1
|
ನಾನು ಹೇಳುವದನ್ನೆಲ್ಲಾ ಮನದಟ್ಟುಮಾಡಿಕೊಳ್ಳಿರಿ: ನಮ್ಮ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಯೆಹೂದ ಮತ್ತು ಇಸ್ರೇಲಿನ ಆಧಾರಗಳನ್ನೆಲ್ಲಾ ತೆಗೆದುಬಿಡುವನು. ಆತನು ಅವರ ಎಲ್ಲಾ ಆಹಾರವನ್ನೂ ನೀರನ್ನೂ ತೆಗೆದುಬಿಡುವನು. |
2
|
ಆತನು ಎಲ್ಲಾ ವೀರರನ್ನೂ ಮಹಾಸೈನಿಕರನ್ನೂ ತೆಗೆದುಬಿಡುವನು. ದೇವರು ಎಲ್ಲಾ ನ್ಯಾಯಾಧೀಶರನ್ನೂ ಪ್ರವಾದಿಗಳನ್ನೂ ಹಿರಿಯರನ್ನೂ ಇಂದ್ರಜಾಲಗಾರರನ್ನು ತೆಗೆದುಬಿಡುವನು. |
3
|
ದೇವರು ಸೇನಾಪತಿಗಳನ್ನೂ ಸರ್ಕಾರದ ಅಧಿಪತಿಗಳನ್ನೂ ತೆಗೆದುಬಿಡುವನು. ಆತನು ಉತ್ತಮ ಸಲಹೆಗಾರರನ್ನೂ ಮಾಂತ್ರಿಕರನ್ನೂ ಭವಿಷ್ಯ ಹೇಳುವವರನ್ನೂ ತೊಲಗಿಸುವನು. |
4
|
ಯೆಹೋವನು ಹೇಳುವುದೇನೆಂದರೆ: “ನಾನು ಬಾಲಕರನ್ನು ನಿಮ್ಮ ನಾಯಕರನ್ನಾಗಿ ಮಾಡುವೆನು. |
5
|
ಪ್ರಜೆಗಳು ಒಬ್ಬರಿಗೊಬ್ಬರು ವಿರೋಧಿಗಳಾಗುವರು; ಬಾಲಕರು ಹಿರಿಯರನ್ನು ಗೌರವಿಸರು. ಸಾಮಾನ್ಯರು ಗಣ್ಯವ್ಯಕ್ತಿಗಳನ್ನು ಸನ್ಮಾನಿಸರು. |
6
|
ಆ ಸಮಯದಲ್ಲಿ ಒಬ್ಬನು ತನ್ನ ಸ್ವಂತ ಕುಟುಂಬದ ಸಹೋದರನನ್ನು ಹಿಡಿದು, “ನಿನಗೆ ನಿಲುವಂಗಿಯದೆ. ಆದುದರಿಂದ ನೀನು ನಮಗೆ ನಾಯಕನಾಗು. ಈ ಅವಶೇಷಗಳೆಲ್ಲಾ ನಿನಗೆ ಅಧೀನವಾಗಿರಲಿ” ಎಂದು ಹೇಳುವರು. |
7
|
ಆದರೆ ಆ ಸಹೋದರನು ಎದ್ದುನಿಂತು, “ನನ್ನಿಂದ ಆಗುವುದಿಲ್ಲ, ನನ್ನ ಮನೆಯಲ್ಲಿ ಸಾಕಷ್ಟು ಧಾನ್ಯವಾಗಲಿ ಬಟ್ಟೆಯಾಗಲಿ ಇಲ್ಲ. ನನ್ನನ್ನು ನಾಯಕನನ್ನಾಗಿ ಮಾಡಬೇಡಿ” ಎಂದು ಹೇಳುವನು. |
8
|
ಜೆರುಸಲೇಮ್ ಮುಗ್ಗರಿಸಿಬಿದ್ದು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಹೀಗಾಗುವದು. ಯೆಹೂದವು ಪಾಪದಲ್ಲಿ ಬಿದ್ದು ದೇವರನ್ನು ಹಿಂಬಾಲಿಸುವುದನ್ನು ನಿಲ್ಲಿಸಿಯದೆ. ಅವರಾಡುವ ಮಾತುಗಳು, ಮಾಡುವ ಕ್ರಿಯೆಗಳು ಯೆಹೋವನಿಗೆ ವಿರುದ್ಧವಾಗಿವೆ. ಯೆಹೋವನ ಮಹಿಮಾಶಕ್ತಿಯಿಂದ ಕೂಡಿದ ಕಣ್ಣುಗಳು ಇವೆಲ್ಲವನ್ನು ನೋಡುವವು. |
9
|
ಜನರ ಮುಖಭಾವವೇ ಅವರ ದುಷ್ಕಾರ್ಯಗಳನ್ನು ಎತ್ತಿತೋರಿಸುವವು. ಅವರು ತಮ್ಮ ಪಾಪಗಳಿಗಾಗಿ ಹೆಚ್ಚಳಪಡುವರು. ಅವರು ಸೊದೋಮಿನ ಜನರಂತಿದ್ದಾರೆ. ತಮ್ಮ ಪಾಪಗಳನ್ನು ಯಾರು ನೋಡಿದರೂ ಅವರಿಗೆ ಚಿಂತೆಯಿಲ್ಲ. ಇದು ನಿಜವಾಗಿಯೂ ಭಯಂಕರವಾದದ್ದು. ಅವರು ತಮಗೆ ಬಹಳ ಸಂಕಟಗಳನ್ನು ಬರಮಾಡಿಕೊಂಡಿದ್ದಾರೆ. |
10
|
ಒಳ್ಳೆಯವರಿಗೆ ಒಳ್ಳೆಯವುಗಳೇ ಸಂಭವಿಸುತ್ತವೆ ಎಂಬುದಾಗಿ ತಿಳಿಸು. ಅವರು ಮಾಡುವ ಒಳ್ಳೆಯ ಕಾರ್ಯಗಳಿಗಾಗಿ ಅವರಿಗೆ ಬಹುಮಾನ ದೊರೆಯುವುದು. |
11
|
ಆದರೆ ದುಷ್ಟರ ಗತಿಯನ್ನು ಏನು ಹೇಳಲಿ. ದುಷ್ಟರಿಗೆ ಕೆಡುಕು ಸಂಭವಿಸುವದು. ಅವರಿಗೆ ಬಹಳ ಸಂಕಟಗಳು ಬಂದೊದಗುವವು. ಅವರು ಮಾಡಿರುವ ಎಲ್ಲಾ ದುಷ್ಟಕ್ರಿಯೆಗಳಿಗೆ ಶಿಕ್ಷೆ ಕೊಡಲ್ಪಡುವದು. |
12
|
ಮಕ್ಕಳು ನನ್ನ ಜನರನ್ನು ಸೋಲಿಸಿಬಿಡುವರು. ಸ್ತ್ರೀಯರು ನನ್ನ ಜನರನ್ನು ಆಳುವರು. ನನ್ನ ಜನರೇ, ನಿಮ್ಮ ಮಾರ್ಗದರ್ಶಕರು ನಿಮ್ಮನ್ನು ತಪ್ಪುದಾರಿಯಲ್ಲಿ ನಡಿಸುವರು; ಸರಿಯಾದ ದಾರಿಯಿಂದ ನಿಮ್ಮನ್ನು ಅಡ್ಡದಾರಿಗೆ ನಡಿಸುವರು. |
13
|
ಯೆಹೋವನು ತನ್ನ ಜನರಿಗೆ ನ್ಯಾಯತೀರಿಸಲು ಎದ್ದುನಿಂತಿದ್ದಾನೆ. |
14
|
ನಾಯಕರಿಗೂ ಹಿರಿಯರಿಗೂ ಅವರು ಮಾಡಿದ ಕಾರ್ಯಗಳ ವಿರುದ್ಧವಾಗಿ ಆತನು ನ್ಯಾಯತೀರಿಸುವನು. ಯೆಹೋವನು ಹೇಳುವುದೇನೆಂದರೆ, “ನೀವು ದಾಕ್ಷಾತೋಟವನ್ನು (ಯೆಹೂದವನ್ನು) ಸುಟ್ಟುಹಾಕಿದ್ದೀರಿ; ಬಡಜನರಿಂದ ನೀವು ಕಿತ್ತುಕೊಂಡ ವಸ್ತುಗಳನ್ನು ಈಗಲೂ ನಿಮ್ಮ ಮನೆಗಳಲ್ಲಿ ಇಟ್ಟುಕೊಂಡಿದ್ದೀರಿ. |
15
|
ನನ್ನ ಜನರನ್ನು ಕುಗ್ಗಿಸಲು ನಿಮಗೆ ಯಾವ ಅಧಿಕಾರವಿದೆ? ಬಡಜನರ ಮುಖವನ್ನು ಧೂಳಿನಲ್ಲಿ ಹಾಕಿ ಉಜ್ಜಲು ನಿಮಗೆ ಯಾವ ಅಧಿಕಾರವಿದೆ?” ಇದು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನ ನುಡಿಗಳು. |
16
|
ಯೆಹೋವನು ಹೇಳುವದೇನೆಂದರೆ; “ಚೀಯೋನಿನ ಸ್ತ್ರೀಯರು ವಯ್ಯಾರದಿಂದ ತಲೆಯಾಡಿಸುತ್ತಾ, ಕುಡಿನೋಟ ಬೀರುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆಯನ್ನು ಝಣಝಣಿಸುತ್ತಾ ನಡೆಯುತ್ತಾರೆ.” |
17
|
ನನ್ನ ಒಡೆಯನಾದ ಯೆಹೋವನು ಚೀಯೋನಿನ ಸ್ತ್ರೀಯರ ತಲೆಯ ಮೇಲೆ ಹುಣ್ಣುಗಳನ್ನು ಬರಮಾಡಿ ಅವರ ತಲೆಕೂದಲು ಉದುರಿ ತಲೆಬೋಳಾಗುವಂತೆ ಮಾಡುವನು. |
18
|
ಆ ಸಮಯದಲ್ಲಿ ಆತನು ಅವರ ಎಲ್ಲಾ ವಸ್ತುಗಳನ್ನು ಅವರಿಂದ ತೆಗೆದುಬಿಡುವನು. ಅವರ ಕಾಲುಸರಗಳನ್ನು, ಸೂರ್ಯಚಂದ್ರಾಕಾರದ ಕೊರಳಿನ ಸರಗಳನ್ನು, |
19
|
ಕಿವಿಯೋಲೆಗಳನ್ನು, ಕೈಬಳೆಗಳನ್ನು, ಸೆರಗುವಸ್ತ್ರಗಳನ್ನು, |
20
|
ರುಮಾಲುಗಳನ್ನು, ಸೊಂಟಪಟ್ಟಿಯನ್ನು, ಪರಿಮಳದ್ರವ್ಯವನ್ನು, ತಾಯಿತಿಗಳನ್ನು, |
21
|
ಮುದ್ರೆಯುಂಗುರವನ್ನು ಮತ್ತು ಮೂಗುತಿಗಳನ್ನು ತೆಗೆದುಬಿಡುವನು. |
22
|
ಅವರ ನಯವಾದ ಮೇಲಂಗಿಗಳನ್ನು, ಮೇಲ್ಹೊದಿಕೆಗಳನ್ನು, ಶಾಲುಗಳನ್ನು, ಕೈಚೀಲಗಳನ್ನು, |
23
|
ಕೈಗನ್ನಡಿಗಳನ್ನು, ಪೋಷಾಕುಗಳನ್ನು, ಮುಂಡಾಸಗಳನ್ನು ಮತ್ತು ಉದ್ದವಾದ ಶಾಲುಗಳನ್ನು ಅವರಿಂದ ತೆಗೆದುಬಿಡುವನು. |
24
|
ಆ ಸಮಯದಲ್ಲಿ ಸ್ತ್ರೀಯರ ಪರಿಮಳದ್ರವ್ಯವು ಕೊಳೆತ ವಾಸನೆಯಿಂದ ಕೂಡಿರುವುದು. ಅವರು ಸೊಂಟಪಟ್ಟಿಯ ಬದಲಿಗೆ ಹಗ್ಗ ಕಟ್ಟಿಕೊಳ್ಳುವರು; ತಲೆಕೂದಲನ್ನು ಅಂದವಾಗಿ ಹೆಣೆದುಕೊಳ್ಳುವ ಬದಲು ಬೋಳಿಸಿಕೊಳ್ಳುವರು. ಈಗ ಅವರಿಗೆ ಆಧುನಿಕ ವಸ್ತ್ರಗಳಿರುವವು; ಆದರೆ ಆಗ ಅವರು ಶೋಕವಸ್ತ್ರಗಳನ್ನೇ ಧರಿಸುವರು. ಈಗ ಅವರು ಮುಖಗಳಿಗೆ ಸೌಂದರ್ಯದ ಬೊಟ್ಟುಗಳನ್ನು ಇಟ್ಟುಕೊಳ್ಳುವರು; ಆದರೆ ಆಗ ಅವರ ಚರ್ಮದಲ್ಲಿ ಸುಟ್ಟ ಕಲೆಗಳೇ ಇರುವವು. |
25
|
ಆ ಸಮಯದಲ್ಲಿ ನಿಮ್ಮ ಗಂಡಸರೆಲ್ಲಾ ಖಡ್ಗದಿಂದ ಹತರಾಗುವರು. ನಿಮ್ಮ ವೀರರೆಲ್ಲರೂ ಯುದ್ಧದಲ್ಲಿ ಮಡಿಯುವರು. |
26
|
ನಗರದ ಹೆಬ್ಬಾಗಿಲ ಬಳಿಯಲ್ಲಿ ಜನರು ಸೇರಿ ಬರುವಾಗ ರೋಧನವೂ ಶೋಕವೂ ಇರುತ್ತವೆ. ಇದ್ದುದನ್ನೆಲ್ಲಾ ಕಳೆದುಕೊಂಡ ಸ್ತ್ರೀಯಂತೆ ಜೆರುಸಲೇಮು ಸರ್ವವನ್ನೂ ಕಳೆದುಕೊಂಡು ನೆಲದ ಮೇಲೆ ಕುಳಿತು ರೋಧಿಸುವಳು. |
Isaiah 3:11 Kannada Language Bible Words basic statistical display
COMING SOON ...