1
|
ಇವುಗಳಾದ ಮೇಲೆ, ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಲು ನಿರ್ಧರಿಸಿ, “ಅಬ್ರಹಾಮನೇ!” ಎಂದು ಕರೆದನು. ಅಬ್ರಹಾಮನು, “ಇಗೋ ಇದ್ದೇನೆ” ಅಂದನು. |
2
|
ಆಗ ದೇವರು ಅವನಿಗೆ, “ನಿನಗೆ ಪ್ರಿಯನಾಗಿರುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಮೊರೀಯ ದೇಶಕ್ಕೆ ಕರೆದುಕೊಂಡು ಹೋಗು. ನಾನು ನಿನಗೆ ತಿಳಿಸುವ ಬೆಟ್ಟದ ಮೇಲೆ ಅವನನ್ನು ಯಜ್ಞವನ್ನಾಗಿ ಅರ್ಪಿಸು” ಎಂದು ಹೇಳಿದನು. |
3
|
ಮುಂಜಾನೆ ಅಬ್ರಹಾಮನು ಎದ್ದು ಕತ್ತೆಗೆ ತಡಿ ಹಾಕಿಸಿದನು; ಇಸಾಕನನ್ನೂ ಅವನೊಂದಿಗೆ ಇಬ್ಬರು ಸೇವಕರನ್ನೂ ಕರೆದುಕೊಂಡನು; ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದುಕೊಂಡನು. ಬಳಿಕ ದೇವರು ಹೇಳಿದ್ದ ಸ್ಥಳಕ್ಕೆ ಅವರು ಹೊರಟರು. |
4
|
ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಅಬ್ರಹಾಮನು ದೃಷ್ಟಿಸಿ ನೋಡಿದಾಗ ತಾವು ಹೋಗಲಿದ್ದ ಸ್ಥಳವು ದೂರದಲ್ಲಿ ಅವನಿಗೆ ಕಾಣಿಸಿತು. |
5
|
ಆಮೇಲೆ ಅಬ್ರಹಾಮನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯೊಂದಿಗಿರಿ; ನಾನೂ ನನ್ನ ಮಗನೂ ಆ ಸ್ಥಳಕ್ಕೆ ಹೋಗಿ ಆರಾಧಿಸುತ್ತೇವೆ. ಬಳಿಕ ನಾವು ಹಿಂತಿರುಗಿ ನಿಮ್ಮ ಬಳಿಗೆ ಬರುತ್ತೇವೆ” ಎಂದು ಹೇಳಿದನು. |
6
|
ಅಬ್ರಹಾಮನು ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದು ತನ್ನ ಮಗನ ಭುಜದ ಮೇಲೆ ಹೊರಿಸಿದನು. ಅಬ್ರಹಾಮನು ವಿಶೇಷವಾದ ಕತ್ತಿಯನ್ನು ಮತ್ತು ಬೆಂಕಿಯನ್ನು ತೆಗೆದುಕೊಂಡನು. ಅವರಿಬ್ಬರೂ ಆರಾಧಿಸುವುದಕ್ಕಾಗಿ ಆ ಸ್ಥಳಕ್ಕೆ ಹೊರಟರು. |
7
|
ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆದನು. ಅಬ್ರಹಾಮನು, “ಏನು ಮಗನೇ?” ಎಂದು ಉತ್ತರಿಸಿದನು. ಇಸಾಕನು, “ಕಟ್ಟಿಗೆ ಮತ್ತು ಬೆಂಕಿ ನನಗೆ ಕಾಣಿಸುತ್ತಿವೆ. ಆದರೆ ಯಜ್ಞಕ್ಕೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದನು. |
8
|
ಅಬ್ರಹಾಮನು, “ಮಗನೇ, ಯಜ್ಞಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದು ಹೇಳಿದನು. ಹೀಗೆ ಅಬ್ರಹಾಮನು ಮತ್ತು ಅವನ ಮಗನು ಆ ಸ್ಥಳಕ್ಕೆ ಹೊರಟು |
9
|
ದೇವರು ತಿಳಿಸಿದ್ದ ಸ್ಥಳಕ್ಕೆ ಬಂದರು. ಅಲ್ಲಿ ಅಬ್ರಹಾಮನು ಒಂದು ಯಜ್ಞವೇದಿಕೆಯನ್ನು ಕಟ್ಟಿ ಅದರ ಮೇಲೆ ಕಟ್ಟಿಗೆಯನ್ನು ಜೋಡಿಸಿದನು; ಆಮೇಲೆ ಅವನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಕೆಯ ಮೇಲಿದ್ದ ಕಟ್ಟಿಗೆಯ ಮೇಲೆ ಮಲಗಿಸಿದನು. |
10
|
ಬಳಿಕ ಅವನು ತನ್ನ ಮಗನನ್ನು ವಧಿಸಲು ಕತ್ತಿಯನ್ನು ಮೇಲೆತ್ತಲು, |
11
|
ಯೆಹೋವನ ದೂತನು ಪರಲೋಕದಿಂದ, “ಅಬ್ರಹಾಮನೇ, ಅಬ್ರಹಾಮನೇ!” ಎಂದು ಕರೆದನು. ಅಬ್ರಹಾಮನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು. |
12
|
ಯೆಹೋವನ ದೂತನು, “ನಿನ್ನ ಮಗನನ್ನು ವಧಿಸಬೇಡ. ಅವನಿಗೆ ನೋವು ಮಾಡಬೇಡ. ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೂ ಹಿಂಜರಿಯಲಿಲ್ಲ; ಆದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ತೋರಿಬಂದಿದೆ” ಎಂದು ಹೇಳಿದನು. |
13
|
ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ಒಂದು ಟಗರನ್ನು ಕಂಡನು. ಆ ಟಗರಿನ ಕೊಂಬುಗಳು ಒಂದು ಪೊದೆಗೆ ಸಿಕ್ಕಿಕೊಂಡಿದ್ದವು. ಕೂಡಲೇ ಅವನು ಹೋಗಿ, ಆ ಟಗರನ್ನು ಎಳೆದುಕೊಂಡು ಬಂದು ದೇವರಿಗೆ ತನ್ನ ಮಗನ ಬದಲಾಗಿ ಯಜ್ಞವಾಗಿ ಅರ್ಪಿಸಿದನು. |
14
|
ಅಲ್ಲದೆ ಆ ಸ್ಥಳಕ್ಕೆ “ಯೆಹೋವ ಯೀರೆ” ಎಂದು ಹೆಸರಿಟ್ಟನು. ಇಂದಿಗೂ ಜನರು, “ಯೆಹೋವನ ಬೆಟ್ಟದಲ್ಲಿ ಒದಗಿಸಲ್ಪಡುವುದು” ಎಂದು ಹೇಳುತ್ತಾರೆ. |
15
|
ಯೆಹೋವನ ದೂತನು ಆಕಾಶದಿಂದ ಅಬ್ರಹಾಮನನ್ನು ಎರಡನೆ ಸಲ ಕರೆದು ಅವನಿಗೆ, |
16
|
“ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ವಧಿಸಲು ಸಿದ್ಧನಾಗಿದ್ದೆ. ಆದ್ದರಿಂದ ನಾನು ನಿನಗೆ ಈ ವಾಗ್ದಾನವನ್ನು ಮಾಡುತ್ತೇನೆ: |
17
|
ನಾನು ನಿನ್ನನ್ನು ಖಂಡಿತವಾಗಿಯೂ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಖಂಡಿತವಾಗಿಯೂ ಹೆಚ್ಚಿಸುವೆನು; ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಮರಳಿನಂತೆಯೂ ಅಸಂಖ್ಯಾತರನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು. |
18
|
ನೀನು ನನಗೆ ವಿಧೇಯನಾದದ್ದರಿಂದ ನಿನ್ನ ಸಂತತಿಗಳವರ ಮೂಲಕವಾಗಿ ಭೂಮಿಯ ಮೇಲಿರುವ ಪ್ರತಿಯೊಂದು ಜನಾಂಗವೂ ಆಶೀರ್ವಾದ ಹೊಂದುವುದು” ಎಂದು ಹೇಳಿದನು. |
19
|
ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂತಿರುಗಿ ಹೋದನು. ಅವರೆಲ್ಲರೂ ಬೇರ್ಷೆಬಕ್ಕೆ ಮರಳಿ ಪ್ರಯಾಣ ಮಾಡಿದರು. ಬಳಿಕ ಅಬ್ರಹಾಮನು ಅಲ್ಲೇ ವಾಸಿಸಿದನು. |
20
|
ಈ ಸಂಗತಿಗಳೆಲ್ಲ ನಡೆದ ಮೇಲೆ ಅಬ್ರಹಾಮನಿಗೆ ಒಂದು ಸಂದೇಶ ಬಂದಿತು. ಆ ಸಂದೇಶವು ಹೀಗಿತ್ತು: “ನಿನ್ನ ತಮ್ಮನಾದ ನಾಹೋರ ಮತ್ತು ಅವನ ಹೆಂಡತಿಯಾದ ಮಿಲ್ಕ ಈಗ ಮಕ್ಕಳನ್ನು ಹೊಂದಿದ್ದಾರೆ. |
21
|
ಮೊದಲನೆ ಮಗನ ಹೆಸರು ಊಚ್; ಎರಡನೆ ಮಗನ ಹೆಸರು ಬೂಚ್; ಮೂರನೆ ಮಗನ ಹೆಸರು ಕೆಮೂವೇಲ್. ಇವನು ಅರಾಮನ ತಂದೆ. |
22
|
ಇವರಲ್ಲದೆ ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂವೇಲ್ ಎಂಬವರು ಸಹ ಇದ್ದಾರೆ.” |
23
|
ಬೆತೂವೇಲನು ರೆಬೆಕ್ಕಳ ತಂದೆ. ಮಿಲ್ಕಳು ಈ ಎಂಟು ಮಕ್ಕಳ ತಾಯಿ; ನಾಹೋರನು ಅವರ ತಂದೆ. ನಾಹೋರನು ಅಬ್ರಹಾಮನ ಸಹೋದರ. |
24
|
ಇವರಲ್ಲದೆ, ನಾಹೋರನಿಗೆ ಅವನ ಉಪಪತ್ನಿಯಾದ ರೂಮಳಲ್ಲಿ ನಾಲ್ಕು ಮಂದಿ ಗಂಡುಮಕ್ಕಳಿದ್ದರು. ಆ ಗಂಡುಮಕ್ಕಳು ಯಾರಾರೆಂದರೆ: ಟೆಬಹ, ಗಹಮ್, ತಹಷ್ ಮತ್ತು ಮಾಕಾ. |
Genesis 22:15 Kannada Language Bible Words basic statistical display
COMING SOON ...