ಯೋಸೇಫನು ಅವರನ್ನು ಕಂಡು, ತನ್ನ ಅಣ್ಣಂದಿರೆಂದು ತಿಳಿದುಕೊಂಡನು. ಆದರೂ ಅವನು ತನಗೆ ಅವರು ಗೊತ್ತೇ ಇಲ್ಲದಂತೆ ಅವರೊಂದಿಗೆ ಕಟುವಾಗಿ ಮಾತಾಡಿ, ಅವರಿಗೆ, “ನೀವು ಎಲ್ಲಿಂದ ಬಂದಿರುವಿರಿ?” ಎಂದು ಕೇಳಿದನು. ಸಹೋದರರು, “ಆಹಾರವನ್ನು ಕೊಂಡುಕೊಳ್ಳಲು ಕಾನಾನ್ ದೇಶದಿಂದ ಬಂದಿದ್ದೇವೆ” ಎಂದು ಉತ್ತರಿಸಿದರು.
ಆಗ ಯೋಸೇಫನು ತನ್ನ ಅಣ್ಣಂದಿರ ಬಗ್ಗೆ ತಾನು ಕಂಡಿದ್ದ ಕನಸುಗಳ ಬಗ್ಗೆ ಜ್ಞಾಪಿಸಿಕೊಂಡು ಅವರಿಗೆ, “ನೀವು ಆಹಾರವನ್ನು ಕೊಂಡುಕೊಳ್ಳಲು ಬಂದಿಲ್ಲ; ನೀವು ಗೂಢಚಾರರು. ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳಲು ಬಂದಿರುವಿರಿ” ಎಂದು ಹೇಳಿದನು.
ಅದಕ್ಕೆ ಅವರು, “ಇಲ್ಲ, ನಾವೆಲ್ಲಾ ಸಹೋದರರು. ನಮ್ಮ ಕುಟುಂಬದಲ್ಲಿ ಹನ್ನೆರಡು ಮಂದಿ ಅಣ್ಣತಮ್ಮಂದಿರು. ನಮ್ಮೆಲ್ಲರಿಗೂ ಒಬ್ಬನೇ ತಂದೆ. ನಮ್ಮ ಕಿರಿಯ ತಮ್ಮನು ನಮ್ಮ ತಂದೆಯೊಂದಿಗೆ ಮನೆಯಲ್ಲಿದ್ದಾನೆ; ಇನ್ನೊಬ್ಬ ತಮ್ಮನು ಹೊರಟುಹೋದನು. ತಮ್ಮ ಸೇವಕರಾದ ನಾವು ಕಾನಾನ್ ದೇಶದಿಂದ ಬಂದವರು” ಎಂದು ಹೇಳಿದರು.
ಆದ್ದರಿಂದ ನಿಮ್ಮಲ್ಲೊಬ್ಬನು ಹಿಂತಿರುಗಿ ಹೋಗಿ ನಿಮ್ಮ ಚಿಕ್ಕ ತಮ್ಮನನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಅಲ್ಲಿಯವರೆಗೆ ಉಳಿದವರೆಲ್ಲರೂ ಇಲ್ಲಿ ಸೆರೆಮನೆಯಲ್ಲಿರಬೇಕು. ನೀವು ಹೇಳುತ್ತಿರುವುದು ಸತ್ಯವೋ ಸುಳ್ಳೋ ಆಗ ನನಗೆ ಗೊತ್ತಾಗುವುದು. ಆದರೆ ನೀವಂತೂ ಗೂಢಚಾರರೆಂದು ತಿಳಿದುಕೊಂಡಿದ್ದೇನೆ” ಎಂದು ಹೇಳಿದನು.
ಅವರು ಒಬ್ಬರಿಗೊಬ್ಬರು, “ನಾವು ನಮ್ಮ ತಮ್ಮನಾದ ಯೋಸೇಫನಿಗೆ ಮಾಡಿದ ಕೆಟ್ಟಕಾರ್ಯಕ್ಕಾಗಿ ಈ ಶಿಕ್ಷೆಯನ್ನು ಅನುಭವಿಸುತ್ತಿದ್ದೇವೆ. ಪ್ರಾಣಸಂಕಟದಲ್ಲಿದ್ದ ಅವನು ತನ್ನನ್ನು ಕಾಪಾಡುವಂತೆ ನಮ್ಮನ್ನು ಬೇಡಿಕೊಂಡರೂ ನಾವು ಅವನ ಮೊರೆಯನ್ನು ತಿರಸ್ಕರಿಸಿದೆವು. ಆದ್ದರಿಂದ ಈಗ ಪ್ರಾಣಸಂಕಟಕ್ಕೀಡಾಗಿದ್ದೇವೆ” ಎಂದು ಮಾತಾಡಿಕೊಂಡರು.
ಅದಕ್ಕೆ ರೂಬೇನನು ಅವರಿಗೆ, “ಆ ಹುಡುಗನಿಗೆ ಕೇಡು ಮಾಡಬೇಡಿ ಎಂದು ನಾನು ನಿಮಗೆ ಹೇಳಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ. ಆದ್ದರಿಂದ ಈಗ ನಾವು ಅವನ ಮರಣಕ್ಕೆ ತಕ್ಕ ಶಿಕ್ಷೆ ಹೊಂದುತ್ತಿದ್ದೇವೆ” ಎಂದು ಹೇಳಿದನು.
ಯೋಸೇಫನು ತನ್ನ ಸಹೋದರರೊಂದಿಗೆ ಭಾಷಾಂತರಕಾರನ ಮೂಲಕ ಮಾತಾಡುತ್ತಿದ್ದನು. ಆದ್ದರಿಂದ ಆ ಸಹೋದರರು ತಮ್ಮ ಭಾಷೆ ಯೋಸೇಫನಿಗೆ ಅರ್ಥವಾಗುವುದಿಲ್ಲವೆಂದು ತಿಳಿದುಕೊಂಡಿದ್ದರು. ಆದರೆ ಯೋಸೇಫನಿಗೆ ಅವರ ಮಾತುಗಳೆಲ್ಲಾ ಅರ್ಥವಾಯಿತು.
ಅವರ ಮಾತುಗಳಿಂದ ಅವನಿಗೆ ತುಂಬ ದುಃಖವಾಯಿತು. ಆದ್ದರಿಂದ ಯೋಸೇಫನು ಅವರ ಬಳಿಯಿಂದ ಸ್ವಲ್ಪದೂರ ಹೋಗಿ ಕಣ್ಣೀರು ಸುರಿಸಿ ಹಿಂತಿರುಗಿ ಬಂದನು. ಬಳಿಕ ಸಹೋದರರಲ್ಲಿ ಒಬ್ಬನಾದ ಸಿಮೆಯೋನನನ್ನು ಅವರ ಕಣ್ಣೆದುರಿನಲ್ಲೇ ಬಂಧಿಸಿದನು.
ಆಮೇಲೆ ಯೋಸೇಫನು ತನ್ನ ಸೇವಕರಿಗೆ, “ಅವರ ಚೀಲಗಳಿಗೆ ದವಸಧಾನ್ಯಗಳನ್ನು ತುಂಬಿರಿ” ಎಂದು ಹೇಳಿದನು. ಈ ದವಸಧಾನ್ಯಗಳಿಗೆ ಸಹೋದರರು ಹಣವನ್ನು ಪಾವತಿ ಮಾಡಿದರೂ ಯೋಸೇಫನು ಆ ಹಣವನ್ನು ಇಟ್ಟುಕೊಳ್ಳಲಿಲ್ಲ. ಅವನು ಆ ಹಣವನ್ನು ಅವರವರ ದವಸಧಾನ್ಯಗಳ ಚೀಲಗಳಲ್ಲಿ ಇಡಿಸಿದನು. ಅಲ್ಲದೆ ಪ್ರಯಾಣಕ್ಕೆ ಬೇಕಾದ ವಸ್ತುಗಳನ್ನೂ ಅವರಿಗೆ ಕೊಟ್ಟನು.
ಆ ರಾತ್ರಿ ಸಹೋದರರು ಒಂದು ಸ್ಥಳದಲ್ಲಿ ಇಳಿದುಕೊಂಡರು. ಸಹೋದರರಲ್ಲಿ ಒಬ್ಬನು ಕತ್ತೆಗೋಸ್ಕರ ಸ್ವಲ್ಪ ದವಸಧಾನ್ಯಗಳನ್ನು ತೆಗೆದುಕೊಳ್ಳಲು ತನ್ನ ಚೀಲವನ್ನು ಬಿಚ್ಚಿದಾಗ ತಾನು ಪಾವತಿ ಮಾಡಿದ್ದ ಹಣವು ಚೀಲದಲ್ಲಿರುವುದನ್ನು ನೋಡಿದನು.
ಅವನು ತನ್ನ ಉಳಿದ ಸಹೋದರರಿಗೆ, “ನೋಡಿ, ನಾನು ದವಸಧಾನ್ಯಗಳಿಗೆ ಕೊಟ್ಟ ಹಣ ಇಲ್ಲೇ ಇದೆ. ಯಾರೋ ಒಬ್ಬನು ಹಣವನ್ನು ಮತ್ತೆ ನನ್ನ ಚೀಲದಲ್ಲಿ ಇಟ್ಟಿರುವನು” ಎಂದು ಹೇಳಿದನು. ಸಹೋದರರಿಗೆ ತುಂಬ ಭಯವಾಯಿತು. ಅವರು ಒಬ್ಬರಿಗೊಬ್ಬರು, “ದೇವರು ನಮಗೆ ಮಾಡುತ್ತಿರುವುದೇನು?” ಎಂದು ಮಾತಾಡಿಕೊಂಡರು.
ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರೆಂದೂ ನಮಗೆ ಒಬ್ಬನೇ ತಂದೆಯೆಂದೂ ಅವನಿಗೆ ಹೇಳಿದೆವು. ನಮ್ಮ ಒಬ್ಬ ತಮ್ಮನು ಸತ್ತುಹೋದನೆಂದೂ ನಮ್ಮ ಕಿರಿಯ ತಮ್ಮನು ಕಾನಾನ್ ದೇಶದಲ್ಲಿರುವ ನಮ್ಮ ಮನೆಯಲ್ಲಿರುವನೆಂದೂ ಅವನಿಗೆ ಹೇಳಿದೆವು.
“ಆಗ ಆ ದೇಶದ ರಾಜ್ಯಪಾಲನು, ‘ನೀವು ಯಥಾರ್ಥವಂತರೆಂದು ತೋರಿಸಬೇಕಾದರೆ ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿ ಬಿಟ್ಟು ನಿಮ್ಮ ಕುಟುಂಬಗಳಿಗೆ ದವಸಧಾನ್ಯಗಳನ್ನು ತೆಗೆದುಕೊಂಡು ಹೋಗಿರಿ.
ಆಮೇಲೆ ನಿಮ್ಮ ಕಿರಿಯ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ. ಆಗ ನೀವು ಯಥಾರ್ಥರಾದವರೋ ಗೂಢಚಾರರೋ ಎಂದು ಗೊತ್ತಾಗುವುದು. ನೀವು ಸತ್ಯವನ್ನು ಹೇಳಿದ್ದರೆ ನಿಮ್ಮ ಸಹೋದರನನ್ನು ನಿಮಗೆ ಒಪ್ಪಿಸುವೆನು; ನಮ್ಮ ದೇಶದಲ್ಲಿ ಆಹಾರವನ್ನು ಕೊಳ್ಳಲು ನಿಮಗೆ ಯಾವ ತಡೆಯೂ ಇರುವುದಿಲ್ಲ’ ಎಂದು ಹೇಳಿದನು” ಎಂದರು.
ಯಾಕೋಬನು ಅವರಿಗೆ, “ನಾನು ನನ್ನ ಮಕ್ಕಳನ್ನೆಲ್ಲ ಕಳೆದುಕೊಳ್ಳಬೇಕೆಂಬುದು ನಿಮಗೆ ಇಷ್ಟವೇ? ಯೋಸೇಫನು ಇಲ್ಲವಾದನು. ಸಿಮೆಯೋನನೂ ಇಲ್ಲವಾದನು. ಈಗ ಬೆನ್ಯಾಮೀನನನ್ನು ತೆಗೆದುಕೊಂಡು ಹೋಗಬೇಕೆಂದಿರುವಿರಿ” ಎಂದು ಹೇಳಿದನು.
ರೂಬೇನನು ತನ್ನ ತಂದೆಗೆ, “ಅಪ್ಪಾ, ನಾನು ಬೆನ್ಯಾಮೀನನನ್ನು ಕರೆದುಕೊಂಡು ಬರದಿದ್ದರೆ ನೀನು ನನ್ನ ಇಬ್ಬರು ಗಂಡುಮಕ್ಕಳನ್ನು ಕೊಲ್ಲಬಹುದು. ನನ್ನನ್ನು ನಂಬು. ನಾನು ಬೆನ್ಯಾಮೀನನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವೆನು” ಎಂದು ಹೇಳಿದನು.
ಯಾಕೋಬನು, “ನಾನು ನಿಮ್ಮೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡುವುದಿಲ್ಲ. ಅವನ ಸಹೋದರನು ಸತ್ತುಹೋದನು; ನನ್ನ ಹೆಂಡತಿಯಾದ ರಾಹೇಲಳಲ್ಲಿ ಹುಟ್ಟಿದ ಗಂಡುಮಕ್ಕಳಲ್ಲಿ ಇವನೊಬ್ಬನೇ ಉಳಿದಿರುವುದು. ಈಜಿಪ್ಟಿಗೆ ಪ್ರಯಾಣ ಮಾಡುವಾಗ ಇವನಿಗೆ ಅಪಾಯ ಸಂಭವಿಸಿದರೆ ವಯಸ್ಸಾದ ನಾನು ದುಃಖದಿಂದಲೇ ಸಮಾಧಿಗೆ ಸೇರಲು ನೀವು ಕಾರಣವಾಗುವಿರಿ” ಎಂದು ಹೇಳಿದನು.