1
|
ಮುಂದಿನ ದಿವಸಗಳಲ್ಲಿ ಯೆಹೋವನು ಯಾಕೋಬನ ಮೇಲೆ ಮತ್ತೆ ಪ್ರೀತಿತೋರುವನು. ಯೆಹೋವನು ಮತ್ತೆ ಇಸ್ರೇಲರನ್ನು ಆರಿಸುವನು. ಆ ಸಮಯದಲ್ಲಿ ಅವರ ದೇಶವನ್ನು ಅವರಿಗೆ ಹಿಂತಿರುಗಿಸುವನು. ಆಗ ಯೆಹೂದ್ಯರಲ್ಲದವರು ಯೆಹೂದ್ಯರೊಂದಿಗೆ ಸೇರಿಕೊಳ್ಳುವರು. ಅವರೆಲ್ಲರೂ ಒಂದೇ ವಂಶದವರಾಗುವರು. ಅದು ಯಾಕೋಬನ ವಂಶ. |
2
|
ಆ ಜನಾಂಗಗಳವರು ಇಸ್ರೇಲರನ್ನು ಇಸ್ರೇಲ್ ದೇಶಕ್ಕೆ ನಡಿಸುವರು. ಆ ಪರಜನಾಂಗಗಳ ಗಂಡಸರು ಹೆಂಗಸರು ಇಸ್ರೇಲರ ಗುಲಾಮರಾಗಿರುವರು. ಹಿಂದಿನ ದಿವಸಗಳಲ್ಲಿ ಆ ಜನರು ಇಸ್ರೇಲರನ್ನು ಬಲವಂತದಿಂದ ತಮ್ಮ ಗುಲಾಮರನ್ನಾಗಿ ಮಾಡಿದರು. ಆದರೆ ಈಗ ಇಸ್ರೇಲರು ಆ ಜನಾಂಗಗಳನ್ನು ಸೋಲಿಸಿ ಅವರನ್ನು ಆಳುವರು. |
3
|
ಯೆಹೋವನು ನಿಮ್ಮ ಪ್ರಯಾಸವನ್ನು ನಿವಾರಿಸಿ ನಿಮ್ಮನ್ನು ಆದರಿಸುವನು. ಹಿಂದಿನ ದಿವಸಗಳಲ್ಲಿ ನೀವು ಗುಲಾಮರಾಗಿರುವಾಗ ಜನರು ನಿಮ್ಮನ್ನು ಬಹಳವಾಗಿ ಹಿಂಸಿಸಿದರು; ಬಲವಂತದಿಂದ ಕಷ್ಟಕರವಾದ ಕೆಲಸವನ್ನು ನಿಮ್ಮಿಂದ ಮಾಡಿಸಿದರು. ಆದರೆ ಯೆಹೋವನು ಆ ಸಂಕಟಗಳಿಂದ ನಿಮ್ಮನ್ನು ಪಾರುಮಾಡುವನು. |
4
|
ಆ ಸಮಯದಲ್ಲಿ ಬಾಬಿಲೋನಿನ ಅರಸನ ಬಗ್ಗೆ ನೀವು ಹೀಗೆ ಹಾಡುವಿರಿ: ಅರಸನು ನಮ್ಮನ್ನಾಳುವಾಗ ಬಹಳ ಕ್ರೂರವಾಗಿದ್ದನು. ಆದರೆ ಈಗ ಅವನ ಆಳ್ವಿಕೆಯು ಅಂತ್ಯವಾಯಿತು. |
5
|
ಯೆಹೋವನು ದುಷ್ಟರ ಕೋಲನ್ನೂ ಅರಸನ ರಾಜದಂಡವನ್ನೂ ಮುರಿದು ಹಾಕಿದನು. ಅವನ ಅಧಿಕಾರವನ್ನು ತೆಗೆದುಹಾಕಿದನು. |
6
|
ಬಾಬಿಲೋನಿನ ಅರಸನು ತನ್ನ ದುಷ್ಟತನದಲ್ಲಿ ಜನರನ್ನು ಹೊಡೆಯಿಸಿದನು. ಹೊಡೆಯುವದನ್ನು ಅವನು ನಿಲ್ಲಿಸಲೇ ಇಲ್ಲ. ಆ ದುಷ್ಟ ಅರಸನು ಜನರನ್ನು ಸಿಟ್ಟಿನಿಂದಲೇ ಆಳಿದನು. ಜನರನ್ನು ಹಿಂಸೆಪಡಿಸುವದನ್ನು ಅವನು ನಿಲ್ಲಿಸಲಿಲ್ಲ. |
7
|
ಆದರೆ ಈಗ ಇಡೀ ರಾಜ್ಯದಲ್ಲಿ ವಿಶ್ರಾಂತಿ ಇದೆ. ರಾಜ್ಯವು ಸಮಾಧಾನದಿಂದಿದೆ. ಜನರು ಸಂತೋಷದಿಂದ ಇದನ್ನು ಆಚರಿಸುತ್ತಾರೆ. |
8
|
ನೀನು ದುಷ್ಟ ಅರಸನಾಗಿದ್ದೆ, ಈಗ ನಿನಗೆ ಅಂತ್ಯವು ಬಂತು. ತುರಾಯಿ ಮರಗಳೂ ಲೆಬನೋನಿನ ದೇವದಾರು ವೃಕ್ಷಗಳೂ ಹರ್ಷಗೊಂಡಿವೆ. ಆ ಮರಗಳು ಹೀಗೆ ಹೇಳುತ್ತಿವೆ: ಅರಸನು ನಮ್ಮನ್ನು ಕಡಿದುರುಳಿಸಿದನು. ಈಗ ಅರಸನೇ ಉರುಳಿಬಿದ್ದಿದ್ದಾನೆ. ಅವನು ಮತ್ತೆಂದಿಗೂ ಏಳುವುದಿಲ್ಲ. |
9
|
ನೀನು ಬರುವದರಿಂದ ಮರಣದ ಸ್ಥಳವಾಗಿರುವ ನರಕವು ಉತ್ಸಾಹಗೊಂಡಿದೆ. ನಿನ್ನನ್ನು ಎದುರುಗೊಳ್ಳುವದಕ್ಕಾಗಿ ಪಾತಾಳವು ಲೋಕದ ಎಲ್ಲಾ ಅಧಿಪತಿಗಳ ಆತ್ಮಗಳನ್ನು ಎಬ್ಬಿಸಿದೆ. ಅರಸರು ತಮ್ಮ ಸಿಂಹಾಸನದಲ್ಲಿ ನಿಂತುಕೊಳ್ಳುವಂತೆ ಪಾತಾಳವು ಮಾಡುತ್ತಿದೆ. ಅವರು ನಿನ್ನ ಬರುವಿಕೆಯನ್ನು ಕಾಯುತ್ತಿದ್ದಾರೆ. |
10
|
“ಈಗ ನೀನು ನಮ್ಮಂತೆಯೇ ಸತ್ತ ಶರೀರವಾಗಿರುವೆ. ಈಗ ನೀನು ನಮ್ಮಂತೆಯೇ ಆಗಿರುವೆ” ಎಂದು ಅವರು ನಿನ್ನನ್ನು ಗೇಲಿಮಾಡುವರು. |
11
|
ನಿನ್ನ ಜಂಬವು ಪಾತಾಳಕ್ಕೆ ಕಳುಹಿಸಲಾಗಿದೆ. ನಿನ್ನ ಹಾರ್ಪ್ವಾದ್ಯದ ಸ್ವರವು ನಿನ್ನ ಅಹಂಕಾರದ ಆತ್ಮವನ್ನು ಸಾರಿಹೇಳುತ್ತವೆ. ಹುಳಗಳು ನಿನ್ನ ಶರೀರವನ್ನು ತಿಂದುಬಿಡುವವು. ಹಾಸಿಗೆಯೋ ಎಂಬಂತೆ ನೀನು ಅವುಗಳ ಮೇಲೆ ಮಲಗಿಕೊಳ್ಳುವೆ. ಹುಳಗಳು ನಿನ್ನ ಶರೀರವನ್ನು ಕಂಬಳಿಯಂತೆ ಮುಚ್ಚಿಕೊಳ್ಳುವವು. |
12
|
ನೀನು ಉದಯ ನಕ್ಷತ್ರದಂತೆ ಇರುವೆ. ಆದರೆ ನೀನು ಆಕಾಶದಿಂದ ಕೆಳಗೆ ಬಿದ್ದಿರುವೆ. ಹಿಂದಿನ ಕಾಲದಲ್ಲಿ ಲೋಕದ ಎಲ್ಲಾ ರಾಜ್ಯಗಳು ನಿನಗೆ ಅಡ್ಡಬಿದ್ದವು. ಆದರೆ ಈಗ ನೀನು ಉರುಳಿಸಲ್ಪಟ್ಟಿರುವೆ. |
13
|
ನೀನು ಯಾವಾಗಲೂ ನಿನ್ನೊಳಗೆ, “ನಾನು ಉನ್ನತವಾದ ಆಕಾಶಕ್ಕೆ ಹೋಗುವೆನು. ನಾನು ದೇವರ ನಕ್ಷತ್ರಗಳಿಗಿಂತ ಮೇಲೆ ನನ್ನ ಸಿಂಹಾಸನವನ್ನು ಸ್ಥಾಪಿಸುವೆನು. ನಾನು ಜಾಫೋನ್ ಎಂಬ ಪವಿತ್ರ ಪರ್ವತದಲ್ಲಿ ಕುಳಿತುಕೊಳ್ಳುವೆನು. ಆ ಪರ್ವತದಲ್ಲಿ ನಾನು ದೇವರುಗಳನ್ನು ಸಂಧಿಸುವೆನು. |
14
|
ನಾನು ಉನ್ನತ ಮೇಘಮಂಡಲದ ಮೇಲೆ ಏರಿ ಉನ್ನತೋನ್ನತನಿಗೆ ಸರಿಸಮಾನನಾಗುತ್ತೇನೆ” ಎಂದುಕೊಳ್ಳುತ್ತಿದ್ದೆ. |
15
|
ಆದರೆ ಅದು ಸಂಭವಿಸಲಿಲ್ಲ. ನೀನು ಆಕಾಶಕ್ಕೆ ದೇವರೊಂದಿಗೆ ಹೋಗಲಿಲ್ಲ. ನೀನು ಆಳವಾದ ಗುಂಡಿಗೆ ದಬ್ಬಲ್ಪಟ್ಟಿ. ಮರಣಸ್ಥಳವಾಗಿರುವ ಪಾತಾಳಕ್ಕೆ ನೀನು ದಬ್ಬಲ್ಪಟ್ಟೆ. |
16
|
ನಿನ್ನನ್ನು ನೋಡುವ ಜನರು ನಿನ್ನ ಬಗ್ಗೆ ಯೋಚಿಸುವರು. ನೀನು ಕೇವಲ ಸತ್ತ ಹೆಣವೆಂದು ತಿಳಿದು, “ಭೂಮಿಯ ಮೇಲಿನ ರಾಜ್ಯಗಳಲ್ಲಿ ಮಹಾಭೀತಿಯನ್ನುಂಟು ಮಾಡಿದವನು ಇವನೋ? |
17
|
ನಗರಗಳನ್ನು ನಾಶಮಾಡಿ ಭೂಮಿಯನ್ನು ಬೆಂಗಾಡನ್ನಾಗಿ ಮಾಡಿದವನು ಇವನೋ? ಯುದ್ಧದಲ್ಲಿ ಜನರನ್ನು ಸೆರೆಹಿಡಿದು ಅವರನ್ನು ಮನೆಗಳಿಗೆ ಬಿಡದೆ ಇದ್ದವನು ಇವನೋ?” ಎಂದು ಕೇಳುವರು. |
18
|
ಭೂಲೋಕದ ಪ್ರತಿಯೊಬ್ಬ ಅರಸನು ವೈಭವದೊಂದಿಗೆ ಕಾಲವಾದನು. ಪ್ರತಿಯೊಬ್ಬ ಅರಸನಿಗೆ ಸ್ವಂತ ಸಮಾಧಿ ಇರುವದು. |
19
|
ಆದರೆ ದುಷ್ಟ ಅರಸನಾದ ನೀನು ನಿನ್ನ ಸಮಾಧಿಯಿಂದ ತೆಗೆದುಹಾಕಲ್ಪಟ್ಟಿರುವೆ. ಮರದಿಂದ ಬೇರ್ಪಡಿಸಿದ ಕೊಂಬೆಯಂತೆ ನೀನಿರುವೆ. ಯುದ್ಧದಲ್ಲಿ ಸತ್ತ ಸೈನಿಕನಂತೆ ನೀನಿರುವೆ. ಬೇರೆ ಸೈನಿಕರು ಅವನ ಮೇಲೆ ನಡೆದಾಡುವರು. ಈಗ ನೀನು ಸಾಧಾರಣ ಹೆಣದಂತೆ ಇರುವೆ. ಸಮಾಧಿಯ ಬಟ್ಟೆಗಳಿಂದ ನೀನು ಸುತ್ತಲ್ಪಟ್ಟಿರುವೆ. |
20
|
ಬೇರೆ ಅನೇಕ ಅರಸರು ಸತ್ತುಹೋದರು. ಅವರೆಲ್ಲರಿಗೂ ಸ್ವಂತ ಸಮಾಧಿ ಇದೆ. ಆದರೆ ನೀನು ಅವರೊಂದಿಗೆ ಸೇರಲಾರೆ. ಯಾಕೆಂದರೆ ನಿನ್ನ ರಾಜ್ಯವನ್ನು ನೀನೇ ನಾಶಮಾಡಿರುವೆ. ನೀನು ನಿನ್ನ ಜನರನ್ನೇ ಸಾಯಿಸಿರುವೆ. ಆದರೆ ನೀನು ನಾಶಮಾಡಿದಂತೆ ನಾಶಮಾಡಲು ನಿನ್ನ ಮಕ್ಕಳಿಗೆ ಅವಕಾಶಕೊಡಲಾಗದು. |
21
|
ಅವನ ಮಕ್ಕಳನ್ನು ಕೊಲ್ಲಲು ಸಿದ್ಧಗೊಳ್ಳಿರಿ. ಅವರ ತಂದೆಯ ದುಷ್ಟತನಕ್ಕಾಗಿ ಅವರನ್ನು ಕೊಲ್ಲಿರಿ. ಅವನ ಮಕ್ಕಳು ದೇಶವನ್ನು ಇನ್ನೆಂದಿಗೂ ತಮ್ಮ ವಶಕ್ಕೆ ತೆಗೆದುಕೊಳ್ಳಲಾರರು. ಅವರು ಪ್ರಪಂಚವನ್ನು ಇನ್ನೆಂದಿಗೂ ತಮ್ಮ ಪಟ್ಟಣಗಳಿಂದ ತುಂಬಿಸಲಾರರು. |
22
|
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದ್ದುನಿಂತು ಅವರಿಗೆ ವಿರುದ್ಧವಾಗಿ ಹೋರಾಡುವೆನು. ನಾನು ಹೆಸರುವಾಸಿಯಾದ ಬಾಬಿಲೋನ್ ನಗರವನ್ನು ನಾಶಮಾಡುವೆನು. ಬಾಬಿಲೋನಿನ ಎಲ್ಲಾ ಜನರನ್ನು ನಾಶಮಾಡುವೆನು. ಅವರ ಮಕ್ಕಳನ್ನು ಮತ್ತು ಮರಿಮಕ್ಕಳನ್ನು ನಾಶಮಾಡುವೆನು” ಯೆಹೋವನೇ ಈ ಮಾತುಗಳನ್ನು ನುಡಿದಿದ್ದಾನೆ. |
23
|
ಯೆಹೋವನು ಹೇಳುವದೇನೆಂದರೆ: “ನಾನು ಬಾಬಿಲೋನನ್ನು ಪ್ರಾಣಿಗಳ ವಾಸಸ್ಥಳವನ್ನಾಗಿ ಬದಲಾಯಿಸುವೆನು. ಆ ಸ್ಥಳವು ಜವುಗು ನೆಲವಾಗಿರುವುದು. ‘ನಾಶನವೆಂಬ ಪೊರಕೆಯಿಂದ’ ಅದನ್ನು ಗುಡಿಸುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ. |
24
|
ಸರ್ವಶಕ್ತನಾದ ಯೆಹೋವನು ಒಂದು ವಾಗ್ದಾನವನ್ನು ಮಾಡಿದ್ದಾನೆ. ಆತನು ಹೇಳುವುದೇನೆಂದರೆ: “ನಾನು ಯೋಚಿಸಿದಂತೆಯೇ ಇವೆಲ್ಲವೂ ನೆರವೇರುವುದು ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ. |
25
|
ನನ್ನ ದೇಶದಲ್ಲಿ ಅಶ್ಶೂರದ ರಾಜನನ್ನು ನಾಶಮಾಡುವೆನು. ನನ್ನ ಪರ್ವತಗಳ ಮೇಲೆ ಆ ರಾಜನ ಮೇಲೆ ತುಳಿದುಕೊಂಡು ನಡೆದಾಡುವೆನು. ಆ ರಾಜನು ನನ್ನ ಜನರನ್ನು ಗುಲಾಮರನ್ನಾಗಿ ಮಾಡಿದನು. ಅವರ ಹೆಗಲಿನ ಮೇಲೆ ನೊಗವನ್ನಿಟ್ಟನು. ಆ ನೊಗವು ಯೆಹೂದದ ಹೆಗಲಿನಿಂದ ತೆಗೆಯಲ್ಪಡುವದು. |
26
|
ಹೀಗೆ ಮಾಡಲು ನಾನೇ ಆಲೋಚಿಸಿದ್ದೇನೆ. ನನ್ನ ಯೋಜನೆಯಂತೆಯೇ ಘಟನೆಗಳು ಸಂಭವಿಸುತ್ತವೆ. ನನ್ನ ಭುಜಬಲದಿಂದ ಜನಾಂಗಗಳನ್ನು ಶಿಕ್ಷಿಸುವೆನು.” |
27
|
ಸರ್ವಶಕ್ತನಾದ ಯೆಹೋವನ ಈ ಸಂಕಲ್ಪವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಜನರನ್ನು ದಂಡಿಸಲು ಆತನು ಕೈಮೇಲೆತ್ತಿದಾಗ ಯಾರೂ ಆತನನ್ನು ತಡೆಯಲಾರರು. |
28
|
ಅರಸನಾದ ಆಹಾಜನು ಸತ್ತ ವರುಷದಲ್ಲಿ ಈ ದುಃಖದ ಸಂದೇಶವು ಕೊಡಲ್ಪಟ್ಟಿತು: |
29
|
ಫಿಲಿಷ್ಟಿಯ ದೇಶವೇ, ನಿನ್ನನ್ನು ಹೊಡೆದ ಅರಸನು ಸತ್ತದ್ದಕ್ಕಾಗಿ ನೀನು ಸಂತೋಷಗೊಂಡಿರುವೆ. ಆದರೆ ನೀನು ಸಂತೋಷಗೊಳ್ಳಬಾರದು. ಅವನ ರಾಜ್ಯಭಾರವು ಅಂತ್ಯವಾಯಿತು ಎಂಬುದು ಸತ್ಯ. ಆದರೆ ಅರಸನ ಮಗನು ರಾಜ್ಯವಾಳುವನು. ಒಂದು ಹಾವು ಇನ್ನೊಂದು ಭಯಂಕರ ಹಾವನ್ನು ಹೆರುವಂತೆ ಅದು ಇರುವದು. ಈ ಹೊಸ ಅರಸನು ನಿಮಗೆ ವೇಗವಾದ ಮತ್ತು ಅಪಾಯಕರವಾದ ಹಾವಾಗುವನು. |
30
|
ಆದರೆ ನನ್ನ ಬಡಜನರು ಸುರಕ್ಷಿತವಾಗಿ ಊಟ ಮಾಡುವರು. ಅವರ ಮಕ್ಕಳೂ ಸುರಕ್ಷಿತವಾಗಿರುವರು. ನನ್ನ ಬಡಜನರು ಹಾಯಾಗಿ ಮಲಗಿ ಸುರಕ್ಷಿತರಾಗಿರುವರು. ಆದರೆ ನಿಮ್ಮ ಸಂತಾನದವರು ಹಸಿವೆಯಿಂದ ಸಾಯುವಂತೆ ಮಾಡುವೆನು. ನಿಮ್ಮ ದೇಶದಲ್ಲಿ ಉಳಿದಿರುವ ಜನರೆಲ್ಲರೂ ಸಾಯುವರು. |
31
|
ಮಹಾದ್ವಾರಗಳ ಬಳಿಯಲ್ಲಿರುವ ಜನರೇ, ಗೋಳಾಡಿರಿ! ಪಟ್ಟಣದೊಳಗಿರುವ ಜನರೇ, ಕೂಗಾಡಿರಿ! ಫಿಲಿಷ್ಟಿಯದಲ್ಲಿರುವವರೆಲ್ಲರೂ ಭಯಪಡುವರು. ನಿಮ್ಮ ಧೈರ್ಯವು ಮೇಣದಂತೆ ಕರಗಿಹೋಗುವದು. ಇಗೋ, ಉತ್ತರದಿಕ್ಕಿನಲ್ಲಿ ಧೂಳು ಏಳುತ್ತಿದೆ. ಅಶ್ಶೂರದ ಸೈನ್ಯವು ಬರುತ್ತಿದೆ. ಅವರೆಲ್ಲರೂ ಬಲಶಾಲಿಗಳಾದ ವೀರರು. |
32
|
ಆ ಸೈನ್ಯದವರು ತಮ್ಮ ದೇಶಕ್ಕೆ ಸಂದೇಶವಾಹಕರನ್ನು ಕಳುಹಿಸುತ್ತಾರೆ. ಆ ಸಂದೇಶವು ಏನಿರಬಹುದು? “ಫಿಲಿಷ್ಟಿಯರು ಸೋತುಹೋದರು, ಆದರೆ ಯೆಹೋವನು ಚೀಯೋನನ್ನು ಬಲಪಡಿಸಿದ್ದಾನೆ. ಆತನ ಬಡಜನರು ರಕ್ಷಣೆಗಾಗಿ ಅಲ್ಲಿಗೆ ಹೋಗಿದ್ದಾರೆ” ಎಂಬುದೇ ಆ ಸಂದೇಶ. |
Isaiah 14:12 Kannada Language Bible Words basic statistical display
COMING SOON ...