1
|
ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಬಂದರು. ಅವರು ಯೇಸುವಿನ ಸುತ್ತಲೂ ಒಟ್ಟಿಗೆ ಸೇರಿದರು. |
2
|
ಯೇಸುವಿನ ಶಿಷ್ಯರಲ್ಲಿ ಕೆಲವರು ಕೈಗಳನ್ನು ತೊಳೆಯದೆ ಅಶುದ್ಧವಾದ ಕೈಗಳಿಂದ ಊಟ ಮಾಡುತ್ತಿರುವುದನ್ನು ಫರಿಸಾಯರು ಮತ್ತು ಧರ್ಮೋಪದೇಶಕರು ನೋಡಿದರು. |
3
|
ಫರಿಸಾಯರು ಮತ್ತು ಇತರ ಯೆಹೂದ್ಯರೆಲ್ಲರೂ ಸಂಪ್ರದಾಯದಂತೆ ಕೈಗಳನ್ನು ತೊಳೆಯದೆ ಊಟಮಾಡುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಆಚಾರಗಳನ್ನು ಅನುಸರಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. |
4
|
ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು. |
5
|
ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ನಮ್ಮ ಪಿತೃಗಳ ಸಂಪ್ರದಾಯವನ್ನು ನಿನ್ನ ಶಿಷ್ಯರು ಅನುಸರಿಸದೆ ಅಶುದ್ಧವಾದ ಕೈಗಳಿಂದ ಆಹಾರವನ್ನು ತಿನ್ನುವುದೇಕೆ?” ಎಂದು ಕೇಳಿದರು. |
6
|
ಯೇಸು, “ನೀವೆಲ್ಲ ಕಪಟಿಗಳು. ನಿಮ್ಮ ಬಗ್ಗೆ ಯೆಶಾಯನು ಸರಿಯಾಗಿ ಹೇಳಿದ್ದಾನೆ: ‘ನನ್ನನ್ನು ಗೌರವಿಸುವುದಾಗಿ ಈ ಜನರು ಹೇಳುತ್ತಾರೆ, ಆದರೆ ಇವರ ಹೃದಯಗಳು ನನ್ನಿಂದ ಬಹುದೂರವಾಗಿವೆ. |
7
|
ಇವರು ನನ್ನನ್ನು ಆರಾಧಿಸುವುದು ಕೇವಲ ವ್ಯರ್ಥ. ಏಕೆಂದರೆ ಮಾನವ ನಿಯಮಗಳನ್ನೇ ಇವರು ಬೋಧಿಸುತ್ತಾರೆ.’ ಯೆಶಾಯ 29:13 |
8
|
ನೀವು ದೇವರ ಆಜ್ಞೆಗಳಿಗೆ ವಿಧೇಯರಾಗದೆ ಜನರ ಸಂಪ್ರದಾಯಗಳನ್ನು ಅನುಸರಿಸುತ್ತಿರುವಿರಿ” ಎಂದು ಹೇಳಿದನು. |
9
|
ನಂತರ ಯೇಸು ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದರಲ್ಲಿ ನಿಪುಣರಾಗಿದ್ದೀರಿ! |
10
|
‘ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ’ ಎಂತಲೂ ‘ಯಾವ ವ್ಯಕ್ತಿಯಾದರೂ ತನ್ನ ತಂದೆತಾಯಿಗಳಿಗೆ ಕೆಟ್ಟದ್ದನ್ನು ನುಡಿದರೆ ಅವನಿಗೆ ಮರಣದಂಡನೆ ಆಗಬೇಕು’ ಎಂತಲೂ ಮೋಶೆಯು ಹೇಳಿದ್ದಾನೆ. |
11
|
ಆದರೆ ನೀವು ಹೇಳುವುದೇನೆಂದರೆ, ಒಬ್ಬನು ತನ್ನ ತಂದೆತಾಯಿಗಳಿಗೆ, ‘ನಿಮ್ಮ ಸಹಾಯಕ್ಕಾಗಿ ನಾನು ಕೊಡತಕ್ಕದ್ದನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ ಎಂದು ಹೇಳಬಹುದು’ ಎಂದು ಬೋಧಿಸಿ, |
12
|
ತನ್ನ ತಂದೆತಾಯಿಗಳಿಗೆ ಸಹಾಯಮಾಡದಂತೆ ಅವನನ್ನು ತಡೆಗಟ್ಟುತ್ತೀರಿ. |
13
|
ಹೀಗಿರಲು ದೇವರ ಆಜ್ಞೆಯನ್ನು ಅನುಸರಿಸುವುದಕ್ಕಿಂತಲೂ ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದೇ ಬಹಳ ಮುಖ್ಯವೆಂದು ನೀವು ಬೋಧಿಸಿದಂತಾಯಿತು. ಇಂಥ ಅನೇಕ ಕಾರ್ಯಗಳನ್ನು ನೀವು ಮಾಡುತ್ತೀರಿ” ಎಂದು ಹೇಳಿದನು. |
14
|
ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. |
15
|
ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. |
16
|
[This verse may not be a part of this translation] |
17
|
ನಂತರ ಯೇಸು ಜನರನ್ನು ಅಲ್ಲೇ ಬಿಟ್ಟು ಮನೆಯೊಳಕ್ಕೆ ಹೋದನು. ಶಿಷ್ಯರು ಈ ಕಥೆಯ ಬಗ್ಗೆ ಯೇಸುವನ್ನು ಕೇಳಿದರು. |
18
|
ಯೇಸು, “ನಿಮಗೂ ಅರ್ಥವಾಗುವುದಿಲ್ಲವೇ? ಒಬ್ಬ ವ್ಯಕ್ತಿಯ ಒಳಗೆ ಹೋಗುವ ಯಾವ ಪದಾರ್ಥವೂ ಅವನನ್ನು ಅಶುದ್ಧನನ್ನಾಗಿ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ. |
19
|
ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ . ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.) |
20
|
ಇದಲ್ಲದೆ ಯೇಸು ಅವರಿಗೆ, “ಒಬ್ಬ ಮನುಷ್ಯನಿಂದ ಹೊರಬರುವ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. |
21
|
ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, |
22
|
ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. |
23
|
ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. |
24
|
ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. |
25
|
ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. |
26
|
ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು. |
27
|
ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು. |
28
|
ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ? ಎಂದು ಉತ್ತರಕೊಟ್ಟಳು. |
29
|
ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ.” ಎಂದು ಹೇಳಿದನು. |
30
|
ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟು ಹೋಗಿತ್ತು. |
31
|
ನಂತರ ಯೇಸು ಟೈರ್ ಪಟ್ಟಣದ ಆ ಪ್ರದೇಶವನ್ನು ಬಿಟ್ಟು ಸಿದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲಾಯ ಸರೋವರಕ್ಕೆ ಹೋದನು. |
32
|
ಆತನು ಅಲ್ಲಿದ್ದಾಗ, ಕೆಲವರು ಕಿವುಡನೂ ತೊದಲನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ಕರೆದುತಂದು ಅವನ ಮೇಲೆ ಕೈಯಿಟ್ಟು ಗುಣಪಡಿಸಬೇಕೆಂದು ಬೇಡಿಕೊಂಡರು. |
33
|
ಯೇಸು ಅವನನ್ನು ಜನರಿಂದ ಸ್ವಲ್ಪ ದೂರ ತನ್ನೊಂದಿಗೆ ಕರೆದೊಯ್ದು ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದನು. |
34
|
ಬಳಿಕ ಆಕಾಶದ ಕಡೆಗೆ ನೋಡಿ, ನಿಟ್ಟುಸಿರು ಬಿಟ್ಟು, “ಎಪ್ಫಥಾ” ಎಂದು ಹೇಳಿದನು. (ಎಪ್ಫಥಾ ಎಂದರೆ “ತೆರೆಯಲಿ”) |
35
|
ಆಗ ಅವನ ಕಿವಿಗಳು ತೆರೆದವು. ನಾಲಿಗೆ ಸಡಿಲಗೊಂಡಿತು. ಅವನು ಸ್ಪಷ್ಟವಾಗಿ ಮಾತಾಡಿದನು. |
36
|
ಈ ಸಂಗತಿಯನ್ನು ತಿಳಿಸಕೂಡದೆಂದು ಯೇಸು ಜನರಿಗೆ ಆಜ್ಞಾಪಿಸಿದನು. ತನ್ನ ಬಗ್ಗೆ ಇತರ ಜನರಿಗೆ ತಿಳಿಸಕೂಡದಂತೆ ಯೇಸು ಯಾವಾಗಲೂ ಆಜ್ಞಾಪಿಸುತ್ತಿದ್ದನು. ಆದರೂ ಜನರು ಆತನ ಬಗ್ಗೆ ಇನ್ನೂ ಹೆಚ್ಚಾಗಿ ಹಬ್ಬಿಸಿದರು. |
37
|
ಜನರು ನಿಜವಾಗಿಯೂ ಅತ್ಯಾಶ್ಚರ್ಯಗೊಂಡು, “ಯೇಸು ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಮಾಡುತ್ತಾನೆ. ಆತನು ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುತ್ತಾನೆ. ಮೂಕರು ಮಾತಾಡುವಂತೆ ಮಾಡುತ್ತಾನೆ” ಎಂದು ಹೇಳಿದರು. |
Mark 7:2 Kannada Language Bible Words basic statistical display
COMING SOON ...