ಯೆಹೋವನು ಹೇಳುವುದೇನೆಂದರೆ: “ಇಸ್ರೇಲ್ ಜನರೇ, ನಾನು ನಿಮ್ಮ ತಾಯಿಯಾದ ಜೆರುಸಲೇಮಿಗೆ ವಿವಾಹವಿಚ್ಛೇದನ ಕೊಟ್ಟಿರುವುದಾಗಿ ಹೇಳುತ್ತೀರಿ. ಆದರೆ ನಾನು ಆಕೆಗೆ ವಿವಾಹವಿಚ್ಛೇದನ ಕೊಟ್ಟಿರುವುದಕ್ಕೆ ದಾಖಲೆ ಪತ್ರವೆಲ್ಲಿದೆ? ನನ್ನ ಮಕ್ಕಳೇ, ನಿಮ್ಮಲ್ಲಿ ಯಾರಿಗಾದರೂ ನಾನು ಸಾಲ ತೀರಿಸಬೇಕಿತ್ತೇ? ಆ ಸಾಲವನ್ನು ತೀರಿಸಲು ನಾನು ನಿಮ್ಮನ್ನು ಮಾರಿದ್ದೆನೋ, ಇಲ್ಲ. ನಾನು ನಿಮ್ಮನ್ನು ಮಾರಿಬಿಟ್ಟಿದ್ದು ನೀವು ಮಾಡಿದ ದುಷ್ಟತನಕ್ಕಾಗಿಯೇ. ನಿಮ್ಮ ತಾಯಿಯಾದ ಜೆರುಸಲೇಮನ್ನು ಕಳುಹಿಸಿಬಿಟ್ಟದ್ದು ನಿಮ್ಮ ಅಪರಾಧಗಳಿಗಾಗಿಯೇ.
ನಾನು ಮನೆಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ನಾನು ಎಷ್ಟು ಕರೆದರೂ ಯಾರೂ ಉತ್ತರ ಕೊಡಲಿಲ್ಲ. ನಿಮ್ಮನ್ನು ರಕ್ಷಿಸಲು ನನ್ನಿಂದ ಸಾಧ್ಯವಿಲ್ಲವೆಂದು ನೀವು ನೆನಸುತ್ತೀರಾ? ನಿಮ್ಮ ಎಲ್ಲಾ ಕಷ್ಟಗಳಿಂದ ನಿಮ್ಮನ್ನು ಪಾರುಮಾಡಲು ನನಗೆ ಸಾಮರ್ಥ್ಯವಿದೆ. ಇಗೋ, ನಾನು ಸಮುದ್ರಕ್ಕೆ ಒಣಗಿಹೋಗು ಎಂದು ಹೇಳಿದರೆ ಹಾಗೆಯೇ ಆಗುವದು. ಮೀನುಗಳು ನೀರಿಲ್ಲದೆ ಸತ್ತು ನಾರುವವು.
ನನ್ನ ಒಡೆಯನಾದ ಯೆಹೋವನು ನನಗೆ ಬೋಧಿಸುವ ಸಾಮರ್ಥ್ಯವನ್ನು ಅನುಗ್ರಹಿಸಿದ್ದಾನೆ. ಈಗ ನಾನು ದುಃಖದಲ್ಲಿರುವ ಈ ಜನರಿಗೆ ಬೋಧಿಸುತ್ತಿದ್ದೇನೆ. ಪ್ರತೀ ಮುಂಜಾನೆ ವಿದ್ಯಾರ್ಥಿಯೋ ಎಂಬಂತೆ ಆತನು ನನ್ನನ್ನು ಎಬ್ಬಿಸಿ ನನಗೆ ಬೋಧಿಸುತ್ತಾನೆ.
ನನ್ನ ಬೆನ್ನಿಗೆ ಹೊಡೆಯಲೂ ನನ್ನ ಗಡ್ಡವನ್ನು ಕೀಳಲೂ ಅವರಿಗೆ ನನ್ನನ್ನು ಒಪ್ಪಿಸಿಕೊಡುತ್ತೇನೆ. ಅವರು ನನ್ನನ್ನು ಬೈದು ನನ್ನ ಮುಖಕ್ಕೆ ಉಗುಳಿದರೂ ನಾನು ನನ್ನ ಮುಖವನ್ನು ಅಡಗಿಸುವದಿಲ್ಲ.
ಯೆಹೋವನು ನನ್ನೊಂದಿಗಿದ್ದಾನೆ. ನಾನು ತಪ್ಪಿತಸ್ಥನಲ್ಲವೆಂದು ಆತನು ತೋರಿಸುವನು. ಆದ್ದರಿಂದ ಯಾರೂ ನನ್ನನ್ನು ಅಪರಾಧಿ ಎಂದು ಹೇಳಲಾಗುವದಿಲ್ಲ. ಯಾರಾದರೂ ನನ್ನನ್ನು ತಪ್ಪಿತಸ್ಥನೆಂದು ದೃಢಪಡಿಸಬೇಕೆಂದಿದ್ದರೆ ಅವರು ಮೊದಲು ನನ್ನ ಬಳಿಗೆ ಬರಲಿ, ನಮಗೆ ವಿಚಾರಣೆಯಾಗಲಿ!
ಯೆಹೋವನನ್ನು ಗೌರವಿಸುವ ಜನರು ಆತನ ಸೇವಕನ ಮಾತನ್ನು ಕೇಳುವರು. ಆ ಸೇವಕನು ಮುಂದೆ ಸಂಭವಿಸುವುದರ ಬಗ್ಗೆ ಚಿಂತೆ ಇಲ್ಲದೆ ಸಂಪೂರ್ಣವಾಗಿ ದೇವರ ಮೇಲೆ ನಂಬಿಕೆ ಇಡುವನು. ಅವನು ಪರಿಪೂರ್ಣವಾಗಿ ಯೆಹೋವನ ಹೆಸರಿನಲ್ಲಿ ನಂಬಿಕೆ ಇಟ್ಟು ತನ್ನ ದೇವರ ಮೇಲೆ ಅವಲಂಬಿಸಿಕೊಳ್ಳುವನು.
“ಆದರೆ ನೀವು ನಿಮ್ಮ ದಾರಿಯಲ್ಲಿಯೇ ಜೀವಿಸಬೇಕೆಂದಿದ್ದೀರಿ, ನೀವು ನಿಮ್ಮ ಬೆಂಕಿಗಳನ್ನೂ ದೀವಟಿಗೆಗಳನ್ನೂ ಹಚ್ಚುತ್ತೀರಿ, ನಿಮಗೆ ಇಷ್ಟಬಂದ ರೀತಿಯಲ್ಲಿ ಜೀವಿಸುತ್ತೀರಿ. ಆದ್ದರಿಂದ ನೀವು ಶಿಕ್ಷಿಸಲ್ಪಡುವಿರಿ. ನಿಮ್ಮ ಬೆಂಕಿಯಲ್ಲಿಯೂ ದೀವಟಿಗೆಗಳಲ್ಲಿಯೂ ನೀವೇ ಬಿದ್ದು ಸುಟ್ಟುಹೋಗುವಿರಿ. ಇದನ್ನು ನಾನೇ ನೆರವೇರಿಸುವೆನು.”