ಅರ್ಚಕರು ಮತ್ತು ಮಾಂತ್ರಿಕರು, “ಇಸ್ರೇಲರ ಪವಿತ್ರ ಪೆಟ್ಟಿಗೆಯನ್ನು ಹಿಂದಕ್ಕೆ ಕಳುಹಿಸುವುದಾದರೆ, ಬರಿದಾಗಿ ಕಳುಹಿಸಬೇಡಿ. ನೀವು ಕಾಣಿಕೆಗಳನ್ನು ಕಳುಹಿಸಲೇಬೇಕು. ಆಗ ಇಸ್ರೇಲರ ದೇವರು ನಿಮ್ಮ ಪಾಪಗಳನ್ನು ಪರಿಹರಿಸುತ್ತಾನೆ. ಆಗ ನೀವೆಲ್ಲಾ ಗುಣಹೊಂದುವಿರಿ; ಶುದ್ಧರಾಗುವಿರಿ. ದೇವರು ನಿಮ್ಮನ್ನು ದಂಡಿಸುವುದನ್ನು ನಿಲ್ಲಿಸಬೇಕಾದರೆ ನೀವು ಈ ಕಾರ್ಯಗಳನ್ನು ಮಾಡಬೇಕು. ಆಗ ದೇವರು ನಿಮ್ಮನ್ನು ಬಾಧಿಸುವುದಿಲ್ಲ” ಎಂದು ಉತ್ತರಿಸಿದರು.
ಫಿಲಿಷ್ಟಿಯರು, “ಇಸ್ರೇಲರ ದೇವರು ನಮ್ಮನ್ನು ಕ್ಷಮಿಸಬೇಕಾದರೆ ನಾವು ಯಾವ ಕಾಣಿಕೆಗಳನ್ನು ಕಳುಹಿಸಬೇಕು?” ಎಂದು ಕೇಳಿದರು. ಅರ್ಚಕರು ಮತ್ತು ಮಾಂತ್ರಿಕರು, “ನಿಮ್ಮಲ್ಲಿ ಐದು ಮಂದಿ ಅಧಿಪತಿಗಳಿದ್ದೀರಿ. ಪ್ರತಿಯೊಂದು ನಗರಕ್ಕೆ ಒಬ್ಬ ಅಧಿಪತಿಯಿದ್ದಾನೆ. ನೀವು ಮತ್ತು ನಿಮ್ಮ ಅಧಿಪತಿಗಳೆಲ್ಲರೂ ಒಂದೇ ರೀತಿಯಲ್ಲಿ ತೊಂದರೆಗೊಳಗಾಗಿದ್ದೀರಿ. ಆದ್ದರಿಂದ ಚಿನ್ನದಲ್ಲಿ ಐದು ಗಡ್ಡೆಗಳನ್ನು ಹಾಗೂ ಐದು ಇಲಿಗಳನ್ನು ಮಾಡಿಸಬೇಕು.
ಹೀಗೆ ನಿಮ್ಮ ದೇಶವನ್ನು ನಾಶಗೊಳಿಸುತ್ತಿರುವ ಗಡ್ಡೆಗಳ, ಇಲಿಗಳ ಮಾದರಿಗಳನ್ನು ಮಾಡಿಸಿರಿ. ಇಸ್ರೇಲರ ದೇವರಿಗೆ ಚಿನ್ನದ ಆ ಮಾದರಿಗಳನ್ನು ಕಾಣಿಕೆಯಾಗಿ ಸಲ್ಲಿಸಿರಿ. ಆಗ ಇಸ್ರೇಲರ ದೇವರು ನಿಮ್ಮನ್ನೂ ನಿಮ್ಮ ದೇವರುಗಳನ್ನೂ ನಿಮ್ಮ ದೇಶವನ್ನೂ ಶಿಕ್ಷಿಸುವುದನ್ನು ನಿಲ್ಲಿಸಬಹುದು.
“ಈಗ ಒಂದು ಹೊಸ ಬಂಡಿಯನ್ನು ಮಾಡಿಸಿ ಮತ್ತು ಈಗ ತಾನೆ ಕರು ಹಾಕಿರುವ ಎರಡು ಹಸುಗಳನ್ನು ತೆಗೆದುಕೊಳ್ಳಿರಿ. ಈ ಹಸುಗಳು ಹೊಲಗಳಲ್ಲಿ ಹಿಂದೆಂದೂ ನೊಗ ಹೊತ್ತಿಲ್ಲದಂಥವುಗಳಾಗಿರಬೇಕು. ಈ ಹಸುಗಳನ್ನು ಬಂಡಿಗೆ ಹೂಡಿರಿ ಮತ್ತು ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅವುಗಳನ್ನು ದೊಡ್ಡಿಯಲ್ಲಿ ಬಿಡಿರಿ. ಅವುಗಳು ತಮ್ಮ ತಾಯಂದಿರನ್ನು ಹಿಂಬಾಲಿಸಲು ಅವಕಾಶಕೊಡಕೂಡದು. [*ಅವುಗಳು … ಅವಕಾಶಕೊಡಕೂಡದು “ಹಸುಗಳು ತಮ್ಮ ಕರುಗಳನ್ನು ಕಾಣದೆ ಬೇತ್‌ಷೆಮೆಷಿಗೆ ನೇರವಾಗಿ ಹೋದದ್ದಾದರೆ ಆಗ ಆ ದೇವರು ಮುನ್ನಡೆಸುತ್ತಾನೆಂದು ತಿಳಿಯಬಹುದು” ಎಂಬುದಾಗಿ ಫಿಲಿಷ್ಟಿಯರು ಯೋಚಿಸಿದರು. ದೇವರು ಕಾಣಿಕೆಗಳನ್ನು ಸ್ವೀಕರಿಸಿದ ಎಂಬುದನ್ನೂ ಇದು ತೋರಿಸುತ್ತದೆ.]
ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಬಂಡಿಯ ಮೇಲಿಡಿರಿ. ಚಿನ್ನದ ಮಾದರಿಗಳನ್ನು ಚೀಲದಲ್ಲಿಟ್ಟು ಪೆಟ್ಟಿಗೆಯ ಪಕ್ಕದಲ್ಲಿಡಿರಿ. ಈ ಚಿನ್ನದ ಮಾದರಿಗಳು ನೀವು ನಿಮ್ಮ ಪಾಪಕ್ಷಮೆಗಾಗಿ ದೇವರಿಗೆ ಕಳುಹಿಸುತ್ತಿರುವ ಕಾಣಿಕೆಗಳಾಗಿವೆ; ಬಂಡಿಯನ್ನು ಅದರ ದಾರಿಯಲ್ಲಿ ಕಳುಹಿಸಿರಿ.
ಆದರೆ ಅದರ ಕಡೆ ಗಮನವಿರಲಿ. ಅದು ತಾನಾಗಿ ಇಸ್ರೇಲಿಗೆ ಸೇರಿದ ಬೇತ್‌ಷೆಮೆಷಿನ ಕಡೆಗೆ ಹೋದರೆ, ಆಗ ಆ ದೊಡ್ಡ ಕೇಡನ್ನು ನಮಗುಂಟು ಮಾಡಿದವನು ಯೆಹೋವನೇ ಸರಿ. ಆದರೆ ಹಸುಗಳು ಬೇತ್‌ಷೆಮೆಷಿಗೆ ಹೋಗದಿದ್ದರೆ, ನಮ್ಮನ್ನು ಶಿಕ್ಷಿಸಿದವನು ಯೆಹೋವನಲ್ಲವೆಂದು ನಮಗೆ ಗೊತ್ತಾಗುವುದು. ನಮಗುಂಟಾದ ಕಾಯಿಲೆಯು ತಾನಾಗಿಯೇ ಬಂದದ್ದೆಂದು ತಿಳಿಯುವುದು” ಎಂದು ಹೇಳಿದರು.
ಅರ್ಚಕರು ಮತ್ತು ಮಾಂತ್ರಿಕರು ಹೇಳಿದಂತೆಯೇ ಫಿಲಿಷ್ಟಿಯರು ಮಾಡಿದರು. ಫಿಲಿಷ್ಟಿಯರು ಆಗ ತಾನೇ ಕರುಹಾಕಿದ ಎರಡು ಹಸುಗಳನ್ನು ತಂದು, ಅವುಗಳನ್ನು ಬಂಡಿಗೆ ಹೂಡಿದರು. ಅವುಗಳ ಕರುಗಳನ್ನು ಮನೆಯ ದೊಡ್ಡಿಯಲ್ಲಿ ಬಿಟ್ಟರು.
ಹಸುಗಳು ಬೇತ್‌ಷೆಮೆಷಿಗೆ ನೇರವಾಗಿ ಹೋದವು. ಅವು ದಾರಿಯಲ್ಲಿಯೇ ಹೋದವು. ಅವು ದಾರಿಯುದ್ದಕ್ಕೂ ಕೂಗುತ್ತಾ ನಡೆದವು. ಅವು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಲಿಲ್ಲ. ಫಿಲಿಷ್ಟಿಯರ ಅಧಿಪತಿಗಳು ಬೇತ್‌ಷೆಮೆಷಿನ ಗಡಿಯವರೆಗೂ ಹಸುಗಳನ್ನು ಹಿಂಬಾಲಿಸಿಕೊಂಡು ಹೋದರು.
ಬೇತ್‌ಷೆಮೆಷಿನ ಕಣಿವೆಯಲ್ಲಿ ಅಲ್ಲಿನ ಜನರು ಗೋಧಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ನೋಡಿದಾಗ, ಪವಿತ್ರ ಪೆಟ್ಟಿಗೆಯು ಅವರಿಗೆ ಕಾಣಿಸಿತು. ಅವರಿಗೆ ಬಹಳ ಸಂತೋಷವಾಯಿತು. ಅವರು ಅದನ್ನು ಸ್ವೀಕರಿಸಲು ಓಡಿಹೋದರು.
(14-15) ಬೇತ್‌ಷೆಮೆಷಿನ ಯೆಹೋಶುವನಿಗೆ ಸೇರಿದ ಹೊಲಕ್ಕೆ ಆ ಬಂಡಿಯು ಬಂದಿತು. ಆ ಹೊಲದ ಒಂದು ದೊಡ್ಡ ಕಲ್ಲಿನ ಬಳಿ ಆ ಬಂಡಿಯು ನಿಂತಿತು. ಬೇತ್‌ಷೆಮೆಷಿನ ಜನರು ಬಂಡಿಯ ಕಟ್ಟಿಗೆಗಳನ್ನು ಒಡೆದು ಆ ಹಸುಗಳನ್ನು ಯೆಹೋವನಿಗೆ ಆಹುತಿಯಾಗಿ ಅರ್ಪಿಸಿದರು. ಕೆಲವು ಲೇವಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಇಳಿಸಿದರು. ಅಲ್ಲದೆ ಅವರು ಚಿನ್ನದ ಮಾದರಿಗಳಿದ್ದ ಚೀಲವನ್ನು ಇಳಿಸಿದರು. ಲೇವಿಯರು ಯೆಹೋವನ ಪೆಟ್ಟಿಗೆಯನ್ನು ಮತ್ತು ಆ ಚೀಲವನ್ನು ದೊಡ್ಡಕಲ್ಲಿನ ಮೇಲಿಟ್ಟರು. ಅದೇ ದಿನ ಬೇತ್‌ಷೆಮೆಷಿನ ಜನರು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಿದರು.
ಈ ರೀತಿ ಫಿಲಿಷ್ಟಿಯರು ತಾವು ಯೆಹೋವನಿಗೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಚಿನ್ನದ ಗಡ್ಡೆಗಳನ್ನು ಕಾಣಿಕೆಗಳನ್ನಾಗಿ ಕಳುಹಿಸಿದರು. ಅವರು ಪ್ರತಿಯೊಂದು ಫಿಲಿಷ್ಟಿಯ ನಗರಕ್ಕೆ ಒಂದರಂತೆ ಚಿನ್ನದ ಗಡ್ಡೆಗಳನ್ನು ಕಳುಹಿಸಿದ್ದರು. ಅಷ್ಡೋದ್, ಗಾಜಾ, ಅಷ್ಕೆಲೋನ್, ಗತ್ ಮತ್ತು ಎಕ್ರೋನ್‌ಗಳೇ ಆ ನಗರಗಳು.
ಫಿಲಿಷ್ಟಿಯರು ಚಿನ್ನದ ಇಲಿಗಳನ್ನೂ ಕಳುಹಿಸಿದ್ದರು. ಫಿಲಿಷ್ಟಿಯರ ಐದು ಅಧಿಪತಿಗಳಿಗೆ ಸೇರಿದ್ದ ಐದು ಪಟ್ಟಣಗಳ ಸಂಖ್ಯೆಗನುಸಾರವಾಗಿ ಈ ಇಲಿಗಳಿದ್ದವು. ಈ ಪಟ್ಟಣಗಳ ಸುತ್ತ ಗೋಡೆಗಳಿದ್ದು ಹಳ್ಳಿಗಳು ಈ ಪಟ್ಟಣಗಳನ್ನು ಸುತ್ತುವರಿದಿದ್ದವು. ಬೇತ್‌ಷೆಮೆಷಿನ ಜನರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಒಂದು ಕಲ್ಲಿನ ಮೇಲಿಟ್ಟರು. ಬೇತ್‌ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಆ ಕಲ್ಲು ಈಗಲೂ ಇದೆ.
ಆದರೆ ಯಾಜಕರಿಲ್ಲದ ಕಾರಣ ಬೇತ್‌ಷೆಮೆಷಿನ ಜನರು ಪವಿತ್ರ ಪೆಟ್ಟಿಗೆಯನ್ನು ಹಣಿಕಿ ನೋಡಿದ್ದರಿಂದ ಬೇತ್‌ಷೆಮೆಷಿನ ಎಪ್ಪತ್ತು ಜನರನ್ನು ಯೆಹೋವನು ಕೊಂದನು. ಯೆಹೋವನು ಕ್ರೂರವಾಗಿ ಶಿಕ್ಷಿಸಿದ್ದರಿಂದ ಬೇತ್‌ಷೆಮೆಷಿನ ಜನರು ಗೋಳಾಡಿ,
“ಈ ಪವಿತ್ರ ಪೆಟ್ಟಿಗೆಯನ್ನು ನೋಡಿಕೊಳ್ಳಬಲ್ಲ ಯಾಜಕನೆಲ್ಲಿದ್ದಾನೆ? [†ಈ ಪವಿತ್ರ … ಯಾಜಕನೆಲ್ಲಿದ್ದಾನೆ? ಅಕ್ಷರಶಃ, ಹೀಬ್ರೂವಿನಲ್ಲಿ “ಪವಿತ್ರನೂ ಯೆಹೋವನೂ ಆಗಿರುವ ದೇವರ ಮುಂದೆ ಯಾರು ನಿಂತುಕೊಳ್ಳಬಲ್ಲರು?”] ಈ ಪೆಟ್ಟಿಗೆಯು ಇಲ್ಲಿಂದ ಎಲ್ಲಿಗೆ ಹೋಗಬೇಕಾಗಿದೆ?” ಎಂದು ಬೇತ್‌ಷೆಮೆಷಿನ ಜನರು ಪ್ರಶ್ನಿಸಿದರು.
ಕಿರ್ಯತ್ಯಾರೀಮಿನಲ್ಲಿ ಒಬ್ಬ ಯಾಜಕನಿದ್ದನು. ಬೇತ್‌ಷೆಮೆಷಿನ ಜನರು ಕಿರ್ಯತ್ಯಾರೀಮಿನವರ ಬಳಿಗೆ ಸಂದೇಶಕರನ್ನು ಕಳುಹಿಸಿ, “ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹಿಂದಕ್ಕೆ ತಂದಿರುವರು. ನೀವು ಬಂದು ಅದನ್ನು ನಿಮ್ಮ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ” ಎಂದು ತಿಳಿಸಿದರು.