ಒಣಎಲೆಯು ಸುಟ್ಟುಹೋಗುವಂತೆ ಪರ್ವತಗಳು ಸುಟ್ಟು ಭಸ್ಮವಾಗುವವು. ಬೆಂಕಿಯಲ್ಲಿ ನೀರು ಕುದಿಯುವಂತೆ ಪರ್ವತಗಳು ಕುದಿಯುವವು. ಆಗ ನಿನ್ನ ಶತ್ರುಗಳು ನಿನ್ನ ವಿಷಯವಾಗಿ ತಿಳಿಯುವರು. ಆಗ ಜನಾಂಗದವರೆಲ್ಲಾ ನಿನ್ನನ್ನು ನೋಡಿ ಭಯದಿಂದ ನಡುಗುವರು.
ನಿನ್ನ ಜನರು ನಿನಗೆ ಕಿವಿಗೊಡಲಿಲ್ಲ. ನೀನು ಹೇಳಿದ್ದನ್ನು ನಿನ್ನ ಜನರು ನಿಜವಾಗಿಯೂ ಕೇಳಲಿಲ್ಲ. ನಿನ್ನಂಥ ದೇವರನ್ನು ಯಾರೂ ನೋಡಿಲ್ಲ. ನಿನ್ನ ಹೊರತು ಬೇರೆ ಯಾರೂ ದೇವರಿಲ್ಲ. ಜನರು ತಾಳ್ಮೆಯಿಂದಿದ್ದು ನಿನ್ನ ಸಹಾಯಕ್ಕಾಗಿ ಕಾದಿದ್ದರೆ ನೀನು ಅವರಿಗಾಗಿ ಮಹಾಕಾರ್ಯಗಳನ್ನು ಮಾಡುವೆ.
ಒಳ್ಳೆಯದನ್ನು ಮಾಡುವದರಲ್ಲಿ ಸಂತೋಷಪಡುವವರೊಂದಿಗೆ ನೀನಿರುವೆ. ಅವರು ನಿನ್ನ ಮಾರ್ಗಗಳನ್ನು ನೆನಪಿನಲ್ಲಿಡುತ್ತಾರೆ. ಇಗೋ, ಗತಿಸಿದ ದಿವಸಗಳಲ್ಲಿ ನಾವು ನಿನಗೆ ವಿರುದ್ಧವಾಗಿ ಪಾಪಮಾಡಿದೆವು. ಆದ್ದರಿಂದ ನೀನು ನಮ್ಮ ಮೇಲೆ ಕೋಪಗೊಂಡೆ. ಈಗ ನಾವು ಹೇಗೆ ರಕ್ಷಿಸಲ್ಪಡುವೆವು?
ನಿನ್ನ ಹೆಸರನ್ನು ಯಾರೂ ಕರೆಯುವದಿಲ್ಲ. ನಿನ್ನನ್ನು ಹಿಂಬಾಲಿಸಲು ಯಾರಿಗೂ ಇಷ್ಟವಿಲ್ಲ; ಯಾಕೆಂದರೆ ನೀನು ನಮಗೆ ವಿಮುಖನಾಗಿರುವೆ ಮತ್ತು ನಮ್ಮನ್ನು ನಮ್ಮ ಪಾಪಗಳ ದೋಷಕ್ಕೆ ಒಪ್ಪಿಸಿಕೊಟ್ಟಿರುವಿ.
ನಮ್ಮ ಪವಿತ್ರ ಆಲಯವು ಬೆಂಕಿಯಿಂದ ಸುಡಲ್ಪಟ್ಟಿದೆ. ಆ ದೇವಾಲಯವು ನಮಗೆ ಅತ್ಯಂತ ಅಮೂಲ್ಯವಾದದ್ದಾಗಿದೆ. ನಮ್ಮ ಪೂರ್ವಿಕರು ನಿನ್ನನ್ನು ಅಲ್ಲಿ ಆರಾಧಿಸಿದರು. ನಾವು ಹೊಂದಿದಂಥ ಎಲ್ಲಾ ಒಳ್ಳೆಯವುಗಳು ಈಗ ನಾಶವಾದವು.