ಕಲ್ಲಿನಿಂದ ಮಾಡಿದ ಆರು ದೊಡ್ಡ ಬಾನೆಗಳು ಅಲ್ಲಿದ್ದವು. ಯೆಹೂದ್ಯರು ಶುದ್ಧಾಚಾರಗಳಿಗಾಗಿ ಈ ಕಲ್ಲಿನ ಬಾನೆಗಳನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಬಾನೆಯೂ ಸುಮಾರು ನೂರು ಲೀಟರ್ಗಳಷ್ಟು ನೀರು ಹಿಡಿಯುತ್ತಿತ್ತು.
ಮದುವೆಯ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿ ನೋಡಿದನು. ದ್ರಾಕ್ಷಾರಸವು ಎಲ್ಲಿಂದ ಬಂತೆಂಬುದು ಅವನಿಗೆ ಗೊತ್ತಿರಲಿಲ್ಲ. ಆದರೆ ಅದು ಆ ಸೇವಕರಿಗೆ ತಿಳಿದಿತ್ತು. ಮದುವೆಯ ಮೇಲ್ವಿಚಾರಕನು ಮದುಮಗನನ್ನು ಕರೆದು,
“ಜನರು ಉತ್ತಮವಾದ ದ್ರಾಕ್ಷಾರಸವನ್ನು ಯಾವಾಗಲೂ ಮೊದಲು ಹಂಚುತ್ತಾರೆ. ಅತಿಥಿಗಳು ಕುಡಿದು ಮತ್ತರಾದ ಮೇಲೆ ಅವರಿಗೆ ಕಡಿಮೆ ದರ್ಜೆಯ ದ್ರಾಕ್ಷಾರಸವನ್ನು ಕೊಡುತ್ತಾರೆ. ಆದರೆ ನೀನು ಉತ್ತಮವಾದ ದ್ರಾಕ್ಷಾರಸವನ್ನು ಈವರೆಗೂ ಇಟ್ಟಿರುವೆ!” ಎಂದು ಹೇಳಿದನು.
ದೇವಾಲಯದಲ್ಲಿ ಜನರು ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವುದನ್ನು ಯೇಸು ಕಂಡನು. ಇತರ ಕೆಲವು ಜನರು ಮೇಜುಗಳ ಸಮೀಪದಲ್ಲಿ ಕುಳಿತುಕೊಂಡು ಹಣ ವಿನಿಮಯ ಮಾಡುತ್ತಿದ್ದರು ಮತ್ತು ವ್ಯಾಪಾರ ಮಾಡುತ್ತಿದ್ದರು.
ಯೇಸು ಹಗ್ಗದ ಕೆಲವು ತುಂಡುಗಳನ್ನು ತೆಗೆದುಕೊಂಡು ಅವುಗಳಿಂದ ಒಂದು ಚಾವಟಿ ಮಾಡಿ ಆ ಜನರನ್ನು ಮತ್ತು ದನಕುರಿಗಳನ್ನು ಬಲವಂತವಾಗಿ ದೇವಾಲಯದಿಂದ ಹೊರಗಟ್ಟಿದನು. ಯೇಸು ಮೇಜುಗಳನ್ನು ಕೆಡವಿ, ಹಣ ವಿನಿಮಯ ಮಾಡುತ್ತಿದ್ದ ಜನರ ಹಣವನ್ನು ಚೆಲ್ಲಿದನು.