ನೀವು ಯುದ್ಧಮಾಡಿ ಇತರರಿಂದ ಸುಲಿದುಕೊಳ್ಳುತ್ತೀರಿ. ಆದರೆ ಅವರು ನಿಮ್ಮಿಂದ ಏನೂ ಕದ್ದುಕೊಳ್ಳಲಿಲ್ಲ. ನೀವು ಜನರಿಗೆ ವಿರುದ್ಧವಾಗಿ ತಿರುಗುತ್ತೀರಿ. ಆದರೆ ಅವರು ನಿಮಗೆ ವಿರುದ್ಧವಾಗಲಿಲ್ಲ. ಆದುದರಿಂದ ನೀವು ಕದ್ದುಕೊಳ್ಳುವದನ್ನು ಬಿಟ್ಟಾಗ ಇತರರು ನಿಮ್ಮದನ್ನು ಕದ್ದುಕೊಳ್ಳುತ್ತಾರೆ. ನೀವು ಇತರರಿಗೆ ಹಾನಿ ಮಾಡುವದನ್ನು ನಿಲ್ಲಿಸಿದಾಗ ಇತರರು ನಿಮಗೆ ಹಾನಿ ಮಾಡುವರು. ಆಗ ನೀವು ಹೀಗೆ ಹೇಳುವಿರಿ:
ನೀವು ಯುದ್ಧದಲ್ಲಿ ದೋಚಿಕೊಂಡಿದ್ದೀರಿ. ಅವುಗಳು ನಿಮ್ಮಿಂದ ತೆಗೆಯಲ್ಪಡುವವು. ಅನೇಕಾನೇಕ ಜನರು ಬಂದು ನಿಮ್ಮ ಸಂಪತ್ತನ್ನು ದೋಚಿಕೊಳ್ಳುವರು. ಮಿಡತೆಗಳು ನಿಮ್ಮ ಬೆಳೆಯನ್ನು ತಿಂದು ನಾಶಮಾಡಿದಂತೆ ಅದಿರುವದು.
ಜೆರುಸಲೇಮೇ, ನೀನು ಐಶ್ವರ್ಯವಂತಳಾಗಿರುವೆ. ನೀನು ದೇವರ ವಿಷಯವಾದ ಜ್ಞಾನ, ತಿಳುವಳಿಕೆ ಮತ್ತು ರಕ್ಷಣೆಗಳಿಂದ ಐಶ್ವರ್ಯವಂತಳಾಗಿರುವೆ. ಯೆಹೋವನ ಮೇಲೆ ನಿನಗಿರುವ ಗೌರವವೇ ನಿನ್ನ ಭಂಡಾರವಾಗಿದೆ. ನೀನು ಹೀಗೆಯೇ ಮುಂದುವರಿಯುವೆ.
ರಸ್ತೆಗಳು ಹಾಳಾಗಿ ಯಾರೂ ಅದರಲ್ಲಿ ನಡಿಯುವದಿಲ್ಲ. ಜನರು ತಾವು ಮಾಡಿದ ಒಪ್ಪಂದವನ್ನು ನಡಿಸುತ್ತಿಲ್ಲ. ಸಾಕ್ಷಿಗಳ ಮಾತುಗಳನ್ನು ಜನರು ಗೌರವಿಸಲು ನಿರಾಕರಿಸುತ್ತಾರೆ. ಜನರು ಒಬ್ಬರನ್ನೊಬ್ಬರು ನಂಬುವದಿಲ್ಲ.
ದೇಶವು ಅಸ್ವಸ್ಥತೆಯಿಂದ ಸಾಯುತ್ತಿದೆ. ಲೆಬನೋನ್ ನಾಚಿಗೊಂಡು ಒಣಗುತ್ತಿದೆ. ಶಾರೋನ್ ತಗ್ಗು ಒಣಗಿ ನಿರ್ಜನವಾಗಿದೆ. ಬಾಷಾನ್ ಮತ್ತು ಕರ್ಮೆಲ್ ಹಿಂದೆ ಬಹು ಅಂದವಾದ ಸಸಿಗಳನ್ನು ಬೆಳೆಯಿಸುತ್ತಿದ್ದವು. ಈಗ ಅವುಗಳು ಅಲ್ಲಿ ಬೆಳೆಯುವದಿಲ್ಲ.
ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಕೆಟ್ಟಕಾರ್ಯಗಳನ್ನು ಮಾಡುವವರು ಹೆದರಿಕೆಯಿಂದ ನಡುಗುವರು. ಜನರು, “ನಮ್ಮಲ್ಲಿ ಯಾರು ನಾಶಮಾಡುವ ಈ ಬೆಂಕಿಯ ಜೊತೆ ಜೀವಿಸಬಲ್ಲರು? ನಿತ್ಯಕಾಲಕ್ಕೂ ಸುಡುವ ಈ ಬೆಂಕಿಯ ಬಳಿಯಲ್ಲಿ ಯಾರು ವಾಸಮಾಡಬಲ್ಲರು?” ಎಂದು ಹೇಳುವರು.
ಪ್ರಾಮಾಣಿಕರಾಗಿರುವ ನೀತಿವಂತರು ಹಣಕ್ಕಾಗಿ ಇತರರಿಗೆ ಹಾನಿಮಾಡದವರಾಗಿದ್ದಾರೆ. ಅವರು ಆ ಬೆಂಕಿಯಲ್ಲಿ ವಾಸಿಸುವರು. ಅವರು ಲಂಚ ತೆಗೆದುಕೊಳ್ಳಲು ನಿರಾಕರಿಸುವರು. ಇತರರನ್ನು ಕೊಲೆಮಾಡುವ ಯೋಜನೆಯನ್ನು ಕೇಳಲು ಅವರು ಇಷ್ಟಪಡುವುದಿಲ್ಲ. ಅವರು ಕೆಟ್ಟಕಾರ್ಯಗಳ ಯೋಜನೆಗಳನ್ನು ನೋಡುವುದಿಲ್ಲ.
ನಮ್ಮ ಹಬ್ಬಗಳನ್ನು ಆಚರಿಸುವ ನಗರವಾದ ಚೀಯೋನನ್ನು ನೋಡಿರಿ. ಮನೋಹರವಾದ ವಿಶ್ರಾಂತಿ ಸ್ಥಳವಾದ ಜೆರುಸಲೇಮನ್ನು ನೋಡಿರಿ. ಜೆರುಸಲೇಮು ಎಂದಿಗೂ ಕದಲದ ಗುಡಾರವಾಗಿದೆ. ಆಕೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ಗೂಟಗಳು ಎಂದಿಗೂ ಕೀಳಲ್ಪಡುವದಿಲ್ಲ. ಆಕೆಯ ಹಗ್ಗಗಳು ಎಂದಿಗೂ ತುಂಡಾಗುವದಿಲ್ಲ.