ಆ ಸಮಯದಲ್ಲಿ ಸಾಧಾರಣ ಜನರಿಗೂ ಯಾಜಕವರ್ಗದವರಿಗೂ ವ್ಯತ್ಯಾಸವಿರದು. ಸೇವಕರಿಗೂ ಅವರ ಯಜಮಾನರಿಗೂ ವ್ಯತ್ಯಾಸವಿರದು. ದಾಸಿಯರಿಗೂ ಅವರ ಯಜಮಾನಿಯರಿಗೂ ವ್ಯತ್ಯಾಸವಿರದು. ಮಾರುವವರಿಗೂ ಕೊಳ್ಳುವವರಿಗೂ ವ್ಯತ್ಯಾಸವಿರದು. ಸಾಲಕೊಡುವವರಿಗೂ ಸಾಲ ತೆಗೆದುಕೊಳ್ಳುವವರಿಗೂ ವ್ಯತ್ಯಾಸವಿರದು. ಬಡ್ಡಿಹಾಕುವವನಿಗೂ ಬಡ್ಡಿಕೊಡುವವನಿಗೂ ವ್ಯತ್ಯಾಸವಿರದು.
ದೇಶದ ಜನರು ದೇವರ ಉಪದೇಶಗಳಿಗೆ ವಿರುದ್ಧವಾಗಿ ನಡೆದು ತಮ್ಮ ದೇಶವನ್ನು ಹೊಲಸುಮಾಡಿದರು. ದೇವರ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ಬಹಳ ಕಾಲದ ಹಿಂದೆ ಜನರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ ಆ ಜನರು ಆ ಒಡಂಬಡಿಕೆಯನ್ನು ಮುರಿದರು.
ದೇವರ ಸ್ತುತಿಯನ್ನು ನಾವು ಭೂಮಿಯ ಎಲ್ಲಾ ಕಡೆಗಳಿಂದಲೂ ಕೇಳಿಸಿಕೊಳ್ಳುತ್ತೇವೆ. ಈ ಸ್ತುತಿಹಾಡುಗಳು ದೇವರ ಒಳ್ಳೆತನವನ್ನು ವರ್ಣಿಸುವವು. ಆದರೆ ನಾನು, “ಸಾಕು, ನನಗೆ ಸಾಕು. ನಾನು ನೋಡುವ ವಿಷಯಗಳು ಭಯಂಕರವಾಗಿವೆ. ದ್ರೋಹಿಗಳು ಜನರಿಗೆ ವಿರುದ್ಧವಾಗಿ ಎದ್ದು ಅವರಿಗೆ ಹಾನಿಮಾಡುವರು.”
ಜನರು ಅಪಾಯದ ವಿಷಯ ಕೇಳಿ ಭಯಗ್ರಸ್ಥರಾಗುವರು. ಕೆಲವರು ಓಡಿಹೋಗುವರು. ಆದರೆ ಅವರು ಗುಂಡಿಯೊಳಗೆ ಬಿದ್ದು ಸಿಕ್ಕಿಕೊಳ್ಳುವರು. ಅವರಲ್ಲಿ ಕೆಲವರು ಗುಂಡಿಯಿಂದ ಹೊರಬರುವರು, ಆದರೆ ಅವರು ಇನ್ನೊಂದು ಉರುಲಿನೊಳಗೆ ಸಿಕ್ಕಿಹಾಕಿಕೊಳ್ಳುವರು. ಆಕಾಶದಲ್ಲಿರುವ ಪ್ರವಾಹದ ದ್ವಾರಗಳು ತೆರೆಯಲ್ಪಡುವವು. ಪ್ರವಾಹವು ತುಂಬುವದು; ಭೂಮಿಯ ಅಸ್ತಿವಾರಗಳು ಕದಲುವವು.
ಲೋಕದ ಪಾಪವು ತುಂಬಾ ಭಾರವಾಗಿದೆ. ಆ ಭಾರದಿಂದಾಗಿ ಭೂಮಿಯು ಬೀಳುವದು. ಒಂದು ಹಳೆಯ ಮನೆಯಂತೆ ಭೂಮಿಯು ಅಲುಗಾಡುವದು. ಕುಡಿದು ಮತ್ತನಾಗಿ ನೆಲಕ್ಕೆ ಬೀಳುವವನಂತೆ ಭೂಮಿಯು ಇರುವದು. ಭೂಮಿಗೆ ಮುಂದುವರಿಯಲು ಆಗದು.