Bible Languages

Indian Language Bible Word Collections

Bible Versions

Books

Matthew Chapters

Matthew 6 Verses

Bible Versions

Books

Matthew Chapters

Matthew 6 Verses

1 “ಎಚ್ಚರವಾಗಿರಿ! ನೀವು ಒಳ್ಳೆಯ ಕಾರ್ಯಗಳನ್ನು ಜನರ ಮುಂದೆ ಮಾಡಬೇಡಿ. ಜನರು ನೋಡಲೆಂದು ನೀವು ಅವುಗಳನ್ನು ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರೆಯುವುದಿಲ್ಲ.
2 “ನೀವು ಬಡಜನರಿಗೆ ಮಾಡುವ ದಾನವನ್ನು ಪ್ರಕಟಿಸಬೇಡಿ. ನೀವು ಕಪಟಿಗಳಂತೆ ಮಾಡಕೂಡದು. ತಾವು ಮಾಡುವ ದಾನವನ್ನು ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ತುತ್ತೂರಿ ಊದಿಸುತ್ತಾರೆ. ಜನರಿಂದ ಗೌರವ ಪಡೆಯಬೇಕೆಂಬುದೇ ಅವರ ಉದ್ದೇಶ.
3 ಆದ್ದರಿಂದ ನೀವು ಬಡಜನರಿಗೆ ಕೊಡುವಾಗ ಬಹಳ ಗುಟ್ಟಾಗಿ ಕೊಡಿ. ನೀವು ಮಾಡುವಂಥದ್ದು ಯಾರಿಗೂ ತಿಳಿಯದಿರಲಿ.
4 ನೀವು ದಾನವನ್ನು ರಹಸ್ಯವಾಗಿ ಕೊಡಬೇಕು. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆ ನಿಮಗೆ ಪ್ರತಿಫಲ ಕೊಡುವನು.
5 “ನೀವು ಪ್ರಾರ್ಥಿಸುವಾಗ ಕಪಟಿಗಳ ಹಾಗೆ ಪ್ರಾರ್ಥಿಸಬೇಡಿ. ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಯ ಮೂಲೆಗಳಲ್ಲಿ ನಿಂತುಕೊಂಡು ಗಟ್ಟಿಯಾಗಿ ಪ್ರಾರ್ಥಿಸಲು ಇಷ್ಟಪಡುತ್ತಾರೆ. ತಾವು ಪ್ರಾರ್ಥಿಸುವುದನ್ನು ಜನರು ನೋಡಬೇಕೆಂಬುದೇ ಅವರ ಬಯಕೆ. ಅವರು ಆಗಲೇ ಅದರ ಪೂರ್ಣ ಪ್ರತಿಫಲವನ್ನು ಹೊಂದಿಕೊಂಡಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
6 ನೀವು ಪ್ರಾರ್ಥನೆ ಮಾಡಬೇಕಾದರೆ, ನಿಮ್ಮ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ನಿಮಗೆ ಕಾಣದಿರುವ ನಿಮ್ಮ ತಂದೆಗೆ ಪ್ರಾರ್ಥಿಸಿ. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುವನು.
7 “ನೀವು ಪ್ರಾರ್ಥಿಸುವಾಗ ದೇವರನ್ನು ತಿಳಿದಿಲ್ಲದ ಜನರಂತೆ ಪ್ರಾರ್ಥಿಸಬೇಡಿ. ಅವರು ಅರ್ಥವಿಲ್ಲದ ಸಂಗತಿಗಳನ್ನು ಹೇಳುತ್ತಲೇ ಇರುತ್ತಾರೆ. ಆ ರೀತಿ ಪ್ರಾರ್ಥಿಸಬೇಡಿ. ತಾವು ಅನೇಕ ವಿಷಯಗಳನ್ನು ಹೇಳುವುದರಿಂದ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬುದು ಅವರ ಆಲೋಚನೆ.
8 ನೀವು ಅವರಂತಾಗಬೇಡಿ. ನೀವು ಕೇಳುವುದಕ್ಕೆ ಮೊದಲೇ ನಿಮಗೆ ಏನೇನು ಬೇಕು ಎಂಬುದು ನಿಮ್ಮ ತಂದೆಗೆ ತಿಳಿದಿದೆ.
9 ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ: ‘ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ಹೆಸರು ಪರಿಶುದ್ಧವಾಗಿರಲಿ.
10 ನಿನ್ನ ರಾಜ್ಯ ಬರಲಿ. ನಿನ್ನ ಚಿತ್ತ ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.
11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.
12 ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆಯೆ ನಮ್ಮ ಪಾಪಗಳನ್ನು ಕ್ಷಮಿಸು.
13 ನಮ್ಮನ್ನು ಶೋಧನೆಗೆ ಒಳಪಡಿಸದೆ ಕೆಡುಕನಿಂದ (ಸೈತಾನನಿಂದ) ನಮ್ಮನ್ನು ರಕ್ಷಿಸು.’
14 ಹೌದು, ಬೇರೆಯವರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ.
15 ಆದರೆ ಜನರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸದಿದ್ದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.
16 “ನೀವು ಉಪವಾಸ ಮಾಡುವಾಗ ನಿಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿ. ಕಪಟಿಗಳು ಹಾಗೆ ಮಾಡುತ್ತಾರೆ. ಆದರೆ ನೀವು ಕಪಟಿಗಳಂತಿರಬೇಡಿ. ತಾವು ಉಪವಾಸ ಮಾಡುತ್ತಿರುವುದಾಗಿ ಜನರಿಗೆ ತೋರ್ಪಡಿಸಿಕೊಳ್ಳಲು ಅವರು ತಮ್ಮ ಮುಖಗಳನ್ನು ವಿಕಾರ ಮಾಡಿಕೊಳ್ಳುತ್ತಾರೆ. ಆ ಕಪಟಿಗಳು ತಮಗೆ ಬರತಕ್ಕ ಪ್ರತಿಫಲವನ್ನು ಸಂಪೂರ್ಣವಾಗಿ ಹೊಂದಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
17 ಆದ್ದರಿಂದ ನೀವು ಉಪವಾಸ ಮಾಡುವಾಗ, ಮುಖವನ್ನು ತೊಳೆದುಕೊಳ್ಳಿರಿ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿರಿ.
18 ಆಗ ನೀವು ಉಪವಾಸ ಮಾಡುತ್ತಿದ್ದೀರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದರೆ ನಿಮಗೆ ಅಗೋಚರವಾಗಿರುವ ನಿಮ್ಮ ತಂದೆಯು ನಿಮ್ಮನ್ನು ನೋಡುತ್ತಾನೆ. ರಹಸ್ಯದಲ್ಲಿ ನಡೆಯುವ ಸಂಗತಿಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುತ್ತಾನೆ.
19 “ನಿಮಗೋಸ್ಕರ ಈ ಭೂಮಿಯ ಮೇಲೆ ಭಂಡಾರಗಳನ್ನು ಮಾಡಿಕೊಳ್ಳಬೇಡಿ. ಅವು ಕಿಲುಬುಹತ್ತಿ ಹಾಳಾಗುತ್ತವೆ. ಕಳ್ಳರು ನಿಮ್ಮ ಮನೆಯೊಳಗೆ ಕನ್ನಕೊರೆದು ನಿಮ್ಮಲ್ಲಿರುವುದನ್ನು ಕದಿಯಬಲ್ಲರು.
20 ಆದ್ದರಿಂದ ನಿಮ್ಮ ಭಂಡಾರಗಳನ್ನು ಪರಲೋಕದಲ್ಲಿ ಮಾಡಿಟ್ಟುಕೊಳ್ಳಿ. ಅಲ್ಲಿ ಅವುಗಳಿಗೆ ನುಸಿ ಹಿಡಿಯುವುದಿಲ್ಲ. ಕಿಲುಬುಹತ್ತುವುದಿಲ್ಲ. ಕಳ್ಳರು ಕನ್ನಕೊರೆದು ಕದಿಯುವುದಿಲ್ಲ.
21 ನಿಮ್ಮ ಭಂಡಾರ ಎಲ್ಲಿರುವುದೋ ಅಲ್ಲೇ ನಿಮ್ಮ ಮನಸ್ಸಿರುವುದು.
22 “ಕಣ್ಣು ಶರೀರಕ್ಕೆ ಬೆಳಕಾಗಿದೆ. ನಿನ್ನ ಕಣ್ಣು ಸರಿಯಿದ್ದರೆ, ನಿನ್ನ ದೇಹವೆಲ್ಲಾ ಬೆಳಕಿನಿಂದ ಕೂಡಿರುವುದು.
23 ಆದರೆ ನಿನ್ನ ಕಣ್ಣು ಕೆಟ್ಟಿದ್ದರೆ, ನಿನ್ನ ಶರೀರವೆಲ್ಲ ಕತ್ತಲೆಯಿಂದ (ಪಾಪದಿಂದ) ತುಂಬಿರುವದು. ನಿನ್ನಲ್ಲಿರುವ ಒಂದೇ ಬೆಳಕು ನಿಜವಾಗಿಯೂ ಕತ್ತಲಾದರೆ, ಆಗ ನೀನು ಕಗ್ಗತ್ತಲಲ್ಲಿರುವೆ.
24 “ಯಾವನೂ ಇಬ್ಬರು ಯಜಮಾನರಿಗೆ ಒಂದೇ ಸಮಯದಲ್ಲಿ ಸೇವೆ ಮಾಡಲಾರನು. ಅವನು ಒಬ್ಬ ಯಜಮಾನನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುತ್ತಾನೆ ಅಥವಾ ಒಬ್ಬ ಯಜಮಾನನನ್ನು ಹಿಂಬಾಲಿಸಿ ಮತ್ತೊಬ್ಬನನ್ನು ತಾತ್ಸಾರ ಮಾಡುತ್ತಾನೆ. ಆದ್ದರಿಂದ ನೀನು ದೇವರಿಗೆ ಮತ್ತು ಹಣಕ್ಕೆ ಒಂದೇ ಸಮಯದಲ್ಲಿ ಸೇವೆ ಮಾಡಲಾರೆ.
25 “ಆದ್ದರಿಂದ ನಿಮ್ಮ ಪ್ರಾಣಧಾರಣೆಗೆ ಬೇಕಾದ ಆಹಾರಕ್ಕಾಗಲಿ ದೇಹಕ್ಕೆ ಬೇಕಾದ ಬಟ್ಟೆಗಾಗಲಿ ನೀವು ಚಿಂತಿಸಬಾರದು. ಪ್ರಾಣವು ಆಹಾರಕ್ಕಿಂತಲೂ ದೇಹವು ಬಟ್ಟೆಗಿಂತಲೂ ಬಹಳ ಮುಖ್ಯವಾದದ್ದೆಂದು ನಾನು ನಿಮಗೆ ಹೇಳುತ್ತೇನೆ.
26 ಪಕ್ಷಿಗಳ ಕಡೆಗೆ ನೋಡಿ. ಅವು ಬಿತ್ತುವುದಿಲ್ಲ ಕೊಯ್ಯುವುದಿಲ್ಲ ಇಲ್ಲವೇ ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ. ಆದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳಿಗೆ ಆಹಾರವನ್ನು ನೀಡುತ್ತಾನೆ. ನೀವು ಆ ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರೆಂಬುದು ನಿಮಗೆ ಗೊತ್ತಿದೆ.
27 ನೀವು ಚಿಂತಿಸುವುದರಿಂದ ನಿಮ್ಮ ಆಯುಷ್ಯು ಹೆಚ್ಚೇನೂ ಆಗುವುದಿಲ್ಲ.
28 “ಬಟ್ಟೆಗಾಗಿ ಚಿಂತಿಸುವುದೇಕೆ? ಹೊಲದಲ್ಲಿರುವ ಹೂವುಗಳನ್ನು ನೋಡಿ. ಅವು ಬೆಳೆಯುವ ಬಗೆಯನ್ನು ಗಮನಿಸಿ. ಅವು ದುಡಿಯುವುದಿಲ್ಲ ಅಥವಾ ತಮಗಾಗಿ ಬಟ್ಟೆಗಳನ್ನು ನೇಯುವುದಿಲ್ಲ.
29 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಸೊಲೊಮೋನನು ತನ್ನ ವೈಭವದಿಂದ ಇದ್ದಾಗಲೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಸೌಂದರ್ಯವುಳ್ಳ ಬಟ್ಟೆಗಳನ್ನು ಧರಿಸಲಿಲ್ಲ.
30 ಬಯಲಿನಲ್ಲಿರುವ ಹುಲ್ಲಿಗೂ ದೇವರು ಹಾಗೆ ಹೊದಿಸುತ್ತಾನೆ. ಹುಲ್ಲಾದರೊ ಈ ಹೊತ್ತು ಇದ್ದು ನಾಳೆ ಬೆಂಕಿಯ ಪಾಲಾಗುತ್ತದೆ. ಆದ್ದರಿಂದ ದೇವರು ನಿಮಗೆ ಎಷ್ಟೋ ಹೆಚ್ಚಾಗಿ ತೊಡಿಸುತ್ತಾನೆಂದು ನಿಮಗೆ ಗೊತ್ತಿದೆ. ಅಲ್ಪವಿಶ್ವಾಸಿಗಳಾಗಿರಬೇಡಿ!
31 “ನಾವು ಏನು ತಿನ್ನಬೇಕು? ಏನು ಕುಡಿಯಬೇಕು? ಏನನ್ನು ಧರಿಸಬೇಕು?’ ಎಂದು ಚಿಂತಿಸಬೇಡಿ.
32 ದೇವರನ್ನು ತಿಳಿಯದ ಜನರೆಲ್ಲರೂ ಇವುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಚಿಂತಿಸಬೇಡಿರಿ, ಏಕೆಂದರೆ ಈ ವಸ್ತುಗಳು ನಿಮಗೆ ಅಗತ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.
33 ಆದ್ದರಿಂದ ನೀವು ದೇವರ ರಾಜ್ಯಕ್ಕಾಗಿ ಮತ್ತು ಆತನ ಚಿತ್ತಕ್ಕನುಸಾರವಾಗಿ ಕಾರ್ಯಗಳನ್ನು ಮಾಡಲು ಬಹಳ ತವಕ ಪಡಬೇಕು. ಆಗ ನಿಮಗೆ ಅಗತ್ಯವಾದ ಉಳಿದವುಗಳನ್ನು ಸಹ ಕೊಡಲಾಗುವುದು.
34 ಆದ್ದರಿಂದ ನಾಳೆಗಾಗಿ ಚಿಂತಿಸಬೇಡಿ. ಪ್ರತಿದಿನವು ತನ್ನದೇ ಆದ ಎಷ್ಟೋ ಕಷ್ಟಗಳನ್ನು ಹೊಂದಿರುತ್ತದೆ. ನಾಳೆಯು ಸಹ ತನ್ನದೇ ಆದ ಚಿಂತೆಗಳನ್ನು ಹೊಂದಿದೆ.

Matthew 6:34 Kannada Language Bible Words basic statistical display

COMING SOON ...

×

Alert

×