ಇಸ್ರೇಲ್ ಜನಾಂಗದೊಂದಿಗೆ ಹೋರೇಬ್ ಬೆಟ್ಟದಲ್ಲಿ ಯೆಹೋವನು ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಅಲ್ಲದೆ ಇಸ್ರೇಲರು ಮೋವಾಬ್ ಪ್ರಾಂತ್ಯದಲ್ಲಿದ್ದಾಗ ಯೆಹೋವನು ಮೋಶೆಗೆ ಅವರೊಡನೆ ಇನ್ನೊಂದು ಒಡಂಬಡಿಕೆಯನ್ನು ಮಾಡಿಕೊಳ್ಳಲು ಹೇಳಿದನು. ಅದು ಯಾವುದೆಂದರೆ:
ಮೋಶೆಯು ಇಸ್ರೇಲರ ಜನಸಮೂಹವನ್ನು ಕರೆದು, “ಈಜಿಪ್ಟ್ ದೇಶದಲ್ಲಿ ಯೆಹೋವನು ನಡಿಸಿದ ಕಾರ್ಯಗಳನ್ನೆಲ್ಲಾ ನೀವು ನೋಡಿದ್ದೀರಿ. ಆತನು ಫರೋಹನಿಗೂ ಅವನ ಪರಿವಾರದವರಿಗೂ ಮತ್ತು ಇಡೀ ಈಜಿಪ್ಟಿನವರಿಗೂ ಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ.
ನಿಮ್ಮಲ್ಲಿ ಆಹಾರವಿರಲಿಲ್ಲ; ಕುಡಿಯಲು ದ್ರಾಕ್ಷಾರಸವಾಗಲಿ ಪಾನೀಯವಾಗಲಿ ಇರಲಿಲ್ಲ. ಆದರೆ ಯೆಹೋವನು ಮನ್ನವನ್ನು ಮತ್ತು ನೀರನ್ನು ಕೊಟ್ಟನು. ಆತನೇ ನಿಮ್ಮ ದೇವರಾದ ಯೆಹೋವನೆಂದು ನೀವು ಅರಿತುಕೊಳ್ಳುವ ಹಾಗೆ ಮಾಡಿದನು.
ಈ ಒಡಂಬಡಿಕೆಯ ಮೂಲಕ ದೇವರು ನಿಮ್ಮನ್ನು ತನ್ನ ಸ್ವಕೀಯ ಜನರನ್ನಾಗಿ ಮಾಡುತ್ತಾನೆ. ಆತನು ನಿಮಗೆ ದೇವರಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಹೇಳಿದಂತೆ ನಿಮಗೂ ಹೇಳುತ್ತಾನೆ.
ಇಲ್ಲಿರುವ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಯಾವ ಗೋತ್ರದವರಾಗಲಿ ನಿಮ್ಮ ದೇವರಾದ ಯೆಹೋವನನ್ನು ಬಿಟ್ಟುಹೋಗದಂತೆ ನೋಡಿಕೊಳ್ಳಿರಿ. ಯಾವನೂ ಹೋಗಿ ಬೇರೆ ಜನಾಂಗಗಳ ದೇವರುಗಳ ಸೇವೆಮಾಡಬಾರದು. ಅಂಥದ್ದನ್ನು ಮಾಡುವ ಜನರು ಕಹಿಯಾದ ಮತ್ತು ವಿಷಭರಿತವಾದ ಹಣ್ಣನ್ನು ಬಿಡುವ ಗಿಡದಂತಿದ್ದಾರೆ.
“ನಾನು ತಿಳಿಸಿದ ಶಾಪವನ್ನೆಲ್ಲಾ ಕೇಳಿಸಿಕೊಂಡು, ‘ನಾನು ನನ್ನ ಇಷ್ಟ ಬಂದಂತೆ ಮಾಡುತ್ತೇನೆ. ನನಗೆ ಯಾವ ಕೇಡೂ ಆಗುವುದಿಲ್ಲ’ ಎಂದು ಯಾವನಾದರೂ ಹೇಳಿಕೊಂಡು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡರೆ, ಅವನು ತನಗೆ ಮಾತ್ರವಲ್ಲ ಎಲ್ಲಾ ಒಳ್ಳೆಯ ಜನರಿಗೂ ಕೇಡಾಗುವಂತೆ ಮಾಡುತ್ತಾನೆ.
(20-21) ಯೆಹೋವನು ಆ ಮನುಷ್ಯನನ್ನು ಕ್ಷಮಿಸುವುದಿಲ್ಲ. ಅವನ ಮೇಲೆ ಕೋಪಗೊಂಡು ಅವನನ್ನು ಶಿಕ್ಷಿಸುವನು. ಅವನನ್ನು ಇಸ್ರೇಲ್ ಕುಲಗಳಿಂದ ತೆಗೆದುಹಾಕುವನು. ಈ ಪುಸ್ತಕದಲ್ಲಿ ಬರೆದ ಎಲ್ಲಾ ಶಾಪಗಳಿಂದ ಬಾಧಿಸಿ ನಾಶಪಡಿಸುವನು. ಈ ಬೋಧನಾ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಗೆ ಅದು ಸೇರಿರುತ್ತದೆ.
ನಿಮ್ಮ ದೇಶವೆಲ್ಲಾ ನಿಷ್ಪ್ರಯೋಜಕವಾಗಿರುವುದು. ಅದರ ಮೇಲೆ ಉಪ್ಪೂ ಗಂಧಕವೂ ತುಂಬಿರುವುದು. ಅದರ ಮೇಲೆ ಯಾವ ಸಸಿಯೂ ಬೆಳೆಯಲಾರದು; ಕೂಳೆಯೂ ಬೆಳೆಯುವುದಿಲ್ಲ. ಸೊದೋಮ್, ಗೊಮೋರ, ಅದ್ಮಾ ಮತ್ತು ಚೆಬೋಯೀಮ್ ಎಂಬ ಪಟ್ಟಣಗಳು ಯೆಹೋವನ ಕೋಪದ ನಿಮಿತ್ತ ನಾಶವಾದಂತೆ ನಿಮ್ಮ ದೇಶವೂ ನಾಶವಾಗುವುದು.
ಯಾಕೆಂದರೆ ‘ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನೊಂದಿಗೆ ಮಾಡಿದ ಒಡಂಬಡಿಕೆಯನ್ನು ಬಿಟ್ಟು ತೊಲಗಿದರು. ಅವರನ್ನು ಈಜಿಪ್ಟಿನಿಂದ ಹೊರತರುವಾಗ ಯೆಹೋವನೊಂದಿಗೆ ಮಾಡಿದ ಒಡಂಬಡಿಕೆಯನ್ನು ಅನುಸರಿಸಲಿಲ್ಲ.
ಇಸ್ರೇಲ್ ಜನರು ಅನ್ಯದೇವರುಗಳನ್ನು ಪೂಜಿಸಲು ಪ್ರಾರಂಭಿಸಿದರು. ಅಂಥಾ ದೇವರುಗಳನ್ನು ಅವರು ಹಿಂದೆಂದೂ ಪೂಜಿಸಿರಲಿಲ್ಲ. ಯೆಹೋವನು ಅನ್ಯದೇವತೆಗಳನ್ನು ಪೂಜಿಸಬಾರದು ಎಂದು ಆಜ್ಞಾಪಿಸಿದ್ದರೂ ಅವರು ಅದನ್ನು ಉಲ್ಲಂಘಿಸಿದರು.
“ಯೆಹೋವನು ಕೆಲವು ಸಂಗತಿಗಳನ್ನು ಗುಪ್ತವಾಗಿಟ್ಟಿದ್ದಾನೆ. ಅದು ಆತನಿಗೆ ಮಾತ್ರ ತಿಳಿದದೆ. ಆದರೆ ಪ್ರಕಟಿಸಲ್ಪಟ್ಟಿರುವ ಸಂಗತಿಗಳನ್ನು ನಾವು ಮತ್ತು ನಮ್ಮ ಸಂತತಿಗಳವರು ಮಾತ್ರ ತಿಳಿದಿದ್ದೇವೆ. [*ಆದರೆ …ತಿಳಿದಿದ್ದೇವೆ ಇದು ಈ ಅರ್ಥವನ್ನೂ ಕೊಡಬಲ್ಲದು: “ನಾವು ಕಂಡಿರುವ ಹಿಂದಿನ ಸಂಗತಿಗಳನ್ನು ಮತ್ತು ಈಗ ಸಂಭವಿಸುತ್ತಿರುವ ಸಂಗತಿಗಳನ್ನು ಮಾತ್ರ ನಾವು ತಿಳಿದಿದ್ದೇವೆ.”] ಆ ಬೋಧನೆಗೆ ನಾವು ನಿತ್ಯಕಾಲಕ್ಕೂ ವಿಧೇಯರಾಗುವಂತೆ ಹೇಳಿದ್ದಾನೆ. ಆತನಿಗೆ ವಿಧೇಯರಾಗುವುದು ನಮ್ಮ ಕರ್ತವ್ಯ.