English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Genesis Chapters

Genesis 50 Verses

1 ಇಸ್ರೇಲನು ಸತ್ತಾಗ ಯೋಸೇಫನು ತುಂಬ ದುಃಖಿಸಿದನು. ಅವನು ತನ್ನ ತಂದೆಯನ್ನು ಅಪ್ಪಿಕೊಂಡು ಗೋಳಾಡಿ ಮುದ್ದಿಟ್ಟನು.
2 ಯೋಸೇಫನು ತನ್ನ ತಂದೆಯ ಶವವನ್ನು ಸಿದ್ಧಪಡಿಸಲು ತನ್ನ ಸೇವಕರಾದ ವೈದ್ಯರಿಗೆ ಹೇಳಿದನು. ಆ ವೈದ್ಯರು ಯಾಕೋಬನ ಶರೀರವನ್ನು ಸಮಾಧಿಮಾಡಲು ಸಿದ್ಧಪಡಿಸಿದರು.
3 ಈಜಿಪ್ಟಿನವರು ಆ ಶರೀರವನ್ನು ವಿಶೇಷವಾದ ರೀತಿಯಲ್ಲಿ ನಲವತ್ತು ದಿನಗಳವರೆಗೆ ಸಿದ್ಧಪಡಿಸಿದರು. ಬಳಿಕ ಈಜಿಪ್ಟಿನವರು ಯಾಕೋಬನಿಗಾಗಿ ಎಪ್ಪತ್ತು ದಿನಗಳವರೆಗೆ ಗೋಳಾಡಿದರು.
4 ಎಪ್ಪತ್ತು ದಿನಗಳಾದ ಮೇಲೆ ಯೋಸೇಫನು ಫರೋಹನ ಅಧಿಕಾರಿಗಳಿಗೆ, “ದಯವಿಟ್ಟು ಇದನ್ನು ಫರೋಹನಿಗೆ ತಿಳಿಸಿರಿ.
5 ‘ನನ್ನ ತಂದೆಯು ಸಾಯುವಾಗ ನಾನು ಅವನಿಗೆ ಒಂದು ಪ್ರಮಾಣವನ್ನು ಮಾಡಿದೆನು. ಕಾನಾನ್ ದೇಶದಲ್ಲಿ ಒಂದು ಗುಹೆಯನ್ನು ಅವನು ತನಗಾಗಿ ಸಿದ್ಧಪಡಿಸಿಕೊಂಡಿದ್ದಾನೆ. ಆದ್ದರಿಂದ, ನಾನು ಹೋಗಿ ನನ್ನ ತಂದೆಯನ್ನು ಸಮಾಧಿಮಾಡಿ ಮತ್ತೆ ಹಿಂತಿರುಗಿ ನಿಮ್ಮ ಬಳಿಗೆ ಬರಲು ದಯವಿಟ್ಟು ಅವಕಾಶ ಕೊಡಿ’ ಎಂದು ತಿಳಿಸಿರಿ” ಎಂಬುದಾಗಿ ಹೇಳಿದನು.
6 ಫರೋಹನು, “ನಿನ್ನ ಪ್ರಮಾಣವನ್ನು ಉಳಿಸಿಕೊ. ಹೋಗಿ ನಿನ್ನ ತಂದೆಯನ್ನು ಸಮಾಧಿಮಾಡು” ಎಂದು ಉತ್ತರಿಸಿದನು.
7 ಆದ್ದರಿಂದ ಯೋಸೇಫನು ತನ್ನ ತಂದೆಯನ್ನು ಸಮಾಧಿಮಾಡಲು ಹೋದನು. ಫರೋಹನ ಎಲ್ಲಾ ಅಧಿಕಾರಿಗಳು ಯೋಸೇಫನೊಂದಿಗೆ ಹೋದರು. ಫರೋಹನ ನಾಯಕರು ಮತ್ತು ಈಜಿಪ್ಟಿನ ಎಲ್ಲಾ ಹಿರಿಯರು ಯೋಸೇಫನೊಂದಿಗೆ ಹೋದರು.
8 ಯೋಸೇಫನ ಕುಟುಂಬದಲ್ಲಿದ್ದ ಜನರು ಮತ್ತು ಅವನ ಸಹೋದರರು ಅವನೊಂದಿಗೆ ಹೋದರು. ಅವನ ತಂದೆಯ ಕುಟುಂಬದವರೆಲ್ಲ ಯೋಸೇಫನೊಂದಿಗೆ ಹೋದರು. (ಮಕ್ಕಳು ಮತ್ತು ಪ್ರಾಣಿಗಳು ಮಾತ್ರ ಗೋಷೆನ್ ಪ್ರಾಂತ್ಯದಲ್ಲಿ ಉಳಿದುಕೊಂಡರು.)
9 ಗಂಡಸರು ಯೋಸೇಫನೊಂದಿಗೆ ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಹೋದರು. ಅದು ಬಹಳ ದೊಡ್ಡ ಗುಂಪಾಗಿತ್ತು.
10 ಅವರು ಗೋರೆನ್‌ಅಟಾದ್ ಎಂಬಲ್ಲಿಗೆ ಬಂದರು. ಅದು ಜೋರ್ಡನ್ ನದಿಯ ಪೂರ್ವದಲ್ಲಿತ್ತು. ಆ ಸ್ಥಳದಲ್ಲಿ ಅವರು ತುಂಬ ಸಮಯದವರೆಗೆ ಶೋಕಿಸಿದರು. ಆ ಶೋಕವು ಏಳು ದಿನಗಳವರೆಗೆ ಮುಂದುವರೆಯಿತು.
11 ಕಾನಾನಿನ ಜನರು ಗೋರೆನ್‌ಅಟಾದ್‌ನಲ್ಲಿ ಶೋಕಿಸುತ್ತಿರುವುದನ್ನು ನೋಡಿ, “ಈಜಿಪ್ಟಿನವರು ಬಹಳ ದುಃಖಕರವಾದ ಅಂತ್ಯಕ್ರಿಯೆಯನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು. ಆದ್ದರಿಂದ ಆ ಸ್ಥಳಕ್ಕೆ ಆಬೇಲ್ ಮಿಚ್ರಯೀಮ್ ಎಂದು ಹೆಸರಾಯಿತು.
12 ಹೀಗೆ ಯಾಕೋಬನ ಗಂಡುಮಕ್ಕಳು ತಮ್ಮ ತಂದೆಯ ಆಜ್ಞೆಯಂತೆ ಮಾಡಿದರು.
13 ಅವರು ಅವನ ಶರೀರವನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡು ಹೋಗಿ ಮಕ್ಪೇಲದಲ್ಲಿದ್ದ ಗವಿಯಲ್ಲಿ ಸಮಾಧಿ ಮಾಡಿದರು. ಮಮ್ರೆಯ ಬಯಲಿನಲ್ಲಿದ್ದ ಈ ಗವಿಯನ್ನು ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಸಮಾಧಿಯ ಸ್ಥಳಕ್ಕಾಗಿ ಕೊಂಡುಕೊಂಡಿದ್ದನು.
14 ತಂದೆಯನ್ನು ಸಮಾಧಿ ಮಾಡಿದನಂತರ ಯೋಸೇಫನೂ ಅವನ ಅಣ್ಣತಮ್ಮಂದಿರೂ ಅವನ ತಂದೆಯ ಉತ್ತರಕ್ರಿಯೆಗಾಗಿ ಅವನೊಂದಿಗೆ ಹೋಗಿದ್ದವರೆಲ್ಲರೂ ಈಜಿಪ್ಟಿಗೆ ಹಿಂತಿರುಗಿದರು.
15 ಯಾಕೋಬನು ಸತ್ತಮೇಲೆ, ಯೋಸೇಫನ ಸಹೋದರರು ಕಳವಳಗೊಂಡರು. ಅವರು “ನಾವು ಮಾಡಿದ ಕಾರ್ಯಕ್ಕೆ ಯೋಸೇಫನು ಇನ್ನು ಮೇಲೆ ನಮ್ಮನ್ನು ದ್ವೇಷಿಸುವನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
16 ಆದ್ದರಿಂದ ಸಹೋದರರು ಯೋಸೇಫನಿಗೆ ಈ ಸಂದೇಶವನ್ನು ಕಳುಹಿಸಿದರು: “ನಿನ್ನ ತಂದೆ ಸಾಯುವ ಮೊದಲು ನಮಗೆ ಆಜ್ಞಾಪಿಸಿದ್ದೇನೆಂದರೆ,
17 ನೀವು ಯೋಸೇಫನಿಗೆ, ಈ ಸಂದೇಶವನ್ನು ಕೊಡಬೇಕು, ‘ನಾವು ಮಾಡಿದ್ದು ಕೆಟ್ಟಕಾರ್ಯವೇ ನಿಜ. ಅದಕ್ಕಾಗಿ ನೀನು ಅವರನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ.’ ಆದ್ದರಿಂದ ನಾವು ಮಾಡಿದ ಕೆಟ್ಟಕಾರ್ಯಕ್ಕಾಗಿ ನೀನು ನಮ್ಮನ್ನು ಕ್ಷಮಿಸಬೇಕು. ನಾವು ನಿನ್ನ ತಂದೆಯ ದೇವರಿಗೆ ಸೇವಕರಾಗಿದ್ದೇವೆ” ಎಂದು ಹೇಳಿದರು. ಈ ವಿಷಯಗಳನ್ನು ಕೇಳಿ ಅವನು ದುಃಖದಿಂದ ಅತ್ತನು.
18 ಸಹೋದರರು ಯೋಸೇಫನ ಬಳಿಗೆ ಹೋಗಿ ಅವನ ಮುಂದೆ ಅಡ್ಡಬಿದ್ದು, “ನಾವು ನಿನ್ನ ಸೇವಕರಾಗಿದ್ದೇವೆ” ಎಂದು ಹೇಳಿದರು.
19 ಆಗ ಯೋಸೇಫನು ಅವರಿಗೆ, “ಭಯಪಡಬೇಡಿ. ನಾನು ದೇವರಲ್ಲ; ನಿಮ್ಮನ್ನು ಶಿಕ್ಷಿಸಲು ನನಗೆ ಅಧಿಕಾರವಿಲ್ಲ.
20 ನೀವು ನನಗೆ ಕೇಡುಮಾಡಲು ಯೋಚಿಸಿದಿರಿ. ಆದರೆ ದೇವರು ಒಳ್ಳೆಯದನ್ನೇ ಮಾಡಿದನು. ಬಹಳ ಜನರ ಪ್ರಾಣವನ್ನು ಉಳಿಸುವುದಕ್ಕಾಗಿ ನನ್ನನ್ನು ಬಳಸಿಕೊಳ್ಳುವುದು ದೇವರ ಯೋಜನೆಯಾಗಿತ್ತು. ಈಗಲೂ ಆತನದು ಅದೇ ಯೋಜನೆ.
21 ಆದ್ದರಿಂದ ಭಯಪಡದಿರಿ. ನಾನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಪೋಷಿಸುತ್ತೇನೆ” ಎಂದು ಹೇಳಿದನು. ಯೋಸೇಫನು ತನ್ನ ಸಹೋದರರೊಂದಿಗೆ ಸೌಮ್ಯವಾಗಿ ಮಾತನಾಡಿದ್ದರಿಂದ ಅವರಿಗೆ ತುಂಬ ಸಂತೋಷವಾಯಿತು.
22 ಯೋಸೇಫನು ತನ್ನ ತಂದೆಯ ಕುಟುಂಬದವರೊಂದಿಗೆ ಈಜಿಪ್ಟಿನಲ್ಲೇ ವಾಸವಾಗಿದ್ದನು. ಯೋಸೇಫನು ತನ್ನ ನೂರಹತ್ತನೆಯ ವರ್ಷದಲ್ಲಿ ತೀರಿಕೊಂಡನು.
23 ಯೋಸೇಫನು ಜೀವದಿಂದಿದ್ದ ಕಾಲದಲ್ಲಿ, ಎಫ್ರಾಯೀಮನು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದನು. ಅವನ ಮಗನಾದ ಮನಸ್ಸೆಗೆ ಮಾಕೀರನೆಂಬ ಗಂಡುಮಗನು ಹುಟ್ಟಿದನು. ಯೋಸೇಫನು ಮಾಕೀರನ ಮಕ್ಕಳನ್ನೂ ನೋಡಿದನು. The Death of Joseph
24 ಯೋಸೇಫನಿಗೆ ಸಾವು ಸಮೀಪಿಸಿದಾಗ ಅವನು ತನ್ನ ಸಹೋದರರಿಗೆ, “ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ನಿಮ್ಮನ್ನು ಪೋಷಿಸುವವನು ದೇವರೆಂಬುದು ನಿಮಗೆ ತಿಳಿದಿರಲಿ. ಆತನು ಈ ದೇಶದಿಂದ ನಿಮ್ಮನ್ನು ಕರೆದುಕೊಂಡು ಹೋಗಿ ಅಬ್ರಹಾಮನಿಗೂ ಇಸಾಕನಿಗೂ ಮತ್ತು ಯಾಕೋಬನಿಗೂ ವಾಗ್ದಾನ ಮಾಡಿದ್ದ ದೇಶವನ್ನು ಕೊಡುವನು” ಎಂದು ಹೇಳಿದನು.
25 ಆಗ ಯೋಸೇಫನು ತನ್ನ ಜನರಿಗೆ ಪ್ರಮಾಣ ಮಾಡಬೇಕೆಂದು ಕೇಳಿಕೊಂಡನು. ಯೋಸೇಫನು, “ದೇವರು ನಿಮ್ಮನ್ನು ಈ ದೇಶದಿಂದ ಹೊರಗೆ ನಡೆಸಿದಾಗ ನನ್ನ ಮೂಳೆಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುವಿರೆಂದು ನೀವು ಪ್ರಮಾಣ ಮಾಡಿ” ಎಂದು ಹೇಳಿದನು.
26 ಯೋಸೇಫನು ನೂರಹತ್ತನೆಯ ವರ್ಷದವನಾಗಿದ್ದಾಗ ಸತ್ತುಹೋದನು. ಈಜಿಪ್ಟಿನಲ್ಲಿ ವೈದ್ಯರು ಅವನ ಶರೀರವನ್ನು ಸಮಾಧಿ ಮಾಡಲು ಸಿದ್ಧಪಡಿಸಿ, ಶವಪೆಟ್ಟಿಗೆಯಲ್ಲಿ ಹಾಕಿದರು.
×

Alert

×