ಅಲ್ಲಿ ಒಬ್ಬ ಸೇನಾಧಿಪತಿ [*ಸೇನಾಧಿಪತಿ ನೂರು ಮಂದಿ ಸೈನಿಕರ ಮೇಲೆ ಅಧಿಕಾರವಿದ್ದ ರೋಮ್ ಸೈನ್ಯದ ಅಧಿಕಾರಿ.] ಇದ್ದನು. ಅವನ ಪ್ರಿಯ ಸೇವಕನೊಬ್ಬನು ಕಾಯಿಲೆಯಿಂದ ಸಾಯುವ ಸ್ಥಿತಿಯಲ್ಲಿದ್ದನು.
ನಿನ್ನ ಅಧಿಕಾರವನ್ನು ನಾನು ತಿಳಿದುಕೊಂಡಿದ್ದೇನೆ. ನಾನೂ ಮತ್ತೊಬ್ಬರ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ. ನಾನು ಒಬ್ಬ ಸೈನಿಕನಿಗೆ, ‘ಹೋಗು’ ಎಂದು ಹೇಳಿದರೆ, ಅವನು ಹೋಗುತ್ತಾನೆ. ಇನ್ನೊಬ್ಬ ಸೈನಿಕನಿಗೆ, ‘ಬಾ’ ಎಂದು ಹೇಳಿದರೆ, ಅವನು ಬರುತ್ತಾನೆ. ನನ್ನ ಆಳಿಗೆ, ‘ಇದನ್ನು ಮಾಡು’ ಎಂದು ಹೇಳಿದರೆ, ಅವನು ನನಗೆ ವಿಧೇಯನಾಗುತ್ತಾನೆ” ಎಂದು ಯೇಸುವಿಗೆ ಹೇಳಲು ಕಳುಹಿಸಿದನು.
ಯೇಸು ಇದನ್ನು ಕೇಳಿ ಆಶ್ಚರ್ಯಪಟ್ಟು ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಕಡೆಗೆ ನೋಡಿ, “ಇಷ್ಟು ದೊಡ್ಡ ನಂಬಿಕೆಯಿರುವ ವ್ಯಕ್ತಿಯನ್ನು ನಾನು ಇಸ್ರೇಲಿನಲ್ಲಿಯೂ ನೋಡಲಿಲ್ಲ ಎಂದು ನಿಮಗೆ ಹೇಳುತ್ತೇನೆ” ಎಂದನು.
ಯೇಸು ಊರಬಾಗಿಲಿನ ಬಳಿಗೆ ಬಂದಾಗ, ಸತ್ತುಹೋಗಿದ್ದ ಒಬ್ಬನನ್ನು ಸಮಾಧಿ ಮಾಡುವುದಕ್ಕಾಗಿ ಹೊತ್ತುಕೊಂಡು ಹೋಗುತ್ತಿದ್ದ ಜನರ ಗುಂಪನ್ನು ಕಂಡನು. ವಿಧವೆಯೊಬ್ಬಳ ಒಬ್ಬನೇ ಮಗನು ಸತ್ತುಹೋಗಿದ್ದನು. ಅವನ ಶವವನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಊರಿನ ಅನೇಕ ಜನರು ಆಕೆಯೊಡನೆ ಇದ್ದರು.
ಶವದ ಪೆಟ್ಟಿಗೆಯ ಬಳಿಹೋಗಿ ಅದನ್ನು ಮುಟ್ಟಿದನು. ಆ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವವರು ನಿಂತುಕೊಂಡರು. ಯೇಸು ಸತ್ತುಹೋಗಿದ್ದವನಿಗೆ, “ಯೌವನಸ್ಥನೇ, ಎದ್ದೇಳು! ಎಂದು ನಾನು ನಿನಗೆ ಹೇಳುತ್ತೇನೆ” ಎಂದನು.
ಆದ್ದರಿಂದ ಅವರು ಯೇಸುವಿನ ಬಳಿಗೆ ಬಂದು, “ಸ್ನಾನಿಕ ಯೋಹಾನನು ‘ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?’ ಎಂದು ನಿನ್ನನ್ನು ಕೇಳುವುದಕ್ಕಾಗಿ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ” ಎಂದು ಹೇಳಿದರು.
ಬಳಿಕ ಯೇಸು ಯೋಹಾನನ ಶಿಷ್ಯರಿಗೆ, “ನೀವು ಇಲ್ಲಿ ಕಂಡು ಕೇಳಿದ ಸಂಗತಿಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ. ಕುರುಡರಿಗೆ ದೃಷ್ಟಿ ಬರುತ್ತದೆ, ಕುಂಟರು ಕಾಲನ್ನು ಪಡೆದು ನಡೆಯುತ್ತಾರೆ. ಕುಷ್ಠರೋಗಿಗಳು ಗುಣಹೊಂದುತ್ತಾರೆ. ಕಿವುಡರು ಕೇಳುತ್ತಾರೆ, ಸತ್ತವರಿಗೆ ಜೀವ ಬರುತ್ತದೆ ಮತ್ತು ದೇವರ ರಾಜ್ಯದ ಸುವಾರ್ತೆಯು ಬಡವರಿಗೆ ಕೊಡಲ್ಪಡುತ್ತದೆ.
‘ಇಗೋ! ನಾನು (ದೇವರು) ನನ್ನ ದೂತನನ್ನು [†ದೂತನನ್ನು ಅಕ್ಷರಶಃ, “ಸಂದೇಶಕನನ್ನು.”] ನಿನ್ನ ಮುಂದೆ ಕಳುಹಿಸುತ್ತೇನೆ. ಅವನು ನಿನಗೋಸ್ಕರ ದಾರಿಯನ್ನು ಸಿದ್ಧಮಾಡುವನು’ ಮಲಾಕಿ 3:1] ಎಂದು ಯೋಹಾನನ ಕುರಿತು ಬರೆದಿದೆ.
ಆದರೆ ಫರಿಸಾಯರು [‡ಫರಿಸಾಯರು ಯೆಹೂದ್ಯ ಕಟ್ಟಳೆಗಳನ್ನು ಮತ್ತು ಪದ್ಧತಿಗಳನ್ನು ಶ್ರದ್ಧೆಯಿಂದ ಅನುಸರಿಸುವವರು ಎಂದು ಹೇಳಿಕೊಳ್ಳುವ ಯೆಹೂದ್ಯರ ಧಾರ್ಮಿಕ ಗುಂಪಿಗೆ ಸೇರಿದವರು.] ಮತ್ತು ಧರ್ಮೋಪದೇಶಕರು ದೇವರ ಯೋಜನೆಯನ್ನು ತಿರಸ್ಕರಿಸಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಲ್ಲ.
ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಹೋಲುತ್ತಾರೆ. ಒಂದು ಗುಂಪಿನ ಮಕ್ಕಳು ಇನ್ನೊಂದು ಗುಂಪಿನ ಮಕ್ಕಳನ್ನು ಕರೆದು, ‘ನಾವು ನಿಮಗೋಸ್ಕರ ವಾದ್ಯಬಾರಿಸಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ದುಃಖದ ಹಾಡನ್ನು ಹಾಡಿದೆವು, ಆದರೆ ನೀವು ಅಳಲಿಲ್ಲ’ ಎಂದು ಹೇಳುತ್ತಾರೆ.
ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ‘ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!’ ಎನ್ನುತ್ತೀರಿ.
ಆ ಊರಿನಲ್ಲಿ ಪಾಪಿಷ್ಠಳಾದ ಒಬ್ಬ ಸ್ತ್ರೀ ಇದ್ದಳು. ಯೇಸುವು ಫರಿಸಾಯನ ಮನೆಯಲ್ಲಿ ಊಟಮಾಡುತ್ತಿದ್ದಾನೆಂದು ಆಕೆಗೆ ತಿಳಿಯಿತು. ಆದ್ದರಿಂದ ಆಕೆ ಭರಣಿಯಲ್ಲಿ [§ಭರಣಿ ಮೂಲತಃ, “ಚಂದ್ರಕಾಂತಶಿಲೆಯ ಭರಣಿ.”] ಸ್ವಲ್ಪ ಪರಿಮಳತೈಲವನ್ನು ತೆಗೆದುಕೊಂಡು ಬಂದಳು.
ಆಕೆ ಯೇಸುವಿನ ಪಾದಗಳ ಬಳಿ ಅಳುತ್ತಾ, ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿನಿಂದ ಯೇಸುವಿನ ಪಾದಗಳನ್ನು ಒರೆಸಿದಳು. ಆಕೆ ಅನೇಕಸಲ ಆತನ ಪಾದಗಳಿಗೆ ಮುದ್ದಿಟ್ಟು ಪರಿಮಳತೈಲವನು ಹಚ್ಚಿದಳು.
ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.
ಯೇಸು, “ಇಬ್ಬರು ಮನುಷ್ಯರಿದ್ದರು. ಅವರಿಬ್ಬರೂ ಒಬ್ಬನೇ ಸಾಹುಕಾರನಿಂದ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು [**ಬೆಳ್ಳಿನಾಣ್ಯಗಳು ಒಂದು ನಾಣ್ಯ. ಅಂದರೆ ರೋಮನ್ನರ ಒಂದು “ದೆನರಿಯಸ್.” ಒಂದು ದಿನದ ಕೆಲಸಕ್ಕೆ ದೊರಕುವ ಸರಾಸರಿ ಸಂಬಳ ಇದಾಗಿತ್ತು.] ತೆಗೆದುಕೊಂಡಿದ್ದನು. ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು.
ಅವರಲ್ಲಿ ಹಣವಿರಲಿಲ್ಲ. ಆದ್ದರಿಂದ ಅವರು ಸಾಲ ತೀರಿಸಲು ಆಗಲಿಲ್ಲ. ಸಾಹುಕಾರನು ಅವರಿಗೆ, ‘ನೀವು ಸಾಲ ತೀರಿಸಬೇಕಾಗಿಲ್ಲ’ ಎಂದು ಹೇಳಿದನು. ಆ ಇಬ್ಬರಲ್ಲಿ ಯಾರು ಹೆಚ್ಚಾಗಿ ಸಾಹುಕಾರನನ್ನು ಪ್ರೀತಿಸುವರು?” ಎಂದು ಕೇಳಿದನು.
ಬಳಿಕ ಯೇಸು ಸ್ತ್ರೀಯ ಕಡೆಗೆ ನೋಡಿ ಸಿಮೋನನಿಗೆ, “ಈ ಸ್ತ್ರೀಯು ನಿನಗೆ ಕಾಣುತ್ತಿರುವಳೇ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಪಾದಗಳಿಗೆ ನೀರು ಕೊಡಲಿಲ್ಲ. ಆದರೆ ಈಕೆ ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿಂದ ಒರೆಸಿದಳು.
ಈಕೆಯ ಅನೇಕ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ಈಕೆ ಅಧಿಕವಾದ ಪ್ರೀತಿಯನ್ನು ತೋರಿದಳು. ಆದರೆ ಸ್ವಲ್ಪ ಕ್ಷಮೆ ಹೊಂದುವವನು ಕೇವಲ ಸ್ವಲ್ಪ ಪ್ರೀತಿಯನ್ನೇ ತೋರುವನು” ಎಂದು ಹೇಳಿದನು.