Bible Languages

Indian Language Bible Word Collections

Bible Versions

Books

Exodus Chapters

Exodus 5 Verses

Bible Versions

Books

Exodus Chapters

Exodus 5 Verses

1 ಮೋಶೆ ಆರೋನರು ಜನರೊಡನೆ ಮಾತಾಡಿದ ನಂತರ ಫರೋಹನ ಬಳಿಗೆ ಹೋಗಿ, “ಇಸ್ರೇಲರ ದೇವರಾದ ಯೆಹೋವನು ನಿನಗೆ, ‘ನನ್ನ ಜನರು ಅರಣ್ಯದೊಳಗೆ ಹೋಗಿ ಜಾತ್ರೆ ನಡೆಸಲು ಅಪ್ಪಣೆಕೊಡಬೇಕು’ ಎನ್ನುತ್ತಾನೆ” ಎಂದು ಹೇಳಿದರು.
2 ಆದರೆ ಫರೋಹನು, “ಯೆಹೋವನು ಯಾರು? ನಾನು ಆತನಿಗೆ ಯಾಕೆ ವಿಧೇಯನಾಗಬೇಕು. ಇಸ್ರೇಲರನ್ನು ನಾನು ಯಾಕೆ ಹೋಗಗೊಡಿಸಬೇಕು. ನೀವು ಯೆಹೋವನೆಂದು ಕರೆಯುವ ಆತನನ್ನು ನಾನು ಅರಿಯೆನು, ಆದ್ದರಿಂದ ಇಸ್ರೇಲರನ್ನು ಹೋಗಗೊಡಿಸುವುದಿಲ್ಲ” ಅಂದನು.
3 ಅದಕ್ಕೆ ಮೋಶೆ ಆರೋನರು, “ಇಬ್ರಿಯರ ದೇವರು ನಮ್ಮ ಸಂಗಡ ಮಾತಾಡಿದ್ದಾನೆ. ಆದ್ದರಿಂದ ನಾವು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞವನ್ನು ಸಮರ್ಪಿಸುವೆವು. ಇಲ್ಲವಾದರೆ ಆತನು ನಮ್ಮನ್ನು ಕಾಯಿಲೆಯಿಂದಲೋ ಕತ್ತಿಯಿಂದಲೋ ಸಂಹರಿಸುವನು” ಎಂದು ಹೇಳಿದರು.
4 ಆದರೆ ಈಜಿಪ್ಟಿನ ರಾಜನು ಅವರಿಗೆ, “ಮೋಶೆ ಆರೋನರೇ, ನೀವು ಕೆಲಸಗಾರರಿಗೆ ತೊಂದರೆ ಮಾಡುತ್ತಿದ್ದೀರಿ, ಅವರು ತಮ್ಮ ಕೆಲಸ ಮಾಡಲಿ! ನೀವು ನಿಮ್ಮ ಕೆಲಸವನ್ನು ಮಾಡಿ!
5 ಇಲ್ಲಿ ಬಹಳ ಮಂದಿ ಕೆಲಸಗಾರರಿದ್ದಾರೆ; ಅವರು ಕೆಲಸ ಮಾಡದಂತೆ ನೀವು ತಡೆಯುವುದೇಕೆ?” ಎಂದು ಹೇಳಿದನು.
6 ಅದೇ ದಿನ ಫರೋಹನು ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳಿಗೆ ಮತ್ತು ಮೇಸ್ತ್ರಿಗಳಿಗೆ,
7 “ಇಟ್ಟಿಗೆಗಳನ್ನು ಮಾಡುವುದಕ್ಕೆ ಬೇಕಾದ ಹುಲ್ಲನ್ನು ನೀವು ಜನರಿಗೆ ಇಲ್ಲಿಯವರೆಗೆ ಕೊಟ್ಟಿದ್ದೀರಿ. ಆದರೆ ಈಗ ಇಟ್ಟಿಗೆಗಳನ್ನು ಮಾಡಲು ಅವರೇ ಹುಲ್ಲನ್ನು ಕಂಡುಕೊಳ್ಳಬೇಕೆಂದು ಅವರಿಗೆ ಹೇಳಿರಿ.
8 ಆದರೂ ಅವರು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಈಗಲೂ ಮಾಡಬೇಕು. ಅವರು ಸೋಮಾರಿಗಳಾಗಿದ್ದಾರೆ. ಆದಕಾರಣ ತಮ್ಮನ್ನು ಹೋಗಬಿಡಬೇಕೆಂದು ಕೇಳುತ್ತಿದ್ದಾರೆ. ಅವರಿಗೆ ಸಾಕಷ್ಟು ಕೆಲಸವಿಲ್ಲ. ಆದ್ದರಿಂದ ತಮ್ಮ ದೇವರಿಗೆ ಯಜ್ಞಗಳನ್ನು ಅರ್ಪಿಸಲು ಹೋಗಗೊಡಿಸಬೇಕೆಂದು ಕೇಳುತ್ತಾರೆ.
9 ಈ ಜನರಿಗೆ ಇನ್ನೂ ಕಷ್ಟಕರವಾದ ಕೆಲಸವನ್ನು ಕೊಡಿರಿ. ಅವರು ಕಾರ್ಯಮಗ್ನರಾಗಿರುವಂತೆ ನೋಡಿಕೊಳ್ಳಿರಿ. ಆಗ ಅವರಿಗೆ ಮೋಶೆಯ ಸುಳ್ಳುಗಳನ್ನು ಕೇಳುವುದಕ್ಕೆ ಸಮಯವಿರುವುದಿಲ್ಲ” ಎಂದು ಹೇಳಿದನು.
10 ಆದ್ದರಿಂದ ಈಜಿಪ್ಟಿನ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳು ಮತ್ತು ಮೇಸ್ತ್ರಿಗಳು ಇಸ್ರೇಲರ ಬಳಿಗೆ ಬಂದು, “ಫರೋಹನು ಇಟ್ಟಿಗೆಗಳನ್ನು ಮಾಡಲು ನಿಮಗೆ ಹುಲ್ಲು ಕೊಡುವುದಿಲ್ಲವೆಂದು ತೀರ್ಮಾನಿಸಿದ್ದಾನೆ.
11 ಆದ್ದರಿಂದ ನೀವೇ ಹೋಗಿ ಹುಲ್ಲನ್ನು ಕಂಡುಕೊಳ್ಳಿರಿ. ಆದರೆ ನೀವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಹೇಳಿದರು.
12 ಆದ್ದರಿಂದ ಜನರು ಹುಲ್ಲನ್ನು ಹುಡುಕುತ್ತಾ ಈಜಿಪ್ಟಿನ ಪ್ರತಿಯೊಂದು ಕಡೆಗೂ ಹೋದರು.
13 ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳು, ಜನರಿಂದ ಕಷ್ಟಕರವಾದ ಕೆಲಸಗಳನ್ನು ಬಲವಂತದಿಂದ ಮಾಡಿಸುತ್ತಲೇ ಇದ್ದರು. ಮೊದಲು ಅವರಿಗೆ ಹುಲ್ಲನ್ನು ಕೊಟ್ಟಿದ್ದಾಗ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಈಗಲು ಬಲವಂತದಿಂದ ಮಾಡಿಸಿದರು.
14 ಈಜಿಪ್ಟಿನ ಈ ಅಧಿಕಾರಿಗಳು ಇಬ್ರಿಯ ಮೇಸ್ತ್ರಿಗಳನ್ನು ಆರಿಸಿ ಜನರು ಮಾಡಿದ ಕೆಲಸಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಿದರು. ಈಜಿಪ್ಟಿನ ಅಧಿಕಾರಿಗಳು ಇಬ್ರಿಯ ಮೇಸ್ತ್ರಿಗಳನ್ನು ಹೊಡೆದು, “ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಯಾಕೆ ಮಾಡುತ್ತಿಲ್ಲ? ಹಿಂದೆ ನೀವು ಮಾಡಲು ಸಾಧ್ಯವಾಗಿದ್ದರೆ, ಈಗಲೂ ನೀವು ಮಾಡಬಹುದು” ಎಂದು ಹೇಳಿದರು.
15 ಆಗ ಇಬ್ರಿಯ ಮೇಸ್ತ್ರಿಗಳು ಫರೋಹನ ಬಳಿಗೆ ಹೋಗಿ, “ನಿನ್ನ ಸೇವಕರಾದ ನಮಗೆ ನೀನು ಯಾಕೆ ಈ ರೀತಿ ಮಾಡುತ್ತಿ?
16 ನೀನು ನಮಗೆ ಹುಲ್ಲು ಕೊಡುವುದಿಲ್ಲ. ಆದರೆ ನಾವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕೆಂದು ನಮಗೆ ಅಪ್ಪಣೆಯಾಗಿರುವುದರಿಂದ ನಾವು ಅಧಿಕಾರಿಗಳಿಂದ ಹೊಡೆತ ತಿನ್ನಬೇಕಾಯಿತು. ಹೀಗೆ ನಿನ್ನ ಜನರು ತಪ್ಪು ಮಾಡುತ್ತಿದ್ದಾರೆ” ಎಂದು ದೂರು ಹೇಳಿದರು.
17 ಫರೋಹನು, “ನೀವು ಸೋಮಾರಿಗಳು. ನಿಮಗೆ ಕೆಲಸ ಮಾಡಲು ಇಷ್ಟವಿಲ್ಲ. ಆದುದರಿಂದ ನಿಮ್ಮನ್ನು ಹೋಗಗೊಡಿಸಬೇಕೆಂದು ನೀವು ನನ್ನನ್ನು ಕೇಳುತ್ತೀರಿ. ಇಲ್ಲಿಂದ ಹೊರಟು ಹೋಗಿ ಯೆಹೋವನಿಗೆ ಯಜ್ಞಗಳನ್ನು ಮಾಡಬೇಕೆಂದು ಅಪೇಕ್ಷಿಸುತ್ತೀರಿ.
18 ಈಗ ನಿಮ್ಮ ಕೆಲಸಕ್ಕೆ ಹೋಗಿರಿ! ನಾವು ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೆ ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಉತ್ತರಿಸಿದನು.
19 ಇಬ್ರಿಯ ಮೇಸ್ತ್ರಿಗಳಿಗೆ ತಾವು ತೊಂದರೆಯಲ್ಲಿದ್ದೇವೆಂದು ತಿಳಿಯಿತು. ತಾವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ತಮ್ಮಿಂದ ಮಾಡಲಾಗುವುದಿಲ್ಲವೆಂದು ಅವರಿಗೆ ಗೊತ್ತಿತ್ತು.
20 ಅವರು ಫರೋಹನನ್ನು ಸಂಧಿಸಿ ಹೊರಟು ಹೋಗುವಾಗ ತಮಗಾಗಿ ಕಾಯತ್ತಿದ್ದ ಮೋಶೆ ಆರೋನರನ್ನು ಕಂಡು,
21 “ನಮಗೆ ಹೋಗಲು ಅಪ್ಪಣೆಕೊಡಬೇಕೆಂದು ನೀವು ಫರೋಹನನ್ನು ಕೇಳಿ ನಮಗೆ ಕೆಟ್ಟದ್ದನ್ನು ಮಾಡಿದಿರಿ. ಫರೋಹನು ಮತ್ತು ಅವನ ಅಧಿಕಾರಿಗಳು ನಮ್ಮನ್ನು ದ್ವೇಷಿಸುವಂತೆ ನೀವು ಮಾಡಿದ್ದರಿಂದ ಯೆಹೋವನು ನಿಮಗೆ ತೀರ್ಪು ನೀಡಲಿ. ಅವರು ನಮ್ಮನ್ನು ಕೊಲ್ಲುವುದಕ್ಕೆ ನೀವು ಅವಕಾಶ ಮಾಡಿಕೊಟ್ಟಿರಿ” ಎಂದು ಹೇಳಿದರು.
22 ಆಗ ಮೋಶೆಯು ಯೆಹೋವನಿಗೆ ಪ್ರಾರ್ಥಿಸಿ, “ಯೆಹೋವನೇ, ನಿನ್ನ ಜನರಿಗೆ ಈ ಕೇಡನ್ನು ಏಕೆ ಮಾಡಿದೆ? ನನ್ನನ್ನು ಯಾಕೆ ಇಲ್ಲಿಗೆ ಕಳುಹಿಸಿದೆ?
23 ನಾನು ಫರೋಹನ ಬಳಿಗೆ ಹೋಗಿ ನೀನು ಹೇಳಿದ್ದನ್ನೇ ತಿಳಿಸಿದೆ. ಆದರೆ ಅಂದಿನಿಂದ ಅವನು ಜನರನ್ನು ಕೀಳಾಗಿ ಕಾಣುತ್ತಿದ್ದಾನೆ. ಅಲ್ಲದೆ ನೀನೂ ನಿನ್ನ ಜನರಿಗೆ ಸಹಾಯ ಮಾಡುತ್ತಿಲ್ಲ” ಅಂದನು.

Exodus 5:1 Kannada Language Bible Words basic statistical display

COMING SOON ...

×

Alert

×