ಸಾವಿರಾರು ಜನರು ಒಬ್ಬರನ್ನೊಬ್ಬರು ನೂಕುತ್ತಾ ಕಿಕ್ಕಿರಿದು ನೆರೆದಿದ್ದರು. ಜನರಿಗೆ ಉಪದೇಶಿಸುವ ಮೊದಲು ಯೇಸು ತನ್ನ ಶಿಷ್ಯರಿಗೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ ಎಚ್ಚರಿಕೆಯಾಗಿರಿ.
ಕತ್ತಲಿನಲ್ಲಿ (ಗುಪ್ತವಾಗಿ) ನೀವು ಹೇಳುವ ವಿಷಯಗಳು ಬೆಳಕಿನಲ್ಲಿ (ಬಹಿರಂಗವಾಗಿ) ತಿಳಿಸಲ್ಪಡುವವು. ಗುಪ್ತವಾಗಿ ಕೋಣೆಯಲ್ಲಿ ನೀವು ಪಿಸುಗುಟ್ಟುವ ವಿಷಯಗಳು, ಮನೆಯ ಮೇಲಿನಿಂದ ಗಟ್ಟಿಯಾಗಿ ಪ್ರಕಟಿಸಲ್ಪಡುವವು” ಎಂದು ಹೇಳಿದನು.
(ಮತ್ತಾಯ 10:32-33; 12:32; 10:19-20) “ನಾನು ನಿಮಗೆ ಹೇಳುವುದೇನೆಂದರೆ, ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನೆಂದು ಹೇಳಿದರೆ, ನಾನು ಸಹ [*ನಾನು ಅಕ್ಷರಶಃ, “ಮನುಷ್ಯಕುಮಾರನು” (ಯೇಸು).] ಅವನನ್ನು ನನ್ನವನೆಂದು ದೇವದೂತರ ಮುಂದೆ ಹೇಳುವೆನು.
ಬಳಿಕ ಯೇಸು ನೆರೆದಿದ್ದ ಜನರಿಗೆ, “ಎಚ್ಚರಿಕೆ, ಯಾವ ವಿಧವಾದ ಸ್ವಾರ್ಥಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಒಬ್ಬನಿಗೆ ಎಷ್ಟೇ ಆಸ್ತಿಯಿದ್ದರೂ ಅದರಿಂದ ಅವನು ಜೀವವನ್ನು ಪಡೆದುಕೊಳ್ಳಲಾರನು” ಎಂದನು.
“ಬಳಿಕ ಅವನು, ‘ನಾನೇನು ಮಾಡಬೇಕೆಂಬುದು ನನಗೆ ತಿಳಿದದೆ. ನನ್ನ ಕಣಜಗಳನ್ನು ಕೆಡವಿ, ದೊಡ್ಡ ಕಣಜಗಳನ್ನು ಕಟ್ಟುವೆನು! ನನ್ನ ಹೊಸ ಕಣಜಗಳಲ್ಲಿ ಗೋಧಿಯನ್ನೂ ಒಳ್ಳೆಯ ಪದಾರ್ಥಗಳನ್ನೂ ತುಂಬಿಸಿಡುವೆನು.’
ಆ ಬಳಿಕ ನಾನು ‘ನನಗೆ ಅನೇಕ ವರ್ಷಗಳವರೆಗೆ ಬೇಕಾದಷ್ಟು ಸರಕನ್ನು ಕೂಡಿಸಿಟ್ಟಿದ್ದೇನೆ. ವಿಶ್ರಮಿಸಿಕೊ, ತಿನ್ನು, ಕುಡಿ, ಸಂತೋಷಪಡು! ಎಂದು ಹೇಳಿಕೊಳ್ಳುವೆನು’ ಎಂಬುದಾಗಿ ಆಲೋಚಿಸಿಕೊಂಡನು.
(ಮತ್ತಾಯ 6:25-34; 19-21) ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಧಾರಣೆಗೆ ಬೇಕಾದ ಊಟಕ್ಕಾಗಿ ಮತ್ತು ತೊಟ್ಟುಕೊಳ್ಳಲು ಬೇಕಾದ ಬಟ್ಟೆಗಾಗಿ ಚಿಂತಿಸಬೇಡಿರಿ.
ಪಕ್ಷಿಗಳನ್ನು ನೋಡಿರಿ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವು ಆಹಾರವನ್ನು ಮನೆಗಳಲ್ಲಾಗಲಿ ಕಣಜಗಳಲ್ಲಾಗಲಿ ತುಂಬಿಟ್ಟುಕೊಳ್ಳುವುದಿಲ್ಲ. ದೇವರೇ ಅವುಗಳನ್ನು ಪರಿಪಾಲಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರಾಗಿದ್ದೀರಿ.
“ಅಡವಿಯ ಹೂವುಗಳು ಬೆಳೆಯುವ ಬಗೆಯನ್ನು ನೋಡಿರಿ. ಅವು ದುಡಿಯುವುದಿಲ್ಲ. ತಮಗಾಗಿ ಉಡುಪುಗಳನ್ನು ಹೊಲಿದುಕೊಳ್ಳುವುದಿಲ್ಲ. ಆದರೂ ಸೊಲೊಮೋನ ರಾಜನು ತನ್ನ ಸಕಲ ವೈಭವದಲ್ಲಿ ಇದ್ದಾಗಲೂ ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ.
ದೇವರು ಬಯಲಿನ ಹುಲ್ಲಿಗೂ ಹೀಗೆ ಉಡಿಸುತ್ತಾನೆ. ಹುಲ್ಲಾದರೋ ಈ ಹೊತ್ತಿದ್ದು ನಾಳೆ ಬೆಂಕಿಯ ಪಾಲಾಗುವುದು. ಹೀಗಿರಲು ದೇವರು ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವುದಿಲ್ಲವೇ? ಆದ್ದರಿಂದ ಅಲ್ಪವಿಶ್ವಾಸಿಗಳಾಗಿರಬೇಡಿ!
ನಿಮ್ಮಲ್ಲಿರುವ ಆಸ್ತಿಯನ್ನು ಮಾರಿ, ಬಂದ ಹಣವನ್ನು ಕೊರತೆಯಲ್ಲಿರುವ ಜನರಿಗೆ ಕೊಡಿರಿ. ಈ ಲೋಕದ ಐಶ್ವರ್ಯ ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಐಶ್ವರ್ಯವನ್ನು ಗಳಿಸಿಕೊಳ್ಳಿರಿ. ಲಯವಾಗದ ಸಂಪತ್ತನ್ನು ಪರಲೋಕದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಆ ಭಂಡಾರವನ್ನು ಕಳ್ಳರು ಕದಿಯಲಾಗುವುದಿಲ್ಲ ಮತ್ತು ಹುಳಗಳು ನಾಶಮಾಡಲಾಗುವುದಿಲ್ಲ.
ಆ ಸೇವಕರೇ ಧನ್ಯರು. ಏಕೆಂದರೆ, ಅವರು ಸಿದ್ಧರಾಗಿದ್ದು ತನಗೋಸ್ಕರ ಕಾಯುತ್ತಿದ್ದುದನ್ನು ಯಜಮಾನನು ನೋಡುತ್ತಾನೆ. ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ಆಗ ಯಜಮಾನನು ತಾನೇ ಸೇವಕರ ಉಡುಪನ್ನು ಧರಿಸಿಕೊಂಡು, ಆ ಸೇವಕರನ್ನು ಕುಳ್ಳಿರಿಸಿ, ಅವರಿಗೆ ಊಟ ಬಡಿಸುತ್ತಾನೆ.
ಆ ಆಳುಗಳು ತಮ್ಮ ಯಜಮಾನನಿಗಾಗಿ ಮಧ್ಯರಾತ್ರಿಯವರೆಗೆ ಅಥವಾ ಇನ್ನೂ ಹೆಚ್ಚು ಸಮಯದವರೆಗೆ ಎಚ್ಚರದಿಂದ ಇರಬೇಕಾಗಬಹುದು. ಆದರೆ ಯಜಮಾನನು ಬಂದು, ಇನ್ನೂ ಎಚ್ಚರದಿಂದಿರುವ ಅವರನ್ನು ಕಂಡಾಗ ಅವರಿಗೆ ಸಂತೋಷವಾಗುವುದು.
“ಆದರೆ ಆ ಸೇವಕನು ದುಷ್ಟನಾಗಿ ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದುಕೊಂಡರೆ ಏನಾಗುವುದು? ಆ ಸೇವಕನು ಯಜಮಾನನ ಇತರ ದಾಸದಾಸಿಯರನ್ನು ಹೊಡೆಯುವುದಕ್ಕೂ ತಿಂದುಕುಡಿದು ಮತ್ತನಾಗುವುದಕ್ಕೂ ತೊಡಗುವನು.
“ತನ್ನ ಯಜಮಾನನು ತನ್ನಿಂದ ಏನು ಅಪೇಕ್ಷಿಸುತ್ತಾನೆ ಎಂಬುದು ಆ ಸೇವಕನಿಗೆ ಗೊತ್ತಿತ್ತು. ಆದರೆ ಅವನು ತನ್ನನ್ನು ಸಿದ್ಧಪಡಿಸಿಕೊಳ್ಳಲಿಲ್ಲ ಮತ್ತು ತನ್ನ ಕೆಲಸವನ್ನು ಪೂರೈಸಲು ಪ್ರಯತ್ನಿಸಲಿಲ್ಲ. ಆದ್ದರಿಂದ ಅವನು ಕಠಿಣ ದಂಡನೆಗೆ ಗುರಿಯಾಗುವನು!
ಆದರೆ ತನ್ನ ಯಜಮಾನನ ಬಯಕೆಯನ್ನು ತಿಳಿದಿಲ್ಲದ ಸೇವಕನಿಗೆ ಏನಾಗುವುದು? ಇವನು ಸಹ ದಂಡನೆಗೆ ಅರ್ಹವಾದ ಕಾರ್ಯಗಳನ್ನು ಮಾಡುತ್ತಾನೆ. ಆದರೆ ತನ್ನ ಕರ್ತವ್ಯವನ್ನು ತಿಳಿದಿದ್ದರೂ ಮಾಡದೆಹೋದ ಸೇವಕನಿಗಿಂತ ಇವನಿಗೆ ಕಡಿಮೆ ದಂಡನೆ ಆಗುವುದು. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ಪಡೆದವನಿಂದ ಇನ್ನೂ ಹೆಚ್ಚಾಗಿ ನಿರೀಕ್ಷಿಸಲಾಗುವುದು.”
ತಂದೆಗೂ ಮಗನಿಗೂ ಭೇದ ಉಂಟಾಗುವುದು. ಮಗನು ತನ್ನ ತಂದೆಗೆ ವಿರೋಧವಾಗುವನು. ತಂದೆಯು ತನ್ನ ಮಗನಿಗೆ ವಿರೋಧವಾಗುವನು, ತಾಯಿಗೂ ಮಗಳಿಗೂ ಭೇದ ಉಂಟಾಗುವುದು. ಮಗಳು ತನ್ನ ತಾಯಿಗೆ ವಿರೋಧವಾಗುವಳು, ತಾಯಿ ತನ್ನ ಮಗಳಿಗೆ ವಿರೋಧವಾಗುವಳು. ಅತ್ತೆಗೂ ಸೊಸೆಗೂ ಭೇದವಿರುವುದು. ಸೊಸೆಯು ತನ್ನ ಅತ್ತೆಗೆ ವಿರೋಧವಾಗುವಳು, ಅತ್ತೆಯು ತನ್ನ ಸೊಸೆಗೆ ವಿರೋಧವಾಗುವಳು.”
ಬಳಿಕ ಯೇಸು ಜನರಿಗೆ ಹೀಗೆಂದನು: “ಮೋಡವು ಪಶ್ಚಿಮ ದಿಕ್ಕಿನಲ್ಲಿ ದೊಡ್ಡದಾಗುತ್ತಿರುವುದನ್ನು ನೀವು ನೋಡುವಾಗ ‘ಇಂದು ಮಳೆ ಬರುತ್ತದೆ’ ಎಂದು ಹೇಳುತ್ತೀರಿ. ಅಂತೆಯೇ ಅಂದು ಮಳೆಯಾಗುತ್ತದೆ.
ಒಬ್ಬನು ನಿಮ್ಮ ಮೇಲೆ ದಾವೆ ಹೂಡಲು ನ್ಯಾಯಾಲಯಕ್ಕೆ ಹೋಗುತ್ತಿರುವಾಗ ನಿಮ್ಮ ಸಮಸ್ಯೆಯನ್ನು ದಾರಿಯಲ್ಲಿಯೇ ಪರಿಹರಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ಇಲ್ಲವಾದರೆ, ಅವನು ನಿಮ್ಮನ್ನು ನ್ಯಾಯಾಧೀಶನ ಬಳಿಗೆ ಕೊಂಡೊಯ್ಯುವನು. ನ್ಯಾಯಾಧೀಶನು ನಿಮ್ಮನ್ನು ಸೆರೆಮನೆಗೆ ಹಾಕಿಸುವನು.