English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Mark Chapters

Mark 6 Verses

1 (ಮತ್ತಾಯ 13:53-58; ಲೂಕ 4:16-30) ಯೇಸು ಅಲ್ಲಿಂದ ಹೊರಟು, ತನ್ನ ಸ್ವಂತ ಊರಿಗೆ ಹೋದನು. ಆತನ ಶಿಷ್ಯರು ಆತನೊಂದಿಗೆ ಹೋದರು.
2 ಸಬ್ಬತ್ ದಿನದಂದು ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. ಆತನ ಉಪದೇಶವನ್ನು ಕೇಳಿ ಆಶ್ಚರ್ಯಗೊಂಡ ಅನೇಕ ಜನರು, “ಈ ಉಪದೇಶವನ್ನು ಮತ್ತು ಈ ಜ್ಞಾನವನ್ನು ಇವನು ಎಲ್ಲಿಂದ ಪಡೆದನು? ಇವನಿಗೆ ಕೊಟ್ಟವರು ಯಾರು? ಇವನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯು ಎಲ್ಲಿಂದ ಬಂತು?
3 ಇವನು ಕೇವಲ ಬಡಗಿಯಲ್ಲವೋ? ಇವನ ತಾಯಿ ಮರಿಯಳು. ಇವನು ಯಾಕೋಬ, ಯೋಸೆ, ಯೂದ ಮತ್ತು ಸಿಮೋನರ ಅಣ್ಣ. ಇವನ ತಂಗಿಯರು ಇಲ್ಲಿ ನಮ್ಮೊಂದಿಗಿದ್ದಾರೆ” ಎಂದು ಹೇಳಿ ಆತನನ್ನು ತಾತ್ಸಾರ ಮಾಡಿದರು.
4 ಯೇಸು, “ಪ್ರವಾದಿಯನ್ನು ಬೇರೆ ಜನರು ಗೌರವಿಸುತ್ತಾರೆ, ಆದರೆ ಪ್ರವಾದಿಗೆ ಸ್ವಂತ ಊರಿನಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ದೊರೆಯುವುದಿಲ್ಲ” ಎಂದು ಜನರಿಗೆ ಹೇಳಿದನು.
5 ಯೇಸು ಆ ಊರಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆತನು ತನ್ನ ಕೈಗಳನ್ನು ಕೆಲವು ಮಂದಿ ಕಾಯಿಲೆಯವರ ಮೇಲಿಟ್ಟು ಅವರ ಕಾಯಿಲೆಗಳನ್ನು ವಾಸಿಮಾಡಿದನು. ಇವುಗಳಲ್ಲದೆ ಬೇರೆ ಯಾವ ಅದ್ಭುತಕಾರ್ಯಗಳನ್ನೂ ಆತನು ಮಾಡಲಿಲ್ಲ.
6 ಆ ಜನರಲ್ಲಿ ನಂಬಿಕೆಯಿಲ್ಲದಿರುವುದನ್ನು ಕಂಡು ಯೇಸುವಿಗೆ ಬಹಳ ಆಶ್ಚರ್ಯವಾಯಿತು. ಬಳಿಕ ಯೇಸು ಆ ಪ್ರದೇಶದ ಇತರ ಹಳ್ಳಿಗಳಿಗೆ ಹೋಗಿ ಉಪದೇಶಿಸಿದನು. (ಮತ್ತಾಯ 10:1,5-15; ಲೂಕ 9:1-6)
7 ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಾಗಿ ಕರೆದು ಅವರನ್ನು ಇಬ್ಬರಿಬ್ಬರಾಗಿ ಹೊರಗೆ ಕಳುಹಿಸಿದನು. ಯೇಸು ಅವರಿಗೆ ದೆವ್ವಗಳ ಮೇಲೆ ಅಧಿಕಾರವನ್ನು ನೀಡಿದನು.
8 ಯೇಸು ಅವರಿಗೆ ಹೇಳಿದ್ದೇನೆಂದರೆ: “ನಿಮ್ಮ ಪ್ರವಾಸಕ್ಕೆ ಏನನ್ನೂ ತೆಗೆದುಕೊಳ್ಳಬೇಡಿ. ಊರುಗೋಲನ್ನು ಮಾತ್ರ ತೆಗೆದುಕೊಳ್ಳಿ, ರೊಟ್ಟಿಯನ್ನಾಗಲಿ ಚೀಲವನ್ನಾಗಲಿ ತೆಗೆದುಕೊಳ್ಳಬೇಡಿ. ನಿಮ್ಮ ಜೇಬಿನಲ್ಲಿ ಹಣವನ್ನು ಇಟ್ಟುಕೊಳ್ಳಬೇಡಿ.
9 ಪಾದರಕ್ಷೆಗಳನ್ನು ತೊಟ್ಟುಕೊಳ್ಳಿರಿ. ನೀವು ಧರಿಸಿಕೊಂಡಿರುವ ಉಡುಪೇ ಸಾಕು.
10 ನೀವು ಒಂದು ಮನೆಯಲ್ಲಿ ಇಳಿದುಕೊಂಡ ಮೇಲೆ ಆ ಊರನ್ನು ಬಿಡುವವರೆಗೆ ಆ ಮನೆಯಲ್ಲಿರಿ.
11 ಯಾವ ಊರಿನವರಾದರೂ ನಿಮ್ಮನ್ನು ಸ್ವೀಕರಿಸಿಕೊಳ್ಳದಿದ್ದರೆ ಮತ್ತು ನಿಮ್ಮ ಬೋಧನೆಯನ್ನು ಕೇಳದಿದ್ದರೆ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿ ಆ ಊರನ್ನು ಬಿಟ್ಟುಹೋಗಿರಿ. ಇದು ಅವರಿಗೆ ಎಚ್ಚರಿಕೆಯಾಗಿರುತ್ತದೆ.”
12 ಶಿಷ್ಯರು ಅಲ್ಲಿಂದ ಹೊರಟು, ಇತರ ಸ್ಥಳಗಳಿಗೆ ಹೋಗಿ ಜನರಿಗೆ, “ನಿಮ್ಮಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಉಪದೇಶಿಸಿದರು.
13 ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಶಿಷ್ಯರು ಬಿಡುಗಡೆ ಮಾಡಿದರು ಮತ್ತು ಕಾಯಿಲೆಯ ಜನರಿಗೆ ಎಣ್ಣೆಯನ್ನು ಹಚ್ಚಿ ಗುಣಪಡಿಸಿದರು.
14 (ಮತ್ತಾಯ 14:1-12; ಲೂಕ 9:7-9) ಯೇಸು ಪ್ರಸಿದ್ಧನಾಗಿದ್ದುದರಿಂದ ರಾಜನಾದ ಹೆರೋದನಿಗೆ ಯೇಸುವಿನ ವಿಷಯ ತಿಳಿಯಿತು. ಕೆಲವು ಜನರು, “ಇವನು (ಯೇಸು) ಸ್ನಾನಿಕನಾದ ಯೋಹಾನ. ಇವನು ಮತ್ತೆ ಬದುಕಿಬಂದಿದ್ದಾನೆ. ಆದಕಾರಣವೇ ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದರು.
15 ಇನ್ನು ಕೆಲವರು, “ಇವನು ಎಲೀಯ”ನೆಂದು ಹೇಳಿದರು. ಇತರ ಜನರು, “ಯೇಸು ಒಬ್ಬ ಪ್ರವಾದಿ. ಬಹುಕಾಲದ ಹಿಂದೆ ಜೀವಿಸಿದ್ದ ಪ್ರವಾದಿಗಳಂತೆ ಇವನೂ ಒಬ್ಬನು” ಎಂದು ಹೇಳಿದರು.
16 ಜನರು ಯೇಸುವಿನ ಬಗ್ಗೆ ಹೇಳುತ್ತಿದ್ದ ಈ ಮಾತುಗಳನ್ನೆಲ್ಲಾ ಕೇಳಿದ ಹೆರೋದನು, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನು ಈಗ ಮತ್ತೆ ಬದುಕಿಬಂದಿದ್ದಾನೆ!” ಎಂದು ಹೇಳಿದನು.
17 ಯೋಹಾನನನ್ನು ಬಂಧಿಸಲು ತನ್ನ ಸೈನಿಕರಿಗೆ ಹೆರೋದನೇ ಆಜ್ಞಾಪಿಸಿದ್ದನು. ಅಂತೆಯೇ ಅವರು ಯೋಹಾನನನ್ನು ಸೆರೆಯಲ್ಲಿ ಹಾಕಿದ್ದರು. ಹೆರೋದನು ತನ್ನ ಪತ್ನಿಯಾಗಿ ಇಟ್ಟುಕೊಂಡಿದ್ದ ಹೆರೋದ್ಯಳ ನಿಮಿತ್ತ ಹೀಗೆ ಮಾಡಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಪತ್ನಿ.
18 ಯೋಹಾನನು ಹೆರೋದನಿಗೆ, “ನೀನು ನಿನ್ನ ಅಣ್ಣನ ಪತ್ನಿಯನ್ನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದನು.
19 ಆದ್ದರಿಂದ ಹೆರೋದ್ಯಳು ಯೋಹಾನನನ್ನು ದ್ವೇಷಿಸಲಾರಂಭಿಸಿ ಅವನನ್ನು ಕೊಲ್ಲಿಸಬೇಕೆಂದಿದ್ದಳು.
20 ಆದರೆ ಆಕೆಗೆ ಸಾಧ್ಯವಾಗಲಿಲ್ಲ. ಹೆರೋದನು ಯೋಹಾನನನ್ನು ಕೊಲ್ಲಿಸಲು ಭಯಪಟ್ಟನು. ಯೋಹಾನನನ್ನು ಒಳ್ಳೆಯವನೆಂದೂ ಪವಿತ್ರನೆಂದೂ ಜನರೆಲ್ಲರು ನಂಬಿದ್ದಾರೆಂಬುದು ಹೆರೋದನಿಗೆ ತಿಳಿದಿತ್ತು. ಆದ್ದರಿಂದ ಹೆರೋದನು ಯೋಹಾನನನ್ನು ರಕ್ಷಿಸಿದನು. ಹೆರೋದನು ಯೋಹಾನನ ಉಪದೇಶವನ್ನು ಕೇಳಿದಾಗಲೆಲ್ಲಾ ಗಲಿಬಿಲಿಗೊಳ್ಳುತ್ತಿದ್ದನು. ಆದರೂ ಅವನ ಉಪದೇಶವನ್ನು ಸಂತೋಷದಿಂದ ಕೇಳುತ್ತಿದ್ದನು.
21 ಒಮ್ಮೆ ಯೋಹಾನನನ್ನು ಮರಣಕ್ಕೆ ಈಡುಮಾಡುವ ಸುಸಮಯ ಹೆರೋದ್ಯಳಿಗೆ ದೊರೆಯಿತು. ಅಂದು ಹೆರೋದನ ಹುಟ್ಟುಹಬ್ಬದ ದಿನವಾಗಿತ್ತು. ಹೆರೋದನು ರಾಜಾಧಿಕಾರಿಗಳಿಗೂ ಸೇನಾಧಿಪತಿಗಳಿಗೂ ಮತ್ತು ಗಲಿಲಾಯದ ಪ್ರಮುಖರಿಗೂ ಒಂದು ಔತಣಕೂಟವನ್ನು ಏರ್ಪಡಿಸಿದನು.
22 ಹೆರೋದ್ಯಳ ಮಗಳು ಈ ಔತಣಕೂಟಕ್ಕೆ ಬಂದು ನರ್ತಿಸಿದಳು. ಹೆರೋದನಿಗೂ ಮತ್ತು ಅವನ ಜೊತೆಯಲ್ಲಿ ಊಟಮಾಡುತ್ತಿದ್ದವರಿಗೂ ಬಹಳ ಸಂತೋಷವಾಯಿತು. ಆಗ ರಾಜ ಹೆರೋದನು ಆ ಹುಡುಗಿಗೆ, “ನಿನಗೆ ಏನು ಬೇಕಾದರೂ ಕೇಳಿಕೊ, ನಾನು ನಿನಗೆ ಕೊಡುತ್ತೇನೆ.
23 ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು.
24 ಆ ಹುಡುಗಿಯು ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನ್ನನ್ನು ಕೇಳಿಕೊಳ್ಳಲಿ?” ಎಂದು ಕೇಳಿದಳು. ಅವಳ ತಾಯಿ, “ಸ್ನಾನಿಕ ಯೋಹಾನನ ತಲೆಯನ್ನು ಕೇಳಿಕೊ” ಎಂದು ಹೇಳಿಕೊಟ್ಟಳು.
25 ಆ ಹುಡುಗಿ ಬೇಗನೆ ರಾಜನ ಬಳಿಗೆ ಬಂದು, “ಸ್ನಾನಿಕ ಯೋಹಾನನ ತಲೆಯನ್ನು ಒಂದು ತಟ್ಟೆಯಲ್ಲಿ ಈಗಲೇ ತರಿಸಿಕೊಡಿ, ಇದೇ ನನ್ನ ಬೇಡಿಕೆ” ಎಂದು ಹೇಳಿದಳು.
26 ರಾಜ ಹೆರೋದನು ಬಹಳ ವ್ಯಸನಗೊಂಡನು. ಆದರೆ ಅವನು ಆ ಹುಡುಗಿಗೆ ಏನು ಬೇಕಾದರೂ ಕೊಡುವೆನೆಂದು ಪ್ರಮಾಣ ಮಾಡಿದ್ದನು. ಅಲ್ಲಿ ಹೆರೋದನ ಸಂಗಡ ಊಟಮಾಡುತ್ತಿದ್ದ ಜನರು ಆ ಪ್ರಮಾಣವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ನಿರಾಕರಿಸಲು ಹೆರೋದನು ಇಚ್ಛಿಸಲಿಲ್ಲ.
27 ಆದ್ದರಿಂದ ರಾಜನು ಯೋಹಾನನ ತಲೆಯನ್ನು ಕತ್ತರಿಸಿ ತರಲು ಒಬ್ಬ ಸೈನಿಕನನ್ನು ಕಳುಹಿಸಿದನು. ಸೈನಿಕನು ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿ,
28 ಅದನ್ನು ಒಂದು ತಟ್ಟೆಯ ಮೇಲಿಟ್ಟು ತಂದು ಆ ಹುಡುಗಿಗೆ ಕೊಟ್ಟನು. ಅವಳು ಆ ತಲೆಯನ್ನು ತನ್ನ ತಾಯಿಗೆ ಕೊಟ್ಟಳು.
29 ನಡೆದ ಈ ಸಂಗತಿಯು ಯೋಹಾನನ ಶಿಷ್ಯರಿಗೆ ತಿಳಿಯಿತು. ಅವರು ಬಂದು, ಯೋಹಾನನ ದೇಹವನ್ನು ತೆಗೆದುಕೊಂಡು ಹೋಗಿ ಒಂದು ಸಮಾಧಿಯಲ್ಲಿಟ್ಟರು.
30 (ಮತ್ತಾಯ 14:13-21; ಲೂಕ 9:10-17; ಯೋಹಾನ 6:1-14) ಯೇಸು ಉಪದೇಶಿಸಲು ಕಳುಹಿಸಿದ್ದ ಅಪೊಸ್ತಲರು ಮರಳಿಬಂದು ತಾವು ಮಾಡಿದ ಮತ್ತು ಉಪದೇಶಿಸಿದ ಸಂಗತಿಗಳನ್ನೆಲ್ಲ ಆತನಿಗೆ ತಿಳಿಸಿದರು.
31 ಯೇಸು ಮತ್ತು ಆತನ ಶಿಷ್ಯರು ಜನರಿಂದ ತುಂಬಿದ ಸ್ಥಳದಲ್ಲಿದ್ದರು. ಅಲ್ಲಿ ಅನೇಕಾನೇಕ ಜನರಿದ್ದುದರಿಂದ ಯೇಸು ಮತ್ತು ಆತನ ಶಿಷ್ಯರಿಗೆ ಊಟಮಾಡಲು ಸಹ ಸಮಯವಿರಲಿಲ್ಲ. ಯೇಸು ತನ್ನ ಶಿಷ್ಯರಿಗೆ, “ನನ್ನೊಂದಿಗೆ ಬನ್ನಿ. ನಾವು ಪ್ರಶಾಂತವಾಗಿರುವ ಸ್ಥಳಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಳ್ಳೋಣ” ಎಂದು ಹೇಳಿದನು.
32 ಆದ್ದರಿಂದ ಯೇಸು ಮತ್ತು ಆತನ ಶಿಷ್ಯರು ಜನರಿಲ್ಲದ ಸ್ಥಳಕ್ಕೆ ದೋಣಿಯಲ್ಲಿ ಪ್ರತ್ಯೇಕವಾಗಿ ಹೊರಟರು.
33 ಆದರೆ ಅವರು ಹೋಗುತ್ತಿರುವುದನ್ನು ಅನೇಕ ಜನರು ನೋಡಿದರು. ಆತನು ಯೇಸುವೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಆತನು ಹೋಗುತ್ತಿರುವ ಸ್ಥಳಕ್ಕೆ ಎಲ್ಲಾ ಊರುಗಳಿಂದ ಜನರು ಓಡಿಹೋಗಿ, ಆತನು ಅಲ್ಲಿಗೆ ಬರುವುದಕ್ಕೆ ಮುಂಚೆಯೇ ಅಲ್ಲಿದ್ದರು.
34 ಯೇಸು ಅಲ್ಲಿಗೆ ಬಂದಾಗ, ಅನೇಕ ಜನರು ತನಗಾಗಿ ಕಾಯುತ್ತಿರುವುದನ್ನು ನೋಡಿದನು. ಅವರು ಕುರುಬನಿಲ್ಲದ ಕುರಿಗಳಂತೆ ಇರುವುದನ್ನು ಕಂಡು ದುಃಖಗೊಂಡು ಅವರಿಗೆ ಅನೇಕ ಸಂಗತಿಗಳನ್ನು ಉಪದೇಶಿಸಿದನು.
35 ಅಂದು ಬಹಳ ಹೊತ್ತಾಯಿತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸಿಸುತ್ತಿಲ್ಲ. ಈಗಾಗಲೇ ಬಹಳ ಹೊತ್ತಾಗಿದೆ.
36 ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ತೋಟಗಳಿಗೂ ಪಟ್ಟಣಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ” ಎಂದು ಹೇಳಿದರು.
37 ಆದರೆ ಯೇಸು, “ನೀವೇ ಅವರಿಗೆ ಊಟ ಕೊಡಿ” ಎಂದು ಉತ್ತರಕೊಟ್ಟನು. ಶಿಷ್ಯರು ಯೇಸುವಿಗೆ, “ಈ ಜನರಿಗೆಲ್ಲ ಬೇಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರೋಣ! ಅವರಿಗೆ ಬೇಕಾಗುವಷ್ಟು ರೊಟ್ಟಿಯನ್ನು ಕೊಂಡುಕೊಂಡು ಬರಬೇಕಾದರೆ ನಮಗೆ ಇನ್ನೂರು ದಿನಾರಿ ನಾಣ್ಯ [*ಇನ್ನೂರು ದಿನಾರಿ ನಾಣ್ಯ ಒಬ್ಬನಿಗೆ ದೊರೆಯುತ್ತಿದ್ದ ಒಂದು ವರ್ಷದ ಆದಾಯ.] ಗಳಾದರೂ ಬೇಕು!” ಎಂದು ಹೇಳಿದರು.
38 ಯೇಸು ಶಿಷ್ಯರಿಗೆ, “ಈಗ ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಎಂದು ಹೇಳಿದನು. ಶಿಷ್ಯರು ಹೋಗಿ ರೊಟ್ಟಿಗಳನ್ನು ಎಣಿಸಿ ಬಂದು, “ನಮ್ಮ ಬಳಿ ಐದು ರೊಟ್ಟಿಗಳಿವೆ ಮತ್ತು ಎರಡು ಮೀನುಗಳಿವೆ” ಎಂದು ಹೇಳಿದರು.
39 ಆಗ ಯೇಸು ಶಿಷ್ಯರಿಗೆ, “ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳಲು ಜನರಿಗೆ ತಿಳಿಸಿ” ಎಂದು ಹೇಳಿದನು.
40 ಅಂತೆಯೇ ಜನರೆಲ್ಲರೂ ಸಾಲುಸಾಲಾಗಿ ಕುಳಿತುಕೊಂಡರು. ಪ್ರತಿಯೊಂದು ಸಾಲಿನಲ್ಲಿಯೂ ಐವತ್ತರಿಂದ ನೂರು ಜನರಿದ್ದರು.
41 ಯೇಸು ಐದು ರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ, ರೊಟ್ಟಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಬಳಿಕ ರೊಟ್ಟಿಯನ್ನು ಮುರಿದು, ಅದನ್ನು ಶಿಷ್ಯರಿಗೆ ಕೊಟ್ಟು ಜನರಿಗೆಲ್ಲ ಹಂಚಲು ತಿಳಿಸಿದನು. ಅಂತೆಯೇ ಎರಡು ಮೀನುಗಳನ್ನು ಮುರಿದು ಜನರಿಗೆ ಹಂಚಬೇಕೆಂದು ಶಿಷ್ಯರಿಗೆ ಕೊಟ್ಟನು.
42 ಜನರೆಲ್ಲರೂ ಊಟಮಾಡಿ ತೃಪ್ತರಾದರು.
43 ಬಳಿಕ ಜನರು ತಿನ್ನಲಾರದೆ ಉಳಿಸಿದ ರೊಟ್ಟಿ ಮತ್ತು ಮೀನುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು.
44 ಅಂದು ಸುಮಾರು ಐದು ಸಾವಿರ ಜನ ಊಟಮಾಡಿದರು.
45 (ಮತ್ತಾಯ 14:22-33; ಯೋಹಾನ 6:15-21) ಆಗ ಯೇಸು ತನ್ನ ಶಿಷ್ಯರಿಗೆ ದೋಣಿಯೊಳಕ್ಕೆ ಹೋಗಲು ತಿಳಿಸಿದನು. ಸರೋವರದ ಆಚೆಯ ದಡದಲ್ಲಿದ್ದ ಬೆತ್ಸಾಯಿದಕ್ಕೆ ಹೋಗಬೇಕೆಂತಲೂ ಸ್ವಲ್ಪ ಸಮಯದ ನಂತರ ತಾನು ಬರುವುದಾಗಿಯೂ ಯೇಸು ಅವರಿಗೆ ಹೇಳಿ ಅವರನ್ನು ಕಳುಹಿಸಿದನು. ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಜನರಿಗೆ ತಿಳಿಸುವುದಕ್ಕಾಗಿ ಯೇಸು ಅಲ್ಲಿ ಉಳಿದುಕೊಂಡನು.
46 ಯೇಸು ಜನರನ್ನು ಬೀಳ್ಕೊಟ್ಟ ಮೇಲೆ ಪ್ರಾರ್ಥಿಸುವುದಕ್ಕಾಗಿ ಬೆಟ್ಟದ ಮೇಲಕ್ಕೆ ಹೋದನು.
47 ಅಂದು ರಾತ್ರಿ ದೋಣಿಯು ಸರೋವರದ ಮಧ್ಯದಲ್ಲಿಯೇ ಇದ್ದಿತು. ಯೇಸು ಒಬ್ಬನೇ ದಡದ ಮೇಲಿದ್ದನು.
48 ದೋಣಿಯು ಸರೋವರದ ಮೇಲೆ ದೂರದಲ್ಲಿರುವುದನ್ನೂ ಶಿಷ್ಯರು ಅದನ್ನು ದಡಕ್ಕೆ ಸಾಗಿಸಲು ಬಹಳ ಕಷ್ಟಪಡುತ್ತಿರುವುದನ್ನೂ ಯೇಸು ನೋಡಿದನು. ಗಾಳಿಯು ಅವರಿಗೆ ಪ್ರತಿಕೂಲವಾಗಿ ಬೀಸುತ್ತಿತ್ತು. ಮುಂಜಾನೆ ಮೂರರಿಂದ ಆರು ಗಂಟೆಯ ಸಮಯದಲ್ಲಿ, ಯೇಸು ನೀರಿನ ಮೇಲೆ ನಡೆದುಕೊಂಡು ದೋಣಿಯ ಸಮೀಪಕ್ಕೆ ಬಂದು ಅವರನ್ನು ಹಾದು ಮುಂದೆ ಹೋಗುವುದರಲ್ಲಿದ್ದನು.
49 ಆದರೆ ನೀರಿನ ಮೇಲೆ ನಡೆಯುತ್ತಿದ್ದ ಆತನನ್ನು ಕಂಡ ಶಿಷ್ಯರು ಆತನನ್ನು ಭೂತವೆಂದು ಭ್ರಮಿಸಿಕೊಂಡು ಭಯದಿಂದ ಕಿರುಚಿದರು.
50 ಶಿಷ್ಯರೆಲ್ಲರೂ ಯೇಸುವನ್ನು ನೋಡಿ ಬಹಳವಾಗಿ ಹೆದರಿದ್ದರು. ಆದರೆ ಯೇಸು ಅವರೊಂದಿಗೆ ಮಾತನಾಡಿ, “ಚಿಂತಿಸದಿರಿ! ನಾನೇ! ಅಂಜಬೇಡಿ” ಎಂದು ಹೇಳಿದನು.
51 ನಂತರ ಯೇಸು ತನ್ನ ಶಿಷ್ಯರಿದ್ದ ದೋಣಿಯೊಳಕ್ಕೆ ಹತ್ತಿದನು. ಆಗ ಗಾಳಿಯು ನಿಂತುಹೋಯಿತು. ಶಿಷ್ಯರಿಗೆ ಬಹಳ ಆಶ್ಚರ್ಯವಾಯಿತು.
52 ಯೇಸು ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದನ್ನು ಅವರು ನೋಡಿದ್ದರೂ ಅದರ ಅರ್ಥವನ್ನು ಗ್ರಹಿಸಲಿಲ್ಲ. ಅವರು ಅದನ್ನು ಅರ್ಥಮಾಡಿಕೊಳ್ಳುವಷ್ಟು ಸಮರ್ಥರಾಗಿರಲಿಲ್ಲ.
53 ಯೇಸುವಿನ ಶಿಷ್ಯರು ಸರೋವರವನ್ನು ದಾಟಿ ಗೆನಸರೇತ್ ಊರಿಗೆ ಬಂದು ದೋಣಿಯನ್ನು ತೀರದಲ್ಲಿ ಕಟ್ಟಿದರು.
54 ಅವರು ದೋಣಿಯಿಂದ ಹೊರಕ್ಕೆ ಬಂದಾಗ ಜನರು ಯೇಸುವನ್ನು ಗುರುತು ಹಿಡಿದರು.
55 ಯೇಸು ಬಂದಿರುವ ಸುದ್ದಿಯನ್ನು ಆ ಪ್ರದೇಶದಲ್ಲಿರುವ ಜನರಿಗೆಲ್ಲಾ ತಿಳಿಸುವುದಕ್ಕಾಗಿ ಅವರು ಓಡಿಹೋದರು. ಯೇಸು ಹೋದ ಸ್ಥಳಗಳಿಗೆಲ್ಲ ಜನರು ಕಾಯಿಲೆಯ ಜನರನ್ನು ಹಾಸಿಗೆಗಳ ಮೇಲೆ ತಂದರು.
56 ಯೇಸು ಆ ಪ್ರದೇಶದಲ್ಲಿದ್ದ ಪಟ್ಟಣಗಳಿಗೆ, ನಗರಗಳಿಗೆ ಮತ್ತು ತೋಟಗಳಿಗೆ ಹೋದನು. ಆತನು ಹೋದ ಕಡೆಗಳಲ್ಲೆಲ್ಲಾ ಜನರು ಮಾರುಕಟ್ಟೆಯ ಸ್ಥಳಗಳಿಗೆ ಕಾಯಿಲೆಯ ಜನರನ್ನು ಕರೆತಂದರು. ಅವರು ಯೇಸುವಿಗೆ, ನಿನ್ನ ಮೇಲಂಗಿಯ ಅಂಚನ್ನಾದರೂ ಮುಟ್ಟಲು ತಮಗೆ ಅವಕಾಶ ಕೊಡಬೇಕೆಂದು ಬೇಡಿಕೊಂಡರು. ಆತನನ್ನು ಸ್ಪರ್ಶಿಸಿದ ಜನರೆಲ್ಲರಿಗೂ ಗುಣವಾಯಿತು.
×

Alert

×