆಳಗಿಳಿದು ಅಲ್ಲಿಗೆ ಹೋಗಿ ನಾನು ಕೇಳಿದ್ದು ನಿಜವೇ ಎಂದು ಪರೀಕ್ಷಿಸುವೆನು” ಅಂದನು.
22 ಆದ್ದರಿಂದ ಆ ಪುರುಷರು ಸೊದೋಮಿನ ಕಡೆಗೆ ನಡೆಯತೊಡಗಿದರು. ಆದರೆ ಅಬ್ರಹಾಮನು ಯೆಹೋವನ ಎದುರಿನಲ್ಲಿ ನಿಂತುಕೊಂಡಿದ್ದನು.
23 ಅಬ್ರಹಾಮನು ಯೆಹೋವನ ಸಮೀಪಕ್ಕೆ ಬಂದು, “ಯೆಹೋವನೇ, ನೀನು ಕೆಟ್ಟವರನ್ನು ನಾಶಮಾಡುವಾಗ ನೀತಿವಂತರನ್ನು ಸಹ ನಾಶಮಾಡಬೇಕೆಂದಿರುವೆಯೋ?
24 ಒಂದುವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ? ನೀನು ಆ ಪಟ್ಟಣವನ್ನು ನಾಶಮಾಡುವಿಯೋ? ಖಂಡಿತವಾಗಿಯೂ ಇಲ್ಲ! ಅಲ್ಲಿ ಜೀವಿಸುತ್ತಿರುವ ಐವತ್ತು ಮಂದಿ ನೀತಿವಂತರಿಗಾಗಿ ನೀನು ಆ ಪಟ್ಟಣವನ್ನು ಉಳಿಸಿ ಕಾಪಾಡುವೆ.
25 ಖಂಡಿತವಾಗಿಯೂ ನೀನು ಆ ಪಟ್ಟಣವನ್ನು ನಾಶಮಾಡುವುದಿಲ್ಲ. ಕೆಟ್ಟವರನ್ನು ಕೊಲ್ಲುವುದಕ್ಕಾಗಿ ನೀನು ಐವತ್ತು ಮಂದಿ ನೀತಿವಂತರನ್ನು ಕೊಲ್ಲುವುದಿಲ್ಲ. ಒಂದುವೇಳೆ ನೀನು ಕೊಂದರೆ, ಒಳ್ಳೆಯವರೂ ಕೆಟ್ಟವರೂ ಸರಿಸಮಾನರಾಗುವರು. ಅವರಿಬ್ಬರೂ ದಂಡನೆಗೆ ಗುರಿಯಾಗುವರು. ನೀನು ಲೋಕದವರಿಗೆಲ್ಲ ನ್ಯಾಯಾಧಿಪತಿ. ನೀನು ನ್ಯಾಯವಾದದ್ದನ್ನೇ ಮಾಡುವೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.
26 ಆಮೇಲೆ ಯೆಹೋವನು, “ನಾನು ಸೊದೋಮಿನಲ್ಲಿ ಐವತ್ತು ಮಂದಿ ನೀತಿವಂತರನ್ನು ಕಂಡರೆ, ನಾನು ಇಡೀ ಪಟ್ಟಣವನ್ನೇ ಉಳಿಸಿ ಕಾಪಾಡುವೆನು” ಎಂದನು.
27 ಆಗ ಅಬ್ರಹಾಮನು ಯೆಹೋವನಿಗೆ, “ನಿನಗೆ ನನ್ನನ್ನು ಹೋಲಿಸಿಕೊಂಡರೆ, ನಾನು ಕೇವಲ ಧೂಳು ಮತ್ತು ಬೂದಿ. ಆದರೆ ಈ ಪ್ರಶ್ನೆಯನ್ನೂ ಕೇಳಲು ನನಗೆ ಅವಕಾಶಕೊಡು.
28 ಒಂದುವೇಳೆ ಐದು ಮಂದಿ ಕಡಿಮೆಯಾಗಿದ್ದು ನಲವತ್ತೈದು ಮಂದಿ ಮಾತ್ರ ನೀತಿವಂತರಿದ್ದರೆ ಆ ಪಟ್ಟಣವನ್ನು ನಾಶಮಾಡುವಿಯಾ?” ಎಂದು ಕೇಳಿದನು. ಅದಕ್ಕೆ ಯೆಹೋವನು ಅವನಿಗೆ, “ನಾನು ನಲವತ್ತೈದು ಮಂದಿ ನೀತಿವಂತರನ್ನು ಕಂಡರೂ ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.
29 ಮತ್ತೆ ಅಬ್ರಹಾಮನು ದೇವರಿಗೆ, “ಕೇವಲ ನಲವತ್ತು ಮಂದಿ ನೀತಿವಂತರನ್ನು ಕಂಡರೆ, ನೀನು ಆ ಪಟ್ಟಣವನ್ನು ನಾಶಮಾಡುವೆಯಾ?” ಎಂದು ಕೇಳಿದನು. ಯೆಹೋವನು ಅವನಿಗೆ, “ನಲವತ್ತು ಮಂದಿ ನೀತಿವಂತರನ್ನು ಕಂಡರೂ ನಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.
30 ಆಮೇಲೆ ಅಬ್ರಹಾಮನು, “ಯೆಹೋವನೇ, ನನ್ನ ಮೇಲೆ ಸಿಟ್ಟುಗೊಳ್ಳಬೇಡ. ಈ ಪ್ರಶ್ನೆಯನ್ನೂ ಕೇಳುವೆ: ಆ ಪಟ್ಟಣದಲ್ಲಿ ಕೇವಲ ಮೂವತ್ತು ಮಂದಿ ನೀತಿವಂತರಿದ್ದರೆ ನೀನು ಆ ಪಟ್ಟಣವನ್ನು ನಾಶಮಾಡುವೆಯಾ?” ಎಂದು ಕೇಳಿದನು. ಯೆಹೋವನು ಅವನಿಗೆ, “ಅಲ್ಲಿ ಮೂವತ್ತು ಮಂದಿ ನೀತಿವಂತರಿದ್ದರೂ ನಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಅಂದನು.
31 ಆಮೇಲೆ ಅಬ್ರಹಾಮನು, “ನನ್ನ ಯೆಹೋವನು ಏನೂ ತಿಳಿದುಕೊಳ್ಳದಿರಲಿ. ನಾನು ಮತ್ತೊಂದು ಪ್ರಶ್ನೆ ಕೇಳುವೆ. ಅಲ್ಲಿ ಇಪ್ಪತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ?” ಎಂದು ಕೇಳಿದನು. ಯೆಹೋವನು ಅವನಿಗೆ, “ಅಲ್ಲಿ ಇಪ್ಪತ್ತು ಮಂದಿ ನೀತಿವಂತರನ್ನು ಕಂಡರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.
32 ಆಮೇಲೆ ಅಬ್ರಹಾಮನು, “ಯೆಹೋವನೇ, ದಯಮಾಡಿ ನನ್ನ ಮೇಲೆ ಸಿಟ್ಟುಗೊಳ್ಳಬೇಡ. ಇದೊಂದು ಸಲ ಮಾತ್ರ ಪ್ರಶ್ನೆ ಕೇಳುವೆ. ಹತ್ತು ಮಂದಿ ನೀತಿವಂತರನ್ನು ಕಂಡರೆ ಏನು ಮಾಡುವೆ?” ಎಂದು ಕೇಳಿದನು. ಯೆಹೋವನು ಅವನಿಗೆ, “ನಾನು ಆ ಪಟ್ಟಣದಲ್ಲಿ ಹತ್ತು ಮಂದಿ ನೀತಿವಂತರನ್ನು ಕಂಡರೂ, ಅದನ್ನು ನಾಶಮಾಡುವುದಿಲ್ಲ” ಅಂದನು.
33 ಯೆಹೋವನು ಅಬ್ರಹಾಮನೊಂದಿಗೆ ಮಾತಾಡುವುದನ್ನು ಮುಗಿಸಿದ ಮೇಲೆ ಅಲ್ಲಿಂದ ಹೊರಟುಹೋದನು. ಅಬ್ರಹಾಮನು ಸಹ ತನ್ನ ಮನೆಗೆ ಹಿಂತಿರುಗಿದನು.
×

Alert

×