ಅವನು ಚಿನ್ನದ ನಾಲ್ಕು ಬಳೆಗಳನ್ನು ಮಾಡಿಸಿ ಪೆಟ್ಟಿಗೆಯ ನಾಲ್ಕು ಮೂಲೆಗಳಲ್ಲಿ ಇರಿಸಿದನು. ಈ ಬಳೆಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸಲ್ಪಡುತ್ತಿದ್ದವು. ಪ್ರತಿಯೊಂದು ಬದಿಯಲ್ಲೂ ಎರಡು ಬಳೆಗಳಿದ್ದವು.
ಬಳಿಕ ಅವನು ಮೇಜಿನಲ್ಲಿ ಉಪಯೋಗಿಸಲ್ಪಡುತ್ತಿದ್ದ ಎಲ್ಲಾ ವಸ್ತುಗಳನ್ನು ಮಾಡಿದನು. ಅವನು ಅಪ್ಪಟ ಬಂಗಾರದ ತಟ್ಟೆ, ಚಮಚ, ಬೋಗುಣಿ ಮತ್ತು ಹೂಜೆಗಳನ್ನು ಮಾಡಿದನು. ಬೋಗುಣಿ ಮತ್ತು ಹೂಜೆಗಳು ಪಾನದ್ರವ್ಯ ಸಮರ್ಪಣೆಗಳನ್ನು ಅರ್ಪಿಸುವುದಕ್ಕೆ ಉಪಯುಕ್ತವಾಗಿದ್ದವು.
ಬಳಿಕ ಅವನು ದೀಪಸ್ತಂಭವನ್ನು ಮಾಡಿದನು. ಅವನು ಅಪ್ಪಟ ಬಂಗಾರದಿಂದ ಕಂಬವನ್ನು ಮಾಡಿದನು. ತರುವಾಯ ಹೂವು, ಮೊಗ್ಗು ಮತ್ತು ದಳಗಳನ್ನು ಮಾಡಿ ಜೋಡಿಸಿದನು. ಹೀಗೆ ಅವು ಪುಷ್ಪಾಲಂಕಾರವಾದ ಒಂದೇ ವಸ್ತುವಾಯಿತು.
ಕಂಬದ ಪ್ರತಿಯೊಂದು ಕಡೆಯಲ್ಲಿ ಮೂರುಮೂರು ಕೊಂಬೆಗಳಂತೆ ಆರು ಕೊಂಬೆಗಳಿದ್ದವು. ಕೊಂಬೆಗಳು ಕವಲೊಡೆದಿರುವ ಮೂರು ಸ್ಥಳಗಳಲ್ಲೂ ಒಂದೊಂದು ಹೂವು ಇತ್ತು. ಆ ಹೂವಿಗೆ ಮೊಗ್ಗುಗಳು ಮತ್ತು ದಳಗಳು ಇದ್ದವು.
ಅವನು ಧೂಪವೇದಿಕೆಯನ್ನು ಜಾಲೀಮರದಿಂದ ಮಾಡಿದನು. ಧೂಪವೇದಿಕೆಯು ಚೌಕವಾಗಿತ್ತು. ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಎರಡು ಮೊಳ ಎತ್ತರ ಇತ್ತು. ಧೂಪವೇದಿಕೆಯಲ್ಲಿ ನಾಲ್ಕು ಕೊಂಬುಗಳಿದ್ದವು. ಪ್ರತಿ ಮೂಲೆಯಲ್ಲಿಯೂ ಒಂದೊಂದು ಕೊಂಬುಗಳಿದ್ದವು. ಈ ಕೊಂಬುಗಳು ಒಟ್ಟಾಗಿ ಧೂಪವೇದಿಕೆಗೆ ಜೋಡಿಸಲ್ಪಟ್ಟು ಅವಿಭಾಜ್ಯವಾಗಿತ್ತು.
ಅವನು ಧೂಪವೇದಿಕೆಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸಿ ಗೋಟಿನ ಕೆಳಗೆ ವೇದಿಕೆಯ ಪ್ರತಿಯೊಂದು ಬದಿಯಲ್ಲಿ ಇರಿಸಿದನು. ಈ ಚಿನ್ನದ ಬಳೆಗಳು ವೇದಿಕೆಯನ್ನು ಕೋಲುಗಳ ಮೂಲಕ ಹೊರುವುದಕ್ಕೆ ಉಪಯುಕ್ತವಾಗಿದ್ದವು.