ಕೊಳದ ಬಳಿಯಲ್ಲಿದ್ದ ಮಂಟಪಗಳಲ್ಲಿ ಅನೇಕ ರೋಗಿಗಳು ಬಿದ್ದುಕೊಂಡಿರುತ್ತಿದ್ದರು. ಅವರಲ್ಲಿ ಕೆಲವರು ಕುರಡರಾಗಿದ್ದರು, ಕೆಲವರು ಕುಂಟರಾಗಿದ್ದರು, ಮತ್ತೆ ಕೆಲವರು, ಪಾರ್ಶ್ವವಾಯು ರೋಗಿಗಳಾಗಿದ್ದರು. [*ಕೆಲವು ಗ್ರೀಕ್ ಪ್ರತಿಗಳಲ್ಲಿ 3 ನೇ ವಚನದ ಕೊನೇ ಭಾಗ ಸೇರಿಸಲಾಗಿದೆ: “ಇವರು ನೀರು ಉಕ್ಕುವುದನ್ನು ಕಾದುಕೊಂಡಿರುವರು.”]
[†ಕೆಲವು ಗ್ರೀಕ್ ಪ್ರತಿಗಳಲ್ಲಿ 4 ನೇ ವಚನ ಸೇರಿಸಲಾಗಿದೆ: “ಒಬ್ಬ ದೇವದೂತನು ಆಗಾಗ್ಗೆ ಕೊಳದಲ್ಲಿ ಇಳಿದುಬಂದು ನೀರನ್ನು ಉಕ್ಕಿಸುವನು; ನೀರನ್ನು ಉಕ್ಕಿಸಿದ ಮೇಲೆ ಮೊದಲು ಒಳಗೆ ಹೋದವನು ಯಾವ ರೋಗದಲ್ಲಿ ಬಿದ್ದಿದ್ದರೂ ಸ್ವಸ್ಥನಾಗುವನು.”]
ಆ ರೋಗಿಯು, “ಅಯ್ಯಾ, ನೀರು ಉಕ್ಕುವಾಗ ಕೊಳದೊಳಗೆ ಇಳಿದುಹೋಗಲು ನನಗೆ ಯಾರೂ ಸಹಾಯ ಮಾಡುವುದಿಲ್ಲ. ನಾನು ಎಲ್ಲರಿಗಿಂತ ಮೊದಲೇ ನೀರಿಗೆ ಇಳಿಯಲು ಪ್ರಯತ್ನಿಸುವೆ. ಆದರೆ ಪ್ರತಿಸಲವೂ ನನಗಿಂತ ಮೊದಲೇ ಮತ್ತೊಬ್ಬನು ಇಳಿದುಬಿಡುತ್ತಾನೆ” ಎಂದು ಹೇಳಿದನು.
ಆದ್ದರಿಂದ ಯೆಹೂದ್ಯರು ಗುಣಹೊಂದಿದ ಆ ವ್ಯಕ್ತಿಗೆ, “ಇಂದು ಸಬ್ಬತ್ದಿನ. ನೀನು ಸಬ್ಬತ್ದಿನದಲ್ಲಿ [‡ಸಬ್ಬತ್ದಿನ ಯೆಹೂದ್ಯರ ವಾರದಲ್ಲಿ ಶನಿವಾರವು ಏಳನೆಯ ದಿನ.] ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು” ಎಂದರು.
ಅನಂತರ ಯೇಸು ಆ ಮನುಷ್ಯನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ನೋಡು, ಈಗ ನೀನು ಗುಣಹೊಂದಿರುವೆ. ಆದರೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹೆಚ್ಚಿನ ಕೇಡು ನಿನಗೆ ಸಂಭವಿಸಬಹುದು!” ಎಂದು ಹೇಳಿದನು.
ಯೇಸು ಸಬ್ಬತ್ತನ್ನು ಉಲ್ಲಂಘಿಸಿದ್ದಲ್ಲದೆ ದೇವರನ್ನು ತನ್ನ ತಂದೆಯೆಂದು ಹೇಳಿಕೊಂಡು ತನ್ನನ್ನು ದೇವರಿಗೆ ಸರಿಸಮಾನನನ್ನಾಗಿ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಆತನನ್ನು ಕೊಲ್ಲಲು ಮತ್ತಷ್ಟು ಪ್ರಯತ್ನಿಸಿದರು.
ಅದಕ್ಕೆ ಉತ್ತರವಾಗಿ ಆತನು ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಮಗನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ತಂದೆಯು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ತಂದೆಯು ಮಾಡುವ ಕಾರ್ಯಗಳನ್ನೇ ಮಗನೂ ಮಾಡುತ್ತಾನೆ.
ತಂದೆಯು ಮಗನನ್ನು ಪ್ರೀತಿಸುವನು ಮತ್ತು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ಮಗನಿಗೆ ತೋರಿಸುವನು. ಆದರೆ ಇದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ತಂದೆಯು ಮಗನಿಗೆ ತೋರಿಸುವನು. ಆಗ ನೀವೆಲ್ಲರೂ ಆಶ್ಚರ್ಯಚಕಿತರಾಗುವಿರಿ.
“ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ಮಾತನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನಿಗೆ ಅಪರಾಧಿಯೆಂಬ ತೀರ್ಪಾಗುವುದಿಲ್ಲ. ಅವನು ಈಗಾಗಲೇ ಮರಣವನ್ನು ದಾಟಿ ಜೀವಕ್ಕೆ ಪ್ರವೇಶಿಸಿದ್ದಾನೆ.
ಆಗ ಅವರು ತಮ್ಮ ಸಮಾಧಿಗಳಿಂದ ಎದ್ದುಬರುವರು. ಜೀವನದಲ್ಲಿ ಒಳ್ಳೆಯದನ್ನು ಮಾಡಿದ ಜನರು ಪುನರುತ್ಥಾನಗೊಂಡು ನಿತ್ಯಜೀವವನ್ನು ಹೊಂದಿಕೊಳ್ಳುವರು. ಆದರೆ ಕೆಟ್ಟದ್ದನ್ನು ಮಾಡಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವುದು.
“ನಾನು ಒಬ್ಬಂಟಿಗನಾಗಿ ಏನೂ ಮಾಡಲಾರೆನು. ನಾನು ಕೇಳಿದ್ದಕ್ಕನುಸಾರವಾಗಿ ತೀರ್ಪು ಮಾಡುತ್ತೇನೆ. ಆದ್ದರಿಂದ ನನ್ನ ತೀರ್ಪು ಸರಿಯಾದದ್ದು. ಏಕೆಂದರೆ, ನಾನು ನನ್ನನ್ನು ಮೆಚ್ಚಿಸಲು ಪ್ರಯತ್ನಿಸದೆ ನನ್ನ ತಂದೆಯನ್ನು ಮೆಚ್ಚಿಸಲು ಪ್ರಯತ್ನಿಸುತ್ತೇನೆ.
“ಆದರೆ ನನ್ನ ಬಗ್ಗೆ ನನ್ನಲ್ಲಿ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿಗಳಿವೆ. ನಾನು ಮಾಡುವ ಕಾರ್ಯಗಳೇ ನನ್ನ ಸಾಕ್ಷಿಗಳಾಗಿವೆ. ತಂದೆಯು ನನಗೆ ಕೊಟ್ಟಿರುವ ಈ ಕಾರ್ಯಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಎಂಬುದನ್ನು ತೋರಿಸುತ್ತವೆ.
ಅಲ್ಲದೆ ನನ್ನನ್ನು ಕಳುಹಿಸಿದ ತಂದೆಯು ನನ್ನ ಬಗ್ಗೆ ತಾನೇ ಸಾಕ್ಷಿ ಕೊಟ್ಟಿದ್ದಾನೆ. ಆದರೆ ನೀವು ಆತನ ಧ್ವನಿಯನ್ನು ಎಂದೂ ಕೇಳಿಲ್ಲ. ಆತನು ಹೇಗಿದ್ದಾನೆ ಎಂಬುದನ್ನು ನೀವು ಎಂದೂ ಕಂಡಿಲ್ಲ.
ನೀವು ಪವಿತ್ರ ಗ್ರಂಥವನ್ನು ಜಾಗ್ರತೆಯಿಂದ ಅಧ್ಯಯನ ಮಾಡುತ್ತೀರಿ. ಆ ಪವಿತ್ರ ಗ್ರಂಥವು ನಿಮಗೆ ನಿತ್ಯಜೀವವನ್ನು ಕೊಡುತ್ತದೆ ಎಂಬುದು ನಿಮ್ಮ ಆಲೋಚನೆ. ಅದೇ ಪವಿತ್ರ ಗ್ರಂಥವು ನನ್ನ ಬಗ್ಗೆ ತಿಳಿಸುತ್ತದೆ!
ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನಾನು ಆತನಿಗೋಸ್ಕರ ಮಾತಾಡುತ್ತೇನೆ. ಆದರೆ ನೀವು ನನ್ನನ್ನು ಸ್ವೀಕರಿಸಿಕೊಳ್ಳುವುದಿಲ್ಲ. ಮತ್ತೊಬ್ಬನು ಬಂದು ತನಗೋಸ್ಕರವಾಗಿ ಮಾತಾಡಿದರೆ ನೀವು ಅವನನ್ನು ಸ್ವೀಕರಿಸಿಕೊಳ್ಳುತ್ತೀರಿ.
ನಾನು ತಂದೆಯ ಮುಂದೆ ನಿಂತುಕೊಂಡು ನಿಮ್ಮನ್ನು ತಪ್ಪಿತಸ್ಥರೆಂಬುದಾಗಿ ಹೇಳುತ್ತೇನೆಂದು ಯೋಚಿಸಬೇಡಿರಿ. ನಿಮ್ಮನ್ನು ರಕ್ಷಿಸುತ್ತಾನೆಂದು ನೀವು ನಿರೀಕ್ಷಿಸಿಕೊಂಡಿರುವ ಮೋಶೆಯೇ ನಿಮ್ಮ ಮೇಲೆ ದೂರು ಹೇಳುವನು.