Bible Languages

Indian Language Bible Word Collections

Bible Versions

Books

Mark Chapters

Mark 10 Verses

Bible Versions

Books

Mark Chapters

Mark 10 Verses

1 ನಂತರ ಯೇಸು ಆ ಸ್ಥಳವನ್ನು ಬಿಟ್ಟು ಜುದೇಯ ಪ್ರಾಂತ್ಯಕ್ಕೆ ಹಾಗೂ ಜೋರ್ಡನ್ ನದಿಯ ಆಚೆದಡಕ್ಕೆ ಹೋದನು. ಅನೇಕ ಜನರು ಮತ್ತೆ ಆತನ ಬಳಿಗೆ ಬಂದರು. ಯೇಸು ಎಂದಿನಂತೆ ಆ ಜನರಿಗೆ ಉಪದೇಶಿಸಿದನು.
2 ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ಪರೀಕ್ಷಿಸಲು, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.
3 ಯೇಸು, “ಮೋಶೆ ನಿಮಗೆ ಏನು ಆಜ್ಞಾಪಿಸಿದ್ದಾನೆ?” ಎಂದು ಉತ್ತರಿಸಿದನು.
4 ಫರಿಸಾಯರು, “ಒಬ್ಬನು ತನ್ನ ಹೆಂಡತಿಗೆ ವಿಚ್ಛೇದನ ಪತ್ರ ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದಾನೆ” ಎಂದರು.
5 ಯೇಸು, “ನಿಮ್ಮ ಮೊಂಡುತನದ ನಿಮಿತ್ತ ಮೋಶೆಯು ನಿಮಗೆ ಆ ಆಜ್ಞೆಯನ್ನು ಕೊಟ್ಟನು.
6 ಆದರೆ ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ನಿರ್ಮಿಸಿದನು.’
7 ‘ಆದಕಾರಣ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.
8 ಮತ್ತು ಅವರಿಬ್ಬರು ಒಂದೇ ಶರೀರವಾಗುವರು.’ ಆದ್ದರಿಂದ ಅವರು ಇಬ್ಬರಲ್ಲ, ಒಬ್ಬರೇ.
9 ಹೀಗಿರಲು ದೇವರು ಸೇರಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.
10 ಶಿಷ್ಯರು ಮತ್ತು ಯೇಸು ಒಂದು ಮನೆಯಲ್ಲಿದ್ದಾಗ, ವಿವಾಹವಿಚ್ಛೇದನ ಪ್ರಶ್ನೆಯ ಬಗ್ಗೆ ಶಿಷ್ಯರು ಯೇಸುವನ್ನು ಮತ್ತೆ ಕೇಳಿದರು.
11 ಅದಕ್ಕೆ ಯೇಸು, “ತನ್ನ ಹೆಂಡತಿಯನ್ನು ಬಿಟ್ಟು, ಬೇರೆ ಸ್ತ್ರೀಯನ್ನು ಮದುವೆಯಾಗುವವನು ತನ್ನ ಹೆಂಡತಿಗೆ ದ್ರೋಹಮಾಡಿ ವ್ಯಭಿಚಾರಿಯಾಗಿದ್ದಾನೆ.
12 ತನ್ನ ಗಂಡನಿಗೆ ವಿಚ್ಛೇದನಪತ್ರ ಕೊಟ್ಟು ಬೇರೆ ಪುರುಷನನ್ನು ಮದುವೆಯಾಗುವ ಸ್ತ್ರೀಯೂ ವ್ಯಭಿಚಾರಿಣಿಯಾಗಿದ್ದಾಳೆ” ಎಂದು ಉತ್ತರಿಸಿದನು.
13 ಜನರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಆಶೀರ್ವದಿಸಲೆಂದು ಅವರನ್ನು ಯೇಸುವಿನ ಬಳಿಗೆ ತಂದರು. ಆದರೆ ಮಕ್ಕಳನ್ನು ಯೇಸುವಿನ ಬಳಿಗೆ ತರಕೂಡದೆಂದು ಶಿಷ್ಯರು ಜನರನ್ನು ಗದರಿಸಿದರು.
14 ಇದನ್ನು ಕಂಡ ಯೇಸು ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರನ್ನು ತಡೆಯಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರದೇ.
15 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ದೇವರ ರಾಜ್ಯವನ್ನು ಮಕ್ಕಳ ಮನೋಭಾವದಿಂದ ಸ್ವೀಕರಿಸದಿದ್ದರೆ ನೀವು ಅದರೊಳಗೆ ಸೇರುವುದೇ ಇಲ್ಲ” ಎಂದು ಹೇಳಿದನು.
16 ನಂತರ ಯೇಸು ಮಕ್ಕಳನ್ನು ತನ್ನ ಕೈಗಳಿಂದ ಅಪ್ಪಿಕೊಂಡು ಅವರ ಮೇಲೆ ತನ್ನ ಕೈಗಳನ್ನಿಟ್ಟು ಆಶೀರ್ವದಿಸಿದನು.
17 ಯೇಸು ಅಲ್ಲಿಂದ ಹೊರಡಬೇಕೆಂದಿದ್ದಾಗ ಒಬ್ಬನು ಓಡಿಬಂದು, ಆತನ ಮುಂದೆ ತನ್ನ ಮೊಣಕಾಲೂರಿ, “ಒಳ್ಳೆಯ ಉಪದೇಶಕನೇ, ನಿತ್ಯಜೀವವನ್ನು ಪಡೆಯಲು ನಾನು ಏನು ಮಾಡಬೇಕು?” ಎಂದು ಕೇಳಿದನು.
18 ಯೇಸು ಅದಕ್ಕೆ, “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ಯಾವ ಮನುಷ್ಯನೂ ಒಳ್ಳೆಯವನಲ್ಲ. ದೇವರು ಮಾತ್ರ ಒಳ್ಳೆಯವನು.
19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’ ಎಂದು ಉತ್ತರಿಸಿದನು.
20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.
21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
22 ಯೇಸುವಿನ ಈ ಮಾತನ್ನು ಕೇಳಿ ಅವನು ನಿರಾಶೆಯಿಂದ ದುಃಖಗೊಂಡು ಹೊರಟುಹೋದನು. ಬಹಳ ಧನವಂತನಾಗಿದ್ದ ಅವನು ತನ್ನ ಅಪಾರ ಆಸ್ತಿಯನ್ನು ಮಾರಲು ಇಷ್ಟಪಡಲಿಲ್ಲ.
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, “ಧನವಂತನು ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ” ಎಂದನು.
24 ಯೇಸುವಿನ ಈ ಮಾತನ್ನು ಕೇಳಿ ಶಿಷ್ಯರು ಬೆರಗಾದರು. ಆದರೆ ಯೇಸು ಮತ್ತೆ, “ನನ್ನ ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ!
25 ಶ್ರೀಮಂತರು ದೇವರ ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
26 ಶಿಷ್ಯರು ಇನ್ನೂ ಬೆರಗಾಗಿ, ಒಬ್ಬರಿಗೊಬ್ಬರು, “ಹಾಗಾದರೆ ರಕ್ಷಣೆಹೊಂದಲು ಯಾರಿಗೆ ಸಾಧ್ಯ?” ಎಂದು ಮಾತಾಡಿಕೊಂಡರು.
27 ಯೇಸು ಶಿಷ್ಯರ ಕಡೆಗೆ ನೋಡಿ, “ಇದು ಮನುಷ್ಯರಿಗಷ್ಟೇ ಅಸಾಧ್ಯ, ದೇವರಿಗಲ್ಲ” ಎಂದನು.
28 ಪೇತ್ರನು ಯೇಸುವಿಗೆ, “ನಿನ್ನನ್ನು ಹಿಂಬಾಲಿಸಲು ನಾವು ಎಲ್ಲವನ್ನೂ ತ್ಯಜಿಸಿದೆವು!” ಎಂದನು.
29 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನಗಾಗಿ ಮತ್ತು ಸುವಾರ್ತೆಗಾಗಿ ತನ್ನ ಮನೆಯನ್ನಾಗಲಿ ಸಹೋದರರನ್ನಾಗಲಿ ಸಹೋದರಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ತ್ಯಜಿಸಿದ ಪ್ರತಿಯೊಬ್ಬ ವ್ಯಕ್ತಿಯೂ
30 ನೂರರಷ್ಟು ಹೆಚ್ಚಾಗಿ ಪಡೆಯುತ್ತಾನೆ. ಈ ಪ್ರಪಂಚದಲ್ಲಿ ಅವನು ಅನೇಕ ಮನೆಗಳನ್ನು, ಸಹೋದರರನ್ನು, ಸಹೋದರಿಯರನ್ನು, ತಾಯಂದಿರನ್ನು, ಮಕ್ಕಳನ್ನು ಮತ್ತು ಭೂಮಿಯನ್ನು ಹಿಂಸೆಗಳೊಂದಿಗೆ ಪಡೆದುಕೊಳ್ಳುವನು. ಅಲ್ಲದೆ ಬರಲಿರುವ ಲೋಕದಲ್ಲಿ ಅವನು ನಿತ್ಯಜೀವವನ್ನೂ ಹೊಂದಿಕೊಳ್ಳುವನು.
31 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು” ಎಂದು ಹೇಳಿದನು.
32 ಯೇಸು ಮತ್ತು ಆತನ ಜೊತೆಯಲ್ಲಿದ್ದ ಜನರು ಜೆರುಸಲೇಮಿಗೆ ಹೋಗುತ್ತಿರಲು ಯೇಸು ಅವರೆಲ್ಲರಿಗಿಂತ ಮುಂದೆ ಹೋಗುತ್ತಿದ್ದನು. ಅದನ್ನು ನೋಡಿ ಯೇಸುವಿನ ಶಿಷ್ಯರು ಬೆರಗಾದರು. ಅವರನ್ನು ಹಿಂಬಾಲಿಸಿ ಬರುತ್ತಿದ್ದ ಜನರು ಭಯಗೊಂಡರು. ಯೇಸು ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು, ಜೆರುಸಲೇಮಿನಲ್ಲಿ ತನಗೆ ಸಂಭವಿಸಲಿರುವುದನ್ನು ಅವರಿಗೆ ಹೇಳುತ್ತಾ,
33 “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೂ ಧರ್ಮೋಪದೇಶಕರಿಗೂ ಒಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆ ವಿಧಿಸಿ ಯೆಹೂದ್ಯರಲ್ಲದ ಜನರಿಗೆ ಒಪ್ಪಿಸುತ್ತಾರೆ.
34 ಆ ಜನರು ಆತನನ್ನು ನೋಡಿ ಅಪಹಾಸ್ಯ ಮಾಡುತ್ತಾರೆ, ಆತನ ಮೇಲೆ ಉಗುಳುತ್ತಾರೆ, ಆತನನ್ನು ಬಾರುಕೋಲಿನಿಂದ ಹೊಡೆಯುತ್ತಾರೆ ಮತ್ತು ಕೊಲ್ಲುತ್ತಾರೆ. ಆದರೆ ಆತನು ಮೂರನೆಯ ದಿನದಂದು ಮತ್ತೆ ಜೀವಂತವಾಗಿ ಎದ್ದು ಬರುತ್ತಾನೆ” ಎಂದು ತಿಳಿಸಿದನು.
35 ನಂತರ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮ ಒಂದು ಕೋರಿಕೆಯನ್ನು ನೀನು ನಡೆಸಿಕೊಡಬೇಕು” ಎಂದರು.
36 ಯೇಸು, “ನಿಮ್ಮ ಯಾವ ಕೋರಿಕೆಯನ್ನು ನಡೆಸಿಕೊಡಬೇಕು?” ಎಂದು ಕೇಳಿದನು.
37 ಅವರು, “ನೀನು ನಿನ್ನ ರಾಜ್ಯದಲ್ಲಿ ವೈಭವದಿಂದಿರುವಾಗ ನಮ್ಮಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ಅನುಗ್ರಹಿಸು” ಎಂದು ಉತ್ತರಿಸಿದರು.
38 ಯೇಸು, “ನೀವು ಏನು ಕೇಳುತ್ತಿದ್ದೀರಿ ಎಂಬುದು ನಿಮಗೆ ತಿಳಿದಿಲ್ಲ. ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ಕುಡಿಯಲು ನಿಮಗೆ ಸಾಧ್ಯವೇ? ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವು ಹೊಂದಲು ಸಾಧ್ಯವೇ?” ಎಂದನು.
39 ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಿಸಿದರು. ಯೇಸು ಅವರಿಗೆ, “ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ನೀವು ಕುಡಿಯುವಿರಿ. ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ.
40 ಆದರೆ ನನ್ನ ಎಡಗಡೆ ಅಥವಾ ಬಲಗಡೆ ಕುಳಿತುಕೊಳ್ಳುವ ವ್ಯಕ್ತಿಯನ್ನು ಆರಿಸುವವನು ನಾನಲ್ಲ. ಆ ಸ್ಥಳಗಳನ್ನು ಯಾರಿಗಾಗಿ ಸಿದ್ಧಪಡಿಸಲಾಗಿದೆಯೋ ಅವರಿಗಾಗಿಯೇ ಅವುಗಳನ್ನು ಕಾದಿರಿಸಲಾಗಿದೆ” ಎಂದನು.
41 ಉಳಿದ ಹತ್ತು ಜನ ಶಿಷ್ಯರು ಇದನ್ನು ಕೇಳಿ ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು.
42 ಯೇಸು ಎಲ್ಲಾ ಶಿಷ್ಯರನ್ನು ಒಟ್ಟಾಗಿ ಕರೆದು, “ಯೆಹೂದ್ಯರಲ್ಲದವರು ಅಧಿಪತಿಗಳನ್ನು ಹೊಂದಿದ್ದಾರೆ. ಆ ಅಧಿಪತಿಗಳು ಜನರ ಮೇಲೆ ತಮಗಿರುವ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆಂಬುದು ನಿಮಗೆ ತಿಳಿದಿದೆ. ಅವರ ಪ್ರಮುಖ ನಾಯಕರುಗಳು ಜನರ ಮೇಲೆ ತಮಗಿರುವ ಅಧಿಕಾರವನ್ನೆಲ್ಲಾ ಉಪಯೋಗಿಸಲು ಇಷ್ಟಪಡುತ್ತಾರೆ.
43 ಆದರೆ ನೀವು ಅವರಂತಾಗಬಾರದು.
44 ನಿಮ್ಮಲ್ಲಿ ಪ್ರಮುಖನಾಗಬೇಕೆಂದು ಬಯಸುವವನು ಸೇವಕನಂತೆ ಮತ್ತು ಗುಲಾಮನಂತೆ ನಿಮ್ಮೆಲ್ಲರ ಸೇವೆಮಾಡಬೇಕು.
45 ಅದೇ ರೀತಿ ಮನುಷ್ಯಕುಮಾರನು ಜನರಿಂದ ಸೇವೆ ಮಾಡಿಸಿಕೊಳ್ಳಲು ಬರದೆ, ಜನರ ಸೇವೆಮಾಡಲು ಬಂದನು. ಮನುಷ್ಯಕುಮಾರನು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು.
46 ನಂತರ ಅವರು ಜೆರಿಕೊ ಎಂಬ ಊರಿಗೆ ಬಂದರು. ಯೇಸು ತನ್ನ ಶಿಷ್ಯರೊಂದಿಗೆ ಮತ್ತು ಇತರ ಅನೇಕ ಜನರೊಂದಿಗೆ ಆ ಊರನ್ನು ಬಿಟ್ಟು ಹೊರಟಿದ್ದನು. ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದನು.
47 ನಜರೇತಿನ ಯೇಸು ಆ ಮಾರ್ಗವಾಗಿ ಹೋಗುತ್ತಿದ್ದಾನೆಂದು ಅವನು ಕೇಳಿ, “ಯೇಸುವೇ, ದಾವೀದನ ಕುಮಾರನೇ, ದಯವಿಟ್ಟು ನನ್ನನ್ನು ಕರುಣಿಸು!” ಎಂದು ಗಟ್ಟಿಯಾಗಿ ಕೂಗಿದನು.
48 ಅನೇಕ ಜನರು ಆ ಕುರುಡನನ್ನು ಗದರಿಸಿ ಕೂಗಕೂಡದೆಂದು ಅವನಿಗೆ ಹೇಳಿದರು. ಆದರೆ ಆ ಕುರುಡನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು!” ಎಂದು ಮತ್ತೆಮತ್ತೆ ಕೂಗಿದನು.
49 ಯೇಸು ನಿಂತುಕೊಂಡು, “ಅವನನ್ನು ಕರೆಯಿರಿ” ಎಂದು ಹೇಳಿದನು. ಆದ್ದರಿಂದ ಅವರು ಆ ಕುರುಡನನ್ನು ಕರೆದು, “ಸಂತೋಷಪಡು! ಎದ್ದುನಿಲ್ಲು! ಯೇಸು ನಿನ್ನನ್ನು ಕರೆಯುತ್ತಿದ್ದಾನೆ” ಎಂದರು.
50 ಆ ಕುರುಡನು ಕೂಡಲೇ ಎದ್ದುನಿಂತು ತನ್ನ ಹೊದಿಕೆಯನ್ನು ಅಲ್ಲಿಯೇ ಬಿಟ್ಟು ಯೇಸುವಿನ ಬಳಿಗೆ ಹೋದನು.
51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು. ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.
52 ಯೇಸು, ‘ಹೋಗು, ನೀನು ನಂಬಿದ್ದರಿಂದ ನಿನಗೆ ಗುಣವಾಯಿತು” ಎಂದನು. ಆಗ ಅವನಿಗೆ ದೃಷ್ಟಿ ಬಂದಿತು. ಅವನು ಯೇಸುವನ್ನು ಆ ದಾರಿಯಲ್ಲಿ ಹಿಂಬಾಲಿಸಿದನು.

Mark 10:1 Kannada Language Bible Words basic statistical display

COMING SOON ...

×

Alert

×