Indian Language Bible Word Collections
Psalms 106:9
Psalms Chapters
Psalms 106 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Psalms Chapters
Psalms 106 Verses
1
ಯೆಹೋವನನ್ನು ಸ್ತುತಿಸಿರಿ! ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಪ್ರೀತಿಯು ಶಾಶ್ವತವಾದದ್ದು!
2
ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು; ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
3
ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ! ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.
4
ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು. ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
5
ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ. ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು. ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.
6
ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು. ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
7
ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ. ಕೆಂಪು ಸಮುದ್ರದ ಬಳಿಯಲ್ಲಿ ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.
8
ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು; ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
9
ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು. ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10
ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು! ವೈರಿಗಳಿಂದ ಪಾರುಮಾಡಿದನು!
11
ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು. ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!
12
ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು ನಂಬಿ ಆತನನ್ನು ಸಂಕೀರ್ತಿಸಿದರು.
13
ಆದರೆ ಆತನ ಕಾರ್ಯಗಳನ್ನು ಅವರು ಬೇಗನೆ ಮರೆತುಬಿಟ್ಟರು; ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
14
ನಮ್ಮ ಪೂರ್ವಿಕರು ಮರಳುಗಾಡಿನಲ್ಲಿ ಆಶಾತುರರಾಗಿ ಆತನನ್ನು ಪರೀಕ್ಷಿಸಿದರು.
15
ಆತನು ಅವರ ಆಸೆಯನ್ನು ಪೂರೈಸಿದರೂ ಅವರಿಗೆ ಭಯಂಕರವಾದ ರೋಗವನ್ನು ಬರಮಾಡಿದನು.
16
ಅವರು ಮೋಶೆಯ ಮೇಲೆಯೂ ಯೆಹೋವನ ಪವಿತ್ರ ಯಾಜಕನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
17
ಭೂಮಿಯು ಬಾಯ್ದೆರೆದು ಹೊಟ್ಟೆಕಿಚ್ಚುಪಟ್ಟ ದಾತಾನನನ್ನೂ ಅಬಿರಾಮನ ಪಂಗಡದವರನ್ನೂ ನುಂಗಿಬಿಟ್ಟಿತು.
18
ಬಳಿಕ ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು; ಅಗ್ನಿಜ್ವಾಲೆಯು ಆ ದುಷ್ಟರನ್ನು ದಹಿಸಿಬಿಟ್ಟಿತು.
19
ಹೋರೇಬ್ ಬೆಟ್ಟದ ಬಳಿಯಲ್ಲಿ ಅವರು ಚಿನ್ನದ ಬಸವನನ್ನು ಮಾಡಿ ಅದಕ್ಕೆ ಅಡ್ಡಬಿದ್ದರು.
20
ಹುಲ್ಲುತ್ತಿನ್ನುವ ಹೋರಿಯ ಮೂರ್ತಿಗಾಗಿ ಅವರು ಮಹಿಮಾಸ್ವರೂಪನಾದ ದೇವರನ್ನೇ ಮಾರಿಬಿಟ್ಟರು!
21
ಆತನು ನಮ್ಮ ಪೂರ್ವಿಕರನ್ನು ರಕ್ಷಿಸಿದರೂ ಅವರು ಆತನನ್ನು ಮರೆತುಬಿಟ್ಟರು! ಈಜಿಪ್ಟಿನಲ್ಲಿ ಮಹತ್ಕಾರ್ಯಗಳನ್ನು ಮಾಡಿದ ದೇವರನ್ನು ಅವರು ಮರೆತುಬಿಟ್ಟರು.
22
ಆತನು ಹಾಮನ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದನು. ಆತನು ಕೆಂಪು ಸಮುದ್ರದ ಸಮೀಪದಲ್ಲಿ ಭಯಂಕರವಾದ ಕಾರ್ಯಗಳನ್ನು ಮಾಡಿದನು!
23
ಆತನು ಅವರನ್ನು ನಾಶಮಾಡಬೇಕೆಂದಿದ್ದನು. ಆದರೆ ಆತನು ಆರಿಸಿಕೊಂಡಿದ್ದ ಮೋಶೆಯು ಮಧ್ಯಸ್ಥನಾಗಿ ಅವರನ್ನು ನಾಶಮಾಡದಂತೆ ಆತನ ಕೋಪವನ್ನು ಶಾಂತಪಡಿಸಿದನು.
24
ಬಳಿಕ ಅವರು ರಮಣೀಯವಾದ ಕಾನಾನ್ ದೇಶಕ್ಕೆ ಹೋಗಲು ಒಪ್ಪಲಿಲ್ಲ. ಅಲ್ಲಿಯ ನಿವಾಸಿಗಳನ್ನು ಸೋಲಿಸಲು ಆತನು ತಮಗೆ ಸಹಾಯ ಮಾಡುತ್ತಾನೆಂಬ ನಂಬಿಕೆ ಅವರಲ್ಲಿರಲಿಲ್ಲ.
25
ನಮ್ಮ ಪೂರ್ವಿಕರು ತಮ್ಮತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ದೇವರ ಮಾತಿಗೆ ವಿಧೇಯರಾಗಲಿಲ್ಲ.
26
ಆದ್ದರಿಂದ ಅವರು ಅರಣ್ಯದಲ್ಲಿ ಸಾಯುವುದಾಗಿ ದೇವರು ಪ್ರಮಾಣ ಮಾಡಿದನು.
27
ಅವರ ಸಂತತಿಗಳವರು ಬೇರೆಯವರಿಂದ ಸೋಲಿಸಲ್ಪಡುವುದಾಗಿ ಆತನು ಪ್ರಮಾಣ ಮಾಡಿದನು. ನಮ್ಮ ಪೂರ್ವಿಕರನ್ನು ಜನಾಂಗಗಳ ಮಧ್ಯೆ ಚದರಿಸುವುದಾಗಿ ಆತನು ಪ್ರಮಾಣ ಮಾಡಿದನು.
28
ಬಳಿಕ ಬಾಳ್ ಪೆಗೋರಿನಲ್ಲಿ ದೇವಜನರು ಬಾಳನನ್ನು ಪೂಜಿಸಲು ಸೇರಿಕೊಂಡರು. ಜೀವವಿಲ್ಲದ ವಿಗ್ರಹಗಳಿಗೆ ಅರ್ಪಿಸಿದ ಮಾಂಸವನ್ನು ದೇವಜನರು ತಿಂದರು. [*ಜೀವವಿಲ್ಲದ … ತಿಂದರು “ಸತ್ತವರಿಗೆ ಅರ್ಪಿಸಿದ ಮಾಂಸವನ್ನು ದೇವಜನರು ತಿಂದರು.”]
29
ಯೆಹೋವನು ತನ್ನ ಜನರ ಮೇಲೆ ಬಹು ಕೋಪಗೊಂಡು ಅವರಿಗೆ ಭಯಂಕರವಾದ ಕಾಯಿಲೆಯನ್ನು ಬರಮಾಡಿದನು.
30
ಆದರೆ ಫೀನೆಹಾಸನು ಎದ್ದು ಅವರನ್ನು ದಂಡಿಸಲು ಆತನು (ಯೆಹೋವನು) ಆ ಕಾಯಿಲೆಯನ್ನು ನಿಲ್ಲಿಸಿದನು.
31
ಫೀನೆಹಾಸನ ಈ ಕಾರ್ಯವು ಅವನನ್ನು ತಲೆತಲೆಮಾರುಗಳವರೆಗೂ ನೀತಿವಂತನನ್ನಾಗಿ ಮಾಡಿತು.
32
ಮೆರೀಬಾದಲ್ಲಿ ಜನರು ಮತ್ತೆ ಆತನನ್ನು ರೇಗಿಸಿದರು. ಅವರ ದೆಸೆಯಿಂದ ಮೋಶೆಗೆ ಕೇಡಾಯಿತು.
33
ಅವರು ಆತನಿಗೆ (ದೇವಾರಾತ್ಮನಿಗೆ) ವಿರೋಧವಾಗಿ ನಿಂತರು. ಇದರಿಂದ ಬೇಸರಗೊಂಡಿದ್ದ ಮೋಶೆಯು ದುಡುಕಿ ಮಾತಾಡಿದನು.
34
ಕಾನಾನಿನಲ್ಲಿ ವಾಸವಾಗಿದ್ದ ಅನ್ಯ ಜನಾಂಗಗಳನ್ನು ನಾಶಮಾಡಲು ಯೆಹೋವನು ಅವರಿಗೆ ಹೇಳಿದನು. ಆದರೆ ಇಸ್ರೇಲರು ದೇವರಿಗೆ ವಿಧೇಯರಾಗಲಿಲ್ಲ.
35
ಅವರು ಬೇರೆಯವರೊಂದಿಗೆ ಸೇರಿಕೊಂಡು ಅವರ ದುರಾಚಾರಗಳನ್ನೇ ಮಾಡಿದರು.
36
ಅವರು ದೇವಜನರಿಗೆ ಉರುಲಿನಂತಾದರು. ಅವರ ದೇವರುಗಳನ್ನು ದೇವಜನರು ಪೂಜಿಸತೊಡಗಿದರು.
37
ದೇವಜನರು ತಮ್ಮ ಸ್ವಂತ ಮಕ್ಕಳನ್ನೂ ಆ ದೆವ್ವಗಳಿಗೆ ಅರ್ಪಿಸಿದರು.
38
ದೇವಜನರು ನಿರಪರಾಧಿಗಳಾದ ತಮ್ಮ ಮಕ್ಕಳನ್ನು ಆ ಸುಳ್ಳುದೇವರುಗಳಿಗೆ ಅರ್ಪಿಸಿದರು.
39
ತಮ್ಮ ಪಾಪಕೃತ್ಯಗಳಿಂದ ದೇವಜನರು ಮಲಿನಗೊಂಡರು. ಅವರು ದೇವರಿಗೆ ಅಪನಂಬಿಗಸ್ತರಾಗಿ ಅನ್ಯಜನರು ಮಾಡಿದವುಗಳನ್ನು ಮಾಡಿದರು.
40
ಆತನು ತನ್ನ ಜನರ ಮೇಲೆ ಕೋಪಗೊಂಡನು; ಅವರ ವಿಷಯದಲ್ಲಿ ಬೇಸರಗೊಂಡನು!
41
ಆತನು ತನ್ನ ಜನರನ್ನು ಅನ್ಯಜನಾಂಗಗಳಿಗೆ ಒಪ್ಪಿಸಿದನು; ಅವರ ಮೇಲೆ ದೊರೆತನ ಮಾಡುವಂತೆ ವೈರಿಗಳಿಗೆ ಅವರನ್ನು ಬಿಟ್ಟುಕೊಟ್ಟನು.
42
ಶತ್ರುಗಳು ಅವರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ಅವರ ಜೀವಿತವನ್ನು ಸಂಕಷ್ಟಕ್ಕೆ ಗುರಿಮಾಡಿದರು.
43
ಆತನು ತನ್ನ ಜನರನ್ನು ಅನೇಕ ಸಲ ರಕ್ಷಿಸಿದರೂ ಅವರು ಆತನಿಗೆ ವಿರೋಧವಾಗಿ ತಿರುಗಿ ತಮ್ಮ ಇಷ್ಟಾನುಸಾರವಾಗಿ ಮಾಡಿದರು. ಅವರು ಅನೇಕಾನೇಕ ಕೆಟ್ಟಕಾರ್ಯಗಳನ್ನು ಮಾಡಿದರು.
44
ಆದರೆ ಅವರು ಆಪತ್ತಿನಲ್ಲಿದ್ದಾಗಲೆಲ್ಲಾ ದೇವರಿಗೆ ಮೊರೆಯಿಟ್ಟರು; ಆತನು ಅವರ ಪ್ರಾರ್ಥನೆಗಳಿಗೆ ಸದುತ್ತರವನ್ನು ದಯಪಾಲಿಸಿದನು.
45
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಂಡನು. ತನ್ನ ಮಹಾಪ್ರೀತಿಯಿಂದ ಅವರನ್ನು ಸಂತೈಸಿದನು.
46
ಅನ್ಯ ಜನಾಂಗಗಳು ಆತನ ಜನರನ್ನು ಸೆರೆಯಾಳುಗಳನ್ನಾಗಿ ಎಳೆದೊಯ್ದರು. ಅನ್ಯಜನಾಂಗಗಳು ತನ್ನ ಜನರಿಗೆ ದಯೆತೋರುವಂತೆ ಆತನು ಮಾಡಿದನು.
47
ನಮ್ಮ ದೇವರಾದ ಯೆಹೋವನು ನಮ್ಮನ್ನು ರಕ್ಷಿಸಿದನು! ಅನ್ಯಜನಾಂಗಗಳಿಂದ ನಮ್ಮನ್ನು ಬಿಡಿಸಿಕೊಂಡು ಬಂದನು. ಆಗ ನಾವು ಆತನ ಪವಿತ್ರ ಹೆಸರನ್ನು ಕೊಂಡಾಡುವುದಕ್ಕೂ ಆತನನ್ನು ಸಂಕೀರ್ತಿಸುವುದಕ್ಕೂ ಸಾಧ್ಯವಾಯಿತು.
48
ಇಸ್ರೇಲಿನ ದೇವರಾದ ಯೆಹೋವನನ್ನು ಕೊಂಡಾಡಿರಿ. ಆತನು ಯಾವಾಗಲೂ ಇದ್ದವನೂ ಎಂದೆಂದಿಗೂ ಇರುವಾತನೂ ಆಗಿದ್ದಾನೆ. “ಆಮೆನ್! ಯೆಹೋವನಿಗೆ ಸ್ತೋತ್ರವಾಗಲಿ!” ಎಂದು ಜನರೆಲ್ಲರೂ ಹೇಳಿದರು.