English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Matthew Chapters

Matthew 15 Verses

1 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಯೇಸುವಿನ ಬಳಿಗೆ ಬಂದು,
2 “ನಮ್ಮ ಪೂರ್ವಿಕರಿಂದ ಬಂದ ಸಂಪ್ರದಾಯಗಳಿಗೆ ನಿನ್ನ ಶಿಷ್ಯರು ಏಕೆ ವಿಧೇಯರಾಗಿರುವುದಿಲ್ಲ? ನಿನ್ನ ಶಿಷ್ಯರು ಊಟ ಮಾಡುವುದಕ್ಕೆ ಮುಂಚೆ ಕೈ ತೊಳೆಯುವುದಿಲ್ಲವೇಕೆ?” ಎಂದು ಕೇಳಿದರು.
3 ಯೇಸು, “ನಿಮ್ಮ ಸಂಪ್ರದಾಯಗಳನ್ನು ಅನುಸರಿಸಲು ದೇವರ ಆಜ್ಞೆಗೆ ಅವಿಧೇಯರಾಗುವುದೇಕೆ?
4 ‘ನಿಮ್ಮ ತಂದೆತಾಯಿಗಳಿಗೆ ಗೌರವ ನೀಡಿ’ [✡ಉಲ್ಲೇಖನ: ವಿಮೋಚನ. 20:12; ಧರ್ಮೋಪದೇಶ. 5:16.] ಎಂಬುದು ದೇವರ ಆಜ್ಞೆ. ‘ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೀನೈಸಿದರೆ ಅವನನ್ನು ಕೊಲ್ಲಬೇಕು’ [✡ಉಲ್ಲೇಖನ: ವಿಮೋಚನ. 21:17.] ಎಂಬುದೂ ದೇವರ ಆಜ್ಞೆ.
5 ಆದರೆ ಒಬ್ಬ ವ್ಯಕ್ತಿಯು ತನ್ನ ತಂದೆಗಾಗಲಿ ತಾಯಿಗಾಗಲಿ ‘ನಿಮಗೆ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ, ಏಕೆಂದರೆ ನನ್ನಲ್ಲಿರುವ ಪ್ರತಿಯೊಂದು ದೇವರಿಗೆ ಪ್ರತಿಷ್ಠಿತವಾಗಿದೆ’ ಎಂದು ಹೇಳಿದರೆ,
6 ಅವನು ತನ್ನ ತಂದೆಯನ್ನು ಗೌರವಿಸಬೇಕಿಲ್ಲ ಎಂದು ನೀವು ಬೋಧಿಸುತ್ತೀರಿ. ಹೀಗಿರಲು ನಿಮ್ಮ ಸಂಪ್ರದಾಯವೇ ದೇವರ ಆಜ್ಞೆಯನ್ನು ತಳ್ಳಿಹಾಕಿದೆ.
7 ನೀವು ಕಪಟಿಗಳು. ಯೆಶಾಯನು ನಿಮ್ಮನ್ನು ಕುರಿತು ಸರಿಯಾಗಿ ಹೇಳಿದ್ದಾನೆ. ಅದೇನೆಂದರೆ:
8 ‘ಇವರು ನನ್ನನ್ನು ಮಾತಿನಿಂದ ಗೌರವಿಸುತ್ತಾರೆ. ಇವರ ಮನಸ್ಸಾದರೋ ನನಗೆ ದೂರವಾಗಿದೆ.
9 ಇವರು ನನ್ನನ್ನು ಆರಾಧಿಸುವುದೂ ನಿರರ್ಥಕ. ಇವರು ಮನುಷ್ಯರ ಕಟ್ಟಳೆಗಳನ್ನೇ ಉಪದೇಶಿಸುತ್ತಾರೆ.’ ” ಯೆಶಾಯ 29:13]
10 ಯೇಸು ಜನರನ್ನು ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಆಲಿಸಿರಿ ಮತ್ತು ಅರ್ಥಮಾಡಿಕೊಳ್ಳಿರಿ.
11 ಒಬ್ಬನು ಕಲುಷಿತನಾಗುವುದು ತನ್ನ ಬಾಯಿಂದ ತಿನ್ನುವ ಪದಾರ್ಥಗಳಿಂದಲ್ಲ. ಅವನ ಬಾಯಿಂದ ಬರುವ ಕೆಟ್ಟಮಾತುಗಳೇ ಅವನನ್ನು ಕಲುಷಿತಗೊಳಿಸುತ್ತವೆ” ಎಂದು ಹೇಳಿದನು.
12 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಹೇಳಿದ್ದನ್ನು ಕೇಳಿ ಫರಿಸಾಯರು ಬೇಸರಗೊಂಡದ್ದು ನಿನಗೆ ತಿಳಿಯಿತೋ?” ಎಂದು ಕೇಳಿದರು.
13 ಯೇಸು, “ಪರಲೋಕದಲ್ಲಿರುವ ನನ್ನ ತಂದೆ ನೆಡದಿರುವ ಪ್ರತಿಯೊಂದು ಗಿಡವನ್ನು ಬೇರಿನೊಂದಿಗೆ ಕಿತ್ತುಹಾಕಲಾಗುವುದು.
14 ಫರಿಸಾಯರಿಂದ ದೂರವಾಗಿರಿ. ಅವರೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಹಳ್ಳದಲ್ಲಿ ಬೀಳುವರು” ಎಂದು ಉತ್ತರಕೊಟ್ಟನು.
15 ಆಗ ಪೇತ್ರನು, “ನೀನು ಜನರಿಗೆ ಮೊದಲು ಹೇಳಿದ್ದನ್ನು ನಮಗೆ ವಿವರಿಸು” ಎಂದನು.
16 ಯೇಸು, “ನಿಮಗೆ ಇನ್ನೂ ಅರ್ಥವಾಗುವುದಿಲ್ಲವೇ?
17 ಒಬ್ಬ ಮನುಷ್ಯನ ಬಾಯಿಂದ ಆಹಾರ ಹೊಟ್ಟೆಯೊಳಕ್ಕೆ ಹೋಗುತ್ತದೆ. ನಂತರ ಅದು ದೇಹದಿಂದ ಹೊರಗೆ ಹೋಗಿಬಿಡುತ್ತದೆ. ಇದು ನಿಮಗೆ ತಿಳಿದೇ ಇದೆ.
18 ಆದರೆ ಒಬ್ಬ ಮನುಷ್ಯನ ಬಾಯಿಂದ ಹೊರಡುವ ಕೆಟ್ಟಮಾತುಗಳು ಅವನ ಆಲೋಚನೆಯಿಂದ ಉದ್ಭವಿಸಿ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ.
19 ಮನುಷ್ಯನ ಮನಸ್ಸಿನಲ್ಲಿ ದುರಾಲೋಚನೆ, ಕೊಲೆ, ವ್ಯಭಿಚಾರ, ಸೂಳೆಗಾರಿಕೆ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ಬೈಗಳು ಹೊರಟುಬರುತ್ತವೆ.
20 ಇವು ಮನುಷ್ಯನನ್ನು ಅಶುದ್ಧನನ್ನಾಗಿ ಮಾಡುತ್ತವೆ. ಆದರೆ ಊಟಕ್ಕೆ ಮೊದಲು ಕೈತೊಳೆಯದ ಮಾತ್ರಕ್ಕೆ ಮನುಷ್ಯನೇನೂ ಅಶುದ್ಧನಾಗುವುದಿಲ್ಲ” ಎಂದು ಹೇಳಿದನು.
21 ಯೇಸು ಆ ಸ್ಥಳವನ್ನು ಬಿಟ್ಟು, ಟೈರ್ ಮತ್ತು ಸೀದೋನ್‌ಗಳ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು.
22 ಆ ಸ್ಥಳದಿಂದ ಕಾನಾನ್ಯಳಾದ ಒಬ್ಬ ಸ್ತ್ರೀ ಯೇಸುವಿನ ಬಳಿಗೆ ಬಂದು, “ಪ್ರಭುವೇ, ದಾವೀದನ ಮಗನೇ, ದಯವಿಟ್ಟು ನನಗೆ ಕರುಣೆ ತೋರು! ನನ್ನ ಮಗಳಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಆಕೆ ಬಹಳ ಸಂಕಟಪಡುತ್ತಿದ್ದಾಳೆ” ಎಂದು ಗಟ್ಟಿಯಾಗಿ ಕೂಗಿಕೊಂಡಳು.
23 ಆದರೆ ಯೇಸು ಆ ಸ್ತ್ರೀಗೆ ಉತ್ತರ ಕೊಡಲಿಲ್ಲ. ಆದ್ದರಿಂದ ಶಿಷ್ಯರು ಯೇಸುವಿನ ಬಳಿಗೆ ಬಂದು, “ಆ ಸ್ತ್ರೀಗೆ ಹೊರಟುಹೋಗುವುದಕ್ಕೆ ಹೇಳು. ಆಕೆಯು ಕೂಗಿಕೊಂಡು ನಮ್ಮ ಹಿಂದೆಯೇ ಬರುತ್ತಿದ್ದಾಳೆ” ಎಂದು ಕೇಳಿಕೊಂಡರು.
24 ಯೇಸು, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಮಾತ್ರ ದೇವರು ನನ್ನನ್ನು ಕಳುಹಿಸಿದನು” ಎಂದನು.
25 ಆಗ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನನಗೆ ಸಹಾಯ ಮಾಡು” ಎಂದು ಕೇಳಿದಳು.
26 ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.
27 ಆ ಸ್ತ್ರೀಯು, “ಹೌದು ಪ್ರಭುವೇ, ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ಆಹಾರದ ತುಂಡುಗಳನ್ನು ತಿನ್ನುತ್ತವೆಯಲ್ಲಾ” ಎಂದಳು.
28 ಆಗ ಯೇಸು, “ಅಮ್ಮಾ, ನಿನ್ನ ನಂಬಿಕೆ ದೊಡ್ಡದು. ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ” ಎಂದನು. ಆ ಕ್ಷಣದಲ್ಲೇ ಆಕೆಯ ಮಗಳು ಗುಣವಾದಳು.
29 ಆಗ ಯೇಸು ಆ ಸ್ಥಳವನ್ನು ಬಿಟ್ಟು ಗಲಿಲಾಯ ಸರೋವರದ ದಡಕ್ಕೆ ಹೋಗಿ ಒಂದು ಬೆಟ್ಟದ ಮೇಲೆ ಕುಳಿತುಕೊಂಡನು.
30 ಜನರು ಗುಂಪುಗುಂಪಾಗಿ ಯೇಸುವಿನ ಬಳಿಗೆ ಬಂದರು. ಅವರು ಅನೇಕ ಬಗೆಯ ಕಾಯಿಲೆಯವರನ್ನು ಕರೆದುತಂದು, ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಅಲ್ಲಿ ಅಂಗವಿಕಲರು, ಕುರುಡರು, ಕುಂಟರು, ಕಿವುಡರು ಮತ್ತು ಇತರ ಅನೇಕ ಜನರಿದ್ದರು. ಆತನು ಇವರನ್ನೆಲ್ಲರನ್ನು ಗುಣಪಡಿಸಿದನು.
31 ಮೂಕರು ಮತ್ತೆ ಮಾತಾಡುವುದನ್ನೂ ಕುಂಟರು ನಡೆದಾಡುವುದನ್ನೂ ಅಂಗವಿಕಲರು ಸ್ವಸ್ಥರಾದದ್ದನ್ನೂ ಕುರುಡರಿಗೆ ಮತ್ತೆ ದೃಷ್ಟಿ ಬಂದದ್ದನ್ನೂ ಕಂಡು ಜನರೆಲ್ಲರೂ ಅತ್ಶಾಶ್ಚರ್ಯಪಟ್ಟು ಇಸ್ರೇಲರ ದೇವರನ್ನು ಕೊಂಡಾಡಿದರು.
32 ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ದುಃಖಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಈಗ ಇವರಿಗೆ ಊಟಕ್ಕೆ ಏನೂ ಇಲ್ಲ. ಇವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಮನಸ್ಸಿಲ್ಲ. ಇವರು ಮನೆಗೆ ಹೋಗುತ್ತಿರುವಾಗ ಬಳಲಿಹೋಗಬಹುದು” ಎಂದು ಹೇಳಿದನು.
33 ಶಿಷ್ಯರು ಯೇಸುವಿಗೆ, “ಈ ಜನರೆಲ್ಲರಿಗೂ ಊಟಕ್ಕೆ ಬೇಕಾಗುವಷ್ಟು ರೊಟ್ಟಿ ನಮಗೆ ಎಲ್ಲಿ ಸಿಕ್ಕುತ್ತದೆ? ಇಲ್ಲಿಗೆ ಯಾವ ಊರೂ ಸಮೀಪವಾಗಿಲ್ಲ” ಎಂದು ಹೇಳಿದರು.
34 ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದನು. ಶಿಷ್ಯರು, “ನಮ್ಮಲ್ಲಿ ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳಿವೆ” ಎಂದರು.
35 ಆಗ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವುದಕ್ಕೆ ಆತನು ಆಜ್ಞಾಪಿಸಿ,
36 ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅವುಗಳನ್ನು ಜನರಿಗೆ ಹಂಚಿದರು.
37 ಜನರೆಲ್ಲರೂ ತಿಂದು ತೃಪ್ತರಾದರು. ಬಳಿಕ ತಿನ್ನಲಾರದೆ ಉಳಿದುಹೋದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು.
38 ಅಂದು ಊಟ ಮಾಡಿದ್ದವರಲ್ಲಿ ಗಂಡಸರೇ ಸುಮಾರು ನಾಲ್ಕುಸಾವಿರ ಮಂದಿಯಿದ್ದರು. ಇವರಲ್ಲದೆ ಹೆಂಗಸರು ಮತ್ತು ಮಕ್ಕಳು ಸಹ ಊಟಮಾಡಿದರು.
39 ಬಳಿಕ ಯೇಸು ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಅವರಿಗೆ ಹೇಳಿ ಕಳುಹಿಸಿದನು. ಅನಂತರ ದೋಣಿಯನ್ನು ಹತ್ತಿ ಮಗದಾನ್ ಎಂಬ ಪ್ರಾಂತ್ಯಕ್ಕೆ ಹೋದನು.
×

Alert

×