1
|
ಒಂದು ದಿವ್ಯ ವಿಷಯವನ್ನು ಹೇಳಲು ನನ್ನ ಹೃದಯವು ತವಕಪಡುತ್ತದೆ; ನನ್ನ ರಾಜನನ್ನು ಕುರಿತು ಸುಂದರವಾದ ಗೀತೆಯೊಂದನ್ನು ರಚಿಸುವೆ. ನನ್ನ ನಾಲಿಗೆಯು ಕವಿಯ ಲೇಖನಿಯಂತೆ ಸಿದ್ಧವಾಗಿವೆ. |
2
|
ನೀನು ಎಲ್ಲರಿಗಿಂತಲೂ ಅತಿಸುಂದರನಾಗಿರುವೆ. ನಿನ್ನ ಮಾತುಗಳು ಮನೋಹರವಾಗಿವೆ. ದೇವರ ಆಶೀರ್ವಾದವು ನಿನ್ನ ಮೇಲೆ ಸದಾಕಾಲವಿರುವುದು. |
3
|
ನಿನ್ನ ಖಡ್ಗವನ್ನು ಕಟ್ಟಿಕೋ. ನಿನ್ನ ಮಹಿಮಾವಸ್ತ್ರವನ್ನು ಧರಿಸಿಕೋ. |
4
|
ನೀನು ವೈಭವಯುತವಾಗಿ ಕಾಣುತ್ತಿರುವೆ! ಒಳ್ಳೆಯದಕ್ಕಾಗಿಯೂ ನ್ಯಾಯಕ್ಕಾಗಿಯೂ ಹೋರಾಡಿ ಗೆಲ್ಲು. ಶಕ್ತಿಯುತವಾದ ನಿನ್ನ ಬಲತೋಳಿನಿಂದ ಮಹತ್ಕಾರ್ಯಗಳನ್ನು ಮಾಡು. |
5
|
ನಿನ್ನ ಬಾಣಗಳು ತೀಕ್ಷ್ಣವಾಗಿವೆ. ಅವು ನಿನ್ನ ಶತ್ರುಗಳ ಎದೆಗೆ ನಾಟಿಕೊಳ್ಳುತ್ತವೆ; ಶತ್ರುಗಳು ನಿನ್ನ ಕಣ್ಣೆದುರಿನಲ್ಲೆ ನೆಲಕ್ಕುರುಳುವರು. |
6
|
ದೇವರೇ, ನಿನ್ನ ಸಿಂಹಾಸನವು ಶಾಶ್ವತವಾದದ್ದು. ಒಳ್ಳೆಯತನವು ನಿನ್ನ ರಾಜದಂಡವಾಗಿದೆ. |
7
|
ನೀನು ನೀತಿಯನ್ನು ಪ್ರೀತಿಸುವೆ; ದುಷ್ಟತನವನ್ನು ದ್ವೇಷಿಸುವೆ. ಆದ್ದರಿಂದ ನಿನ್ನ ದೇವರಾಗಿರುವಾತನು ನಿನ್ನನ್ನು ನಿನ್ನ ಸ್ನೇಹಿತರಿಗೆ ರಾಜನನ್ನಾಗಿ ಆರಿಸಿಕೊಂಡಿದ್ದಾನೆ. |
8
|
ನಿನ್ನ ಬಟ್ಟೆಗಳು ಪರಿಮಳ ದ್ರವ್ಯಗಳಾದ ಗೋಲರಸ, ಅಗರು ಮತ್ತು ಚಂದನಗಳಿಂದ ಕೂಡಿವೆ. ಗಜದಂತದಿಂದ ಶೃಂಗರಿಸಿರುವ ಅರಮನೆಗಳಲ್ಲಿ ನಿನ್ನನ್ನು ಸಂತೋಷಪಡಿಸಲು ವಾದ್ಯಗಳನ್ನು ನುಡಿಸುವರು. |
9
|
ನಿನ್ನ ಸ್ತ್ರೀಪರಿವಾರದಲ್ಲಿರುವವರು ರಾಜಕುಮಾರಿಯರೇ, ನಿನ್ನ ಪಟ್ಟದರಾಣಿಯು ಓಫೀರ್ ದೇಶದ ಬಂಗಾರದಿಂದ ಮಾಡಿದ ಕಿರೀಟವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿರುವಳು. |
10
|
ರಾಣಿಯೇ, ನನಗೆ ಕಿವಿಗೊಡು. ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ. ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು. |
11
|
ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು. ಅವನು ನಿನಗೆ ಹೊಸ ಯಜಮಾನನಾಗಿರುವನು. ಆದ್ದರಿಂದ ನೀನು ಅವನನ್ನು ಗೌರವಿಸಬೇಕು. |
12
|
ತೂರ್ ಪಟ್ಟಣದ ಶ್ರೀಮಂತರು ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು. |
13
|
ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು; ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ. |
14
|
ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು. |
15
|
ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು. |
16
|
ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು; ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ. |
17
|
ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು; ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು. |
Psalms 45:1 Kannada Language Bible Words basic statistical display
COMING SOON ...