English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Isaiah Chapters

Isaiah 8 Verses

1 ಯೆಹೋವನು ಹೇಳಿದ್ದೇನೆಂದರೆ, “ಒಂದು ದೊಡ್ಡ ಸುರುಳಿಯನ್ನು ತಂದು ಅದರ ಮೇಲೆ ಹೀಗೆ ಲೇಖನಿಯಿಂದ ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್‌.’ ” (ಇದರರ್ಥ: “ಕೊಳ್ಳೆಗೆ ಅವಸರ, ಸೂರೆಗೆ ಆತುರ.”)
2 ನಾನು ನಂಬಿಗಸ್ತರಾದ ಕೆಲವು ಜನರನ್ನು ಸಾಕ್ಷಿಗೋಸ್ಕರವಾಗಿ ಆರಿಸಿಕೊಂಡೆನು. (ಅವರು ಯಾರೆಂದರೆ, ಯಾಜಕನಾದ ಊರೀಯ ಮತ್ತು ಯೆಬೆರೆಕ್ಯನ ಮಗನಾದ ಜೆಕರ್ಯ.) ನಾನು ಆ ವಾಕ್ಯವನ್ನು ಬರೆಯುವಾಗ ಇವರು ನೋಡುತ್ತಿದ್ದರು.
3 ಆಮೇಲೆ ನಾನು ಒಬ್ಬ ಪ್ರವಾದಿನಿಯ ಬಳಿಗೆ ಹೋದೆನು. ಆಕೆಯನ್ನು ಕೂಡಲು, ಆಕೆ ಗರ್ಭವತಿಯಾಗಿ ಒಬ್ಬ ಮಗನನ್ನು ಹಡೆದಳು. ಆಗ ಯೆಹೋವನು ನನಗೆ, “ ‘ಆ ಮಗನಿಗೆ ಮಹೇರ್ ಶಾಲಾಲ್ ಹಾಷ್ ಬಜ್‌’ ಎಂಬ ಹೆಸರನ್ನಿಡು.
4 ಯಾಕೆಂದರೆ ಆ ಮಗನು ಅಪ್ಪಾ, ಅಮ್ಮಾ ಎಂದು ಕರೆಯಲು ತೊಡಗುವ ಮೊದಲೇ ದೇವರು ದಮಸ್ಕ ಮತ್ತು ಸಮಾರ್ಯದ ಎಲ್ಲಾ ಐಶ್ವರ್ಯವನ್ನು ತೆಗೆದು ಅದನ್ನು ಅಶ್ಶೂರದ ಅರಸನಿಗೆ ಕೊಡುವನು” ಎಂದು ಹೇಳಿದನು.
5 ಮತ್ತೆ ಯೆಹೋವನು ನನ್ನೊಂದಿಗೆ ಮಾತನಾಡಿದನು.
6 ನನ್ನ ಒಡೆಯನು ಹೀಗೆಂದನು: “ಈ ಜನರು ನಿಧಾನವಾಗಿ ಹರಿಯುವ ಸಿಲೋವ ಕೊಳದ ನೀರನ್ನು ಸ್ವೀಕರಿಸುವುದಿಲ್ಲ. ಇವರು ರೆಚೀನ್ ಮತ್ತು ರೆಮಲ್ಯನ ಮಗನೊಂದಿಗೆ ಸಂತೋಷದಲ್ಲಿದ್ದಾರೆ.
7 ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ಅಶ್ಶೂರದ ಅರಸನನ್ನೂ ಅವನ ಸಮಸ್ತ ಸೈನ್ಯವನ್ನೂ ತರುವೆನು. ಅವರು ಯೂಫ್ರೇಟೀಸ್ ನದಿಯ ರಭಸದ ಪ್ರವಾಹದ ನೀರಿನಂತೆ ಬರುವರು. ಅವರು ನದಿಯ ದಂಡೆಯ ಮೇಲೆ ಏರಿಬರುವ ನೀರಿನಂತಿರುವರು.
8 ಆ ನೀರು ಹೊಳೆಯಿಂದಾಚೆ ಬಂದು ಯೆಹೂದದ ಮೇಲೆ ಹರಿಯುವುದು. ಆ ನೀರು ಏರುತ್ತಾಬಂದು ಯೆಹೂದವನ್ನು ಕುತ್ತಿಗೆಯ ತನಕ ಮುಳುಗಿಸುವದು ಮಾತ್ರವಲ್ಲ ಅದನ್ನು ಸಂಪೂರ್ಣವಾಗಿ ಮುಳುಗಿಸಿಬಿಡುವದು. “ಇಮ್ಮಾನುವೇಲನೇ, ಈ ಜಲಪ್ರವಾಹವು ಎಲ್ಲಾ ಕಡೆಗಳಿಗೆ ಹಬ್ಬುತ್ತಾ ನಿಮ್ಮ ದೇಶವನ್ನು ಪೂರ್ತಿಯಾಗಿ ಮುಚ್ಚಿಬಿಡುವದು.”
9 ಸಮಸ್ತ ಜನಾಂಗಗಳೇ, ಯುದ್ಧಕ್ಕೆ ಸಿದ್ಧರಾಗಿ! ನೀವು ಸೋಲುವಿರಿ. ದೂರದೇಶದವರೇ, ಕೇಳಿರಿ, ರಣರಂಗಕ್ಕಿಳಿಯಲು ಸಿದ್ಧರಾಗಿ! ನೀವು ಸೋಲುವಿರಿ.
10 ಯುದ್ಧ ಮಾಡಲು ಯೋಜನೆ ಹಾಕಿರಿ. ಆದರೆ ನಿಮ್ಮ ಯೋಜನೆಯೆಲ್ಲಾ ನಿಷ್ಫಲವಾಗುವುದು. ನಿಮ್ಮ ಸೈನ್ಯಕ್ಕೆ ಆಜ್ಞೆಕೊಡಿರಿ. ಆದರೆ ಅದು ನಿಷ್ಪ್ರಯೋಜಕವಾಗುವುದು. ಯಾಕೆಂದರೆ ದೇವರು ನಮ್ಮೊಂದಿಗಿದ್ದಾನೆ!
11 ಯೆಹೋವನು ತನ್ನ ಮಹಾಶಕ್ತಿಯಿಂದ ನನ್ನೊಡನೆ ಮಾತನಾಡಿದನು. ನಾನು ಇತರರಂತೆ ಇರಬಾರದೆಂದು ಯೆಹೋವನು ನನ್ನನ್ನು ಎಚ್ಚರಿಸಿದನು. ಆತನು ನನಗೆ,
12 “ಪ್ರತಿಯೊಬ್ಬನೂ ‘ಇನ್ನೊಬ್ಬನು ನಿನಗೆ ವಿರುದ್ಧವಾಗಿ ಕೇಡು ಬಗೆಯುತ್ತಾನೆ’ ಎಂದು ಹೇಳುವನು. ಅದನ್ನು ನೀನು ನಂಬಬೇಡ. ಆ ಜನರು ಭಯಪಡುವ ವಿಷಯಗಳಿಗೆ ನೀನು ಭಯಪಡಬೇಡ.
13 “ಸರ್ವಶಕ್ತನಾದ ಯೆಹೋವನೊಬ್ಬನಿಗೇ ನೀನು ಭಯಪಡಬೇಕು. ಆತನನ್ನೇ ನೀನು ಗೌರವಿಸಬೇಕು. ನೀನು ಭಯಪಡಬೇಕಾದದ್ದು ಆತನೊಬ್ಬನಿಗೇ.
14 ನೀನು ಯೆಹೋವನನ್ನು ಪರಿಶುದ್ಧನೆಂದು ಪರಿಗಣಿಸಿ ಗೌರವಿಸಿದರೆ, ಆತನು ನಿನಗೆ ಆಶ್ರಯನಾಗುವನು. ಆದರೆ ನೀನು ಆತನನ್ನು ಸನ್ಮಾನಿಸದೆ ಹೋದರೆ ಆತನು ನಿನಗೆ ಮುಗ್ಗರಿಸುವ ಕಲ್ಲಾಗಿ ಪರಿಣಮಿಸುವನು. ಆತನು ಇಸ್ರೇಲಿನ ಎರಡು ಕುಟುಂಬಗಳವರಿಗೆ ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿರುವನು. ಯೆಹೋವನು ಜೆರುಸಲೇಮಿನ ಎಲ್ಲಾ ಜನರನ್ನು ಹಿಡಿಯುವ ಬಲೆಯಾಗಿರುವನು.
15 ಎಷ್ಟೋ ಜನರು ಈ ಬಂಡೆಯನ್ನು ಎಡವಿಬೀಳುವರು. ಅವರು ಬಿದ್ದು ಮುರಿಯಲ್ಪಡುವರು; ಬಲೆಗೆ ಸಿಕ್ಕಿಕೊಳ್ಳುವರು.”
16 ಯೆಹೋವನು, “ಒಡಂಬಡಿಕೆ ಮಾಡಿಕೊಂಡು ಅದಕ್ಕೆ ಮುದ್ರೆಹಾಕು. ಮುಂದಿನ ಪೀಳಿಗೆಗಾಗಿ ನನ್ನ ಬೋಧನೆಯನ್ನು ಜೋಪಾನವಾಗಿರಿಸು. ನನ್ನ ಹಿಂಬಾಲಕರ ಕಣ್ಣೆದುರಿನಲ್ಲೇ ಹೀಗೆ ಮಾಡು” ಎಂದು ಹೇಳಿದನು.
17 ಆ ಒಡಂಬಡಿಕೆಯು ಹೀಗಿತ್ತು: ನನ್ನ ದೇವರಾದ ಯೆಹೋವನ ಸಹಾಯಕ್ಕಾಗಿ ನಾನು ಕಾಯುತ್ತಿರುವೆನು. ಯಾಕೋಬನ ಕುಟುಂಬದ ಬಗ್ಗೆ ಯೆಹೋವನು ನಾಚಿಕೊಂಡಿದ್ದಾನೆ. ಅವರ ಕಡೆ ನೋಡಲು ಆತನು ನಿರಾಕರಿಸುತ್ತಾನೆ. ಆದರೆ ನಾನು ಯೆಹೋವನನ್ನು ನಿರೀಕ್ಷಿಸುವೆನು. ಆತನು ನಮ್ಮನ್ನು ರಕ್ಷಿಸುವನು.
18 “ನಾನೂ ನನ್ನ ಮಕ್ಕಳೂ ಇಸ್ರೇಲ್ ಜನರಿಗೆ ಒಂದು ಗುರುತಾಗಿದ್ದೇವೆ. ಸರ್ವಶಕ್ತನಾದ ಯೆಹೋವನು ನಮ್ಮನ್ನು ಕಳುಹಿಸಿದ್ದಾನೆ. ಆತನು ಚೀಯೋನ್ ಬೆಟ್ಟದಲ್ಲಿ ವಾಸಿಸುತ್ತಾನೆ.”
19 ಕೆಲವರು, “ಏನು ಮಾಡಬೇಕೆಂದು ಕಣಿಹೇಳುವವರನ್ನೂ ಬೇತಾಳಿಕರನ್ನೂ ವಿಚಾರಿಸು” ಎಂದು ಹೇಳುತ್ತಾರೆ. (ಕಣಿಹೇಳುವವರು ತಾವು ಮಂತ್ರಶಕ್ತಿಯುಳ್ಳವರೆಂದು ಜನರಿಗೆ ತೋರಿಸಲು ಪಕ್ಷಿಗಳು ಮಾಡುವ ಶಬ್ದವನ್ನು ಬಾಯಿಂದ ಮಾಡಿ ತಮಗೆ ರಹಸ್ಯಗಳು ಗೊತ್ತಿವೆ ಎಂದು ತೋರಿಸಿಕೊಳ್ಳುತ್ತಾರೆ.) ನಾನು ಹೇಳುವುದೇನೆಂದರೆ, “ಜನರು ಸಹಾಯಕ್ಕಾಗಿ ದೇವರನ್ನೇ ಕೇಳಿಕೊಳ್ಳಬೇಕು. ಆ ಕಣಿಹೇಳುವವರೂ ಬೇತಾಳಿಕರೂ ತಾವು ಏನು ಮಾಡಬೇಕೆಂದು ಸತ್ತವರನ್ನು ವಿಚಾರಿಸುವರು. ಜೀವಿಸುವವರು ಸತ್ತವರನ್ನು ಯಾಕೆ ವಿಚಾರಿಸಬೇಕು?”
20 ನೀವು ಉಪದೇಶಗಳಿಗೂ ಒಡಂಬಡಿಕೆಗೂ ವಿಧೇಯರಾಗಿರಬೇಕು. ನೀವು ಈ ಆಜ್ಞೆಗಳನ್ನು ಅನುಸರಿಸದಿದ್ದರೆ, ತಪ್ಪು ಆಜ್ಞೆಗಳನ್ನು ಹಿಂಬಾಲಿಸುವಿರಿ. ಬೇತಾಳಿಕರಿಂದ, ಕಣಿಹೇಳುವವರಿಂದ ಬರುವ ಆಜ್ಞೆಗಳೇ ತಪ್ಪು ಆಜ್ಞೆಗಳು. ಅವುಗಳಿಗೆ ಯಾವ ಬೆಲೆಯೂ ಇಲ್ಲ. ಅವುಗಳನ್ನು ಅನುಸರಿಸುವುದರಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ.
21 ನೀವು ಆ ತಪ್ಪಾದ ಆಜ್ಞೆಗಳನ್ನು ಅನುಸರಿಸಿದರೆ ನಿಮ್ಮ ದೇಶದಲ್ಲಿ ಸಂಕಟವೂ ಹಸಿವೆಯೂ ಉಂಟಾಗುತ್ತವೆ. ಜನರು ಹಸಿವಿನಿಂದ ಬಳಲುವರು. ಆಗ ಅವರಲ್ಲಿ ಸಿಟ್ಟು ಉಂಟಾಗಿ ತಮ್ಮ ಅರಸನನ್ನೂ ಅವನ ದೇವರುಗಳನ್ನೂ ಬೈಯುವರು ಮತ್ತು ಸಹಾಯಕ್ಕಾಗಿ ದೇವರಿಗೆ ಮೊರೆಯಿಡುವರು.
22 ತಮ್ಮ ದೇಶದಲ್ಲಿ ಸುತ್ತಲೂ ನೋಡುವಾಗ ಕೇವಲ ಸಂಕಟಗಳೇ ಕುಗ್ಗಿಸುವ ಕಾರ್ಗತ್ತಲೆಗಳೇ ಕಾಣಿಸುವವು. ಆ ದುಃಖವು ಅವರನ್ನು ದೇಶದಿಂದ ತೊಲಗಿಸಿಬಿಡುವುದು. ಕಾರ್ಗತ್ತಲೆಯಲ್ಲಿ ಸಿಕ್ಕಿಬಿದ್ದ ಜನರಿಗೆ ತಮ್ಮನ್ನು ಬಿಡಿಸಿಕೊಳ್ಳಲಾಗುವುದಿಲ್ಲ.
×

Alert

×