1
|
ದೇವರೇ, ಎದ್ದೇಳು! ನಿನ್ನ ವೈರಿಗಳನ್ನು ಚದರಿಸಿಬಿಡು. ಆತನ ಶತ್ರುಗಳೆಲ್ಲಾ ಆತನಿಗೆ ಬೆಂಗೊಟ್ಟು ಓಡಿಹೋಗಲಿ. |
2
|
ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ ನಿನ್ನ ಶತ್ರುಗಳು ಚದರಿಹೋಗಲಿ. ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ ನಿನ್ನ ಶತ್ರುಗಳು ನಾಶವಾಗಲಿ. |
3
|
ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ; ಅವರು ಉಲ್ಲಾಸಿಸುತ್ತಾ ಸಂತೋಷವಾಗಿರಲಿ! |
4
|
ದೇವರಿಗೆ ಗಾಯನ ಮಾಡಿರಿ; ಆತನ ಹೆಸರನ್ನು ಕೊಂಡಾಡಿರಿ. ಅರಣ್ಯದಲ್ಲಿ ರಥದ ಮೇಲೆ ಸವಾರಿ ಮಾಡುತ್ತಾ ಬರುವಾತನಿಗೆ ಹಾದಿಯನ್ನು ಸಿದ್ಧಗೊಳಿಸಿರಿ. ಆತನ ಹೆಸರು ಯಾಹು. ಆತನ ಹೆಸರನ್ನು ಕೊಂಡಾಡಿರಿ! |
5
|
ದೇವರು ತನ್ನ ಪವಿತ್ರ ಆಲಯದಲ್ಲಿ, ಅನಾಥರಿಗೆ ತಂದೆಯೂ ವಿಧವೆಯರಿಗೆ ಪಾಲಕನೂ ಆಗಿದ್ದಾನೆ. |
6
|
ದೇವರು ಒಬ್ಬಂಟಿಗರಿಗೆ ಸಂಸಾರವನ್ನು ದಯಪಾಲಿಸುವನು. ಆತನು ತನ್ನ ಜನರನ್ನು ಸೆರೆಯಿಂದ ಬಿಡಿಸಿ ಸಂತೋಷಗೊಳಿಸುವನು. ದೇವದ್ರೋಹಿಗಳಾದರೊ ಉರಿಬಿಸಿಲಿನ ಸೆರೆಯಲ್ಲಿ ಉಳಿಯುವರು. |
7
|
ದೇವರೇ, ನಿನ್ನ ಜನರನ್ನು ಈಜಿಪ್ಟಿನಿಂದ ನಡೆಸಿದೆ. ನೀನು ಅರಣ್ಯದಲ್ಲಿ ಅವರ ಮುಂದೆ ಪ್ರಯಾಣ ಮಾಡುತ್ತಿರಲು, |
8
|
ಭೂಮಿಯೇ ಕಂಪಿಸಿತು. ಇಸ್ರೇಲರ ದೇವಾಧಿದೇವನು ಸೀನಾಯಿ ಬೆಟ್ಟಕ್ಕೆ ಬಂದಾಗ ಆಕಾಶವೇ ಕರಗಿಹೋಯಿತು. |
9
|
ದೇವರೇ, ನೀನು ಮಳೆ ಸುರಿಸಿ, ಒಣಗಿ ಕೃಶವಾಗಿದ್ದ ಭೂಮಿಯನ್ನು ಫಲವತ್ತು ಮಾಡಿದೆ. |
10
|
ನಿನ್ನ ಜನರು ಆ ನಾಡಿನಲ್ಲಿ ನೆಲಸಿದರು. ದೇವರೇ, ಅಲ್ಲಿಯ ಬಡಜನರಿಗೆ ನೀನು ಶ್ರೇಷ್ಠವಾದವುಗಳನ್ನೇ ನೀಡಿದೆ. |
11
|
ದೇವರು ಆಜ್ಞಾಪಿಸಲು ಅನೇಕರು ಈ ಸುವಾರ್ತೆಯನ್ನು ಸಾರಲು ಹೋದರು: |
12
|
“ಬಲಿಷ್ಠ ರಾಜರುಗಳ ಸೈನ್ಯಗಳು ಓಡಿಹೋಗುತ್ತಿವೆ! ಸೈನಿಕರು ಯುದ್ಧದಿಂದ ತಂದ ಕೊಳ್ಳೆವಸ್ತುಗಳನ್ನು ಮನೆಯಲ್ಲಿದ್ದ ಸ್ತ್ರೀಯರು ಹಂಚಿಕೊಳ್ಳುವರು. ಕುರಿಹಟ್ಟಿಯೊಳಗೆ ಇದ್ದವರೂ ಐಶ್ವರ್ಯವನ್ನು ಪಾಲುಮಾಡಿಕೊಳ್ಳುವರು. |
13
|
ಬಂಗಾರದ ಗರಿಗಳಿಂದ ಥಳಥಳಿಸುವ ಬೆಳ್ಳಿ ಹೊದಿಸಿರುವ ಪಾರಿವಾಳದ ರೆಕ್ಕೆಗಳನ್ನು ಅವರು ಪಡೆದುಕೊಳ್ಳುವರು.” |
14
|
ಸಲ್ಮೋನ್ ಪರ್ವತದ ಮೇಲೆ ದೇವರು ಶತ್ರು ರಾಜರುಗಳನ್ನು ಚದರಿಸಿಬಿಟ್ಟನು. ಅವರು ಸುರಿಯುತ್ತಿರುವ ಹಿಮದಂತಿದ್ದರು. |
15
|
ಬಾಷಾನ್ ಬೆಟ್ಟವು ಅನೇಕ ಶಿಖರಗಳುಳ್ಳ ಮಹಾಪರ್ವತ. |
16
|
ಬಾಷಾನ್ ಪರ್ವತವೇ, ಚೀಯೋನ್ ಪರ್ವತವನ್ನು ನೀನು ಕೀಳಾಗಿ ಕಾಣುವುದೇಕೆ? ಯೆಹೋವನು ತನಗೆ ಪ್ರಿಯವಾದ ಚೀಯೋನ್ ಪರ್ವತವನ್ನೇ ತನ್ನ ಶಾಶ್ವತ ವಾಸಸ್ಥಾನವಾಗಿ ಆರಿಸಿಕೊಂಡಿದ್ದಾನೆ. |
17
|
ಯೆಹೋವನು ಪವಿತ್ರವಾದ ಚೀಯೋನ್ ಪರ್ವತಕ್ಕೆ ಬರುತ್ತಾನೆ. ಆತನ ಹಿಂದೆ ಆತನ ಲಕ್ಷಾಂತರ ರಥಗಳಿವೆ. |
18
|
ಆತನು ಸೆರೆಯಾಳುಗಳನ್ನು ನಡೆಸಿಕೊಂಡು ಬೆಟ್ಟದ ಮೇಲೇರಿ ಹೋದನು; ತನಗೆ ದ್ರೋಹಮಾಡಿದ ಜನರಿಂದ ಆತನು ಕಷ್ಟಗಳನ್ನು ತೆಗೆದುಕೊಳ್ಳುವನು. ದೇವರಾದ ಯೆಹೋವನು ಮೇಲೇರಿಹೋದದ್ದು ಅಲ್ಲಿ ವಾಸಿಸುವುದಕ್ಕಾಗಿಯೇ. |
19
|
ನಮ್ಮ ಅನುದಿನದ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ! ನಮ್ಮನ್ನು ರಕ್ಷಿಸುವವನು ಆತನೇ. |
20
|
ಆತನೇ ನಮ್ಮ ದೇವರು. ನಮ್ಮನ್ನು ರಕ್ಷಿಸುವ ದೇವರು ಆತನೇ. ನಮ್ಮ ದೇವರಾದ ಯೆಹೋವನು ನಮ್ಮನ್ನು ಮರಣದಿಂದ ರಕ್ಷಿಸುವನು. |
21
|
ದೇವರು ತನ್ನ ವೈರಿಗಳ ಶಿರಸ್ಸುಗಳನ್ನೂ ಪಾಪದಲ್ಲಿ ಜೀವಿಸುವವರ ತಲೆಗಳನ್ನೂ ಜಜ್ಜಿಬಿಡುವನು. |
22
|
ನನ್ನ ಯೆಹೋವನು ಇಂತೆಂದನು: “ನಾನು ಪೂರ್ವ ದಿಕ್ಕಿನಲ್ಲಿರುವ ಬಾಷಾನಿನಿಂದಲೂ ಪಶ್ಚಿಮ ದಿಕ್ಕಿನಿಂದಲೂ ಶತ್ರುವನ್ನು ಹಿಡಿದು ತರುವೆನು. |
23
|
ಆಗ ನೀನು ಅವರ ರಕ್ತದಲ್ಲಿ ಕಾಲಾಡಿಸುವೆ. ನಿನ್ನ ನಾಯಿಗಳು ಅವರ ರಕ್ತವನ್ನು ನೆಕ್ಕುತ್ತವೆ.” |
24
|
ಇಗೋ, ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ. ನನ್ನ ರಾಜನಾದ ಪರಿಶುದ್ಧ ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ. |
25
|
ಮುಂಭಾಗದಲ್ಲಿ ಗಾಯಕರೂ ಹಿಂಭಾಗದಲ್ಲಿ ವಾದ್ಯ ಬಾರಿಸುವವರೂ ಸುತ್ತಲು ದಮ್ಮಡಿ ಬಡಿಯುವ ಯುವತಿಯರು ಹೋಗುತ್ತಿದ್ದಾರೆ. |
26
|
ಮಹಾಸಭೆಯಲ್ಲಿ ದೇವರಿಗೆ ಸ್ತೋತ್ರವಾಗಲಿ! ಇಸ್ರೇಲ್ ಜನರೇ, ಯೆಹೋವನಿಗೆ ಸ್ತೋತ್ರಮಾಡಿರಿ! |
27
|
ಅವರನ್ನು ಮುನ್ನಡೆಸಿಕೊಂಡು ಹೋಗುವವರಲ್ಲಿ ಮೊದಲನೆಯದಾಗಿ ಬೆನ್ಯಾಮೀನನ ಚಿಕ್ಕ ಕುಲವಿದೆ; ಅದರ ನಂತರ ಯೆಹೂದನ ಮಹಾಕುಲವಿದೆ. ಅದರ ನಂತರ ಜೆಬುಲೂನ್ ಮತ್ತು ನಫ್ತಾಲಿ ಕುಲಗಳ ನಾಯಕರು ಇದ್ದಾರೆ. |
28
|
ದೇವರೆ, ನಿನ್ನ ಬಲವನ್ನು ನಮಗೆ ತೋರಿಸು! ಹಿಂದಿನ ಕಾಲದಲ್ಲಿ ನಮಗಾಗಿ ಮಾಡಿದ ಬಲಪ್ರಯೋಗವನ್ನು ನಮಗೆ ತೋರಿಸು. |
29
|
ರಾಜರುಗಳು ತಮ್ಮ ಕಾಣಿಕೆಗಳನ್ನು ತೆಗೆದುಕೊಂಡು ಜೆರುಸಲೇಮಿನ ನಿನ್ನಾಲಯಕ್ಕೆ ಬರುವರು. |
30
|
ಕೋಲಿನಿಂದ ಬಡಿದು ನಿನಗೆ ಬೇಕಾದದ್ದನ್ನೆಲ್ಲಾ ಆ ಪ್ರಾಣಿಗಳಿಂದ ಮಾಡಿಸು. ಆ ಜನಾಂಗಗಳಲ್ಲಿರುವ “ಹೋರಿಗಳು” ಮತ್ತು “ಹಸುಗಳು” ನಿನಗೆ ವಿಧೇಯವಾಗಿರುವಂತೆ ಮಾಡು. ನೀನು ಆ ಜನಾಂಗಗಳನ್ನು ಯುದ್ಧದಲ್ಲಿ ಸೋಲಿಸಿರುವುದರಿಂದ ಅವರು ನಿನಗೆ ಬೆಳ್ಳಿಯನ್ನು ತಂದುಕೊಡುವಂತೆ ಮಾಡು. |
31
|
ಅವರು ಈಜಿಪ್ಟಿನಿಂದ ಐಶ್ವರ್ಯವನ್ನು ನಿನಗೆ ತಂದು ಕೊಡುವಂತೆ ಮಾಡು. ದೇವರೇ, ಇಥಿಯೋಪಿಯದವರು ತಮ್ಮ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು. |
32
|
ಭೂರಾಜರುಗಳೇ, ದೇವರಿಗೆ ಗಾಯನ ಮಾಡಿರಿ! ನಮ್ಮ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿರಿ! |
33
|
ದೇವರಿಗೆ ಗಾಯನ ಮಾಡಿರಿ! ಅನಾದಿಕಾಲದಿಂದಿರುವ ಆತನು ಮಹೋನ್ನತವಾದ ಆಕಾಶದಲ್ಲಿ ರಥಾಶ್ವರೂಢನಾಗಿ ಸವಾರಿ ಮಾಡುವನು. ಆತನ ಗರ್ಜನೆಗೆ ಕಿವಿಗೊಡಿರಿ! |
34
|
ದೇವರ ಬಲವನ್ನು ಕೊಂಡಾಡಿರಿ. ಆತನ ಗಾಂಭೀರ್ಯವು ಇಸ್ರೇಲರ ಆಶ್ರಯವಾಗಿದೆ. ಆತನ ಶಕ್ತಿಯು ಆಕಾಶಗಳಲ್ಲಿ ವ್ಯಾಪಿಸಿದೆ. |
35
|
ದೇವರೇ, ನಿನ್ನ ಪರಿಶುದ್ಧಾಲಯದಲ್ಲಿರುವ ನೀನು ಅದ್ಭುತ ಸ್ವರೂಪನಾಗಿರುವೆ. ಇಸ್ರೇಲರ ದೇವರು ತನ್ನ ಜನರಿಗೆ ಬಲವನ್ನೂ ಶಕ್ತಿಯನ್ನೂ ದಯಪಾಲಿಸುವನು. ದೇವರಿಗೆ ಸ್ತೋತ್ರ! |
Psalms 68:1 Kannada Language Bible Words basic statistical display
COMING SOON ...