English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

1 Samuel Chapters

1 Samuel 30 Verses

1 ಮೂರನೆಯ ದಿನ ದಾವೀದನು ಮತ್ತು ಅವನ ಜನರು ಚಿಕ್ಲಗ್ ಊರಿಗೆ ಬಂದರು. ಅಮಾಲೇಕ್ಯರು ಚಿಕ್ಲಗನ್ನು ಆಕ್ರಮಣ ಮಾಡಿರುವುದನ್ನು ಅವರು ನೋಡಿದರು. ಅಮಾಲೇಕ್ಯರು ನೆಗೆವ್ ಪ್ರದೇಶದ ಮೇಲೆ ದಾಳಿ ಮಾಡಿದರು. ಅವರು ಚಿಕ್ಲಗನ್ನು ಆಕ್ರಮಿಸಿದ್ದರು ಮತ್ತು ಆ ನಗರವನ್ನು ಸುಟ್ಟುಹಾಕಿದ್ದರು.
2 ಅವರು ಚಿಕ್ಲಗಿನ ಸ್ತ್ರೀಯರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಎಲ್ಲರನ್ನೂ ಬಂಧಿಗಳನ್ನಾಗಿ ಎಳೆದುಕೊಂಡು ಹೋಗಿದ್ದರು; ಅವರು ಯಾರನ್ನೂ ಕೊಂದಿರಲಿಲ್ಲ, ಆದರೆ ಎಲ್ಲರನ್ನೂ ಎಳೆದುಕೊಂಡು ಹೋಗಿದ್ದರು.
3 ದಾವೀದನು ಮತ್ತು ಅವನ ಜನರು ಚಿಕ್ಲಗಿಗೆ ಬಂದರು. ನಗರವು ಸುಡುತ್ತಿರುವುದನ್ನು ಅವರು ನೋಡಿದರು. ಅವರ ಹೆಂಡತಿಯರಾಗಲಿ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಅಲ್ಲಿರಲಿಲ್ಲ. ಅಮಾಲೇಕ್ಯರು ಅವರನ್ನು ಎಳೆದುಕೊಂಡು ಹೋಗಿದ್ದರು.
4 ದಾವೀದ ಮತ್ತು ಅವನ ಸೈನ್ಯದ ಇತರರು ಶಕ್ತಿಮೀರಿ ಜೋರಾಗಿ ಅತ್ತರು.
5 ದಾವೀದನ ಇಬ್ಬರು ಹೆಂಡತಿಯರಾದ ಇಜ್ರೇಲಿನ ಅಹೀನೋವಮಳನ್ನೂ ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳನ್ನೂ ಅಮಾಲೇಕ್ಯರು ಎಳೆದುಕೊಂಡು ಹೋಗಿದ್ದರು.
6 ಸೈನ್ಯದಲ್ಲಿದ್ದ ಎಲ್ಲರೂ ದುಃಖತಪ್ತರಾಗಿದ್ದರು ಮತ್ತು ಕೋಪಗೊಂಡಿದ್ದರು; ಯಾಕೆಂದರೆ ಅವರ ಗಂಡು ಮತ್ತು ಹೆಣ್ಣುಮಕ್ಕಳೆಲ್ಲ ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದರು. ದಾವೀದನನ್ನು ಕಲ್ಲುಗಳಿಂದ ಕೊಲ್ಲಬೇಕೆಂದು ಅವರು ಮಾತಾಡಿಕೊಳ್ಳುತ್ತಿದ್ದರು. ದಾವೀದನು ಇದರಿಂದ ತಳಮಳಗೊಂಡರೂ ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು.
7 ದಾವೀದನು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ತೆಗೆದುಕೊಂಡು ಬಾ” ಎಂದನು. ಅವನು ಎಫೋದನ್ನು ತಂದನು.
8 ನಂತರ ದಾವೀದನು ಯೆಹೋವನಲ್ಲಿ, “ನಮ್ಮ ಕುಟುಂಬಗಳನ್ನು ಅಪಹರಿಸಿದ ಜನರನ್ನು ನಾನು ಅಟ್ಟಿಸಿಕೊಂಡು ಹೋಗಬೇಕೇ? ನಾನು ಅವರನ್ನು ಸೆರೆಹಿಡಿಯುವೆನೇ?” ಎಂದು ಪ್ರಾರ್ಥಿಸಿದನು. ಯೆಹೋವನು, “ಅವರನ್ನು ಅಟ್ಟಿಸಿಕೊಂಡು ಹೋಗು. ಅವರನ್ನು ನೀನು ಸೆರೆಹಿಡಿಯಬಹುದು. ನಿಮ್ಮ ಕುಟುಂಬಗಳನ್ನು ನೀವು ರಕ್ಷಿಸಬಹುದು” ಎಂದು ಉತ್ತರಿಸಿದನು.
9 (9-10) ದಾವೀದನು ತನ್ನ ಆರುನೂರು ಜನರೊಂದಿಗೆ ಬೆಸೋರ್ ಹಳ್ಳಕ್ಕೆ ಹೋದನು. ಸುಮಾರು ಇನ್ನೂರು ಜನರು ಬಹಳ ಆಯಾಸಗೊಂಡು ಬಲಹೀನರಾಗಿದ್ದುದರಿಂದ ಅಲ್ಲಿಯೇ ಉಳಿದರು. ಆದ್ದರಿಂದ ದಾವೀದನು ಮತ್ತು ಅವನ ನಾನೂರು ಜನರು ಅಮಾಲೇಕ್ಯರನ್ನು ಅಟ್ಟಿಸಿಕೊಂಡು ಹೋದರು.
11 ಈಜಿಪ್ಟಿನವನೊಬ್ಬನು ಹೊಲದಲ್ಲಿ ಬಿದ್ದಿರುವುದನ್ನು ದಾವೀದನ ಜನರು ಕಂಡರು. ಅವರು ಈಜಿಪ್ಟಿನವನನ್ನು ದಾವೀದನ ಹತ್ತಿರಕ್ಕೆ ತಂದರು. ಅವರು ಈಜಿಪ್ಟಿನವನಿಗೆ ಕುಡಿಯಲು ನೀರನ್ನು ಮತ್ತು ತಿನ್ನಲು ಆಹಾರವನ್ನು ಕೊಟ್ಟರು.
12 ಅವರು ಈಜಿಪ್ಟಿನವನಿಗೆ ಅಂಜೂರದ ಹಣ್ಣಿನ ಉಂಡೆಯನ್ನೂ ಎರಡು ಗೊಂಚಲು ಒಣ ದ್ರಾಕ್ಷಿಯನ್ನೂ ಕೊಟ್ಟರು. ಅವನು ತಿಂದನಂತರ ಚೇತರಿಸಿಕೊಂಡನು. ಅವನು ಮೂರು ದಿವಸ ಹಗಲಿರುಳು ಆಹಾರವನ್ನೇನೂ ತಿಂದಿರಲಿಲ್ಲ; ನೀರನ್ನೂ ಕುಡಿದಿರಲಿಲ್ಲ.
13 ದಾವೀದನು ಈಜಿಪ್ಟಿನವನನ್ನು, “ನಿಮ್ಮ ಒಡೆಯನು ಯಾರು? ನೀನು ಬಂದಿರುವುದು ಎಲ್ಲಿಂದ?” ಎಂದು ಕೇಳಿದನು. ಈಜಿಪ್ಟಿನವನು, “ನಾನು ಒಬ್ಬ ಈಜಿಪ್ಟಿನವನು ನಾನು ಒಬ್ಬ ಅಮಾಲೇಕ್ಯನ ಗುಲಾಮನು. ಮೂರು ದಿನಗಳ ಹಿಂದೆ ನಾನು ಅಸ್ವಸ್ಥನಾಗಿದ್ದರಿಂದ ನಮ್ಮ ಒಡೆಯನು ನನ್ನನ್ನು ಬಿಟ್ಟುಹೋದನು.
14 ಕೆರೇತ್ಯರು ವಾಸಿಸುವ ನೆಗೆವ್ ಮೇಲೆ ನಾವು ಆಕ್ರಮಣ ಮಾಡಿದೆವು. ನಾವು ಯೆಹೂದ ದೇಶದ ಮೇಲೆ ಮತ್ತು ಕಾಲೇಬ್ಯರು ವಾಸಿಸುವ ನೆಗೆವ್ ಪ್ರಾಂತ್ಯಗಳ ಮೇಲೆ ಆಕ್ರಮಣ ಮಾಡಿದೆವು. ನಾವು ಚಿಕ್ಲಗನ್ನು ಸುಟ್ಟುಹಾಕಿದೆವು” ಎಂದು ಹೇಳಿದನು.
15 ದಾವೀದನು ಈಜಿಪ್ಟಿನವನನ್ನು, “ನಮ್ಮ ಕುಟುಂಬಗಳನ್ನು ಅಪಹರಿಸಿರುವ ಜನರ ಹತ್ತಿರಕ್ಕೆ ನಮ್ಮನ್ನು ಕರೆದುಕೊಂಡು ಹೋಗುವೆಯಾ?” ಎಂದು ಕೇಳಿದನು. ಈಜಿಪ್ಟಿನವನು, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಇಲ್ಲವೆ ನನ್ನ ಒಡೆಯನಿಗೆ ಮರಳಿ ಒಪ್ಪಿಸುವುದಿಲ್ಲವೆಂದು ದೇವರ ಮುಂದೆ ಪ್ರಮಾಣ ಮಾಡಿರಿ. ಆಗ ನಾನು ನಿಮ್ಮವರನ್ನು ಕಂಡು ಹಿಡಿಯಲು ಸಹಾಯ ಮಾಡುತ್ತೇನೆ” ಎಂದು ಹೇಳಿದನು.
16 ಈಜಿಪ್ಟಿನವನು ದಾವೀದನನ್ನು ಅಮಾಲೇಕ್ಯರ ಬಳಿಗೆ ಕರೆದುಕೊಂಡು ಹೋದನು. ಅವರು ತಿನ್ನುತ್ತಾ ಕುಡಿಯುತ್ತಾ ಸುತ್ತುವರಿದು ನೆಲದ ಮೇಲೆ ಬಿದ್ದಿದ್ದರು. ಫಿಲಿಷ್ಟಿಯರ ಮತ್ತು ಯೆಹೂದ್ಯರ ದೇಶದಿಂದ ಸೂರೆಮಾಡಿದ ವಸ್ತುಗಳಿಂದ ಸಂಭ್ರಮವನ್ನು ಆಚರಿಸುತ್ತಿದ್ದರು.
17 ದಾವೀದನು ಅವರನ್ನು ಸೋಲಿಸಿ ಅವರನ್ನು ಕೊಂದನು. ಅವರು ಹೊತ್ತಾರೆಯಿಂದ ಮಾರನೆಯ ದಿನದ ಸಂಜೆಯವರೆಗೆ ಹೋರಾಡಿದರು. ನಾನೂರು ಮಂದಿ ಯುವಕರು ತಮ್ಮ ಒಂಟೆಗಳ ಮೇಲೇರಿ ಓಡಿಹೋದದ್ದನ್ನು ಬಿಟ್ಟರೆ, ಉಳಿದ ಅಮಾಲೇಕ್ಯರಲ್ಲಿ ಯಾರೂ ತಪ್ಪಿಸಿಕೊಳ್ಳಲಾಗಲಿಲ್ಲ.
18 ದಾವೀದನು ತನ್ನ ಇಬ್ಬರು ಹೆಂಡತಿಯರನ್ನು ಮರಳಿ ಪಡೆದನು. ಅಮಾಲೇಕ್ಯರು ಸೂರೆಮಾಡಿದ್ದೆಲ್ಲವನ್ನೂ ದಾವೀದನು ಮತ್ತೆ ಹಿಂದಕ್ಕೆ ಪಡೆದನು.
19 ಏನೂ ಕಳೆದು ಹೋಗಿರಲಿಲ್ಲ. ಅವರು ತಮ್ಮ ಎಲ್ಲ ಮಕ್ಕಳನ್ನೂ ಮುದುಕರನ್ನೂ ಅವರ ಗಂಡುಹೆಣ್ಣು ಮಕ್ಕಳನ್ನೂ ಮತ್ತೆ ಪಡೆದುಕೊಂಡರು. ಅವರು ತಮ್ಮ ಬೆಲೆಬಾಳುವ ವಸ್ತುಗಳನ್ನೂ ಅಮಾಲೇಕ್ಯರು ತೆಗೆದುಕೊಂಡು ಹೋಗಿದ್ದ ಎಲ್ಲವನ್ನೂ ಮತ್ತೆ ಪಡೆದುಕೊಂಡರು. ಹೀಗೆ ದಾವೀದನು ಎಲ್ಲವನ್ನೂ ತೆಗೆದುಕೊಂಡು ಬಂದನು.
20 ದಾವೀದನು ಎಲ್ಲ ಕುರಿಗಳನ್ನು ಮತ್ತು ದನಗಳನ್ನು ತೆಗೆದುಕೊಂಡನು. ಈ ಪಶುಗಳು ಮುಂದೆ ಹೋಗುವಂತೆ ದಾವೀದನ ಜನರು ಮಾಡಿದರು. ದಾವೀದನ ಜನರು, “ಅವು ದಾವೀದನ ಕೊಡುಗೆಗಳು” ಎಂದು ಹೇಳಿದರು.
21 ದಾವೀದನು ತನ್ನ ಇನ್ನೂರು ಮಂದಿ ಉಳಿದುಕೊಂಡಿದ್ದ ಬೆಸೋರ್ ಹಳ್ಳಕ್ಕೆ ಬಂದನು. ತಮ್ಮ ಅತಿಯಾದ ಆಯಾಸದಿಂದಲೂ ಬಲಹೀನತೆಯಿಂದಲೂ ದಾವೀದನನ್ನು ಹಿಂಬಾಲಿಸಲಾಗದ ಜನರೇ ಇವರು. ದಾವೀದನನ್ನು ಮತ್ತು ಅವನೊಡನೆ ಹೋಗಿದ್ದ ಸೈನಿಕರನ್ನು ಸಂಧಿಸಲು ಇವರು ಹೊರಗೆ ಬಂದರು. ದಾವೀದ ಮತ್ತು ಅವನ ಸೈನ್ಯವು ಸಮೀಪಿಸಿದಾಗ, ಬೆಸೋರ್ ಹಳ್ಳದಲ್ಲಿದ್ದ ಜನರು ಅವರನ್ನು ವಂದಿಸಿದರು. ದಾವೀದನು ಸಹ ಅವರನ್ನು ಸಂಧಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದನು.
22 ಆದರೆ ದಾವೀದನ ಜೊತೆಯಲ್ಲಿ ಹೋಗಿದ್ದ ಜನರ ಗುಂಪಿನಲ್ಲಿ ಕೆಟ್ಟ ಜನರೂ ಕಿಡಿಗೇಡಿಗಳೂ ಇದ್ದರು. ಆ ಕೀಡಿಗೇಡಿಗಳು, “ಈ ಇನ್ನೂರು ಜನರು ನಮ್ಮೊಡನೆ ಬರಲಿಲ್ಲ. ಆದ್ದರಿಂದ ನಾವು ವಶಪಡಿಸಿಕೊಂಡ ವಸ್ತುಗಳಲ್ಲಿ ಯಾವುದನ್ನೂ ಇವರಿಗೆ ಕೊಡುವುದಿಲ್ಲ. ಇವರು ತಮ್ಮ ಹೆಂಡತಿಯರನ್ನು ಮತ್ತು ಮಕ್ಕಳನ್ನು ಮಾತ್ರ ತೆಗೆದುಕೊಳ್ಳಬಹುದು” ಎಂದು ಹೇಳಿದರು.
23 ದಾವೀದನು, “ನನ್ನ ಸಹೋದರರೇ, ಆ ರೀತಿ ಮಾಡಬೇಡಿ! ಯೆಹೋವನು ನಮಗೆ ದಯಪಾಲಿಸಿರುವುದನ್ನು ಕುರಿತು ಯೋಚಿಸಿ! ನಮ್ಮ ಮೇಲೆ ಧಾಳಿಮಾಡಿದ ಶತ್ರುಗಳನ್ನು ಸೋಲಿಸಲು ಯೆಹೋವನು ನಮ್ಮನ್ನು ನೇಮಿಸಿದನು.
24 ನೀವು ಹೇಳುವುದನ್ನು ಯಾರೂ ಕೇಳುವುದಿಲ್ಲ! ಯುದ್ಧಮಾಡುವವನಿಗೆ ಸಿಗುವ ಪಾಲು ಮತ್ತು ಯುದ್ಧ ಸಾಮಾಗ್ರಿಗಳನ್ನು ಕಾಯುವವನಿಗೆ ಸಿಗುವ ಪಾಲು ಒಂದೇ ಸಮನಾಗಿರಬೇಕು. ಪ್ರತಿಯೊಬ್ಬರ ಪಾಲೂ ಒಂದೇ ಸಮವಾಗಿರಬೇಕು” ಎಂದು ಉತ್ತರಿಸಿದನು.
25 ಇಸ್ರೇಲಿಗೆ ದಾವೀದನು ಇದನ್ನು ಆಜ್ಞೆಯನ್ನಾಗಿ ಮತ್ತು ನಿಯಮವನ್ನಾಗಿ ಮಾಡಿದನು. ಈ ನಿಯಮವು ಇವತ್ತಿಗೂ ಮುಂದುವರಿಯುತ್ತಿದೆ.
26 ದಾವೀದನು ಚಿಕ್ಲಗಿಗೆ ಆಗಮಿಸಿದನು. ನಂತರ ಅವನು ಅಮಾಲೇಕ್ಯರಿಂದ ವಶಪಡಿಸಿಕೊಂಡಿದ್ದ ಕೆಲವು ವಸ್ತುಗಳನ್ನು ಯೆಹೂದದ ಅವನ ಗೆಳೆಯರಿಗೂ ನಾಯಕರಿಗೂ ಕಳುಹಿಸಿದನು. ದಾವೀದನು, “ಯೆಹೋವನ ಶತ್ರುಗಳಿಂದ ನಾವು ವಶಪಡಿಸಿಕೊಂಡ ವಸ್ತುಗಳ ಕೊಡುಗೆಯು ನಿಮಗಾಗಿ ಇಲ್ಲಿದೆ” ಎಂದು ಹೇಳಿದನು.
27 ದಾವೀದನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಕೆಲವು ವಸ್ತುಗಳನ್ನು ಬೇತೇಲಿನವರಿಗೆ, ನೆಗೆವಿನ ರಾಮೋತಿನವರಿಗೆ, ಯತ್ತೀರಿನವರಿಗೆ,
28 ಅರೋಯೇರಿನವರಿಗೆ, ಸಿಪ್ಮೋತಿನವರಿಗೆ, ಎಷ್ಟೆಮೋವದವರಿಗೆ,
29 ರಾಕಾಲಿನವರಿಗೆ, ಎರಹ್ಮೇಲ್ಯರ ಮತ್ತು ಕೇನ್ಯರ ಪಟ್ಟಣಗಳಿಗೆ,
30 ಹೊರ್ಮದವರಿಗೆ, ಬೋರಾಷಾನಿನವರಿಗೆ, ಅತಾಕಿನವರಿಗೆ
31 ಮತ್ತು ಹೆಬ್ರೋನಿನವರಿಗೆ ಕಳುಹಿಸಿಕೊಟ್ಟನು ಮತ್ತು ತನ್ನ ಜನರು ಹೋಗಿದ್ದ ಇತರ ಸ್ಥಳಗಳ ನಾಯಕರಿಗೂ ಆ ವಸ್ತುಗಳಲ್ಲಿ ಕೆಲವನ್ನು ಕಳುಹಿಸಿದನು.
×

Alert

×