English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Luke Chapters

Luke 9 Verses

1 (ಮತ್ತಾಯ 10:5-15; ಮಾರ್ಕ 6:7-13) ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ಒಟ್ಟಾಗಿ ಕರೆದು ಅವರಿಗೆ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿಯನ್ನೂ ದೆವ್ವಗಳ ಮೇಲೆ ಅಧಿಕಾರವನ್ನೂ ಕೊಟ್ಟನು.
2 ದೇವರ ರಾಜ್ಯದ ಬಗ್ಗೆ ತಿಳಿಸುವುದಕ್ಕೂ ಅಸ್ವಸ್ಥರಾದವರನ್ನು ವಾಸಿಮಾಡುವುದಕ್ಕೂ ಯೇಸು ಅಪೊಸ್ತಲರನ್ನು ಕಳುಹಿಸಿದನು.
3 ಆತನು ಅವರಿಗೆ ಹೇಳಿದ್ದೇನೆಂದರೆ: “ನೀವು ಪ್ರಯಾಣಕ್ಕಾಗಿ ಊರುಗೋಲನ್ನಾಗಲಿ ಚೀಲವನ್ನಾಗಲಿ ಆಹಾರವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ಎರಡು ಅಂಗಿಗಳನ್ನೂ ತೆಗೆದುಕೊಳ್ಳಬೇಡಿ.
4 ನೀವು ಒಂದು ಮನೆಯಲ್ಲಿ ಇಳಿದುಕೊಂಡಾಗ, ಆ ಊರನ್ನು ಬಿಟ್ಟುಹೋಗುವ ಸಮಯದವರೆಗೂ ಅಲ್ಲೇ ತಂಗಿರಿ.
5 ಆ ಊರಿನ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ಆ ಊರಿನ ಹೊರಗೆ ಹೋಗಿ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರಿಗೆ ಎಚ್ಚರಿಕೆಯಾಗಿರುವುದು.”
6 ಆದ್ದರಿಂದ ಅಪೊಸ್ತಲರು ಹೊರಟು ಊರೂರುಗಳಿಗೆ ಹೋಗಿ, ಎಲ್ಲೆಲ್ಲೂ ಸುವಾರ್ತೆಯನ್ನು ಸಾರಿದರು ಮತ್ತು ರೋಗಿಗಳನ್ನು ವಾಸಿಮಾಡಿದರು.
7 (ಮತ್ತಾಯ 14:1-12; ಮಾರ್ಕ 6:14-29) ನಡೆಯುತ್ತಿದ್ದ ಎಲ್ಲಾ ಸಂಗತಿಗಳ ಬಗ್ಗೆ ರಾಜ್ಯಪಾಲ ಹೆರೋದನು ಕೇಳಿ ಗಲಿಬಿಲಿಗೊಂಡನು. ಏಕೆಂದರೆ, “ಸ್ನಾನಿಕ ಯೋಹಾನನೇ ಸತ್ತವರೊಳಗಿಂದ ಎದ್ದಿದ್ದಾನೆ” ಎಂದು ಕೆಲವರು ಹೇಳುತ್ತಿದ್ದರು.
8 ಇನ್ನು ಕೆಲವರು, “ಎಲೀಯನು ನಮ್ಮ ಬಳಿಗೆ ಬಂದಿದ್ದಾನೆ” ಎಂದು ಹೇಳುತ್ತಿದ್ದರು. ಮತ್ತೆ ಕೆಲವರು, “ಪೂರ್ವಕಾಲದ ಪ್ರವಾದಿಗಳಲ್ಲೊಬ್ಬನು ಜೀವಂತವಾಗಿ ಎದ್ದಿದ್ದಾನೆ” ಎಂದು ಹೇಳುತ್ತಿದ್ದರು.
9 ಹೆರೋದನು, “ನಾನು ಯೋಹಾನನ ತಲೆಯನ್ನು ಕತ್ತರಿಸಿದೆನು. ಆದರೆ ಈ ಸಂಗತಿಗಳನ್ನು ಮಾಡುತ್ತಿರುವ ಈ ಮನುಷ್ಯನು ಯಾರು?” ಎಂದು ಆಲೋಚಿಸುತ್ತಾ ಯೇಸುವನ್ನು ನೋಡಲು ಪ್ರಯತ್ನಿಸಿದನು.
10 (ಮತ್ತಾಯ 14:13-21; ಮಾರ್ಕ 6:30-44; ಯೋಹಾನ 6:1-14) ಅಪೊಸ್ತಲರು ಸುವಾರ್ತಾ ಪ್ರಯಾಣದಿಂದ ಹಿಂತಿರುಗಿ ಬಂದು, ತಾವು ಮಾಡಿದ ಸಂಗತಿಗಳನ್ನು ಯೇಸುವಿಗೆ ತಿಳಿಸಿದರು. ಆಗ ಆತನು ಅವರನ್ನು ಬೆತ್ಸಾಯಿದ ಊರಿನ ಸಮೀಪಕ್ಕೆ ಪ್ರತ್ಯೇಕವಾಗಿ ಕರೆದುಕೊಂಡು ಹೋದನು. ಅಲ್ಲಿ ಯೇಸು ಮತ್ತು ಆತನ ಅಪೊಸ್ತಲರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ.
11 ಆದರೆ ಯೇಸು ಅಲ್ಲಿಗೆ ಹೋದದ್ದು ಜನರಿಗೆ ತಿಳಿಯಿತು. ಅವರು ಆತನನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವಾಗತಿಸಿ ದೇವರ ರಾಜ್ಯದ ಬಗ್ಗೆ ಅವರಿಗೆ ತಿಳಿಸಿದನು; ಕಾಯಿಲೆಯ ಜನರನ್ನು ವಾಸಿಮಾಡಿದನು.
12 ಅಂದು ಸಾಯಂಕಾಲ, ಹನ್ನೆರಡು ಮಂದಿ ಅಪೊಸ್ತಲರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸವಾಗಿಲ್ಲ. ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ಹೊಲಗಳಿಗೂ ಊರುಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ ಮತ್ತು ರಾತ್ರಿ ನಿದ್ರಿಸಲು ಸ್ಥಳವನ್ನು ಹುಡುಕಿಕೊಳ್ಳಲಿ” ಎಂದು ಹೇಳಿದರು.
13 ಆದರೆ ಯೇಸು ಅಪೊಸ್ತಲರಿಗೆ, “ನೀವೇ ಅವರಿಗೆ ಸ್ವಲ್ಪ ಆಹಾರ ಕೊಡಿರಿ” ಎಂದು ಹೇಳಿದನು. ಅದಕ್ಕೆ ಅಪೊಸ್ತಲರು, “ನಮ್ಮಲ್ಲಿ ಕೇವಲ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ. ನಾವೇ ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡುಕೊಳ್ಳಬೇಕೇ?” ಎಂದು ಕೇಳಿದರು.
14 (ಅಲ್ಲಿ ಸುಮಾರು ಐದು ಸಾವಿರ ಮಂದಿ ಗಂಡಸರು ಇದ್ದರು.) ಯೇಸು ತನ್ನ ಶಿಷ್ಯರಿಗೆ, “ಇವರನ್ನು ಸುಮಾರು ಐವತ್ತೈವತ್ತು ಜನರಂತೆ ಸಾಲಾಗಿ ಕುಳ್ಳಿರಿಸಿರಿ” ಅಂದನು.
15 ಅಂತೆಯೇ ಶಿಷ್ಯರು ಮಾಡಿದರು. ಜನರೆಲ್ಲರೂ ನೆಲದ ಮೇಲೆ ಕುಳಿತುಕೊಂಡರು.
16 ಆಗ ಯೇಸು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಕೈಯಲ್ಲಿ ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಯೇಸು ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚಬೇಕೆಂದು ಹೇಳಿದನು.
17 ಎಲ್ಲರೂ ತಿಂದು ತೃಪ್ತರಾದರು. ತಿನ್ನಲಾರದೆ ಬಿಟ್ಟಿದ್ದ ಆಹಾರದ ತುಂಡುಗಳನ್ನು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು.
18 (ಮತ್ತಾಯ 16:13-19; ಮಾರ್ಕ 8:27-29) ಒಮ್ಮೆ ಯೇಸು ಏಕಾಂತವಾಗಿ ಪ್ರಾರ್ಥನೆ ಮಾಡುತ್ತಿದ್ದನು. ಆತನ ಶಿಷ್ಯರು ಒಟ್ಟಾಗಿ ಅಲ್ಲಿಗೆ ಬಂದರು. ಯೇಸು ಅವರಿಗೆ, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
19 ಅದಕ್ಕೆ ಶಿಷ್ಯರು, “ಕೆಲವು ಜನರು ನಿನ್ನನ್ನು ‘ಸ್ನಾನಿಕನಾದ ಯೋಹಾನ’ ಎನ್ನುತ್ತಾರೆ. ಇನ್ನು ಕೆಲವರು, ‘ಎಲೀಯ’ ಎನ್ನುತ್ತಾರೆ. ಮತ್ತೆ ಕೆಲವರು, ‘ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಜೀವಂತವಾಗಿ ಎದ್ದುಬಂದಿದ್ದಾನೆ’ ಎನ್ನುತ್ತಾರೆ” ಎಂದು ಉತ್ತರಿಸಿದರು.
20 ಆಗ ಯೇಸು, “ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಶಿಷ್ಯರನ್ನು ಕೇಳಿದನು. ಪೇತ್ರನು, “ನೀನು ದೇವರಿಂದ ಬಂದ ಕ್ರಿಸ್ತನು” ಎಂದು ಉತ್ತರಕೊಟ್ಟನು.
21 ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಯೇಸು ಅವರನ್ನು ಎಚ್ಚರಿಸಿದನು.
22 (ಮತ್ತಾಯ 16:21-28; ಮಾರ್ಕ 8:30-9:1) ಬಳಿಕ ಯೇಸು, “ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಆತನು ಹಿರಿಯ ಯೆಹೂದ್ಯನಾಯಕರಿಂದಲೂ ಮಹಾಯಾಜಕರಿಂದಲೂ ಧರ್ಮೋಪದೇಶಕರಿಂದಲೂ ತಿರಸ್ಕೃತನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.
23 ಯೇಸು ತನ್ನ ಮಾತನ್ನು ಮುಂದುವರಿಸಿ ಅವರೆಲ್ಲರಿಗೆ ಹೇಳಿದ್ದೇನೆಂದರೆ: “ನನ್ನ ಹಿಂಬಾಲಕನಾಗಬಯಸುವವನು ತನ್ನನ್ನು ನಿರಾಕರಿಸಿ, ಪ್ರತಿದಿನ ತನ್ನ ಶಿಲುಬೆಯನ್ನು (ತನಗಾಗುವ ಹಿಂಸೆಯನ್ನು) ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
24 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗೋಸ್ಕರ ತನ್ನ ಜೀವವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು.
25 ಒಬ್ಬನು ಇಡೀ ಲೋಕವನ್ನೇ ಸಂಪಾದಿಸಿಕೊಂಡು, ತನ್ನನ್ನೇ ಕೆಡಿಸಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಲಾಭವೇನು?
26 ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಳ್ಳುವುದಾದರೆ, ನಾನು ನನ್ನ ಮಹಿಮೆಯೊಡನೆ, ತಂದೆಯ ಮಹಿಮೆಯೊಡನೆ ಮತ್ತು ಪರಿಶುದ್ಧ ದೂತರ ಮಹಿಮೆಯೊಡನೆ ಬಂದಾಗ ಅವನ ವಿಷಯದಲ್ಲಿ ನಾಚಿಕೊಳ್ಳುವೆನು.
27 ನಾನು ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ಕೆಲವರು ತಾವು ಸಾಯುವುದಕ್ಕಿಂತ ಮೊದಲು ದೇವರ ರಾಜ್ಯವನ್ನು ನೋಡುವರು” ಎಂದು ಹೇಳಿದನು. ಮೋಶೆ, ಎಲೀಯ ಮತ್ತು ಯೇಸು (ಮತ್ತಾಯ 17:1-8; ಮಾರ್ಕ 9:2-8)
28 ಯೇಸು ಈ ಸಂಗತಿಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ನಂತರ, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಬೆಟ್ಟದ ಮೇಲೆ ಹೋದನು.
29 ಯೇಸು ಪ್ರಾರ್ಥಿಸುತ್ತಿದ್ದಾಗ, ಆತನ ಮುಖವು ರೂಪಾಂತರವಾಯಿತು. ಆತನ ಬಟ್ಟೆಗಳು ಬೆಳ್ಳಗೆ ಹೊಳೆಯತೊಡಗಿದವು.
30 ಆಗ ಇಬ್ಬರು ಪ್ರವಾದಿಗಳು ಯೇಸುವಿನೊಡನೆ ಮಾತನಾಡುತ್ತಿದ್ದರು. ಅವರು ಮೋಶೆ ಮತ್ತು ಎಲೀಯ.
31 ಇವರಿಬ್ಬರು ಸಹ ಪ್ರಕಾಶಮಾನವಾಗಿ ಹೊಳೆಯುತ್ತಿದ್ದರು. ಜೆರುಸಲೇಮಿನಲ್ಲಿ ಸಂಭವಿಸಲಿಕ್ಕಿದ್ದ ಆತನ ಮರಣದ ಬಗ್ಗೆ ಅವರು ಮಾತಾಡುತ್ತಿದ್ದರು.
32 ಗಾಢನಿದ್ರೆಯಲ್ಲಿದ್ದ ಪೇತ್ರ ಮತ್ತು ಇತರರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಯೇಸುವಿನೊಡನೆ ನಿಂತಿದ್ದ ಅವರಿಬ್ಬರನ್ನೂ ಕಂಡರು.
33 ಮೋಶೆ ಮತ್ತು ಎಲೀಯ ಆತನನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ಇಲ್ಲಿ ನಾವು ಮೂರು ಗುಡಾರಗಳನ್ನು ಹಾಕುತ್ತೇವೆ. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು” ಎಂದು ಹೇಳಿದನು. (ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದು ತಿಳಿಯಲಿಲ್ಲ.)
34 ಪೇತ್ರನು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಮೋಡವು ಬಂದು ಅವರ ಸುತ್ತಲೂ ಆವರಿಸಿತು. ಆಗ ಪೇತ್ರ, ಯಾಕೋಬ ಮತ್ತು ಯೋಹಾನನಿಗೆ ಭಯವಾಯಿತು.
35 ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಆರಿಸಿಕೊಂಡವನು ಇವನೇ. ಈತನಿಗೆ ವಿಧೇಯರಾಗಿರಿ” ಎಂಬ ವಾಣಿ ಕೇಳಿಸಿತು.
36 ಆ ವಾಣಿ ಆದಮೇಲೆ ಅವರು ಯೇಸುವನ್ನು ಮಾತ್ರ ಕಂಡರು. ಪೇತ್ರ, ಯಾಕೋಬ, ಯೋಹಾನರು ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಮೌನವಾಗಿದ್ದರು.
37 (ಮತ್ತಾಯ 17:14-18; ಮಾರ್ಕ 9:14-27) ಮರುದಿನ, ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಬೆಟ್ಟದಿಂದಿಳಿದು ಬಂದರು. ಜನರ ಬಹು ದೊಡ್ಡ ಗುಂಪೊಂದು ಯೇಸುವನ್ನು ಎದುರುಗೊಂಡಿತು.
38 ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಉಪದೇಶಕನೇ, ದಯಮಾಡಿ ಬಂದು ನನ್ನ ಮಗನನ್ನು ನೋಡು. ನನಗೆ ಅವನೊಬ್ಬನೇ ಮಗನು.
39 ದೆವ್ವವೊಂದು ನನ್ನ ಮಗನೊಳಗೆ ಬರುತ್ತದೆ. ಆಗ ಅವನು ಕೂಗಾಡುತ್ತಾನೆ. ಸ್ವಾಧೀನ ಕಳೆದುಕೊಂಡು ಬಾಯಿಂದ ನೊರೆಸುರಿಸುತ್ತಾನೆ. ದೆವ್ವವು ಅವನನ್ನು ಒದ್ದಾಡಿಸಿ ಜಜ್ಜದ ಹೊರತು ಬಿಟ್ಟುಬಿಡುವುದೇ ಇಲ್ಲ.
40 ನನ್ನ ಮಗನನ್ನು ದೆವ್ವದಿಂದ ಬಿಡಿಸಬೇಕೆಂದು ನಿನ್ನ ಶಿಷ್ಯರನ್ನೂ ಬೇಡಿಕೊಂಡೆನು. ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಯೇಸುವಿಗೆ ಕೂಗಿ ಹೇಳಿದನು.
41 ಆಗ ಯೇಸು, “ನಂಬಿಕೆಯಿಲ್ಲದ ದುಷ್ಟಸಂತಾನವೇ, ಇನೆಷ್ಟು ಕಾಲ ನಾನು ನಿಮ್ಮ ಸಂಗಡ ತಾಳ್ಮೆಯಿಂದ ಇರಲಿ?” ಎಂದು ಉತ್ತರಿಸಿ, ಆ ಮನುಷ್ಯನಿಗೆ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.
42 ಆ ಹುಡುಗನು ಬರುತ್ತಿದ್ದಾಗ, ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿತು. ಹುಡುಗನು ತನ್ನ ಸ್ವಾಧೀನ ಕಳೆದುಕೊಂಡನು. ಆಗ ಯೇಸು ದೆವ್ವವನ್ನು ಗದರಿಸಿ ಆ ಹುಡುಗನನ್ನು ಗುಣಪಡಿಸಿದನು. ಬಳಿಕ ಅವನನ್ನು ಅವನ ತಂದೆಗೆ ಒಪ್ಪಿಸಿಕೊಟ್ಟನು.
43 ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು. ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ,
44 (ಮತ್ತಾಯ 17:22-23; ಮಾರ್ಕ 9:30-32) “ಮನುಷ್ಯಕುಮಾರನನ್ನು ಕೆಲವರ ವಶಕ್ಕೆ ಒಪ್ಪಿಸಲಾಗುವುದು. ನೀವು ಇದನ್ನು ಮರೆಯಕೂಡದು” ಎಂದು ಹೇಳಿದನು.
45 ಆದರೆ ಯೇಸುವಿನ ಈ ಮಾತುಗಳು ಶಿಷ್ಯರಿಗೆ ಅರ್ಥವಾಗಲಿಲ್ಲ. ಏಕೆಂದರೆ ಅವುಗಳ ಅರ್ಥವು ಅವರಿಗೆ ಮರೆಯಾಗಿತ್ತು. ಆದರೂ ಯೇಸು ಹೇಳಿದ್ದರ ಬಗ್ಗೆ ಆತನನ್ನು ಕೇಳುವದಕ್ಕೆ ಶಿಷ್ಯರು ಭಯಪಟ್ಟರು.
46 (ಮತ್ತಾಯ 18:1-5; ಮಾರ್ಕ 9:33-37) ತಮ್ಮಲ್ಲಿ ಯಾವನು ಅತ್ಯಂತ ಪ್ರಮುಖನು ಎಂಬುದರ ಬಗ್ಗೆ ಯೇಸುವಿನ ಶಿಷ್ಯರು ವಾದಮಾಡತೊಡಗಿದರು.
47 ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಒಂದು ಚಿಕ್ಕ ಮಗುವನ್ನು ಕರೆದು ತನ್ನ ಬಳಿಯಲ್ಲಿ ನಿಲ್ಲಿಸಿದನು.
48 ಬಳಿಕ ಯೇಸು ತನ್ನ ಶಿಷ್ಯರಿಗೆ, “ಒಬ್ಬನು ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ಒಬ್ಬನು ನನ್ನನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನು ಕಳುಹಿಸಿದಾತನನ್ನೇ (ದೇವರನ್ನು) ಸ್ವೀಕರಿಸಿಕೊಂಡಂತಾಯಿತು. ನಿಮ್ಮಲ್ಲಿ ಯಾವನು ದೀನನಾಗಿದ್ದಾನೋ ಅವನೇ ನಿಮ್ಮಲ್ಲಿ ಪ್ರಮುಖನಾಗಿದ್ದಾನೆ” ಎಂದು ಹೇಳಿದನು.
49 ಯೋಹಾನನು, “ಗುರುವೇ, ನಿನ್ನ ಹೆಸರಿನ ಮೂಲಕ ಜನರಿಂದ ದೆವ್ವಗಳನ್ನು ಬಿಡಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ನಾವು ನೋಡಿದೆವು. ಅವನು ನಮ್ಮವನಲ್ಲದ ಕಾರಣ ನಿನ್ನ ಹೆಸರನ್ನು ಬಳಸಕೂಡದೆಂದು ಅವನಿಗೆ ಹೇಳಿದೆವು” ಎಂದರು.
50 ಅದಕ್ಕೆ ಯೇಸು, “ಅವನಿಗೆ ಅಡ್ಡಿಮಾಡಬೇಡಿ. ಏಕೆಂದರೆ, ನಿಮಗೆ ವಿರೋಧವಾಗಿಲ್ಲದವನು ನಿಮ್ಮವನೇ” ಎಂದನು.
51 ಯೇಸು ಮತ್ತೆ ಪರಲೋಕಕ್ಕೆ ಹಿಂತಿರುಗುವ ಸಮಯ ಹತ್ತಿರವಾಗುತ್ತಿತ್ತು. ಆದ್ದರಿಂದ ಆತನು ಜೆರುಸಲೇಮಿಗೆ ಹೋಗಲು ತೀರ್ಮಾನಿಸಿದನು.
52 ಯೇಸು ಕೆಲವರನ್ನು ತನ್ನ ಮುಂದಾಗಿ ಕಳುಹಿಸಿದನು. ಯೇಸುವಿಗಾಗಿ ಪ್ರತಿಯೊಂದನ್ನು ಸಿದ್ಧಪಡಿಸಲು ಅವರು ಸಮಾರ್ಯ ಪಟ್ಟಣಕ್ಕೆ ಹೋದರು.
53 ಆದರೆ ಆತನು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಸಮಾರ್ಯದ ಜನರು ಆತನನ್ನು ಸ್ವಾಗತಿಸಲಿಲ್ಲ.
54 ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನ ಇದನ್ನು ಕಂಡು, “ಸ್ವಾಮೀ, ಆಕಾಶದಿಂದ ಬೆಂಕಿ ಬಿದ್ದು ಇವರನ್ನು ನಾಶಮಾಡಲಿ ಎಂದು ನಾವು ಆಜ್ಞಾಪಿಸಬೇಕೆನ್ನುವಿಯೋ!” [*ಕೆಲವು ಗ್ರೀಕ್ ಪ್ರತಿಗಳಲ್ಲಿ 54ನೇ ವಚನ ಸೇರಿಸಲಾಗಿದೆ: “ಎಲೀಯನು ಮಾಡಿದಂತೆ.”] ಎಂದು ಕೇಳಿದರು.
55 ಆದರೆ ಯೇಸು ಅವರ ಕಡೆಗೆ ತಿರುಗಿ ಗದರಿಸಿದನು. [†ಕೆಲವು ಗ್ರೀಕ್ ಪ್ರತಿಗಳಲ್ಲಿ 55 ನೇ ವಚನ ಸೇರಿಸಲಾಗಿದೆ: “ಯೇಸುವು ಅವರಿಗೆ, “ನೀವು ಎಂಥಾ ಸ್ವಭಾವಿಗಳೆಂದು ನಿಮಗೇ ತಿಳಿಯದು. 56 ಮನುಷ್ಯಕುಮಾರನು ಬಂದದ್ದು ಮಾನವರ ಆತ್ಮಗಳನ್ನು ನಾಶಮಾಡುವುದಕ್ಕಾಗಿಯಲ್ಲ, ರಕ್ಷಿಸುವುದಕ್ಕಾಗಿಯಷ್ಟೇ.”]
56 ಬಳಿಕ ಯೇಸು ಮತ್ತು ಆತನ ಶಿಷ್ಯರು ಇನ್ನೊಂದು ಪಟ್ಟಣಕ್ಕೆ ಹೋದರು.
57 ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ, ಒಬ್ಬನು ಯೇಸುವಿಗೆ, “ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.
58 ಯೇಸು, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಎಂದು ಉತ್ತರಿಸಿದನು.
59 ಯೇಸು ಇನೊಬ್ಬನಿಗೆ, “ನನ್ನನ್ನು ಹಿಂಬಾಲಿಸು!” ಎಂದನು. ಆದರೆ ಅವನು, “ಸ್ವಾಮೀ, ನಾನು ಮೊದಲು ಹೋಗಿ ನನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡಲು ಅವಕಾಶ ನೀಡು” ಎಂದು ಹೇಳಿದನು.
60 ಯೇಸು ಅವನಿಗೆ, “ಸತ್ತಜನರೇ ತಮ್ಮವರಲ್ಲಿ ಸತ್ತುಹೋದವರ ಅಂತ್ಯಕ್ರಿಯೆ ಮಾಡಲಿ! ನೀನು ಹೋಗಿ ದೇವರ ರಾಜ್ಯದ ಬಗ್ಗೆ ತಿಳಿಸು” ಎಂದು ಹೇಳಿದನು.
61 ಮತ್ತೊಬ್ಬನು, “ಸ್ವಾಮೀ, ನಾನು ನಿನ್ನನ್ನು ಹಿಂಬಾಲಿಸುವೆನು. ಆದರೆ ಮೊದಲು ನನ್ನ ಕುಟುಂಬದವರ ಬಳಿಗೆ ಹೋಗಿಬರಲು ಅವಕಾಶ ನೀಡು” ಎಂದು ಹೇಳಿದನು.
62 ಯೇಸು, “ನೇಗಿಲಿನ ಮೇಲೆ ಕೈಯನ್ನು ಹಾಕಿ ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಅಂದನು.
×

Alert

×