Bible Languages

Indian Language Bible Word Collections

Bible Versions

Books

Luke Chapters

Luke 7 Verses

Bible Versions

Books

Luke Chapters

Luke 7 Verses

1 ಯೇಸುವು ಜನರಿಗೆ ಈ ಸಂಗತಿಗಳೆಲ್ಲವನ್ನು ಹೇಳಿಮುಗಿಸಿದ ನಂತರ ಕಪೆರ್ನೌಮಿಗೆ ಹೋದನು.
2 ಅಲ್ಲಿ ಒಬ್ಬ ಸೇನಾಧಿಪತಿ ಇದ್ದನು. ಅವನ ಪ್ರಿಯ ಸೇವಕನೊಬ್ಬನು ಕಾಯಿಲೆಯಿಂದ ಸಾಯುವ ಸ್ಥಿತಿಯಲ್ಲಿದ್ದನು.
3 ಯೇಸುವಿನ ಸುದ್ದಿಯನ್ನು ಕೇಳಿದಾಗ, ಅವನು ಕೆಲವು ಹಿರಿಯ ಯೆಹೂದ್ಯನಾಯಕರನ್ನು ಆತನ ಬಳಿಗೆ ಕಳುಹಿಸಿ ತನ್ನ ಸೇವಕನ ಪ್ರಾಣವನ್ನು ಉಳಿಸಿಕೊಡಬೇಕೆಂದು ಬೇಡಿಕೊಂಡನು.
4 ಆ ಜನರು ಯೇಸುವಿನ ಬಳಿಗೆ ಬಂದು, “ಈ ಸೇನಾಧಿಪತಿ ನಿನ್ನ ಸಹಾಯ ಹೊಂದುವುದಕ್ಕೆ ಯೋಗ್ಯನಾಗಿದ್ದಾನೆ.
5 ಅವನು ನಮ್ಮ ಜನರನ್ನು ಪ್ರೀತಿಸುತ್ತಾನೆ ಮತ್ತು ನಮಗೋಸ್ಕರ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿದ್ದಾನೆ” ಎಂದು ಹೇಳಿ ಬಹಳವಾಗಿ ಬೇಡಿಕೊಂಡರು.
6 ಆದ್ದರಿಂದ ಯೇಸು ಅವರ ಜೊತೆ ಹೊರಟನು. ಯೇಸು ಮನೆಯ ಹತ್ತಿರ ಬರುತ್ತಿರುವಾಗ, ಆ ಅಧಿಕಾರಿಯು ಸ್ನೇಹಿತರನ್ನು, “ಪ್ರಭುವೇ, ನೀನು ನನ್ನ ಮನೆಗೆ ಬರುವಷ್ಟು ನಾನು ಯೋಗ್ಯನಲ್ಲ.
7 ನಿನ್ನ ಬಳಿಗೆ ಬರುವುದಕ್ಕೂ ನನಗೆ ಯೋಗ್ಯತೆ ಇಲ್ಲ. ನೀನು ಕೇವಲ ಒಂದು ಆಜ್ಞೆ ಕೊಟ್ಟರೆ ಸಾಕು, ನನ್ನ ಆಳು ಗುಣಹೊಂದುವನು.
8 ನಿನ್ನ ಅಧಿಕಾರವನ್ನು ನಾನು ತಿಳಿದುಕೊಂಡಿದ್ದೇನೆ. ನಾನೂ ಮತ್ತೊಬ್ಬರ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ. ನಾನು ಒಬ್ಬ ಸೈನಿಕನಿಗೆ, ؅ಹೋಗು؆ ಎಂದು ಹೇಳಿದರೆ, ಅವನು ಹೋಗುತ್ತಾನೆ. ಇನ್ನೊಬ್ಬ ಸೈನಿಕನಿಗೆ, ؅ಬಾ؆ ಎಂದು ಹೇಳಿದರೆ, ಅವನು ಬರುತ್ತಾನೆ. ನನ್ನ ಆಳಿಗೆ, ؅ಇದನ್ನು ಮಾಡು؆ ಎಂದು ಹೇಳಿದರೆ, ಅವನು ನನಗೆ ವಿಧೇಯನಾಗುತ್ತಾನೆ” ಎಂದು ಯೇಸುವಿಗೆ ಹೇಳಲು ಕಳುಹಿಸಿದನು.
9 ಯೇಸು ಇದನ್ನು ಕೇಳಿ ಆಶ್ಚರ್ಯಪಟ್ಟು ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಕಡೆಗೆ ನೋಡಿ, “ಇಷ್ಟು ದೊಡ್ಡ ನಂಬಿಕೆಯಿರುವ ವ್ಯಕ್ತಿಯನ್ನು ನಾನು ಇಸ್ರೇಲಿನಲ್ಲಿಯೂ ನೋಡಲಿಲ್ಲ ಎಂದು ನಿಮಗೆ ಹೇಳುತ್ತೇನೆ” ಎಂದನು.
10 ಆ ಅಧಿಕಾರಿಯು ಕಳುಹಿಸಿದ್ದ ಜನರು ಯೇಸುವಿನ ಬಳಿಯಿಂದ ಹಿಂತಿರುಗಿ ಹೋದಾಗ, ಆ ಸೇವಕನಿಗೆ ಆಗಲೇ ಗುಣವಾಗಿರುವುದನ್ನು ಕಂಡರು.
11 ಮರುದಿನ ಯೇಸು ನಾಯಿನ್ ಎಂಬ ಊರಿಗೆ ಹೋದನು. ಯೇಸುವಿನೊಡನೆ ಆತನ ಶಿಷ್ಯರೂ ಹೋಗುತ್ತಿದ್ದರು. ಅವರೊಡನೆ ಅನೇಕ ಜನರು ದೊಡ್ಡ ಸಮೂಹವಾಗಿ ಹೋಗುತ್ತಿದ್ದರು.
12 ಯೇಸು ಊರಬಾಗಿಲಿನ ಬಳಿಗೆ ಬಂದಾಗ, ಸತ್ತುಹೋಗಿದ್ದ ಒಬ್ಬನನ್ನು ಸಮಾಧಿ ಮಾಡುವುದಕ್ಕಾಗಿ ಹೊತ್ತುಕೊಂಡು ಹೋಗುತ್ತಿದ್ದ ಜನರ ಗುಂಪನ್ನು ಕಂಡನು. ವಿಧವೆಯೊಬ್ಬಳ ಒಬ್ಬನೇ ಮಗನು ಸತ್ತುಹೋಗಿದ್ದನು. ಅವನ ಶವವನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಊರಿನ ಅನೇಕ ಜನರು ಆಕೆಯೊಡನೆ ಇದ್ದರು.
13 ಪ್ರಭುವು (ಯೇಸು) ಆಕೆಯನ್ನು ಕಂಡು ತನ್ನ ಹೃದಯದಲ್ಲಿ ಮರುಕಗೊಂಡು, “ಅಳಬೇಡ” ಎಂದು ಹೇಳಿ
14 ಶವದ ಪೆಟ್ಟಿಗೆಯ ಬಳಿಹೋಗಿ ಅದನ್ನು ಮುಟ್ಟಿದನು. ಆ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವವರು ನಿಂತುಕೊಂಡರು. ಯೇಸು ಸತ್ತುಹೋಗಿದ್ದವನಿಗೆ, “ಯೌವನಸ್ಥನೇ, ಎದ್ದೇಳು! ಎಂದು ನಾನು ನಿನಗೆ ಹೇಳುತ್ತೇನೆ” ಎಂದನು.
15 ಆಗ ಅವನು ಎದ್ದು ಕುಳಿತುಕೊಂಡು ಮಾತಾಡತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು.
16 ಜನರೆಲ್ಲರೂ ವಿಸ್ಮಯಪಟ್ಟರು. ಅವರು ದೇವರನ್ನು ಸ್ತುತಿಸುತ್ತಾ “ಒಬ್ಬ ಮಹಾಪ್ರವಾದಿ ನಮ್ಮ ಬಳಿಗೆ ಬಂದಿದ್ದಾನೆ! ದೇವರು ತನ್ನ ಜನರಿಗೆ ಸಹಾಯ ಮಾಡಲು ಬಂದಿದ್ದಾನೆ” ಎಂದು ಹೇಳಿದರು.
17 ಯೇಸುವಿನ ಕುರಿತಾದ ಈ ಸುದ್ದಿಯು ಜುದೇಯದಲ್ಲಿಯೂ ಅದರ ಸುತ್ತಮುತ್ತಲಿನ ಎಲ್ಲಾ ಸ್ಥಳಗಳಲ್ಲಿಯೂ ಹಬ್ಬಿಕೊಂಡಿತು.
18 ಯೋಹಾನನ ಶಿಷ್ಯರು ಈ ಸಂಗತಿಗಳನ್ನೆಲ್ಲಾ ಯೋಹಾನನಿಗೆ ತಿಳಿಸಿದರು. ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು,
19 ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?” ಎಂದು ಕೇಳುವುದಕ್ಕಾಗಿ ಅವರನ್ನು ಪ್ರಭುವಿನ (ಯೇಸುವಿನ) ಬಳಿಗೆ ಕಳುಹಿಸಿದನು.
20 ಆದ್ದರಿಂದ ಅವರು ಯೇಸುವಿನ ಬಳಿಗೆ ಬಂದು, “ಸ್ನಾನಿಕ ಯೋಹಾನನು ؅ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?؆ ಎಂದು ನಿನ್ನನ್ನು ಕೇಳುವುದಕ್ಕಾಗಿ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ” ಎಂದು ಹೇಳಿದರು.
21 ಅದೇ ಸಮಯದಲ್ಲಿ, ಯೇಸು ಅನೇಕ ಜನರನ್ನು ಅವರವರ ಕಾಯಿಲೆಗಳಿಂದ, ರೋಗಗಳಿಂದ ಗುಣಪಡಿಸಿದನು. ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು. ಅನೇಕ ಕುರುಡರಿಗೆ ದೃಷ್ಟಿಯನ್ನು ಕೊಟ್ಟನು.
22 ಬಳಿಕ ಯೇಸು ಯೋಹಾನನ ಶಿಷ್ಯರಿಗೆ, “ನೀವು ಇಲ್ಲಿ ಕಂಡು ಕೇಳಿದ ಸಂಗತಿಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ. ಕುರುಡರಿಗೆ ದೃಷ್ಟಿ ಬರುತ್ತದೆ, ಕುಂಟರು ಕಾಲನ್ನು ಪಡೆದು ನಡೆಯುತ್ತಾರೆ. ಕುಷ್ಠರೋಗಿಗಳು ಗುಣಹೊಂದುತ್ತಾರೆ. ಕಿವುಡರು ಕೇಳುತ್ತಾರೆ, ಸತ್ತವರಿಗೆ ಜೀವ ಬರುತ್ತದೆ, ಮತ್ತು ದೇವರ ರಾಜ್ಯದ ಸುವಾರ್ತೆಯು ಬಡವರಿಗೆ ಕೊಡಲ್ಪಡುತ್ತದೆ.
23 ಸಂಶಯಪಡದೆ ನನ್ನನ್ನು ಸ್ವೀಕರಿಸಿಕೊಳ್ಳುವವನೇ ಧನ್ಯನು!” ಎಂದು ಹೇಳಿ ಕಳುಹಿಸಿದನು.
24 ಯೋಹಾನನ ಶಿಷ್ಯರು ಹೊರಟುಹೋದಾಗ, ಯೇಸು ಜನರಿಗೆ ಯೋಹಾನನ ಕುರಿತು ಹೇಳತೊಡಗಿ, “ಏನನ್ನು ನೋಡುವುದಕ್ಕೆ ನೀವು ಮರಳುಗಾಡಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ?
25 ನೀವು ಏನನ್ನು ನೋಡಲು ಹೊರಗೆ ಹೋದಿರಿ? ನಯವಾದ ಉಡುಪನ್ನು ಧರಿಸಿರುವ ಮನುಷ್ಯನನ್ನೋ? ಇಲ್ಲ. ನಯವಾದ ಮತ್ತು ಚಂದವಾದ ಉಡುಪನ್ನು ಧರಿಸಿದವರು ಅರಮನೆಗಳಲ್ಲಿ ವಾಸಮಾಡುತ್ತಾರೆ.
26 ನಿಜವಾಗಿಯೂ, ನೀವು ಏನನ್ನು ನೋಡಲು ಹೊರಗೆ ಹೋದಿರಿ? ಪ್ರವಾದಿಯನ್ನೋ? ಹೌದು. ನಾನು ನಿಮಗೆ ಹೇಳುವುದೇನೆಂದರೆ, ಯೋಹಾನನು ಪ್ರವಾದಿಗಿಂತಲೂ ಶ್ರೇಷ್ಠನಾಗಿದ್ದಾನೆ.
27 ؅ಇಗೋ! ನಾನು (ದೇವರು) ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ. ಅವನು ನಿನಗೋಸ್ಕರ ದಾರಿಯನ್ನು ಸಿದ್ಧಮಾಡುವನು؆ ಎಂದು ಯೋಹಾನನ ಕುರಿತು ಬರೆದಿದೆ. ಮಲಾಕಿ 3:1
28 ಈ ಲೋಕದಲ್ಲಿ ಹುಟ್ಟಿದ ಎಲ್ಲಾ ಮನುಷ್ಯರಲ್ಲಿ ಯೋಹಾನನೇ ದೊಡ್ಡವನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೂ ದೇವರ ರಾಜ್ಯದಲ್ಲಿರುವ ಕನಿಷ್ಠನು ಸಹ ಅವನಿಗಿಂತ ಶ್ರೇಷ್ಠನೇ ಸರಿ” ಎಂದನು.
29 ”ಯೋಹಾನನು ಉಪದೇಶಿಸಿದ ದೇವರ ವಾಕ್ಯವನ್ನು ಜನರೆಲ್ಲರೂ ಸ್ವೀಕರಿಸಿಕೊಂಡರು. ಸುಂಕವಸೂಲಿಗಾರರೂ ಸ್ವೀಕರಿಸಿಕೊಂಡರು. ಇವರೆಲ್ಲರೂ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು.
30 ಆದರೆ ಫರಿಸಾಯರು ಮತ್ತು ಧರ್ಮೋಪದೇಶಕರು ದೇವರ ಯೋಜನೆಯನ್ನು ತಿರಸ್ಕರಿಸಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಲ್ಲ.
31 ”ಈ ಕಾಲದ ಜನರ ಬಗ್ಗೆ ನಾನು ಏನು ಹೇಳಲಿ? ನಾನು ಅವರನ್ನು ಯಾವುದಕ್ಕೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ?
32 ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಹೋಲುತ್ತಾರೆ. ಒಂದು ಗುಂಪಿನ ಮಕ್ಕಳು ಇನ್ನೊಂದು ಗುಂಪಿನ ಮಕ್ಕಳನ್ನು ಕರೆದು, ؅ನಾವು ನಿಮಗೋಸ್ಕರ ವಾದ್ಯಬಾರಿಸಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ದುಃಖದ ಹಾಡನ್ನು ಹಾಡಿದೆವು, ಆದರೆ ನೀವು ಅಳಲಿಲ್ಲ؆ ಎಂದು ಹೇಳುತ್ತಾರೆ.
33 ಸ್ನಾನಿಕ ಯೋಹಾನನು ಬಂದನು. ಅವನು ಇತರರಂತೆ ತಿನ್ನಲಿಲ್ಲ ಅಥವಾ ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ನೀವು, ؅ಅವನಿಗೆ ದೆವ್ವ ಹಿಡಿದಿದೆ؆ ಎಂದು ಹೇಳುತ್ತೀರಿ.
34 ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ؅ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!؆ ಎನ್ನುತ್ತೀರಿ.
35 ಆದರೆ ಜ್ಞಾನವು ತನ್ನ ಕಾರ್ಯಗಳಿಂದಲೇ ತನ್ನನ್ನು ಸಮರ್ಥಿಸಿಕೊಳ್ಳುವುದು” ಎಂದು ಹೇಳಿದನು.
36 ಫರಿಸಾಯರಲ್ಲಿ ಒಬ್ಬನು ಯೇಸುವನ್ನು ಊಟಕ್ಕೆ ಬರಬೇಕೆಂದು ಕೇಳಿಕೊಂಡನು. ಆದ್ದರಿಂದ ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತುಕೊಂಡನು.
37 ಆ ಊರಿನಲ್ಲಿ ಪಾಪಿಷ್ಠಳಾದ ಒಬ್ಬ ಸ್ತ್ರೀ ಇದ್ದಳು. ಯೇಸುವು ಫರಿಸಾಯನ ಮನೆಯಲ್ಲಿ ಊಟಮಾಡುತ್ತಿದ್ದಾನೆಂದು ಆಕೆಗೆ ತಿಳಿಯಿತು. ಆದ್ದರಿಂದ ಆಕೆ ಭರಣಿಯಲ್ಲಿ ಸ್ವಲ್ಪ ಪರಿಮಳ ತೈಲವನ್ನು ತೆಗೆದುಕೊಂಡು ಬಂದಳು.
38 ಆಕೆ ಯೇಸುವಿನ ಪಾದಗಳ ಬಳಿ ಅಳುತ್ತಾ, ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತೇವೆಮಾಡಿ ತನ್ನ ತಲೆಯ ಕೂದಲಿನಿಂದ ಯೇಸುವಿನ ಪಾದಗಳನ್ನು ಒರಸಿದಳು. ಆಕೆ ಅನೇಕಸಲ ಆತನ ಪಾದಗಳಿಗೆ ಮುದ್ದಿಟ್ಟು ಪರಿಮಳತೈಲವನು ಹಚ್ಚಿದಳು.
39 ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.
40 ಅದಕ್ಕೆ ಯೇಸು ಫರಿಸಾಯನಿಗೆ, “ಸಿಮೋನನೇ, ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದನು. ಸಿಮೋನನು, “ಗುರುವೇ, ಹೇಳು!” ಎಂದನು.
41 ಯೇಸು, “ಇಬ್ಬರು ಮನುಷ್ಯರಿದ್ದರು. ಅವರಿಬ್ಬರೂ ಒಬ್ಬನೇ ಸಾಹುಕಾರನಿಂದ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು. ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು.
42 ಅವರಲ್ಲಿ ಹಣವಿರಲಿಲ್ಲ. ಆದ್ದರಿಂದ ಅವರು ಸಾಲ ತೀರಿಸಲು ಆಗಲಿಲ್ಲ. ಸಾಹುಕಾರನು ಅವರಿಗೆ, ؅ನೀವು ಸಾಲ ತೀರಿಸಬೇಕಾಗಿಲ್ಲ؆ ಎಂದು ಹೇಳಿದನು. ಆ ಇಬ್ಬರಲ್ಲಿ ಯಾರು ಹೆಚ್ಚಾಗಿ ಸಾಹುಕಾರನನ್ನು ಪ್ರೀತಿಸುವರು?” ಎಂದು ಕೇಳಿದನು.
43 ಸಿಮೋನನು, “ಹೆಚ್ಚು ಸಾಲ ತೆಗೆದುಕೊಂಡಿದ್ದವನೇ ಎಂದು ತೋರುತ್ತದೆ” ಎಂದನು. ಯೇಸು ಸಿಮೋನನಿಗೆ, “ನೀನು ಸರಿಯಾಗಿ ಹೇಳಿದೆ” ಎಂದನು.
44 ಬಳಿಕ ಯೇಸು ಸ್ತ್ರೀಯ ಕಡೆಗೆ ನೋಡಿ ಸಿಮೋನನಿಗೆ, “ಈ ಸ್ತ್ರೀಯು ನಿನಗೆ ಕಾಣುತ್ತಿರುವಳೇ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಪಾದಗಳಿಗೆ ನೀರು ಕೊಡಲಿಲ್ಲ. ಆದರೆ ಈಕೆ ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವೆಮಾಡಿ ತನ್ನ ತಲೆಯ ಕೂದಲಿಂದ ಒರಸಿದಳು.
45 ನೀನು ನನಗೆ ಮುದ್ದಿಡಲಿಲ್ಲ. ಈಕೆಯಾದರೊ ನಾನು ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುದ್ದಿಡುತ್ತಿದ್ದಾಳೆ!
46 ನೀನು ನನ್ನ ತಲೆಗೆ ಎಣ್ಣೆಯನ್ನು ಹಚ್ಚಲಿಲ್ಲ. ಈಕೆಯಾದರೊ ನನ್ನ ಪಾದಗಳಿಗೆ ಪರಿಮಳತೈಲವನ್ನು ಹಚ್ಚಿದಳು.
47 ಈಕೆಯ ಅನೇಕ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ಈಕೆ ಅಧಿಕವಾದ ಪ್ರೀತಿಯನ್ನು ತೋರಿದಳು. ಆದರೆ ಸ್ವಲ್ಪ ಕ್ಷಮೆ ಹೊಂದುವವನು ಕೇವಲ ಸ್ವಲ್ಪ ಪ್ರೀತಿಯನ್ನೇ ತೋರುವನು” ಎಂದು ಹೇಳಿದನು.
48 ಬಳಿಕ ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
49 ಊಟಕ್ಕೆ ಕುಳಿತುಕೊಂಡಿದ್ದವರು, “ಇವನು (ಯೇಸು) ತನ್ನನ್ನು ಯಾರೆಂದುಕೊಂಡಿದ್ದಾನೆ? ಪಾಪಗಳನ್ನು ಕ್ಷಮಿಸಲು ಇವನಿಗೆ ಹೇಗೆ ಸಾಧ್ಯ?” ಎಂದು ತಮ್ಮೊಳಗೆ ಅಂದುಕೊಂಡರು.
50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯಿಂದಲೇ ನಿನಗೆ ರಕ್ಷಣೆ ಆಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.

Luke 7:29 Kannada Language Bible Words basic statistical display

COMING SOON ...

×

Alert

×