ಜೆರುಸಲೇಮಿನೊಂದಿಗೆ ಕರುಣೆಯಿಂದ ಮಾತಾಡು. ಜೆರುಸಲೇಮಿಗೆ ಹೀಗೆ ಹೇಳು, ‘ನಿನ್ನ ಸೆರೆವಾಸದ ಸಮಯವು ಅಂತ್ಯವಾಯಿತು. ನೀನು ನಿನ್ನ ಪಾಪಗಳ ಶಿಕ್ಷೆಯನ್ನು ಅನುಭವಿಸಿದೆ.’ ಜೆರುಸಲೇಮ್ ಮಾಡಿದ ಪ್ರತಿಯೊಂದು ಪಾಪಕೃತ್ಯಗಳಿಗಾಗಿ ಯೆಹೋವನು ಎರಡು ಬಾರಿ ಶಿಕ್ಷಿಸಿದನು.”
ಒಂದು ಸ್ವರವು “ಮಾತನಾಡು” ಎಂದಿತು. ಅದಕ್ಕೆ ಮನುಷ್ಯನು, “ಏನು ಮಾತಾಡಲಿ” ಅಂದನು. ಆಗ ಸ್ವರವು, “ಜನರು ಶಾಶ್ವತವಾಗಿ ಜೀವಿಸುವದಿಲ್ಲ, ಅವರೆಲ್ಲರೂ ಹುಲ್ಲಿನಂತಿದ್ದಾರೆ. ಅವರ ಒಳ್ಳೆಯತನವು ಕಾಡುಹೂವಿನಂತಿದೆ.
ಚೀಯೋನೇ, ಸಾರಿ ತಿಳಿಸಲು ನಿನಗೆ ಒಂದು ಶುಭವಾರ್ತೆಯಿದೆ. ಉನ್ನತ ಪರ್ವತಕ್ಕೆ ಏರಿಹೋಗಿ ಶುಭವಾರ್ತೆಯನ್ನು ಗಟ್ಟಿಯಾಗಿ ಸಾರು! ಜೆರುಸಲೇಮೇ, ನಿನಗೆ ತಿಳಿಸಲು ಒಳ್ಳೆಯ ವಾರ್ತೆ ಇದೆ. ಹೆದರಬೇಡ, ಅದನ್ನು ಗಟ್ಟಿಯಾಗಿ ಸಾರು. ಯೆಹೂದದ ಎಲ್ಲಾ ನಗರಗಳಲ್ಲಿ ತಿಳಿಸು: “ಇಗೋ! ನಿನ್ನ ದೇವರು ಇಲ್ಲಿದ್ದಾನೆ.”
ಇಗೋ, ನನ್ನ ಒಡೆಯನಾದ ಯೆಹೋವನು ಬಲಸಾಮರ್ಥ್ಯಗಳೊಡನೆ ಬರುತ್ತಿದ್ದಾನೆ. ಆತನು ತನ್ನ ಪರಾಕ್ರಮದಿಂದ ಎಲ್ಲಾ ಜನರನ್ನು ಆಳುವನು. ಆತನು ತನ್ನ ಜನರಿಗೆ ಪ್ರತಿಫಲಗಳನ್ನು ತರುವನು. ಅವರ ಸಂಬಳವು ಆತನ ಕೈಯಲ್ಲಿದೆ.
ಯೆಹೋವನು ತನ್ನ ಜನರನ್ನು ನಡಿಸುತ್ತಾನೆ. ಕುರಿಗಳನ್ನು ನಡಿಸುವ ಕುರುಬನಂತೆ ಯೆಹೋವನು ತನ್ನ ಭುಜಬಲದಿಂದ ತನ್ನ ಕುರಿಗಳನ್ನು ಒಟ್ಟುಗೂಡಿಸುವನು. ಯೆಹೋವನು ಕುರಿಮರಿಗಳನ್ನು ಎತ್ತಿಕೊಂಡು ಅಪ್ಪಿಕೊಳ್ಳುವನು. ಅದರ ತಾಯಿ ಆತನ ಪಕ್ಕದಲ್ಲೇ ನಡೆಯುವವು.
ತನ್ನ ಅಂಗೈಯಿಂದ ಸಾಗರಗಳನ್ನು ಅಳತೆ ಮಾಡಿದವರ್ಯಾರು? ತನ್ನ ಹಸ್ತದಿಂದ ಆಕಾಶವನ್ನು ಅಳತೆ ಮಾಡಿದವರ್ಯಾರು? ಭೂಮಿಯ ಧೂಳನ್ನೆಲ್ಲಾ ಒಂದು ಬೋಗುಣಿಯಲ್ಲಿ ಅಳೆದವರ್ಯಾರು? ಪರ್ವತಗಳನ್ನು ಮತ್ತು ಬೆಟ್ಟಗಳನ್ನು ಅಳೆಯಲು ಅಳತೆಕೋಲನ್ನು ಯಾರು ಉಪಯೋಗಿಸಿದರು?
ಯೆಹೋವನು ಯಾರಿಂದಾದರೂ ಸಹಾಯ ಕೇಳಿದನೋ? ಯಾರಾದರೂ ಆತನಿಗೆ ನ್ಯಾಯನೀತಿಯನ್ನು ಕಲಿಸಿದರೋ? ಯಾರಾದರೂ ಆತನಿಗೆ ಜ್ಞಾನವನ್ನು ತಿಳಿಸಿಕೊಟ್ಟರೋ? ಯಾವನಾದರೂ ಯೆಹೋವನಿಗೆ ತಿಳುವಳಿಕೆಯನ್ನು ಹೇಳಿಕೊಟ್ಟನೋ?
ಇಲ್ಲ, ಆದರೆ ಕೆಲವರು ವಿಗ್ರಹಗಳನ್ನು ಕಲ್ಲಿನಿಂದ ಅಥವಾ ಮರದಿಂದ ತಯಾರಿಸುತ್ತಾರೆ. ಅವುಗಳನ್ನು ಅವರು ದೇವರು ಎಂದು ಕರೆಯುತ್ತಾರೆ. ಒಬ್ಬನು ಒಂದು ವಿಗ್ರಹವನ್ನು ಮಾಡುತ್ತಾನೆ. ಇನ್ನೊಬ್ಬನು ಅದಕ್ಕೆ ಬಂಗಾರದ ತಗಡನ್ನು ಹೊದಿಸುತ್ತಾನೆ ಮತ್ತು ಬೆಳ್ಳಿಹಾರವನ್ನು ಮಾಡಿಹಾಕುತ್ತಾನೆ.
ಅದರ ಪೀಠಕ್ಕಾಗಿ ವಿಶೇಷ ಜಾತಿಯ ಮರವನ್ನು ಆರಿಸುವನು. ಈ ಬಗೆಯ ಮರವು ಕೊಳೆತುಹೋಗುವದಿಲ್ಲ. ಆ ಬಳಿಕ ಅವನು ಒಳ್ಳೆಯ ಬಡಗಿಯನ್ನು ನೇಮಿಸುವನು. ಆ ಬಡಗಿಯು ವಿಗ್ರಹ ನಿಲ್ಲಿಸಿದಾಗ ಅದು ಪಕ್ಕಕ್ಕೆ ವಾಲಿ ಬೀಳದಂತೆ ಮಾಡುವನು.
ಈ ವಿಷಯಗಳನ್ನೆಲ್ಲಾ ನೀವು ಸರಿಯಾಗಿ ತಿಳಿದಿದ್ದೀರಲ್ಲವೆ? ಇದರ ವಿಚಾರವಾಗಿ ನೀವು ಕೇಳಿರುವಿರಿ. ಎಷ್ಟೋ ವರ್ಷಗಳ ಹಿಂದೆ ಯಾರೋ ನಿಮಗೆ ಹೇಳಿದ್ದಿರಬಹುದು. ಖಂಡಿತವಾಗಿಯೂ ಭೂಮಿಯನ್ನು ಯಾರು ನಿರ್ಮಿಸಿದ್ದಾರೆಂದು ನೀವು ತಿಳಿದಿರುವಿರಿ.
ಯೆಹೋವನು ಸತ್ಯವಾದ ದೇವರು. ಆತನು ಉನ್ನತವಾದ ಆಕಾಶದಲ್ಲಿ ಕುಳಿತುಕೊಳ್ಳುವನು. ಆತನಿಗೆ ಹೋಲಿಸಿದರೆ ಜನರು ಮಿಡತೆಗಳಂತಿರುವರು. ಆತನು ಬಟ್ಟೆಯಂತೆ ಆಕಾಶಮಂಡಲವನ್ನು ಸುರುಳಿಯಾಗಿ ಸುತ್ತುವನು. ಆಕಾಶಮಂಡಲವನ್ನು ಆತನು ಎಳೆದು ಗುಡಾರದಂತೆ ಅಗಲಮಾಡಿ ಅದರಡಿಯಲ್ಲಿ ಕುಳಿತುಕೊಳ್ಳುವನು.
ಇವರು ನೆಲದಲ್ಲಿ ನೆಟ್ಟಿರುವ ಸಸಿಗಳಂತಿರುವರು. ಅವುಗಳ ಬೇರುಗಳು ನೆಲದೊಳಗೆ ಆಳವಾಗಿ ಹೋಗುವ ಮೊದಲೇ ದೇವರ ಉಸಿರಿಗೆ ಅವು ಬಾಡಿ ಸಾಯುವವು; ಗಾಳಿಯು ಒಣಹುಲ್ಲಿನಂತೆ ಅವುಗಳನ್ನು ಬಡಿದುಕೊಂಡು ಹೋಗುವದು.
ಆಕಾಶಮಂಡಲದ ಕಡೆಗೆ ನೋಡಿರಿ! ಆ ನಕ್ಷತ್ರಗಳನ್ನೆಲ್ಲಾ ಮಾಡಿದವರು ಯಾರು? ಆಕಾಶದಲ್ಲಿರುವ ಆ “ಸೈನ್ಯಗಳನ್ನು” ಸಿದ್ಧ ಮಾಡಿದವರು ಯಾರು? ಪ್ರತಿಯೊಂದು ನಕ್ಷತ್ರವನ್ನು ಹೆಸರೆತ್ತಿ ಕರೆಯುವವರು ಯಾರು? ಆತನು ಬಲಿಷ್ಠನೂ ಪರಾಕ್ರಮಶಾಲಿಯೂ ಆಗಿದ್ದಾನೆ. ಆದ್ದರಿಂದ ಆ ನಕ್ಷತ್ರಗಳಲ್ಲಿ ಒಂದೂ ನಾಶವಾಗಲಿಲ್ಲ.
ದೇವರಾದ ಯೆಹೋವನು ಜ್ಞಾನಿಯೆಂಬುದನ್ನು ನೀನು ಖಂಡಿತವಾಗಿಯೂ ಕೇಳಿರುವೆ. ಆತನು ತಿಳಿದಿರುವ ಪ್ರತಿಯೊಂದನ್ನೂ ಕಲಿತುಕೊಳ್ಳಲು ಜನರಿಗೆ ಸಾಧ್ಯವಿಲ್ಲ. ಆತನು ಆಯಾಸಗೊಳ್ಳುವದಿಲ್ಲ; ಆತನಿಗೆ ವಿಶ್ರಾಂತಿಯ ಅವಶ್ಯವಿಲ್ಲ. ಭೂಮಿಯಲ್ಲಿರುವ ದೂರ ಸ್ಥಳಗಳನ್ನೆಲ್ಲಾ ಮಾಡಿದವನು ಆತನೇ. ಆತನು ನಿರಂತರಕ್ಕೂ ಜೀವಿಸುವಾತನಾಗಿದ್ದಾನೆ.
ಆದರೆ ಯೆಹೋವನಲ್ಲಿ ಭರವಸೆಯಿಟ್ಟವರು ಮತ್ತೆ ಬಲಹೊಂದುವರು. ಹದ್ದು ಹೊಸಗರಿಗಳನ್ನು ಹೊಂದುವಂತೆ ಅವರು ಹೊಸ ಬಲವನ್ನು ಹೊಂದುವರು. ಅವರು ಓಡಾಡಿದರೂ ಆಯಾಸಗೊಳ್ಳುವದಿಲ್ಲ. ನಡೆದಾಡಿದರೂ ಬಳಲಿಹೋಗುವುದಿಲ್ಲ.