ಏಲಿಯು ಕರೆದಿರಬಹುದೆಂದು ಸಮುವೇಲನು ನೆನೆಸಿದನು. ಆದ್ದರಿಂದ ಸಮುವೇಲನು ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು. ಆದರೆ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ. ಹೋಗಿ ಮಲಗಿಕೋ” ಅಂದನು. ಸಮುವೇಲನು ಹೋಗಿ ಮಲಗಿಕೊಂಡನು.
ನಂತರ ಯೆಹೋವನು, “ಸಮುವೇಲನೇ” ಎಂದು ಮತ್ತೆ ಕರೆದನು. ಸಮುವೇಲನು ಮತ್ತೆ ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಎಂದು ಹೇಳಿದನು. ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು.
ಆ ವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಯೆಹೋವನು ಅವನೊಂದಿಗೆ ನೇರವಾಗಿ ಮಾತಾಡಿರಲಿಲ್ಲ. [*ಯೆಹೋವನು … ಮಾತಾಡಿರಲಿಲ್ಲ ಅಕ್ಷರಶಃ, “ಯೆಹೋವನ ವಾಕ್ಯಗಳು ಇನ್ನೂ ಅವನಿಗೆ ತಿಳಿದಿರಲಿಲ್ಲ. “]
ಯೆಹೋವನು ಸಮುವೇಲನನ್ನು ಮೂರನೆಯ ಸಲ ಕರೆದನು. ಸಮುವೇಲನು ಮತ್ತೆ ಮೇಲೆದ್ದು ಏಲಿಯನ ಬಳಿಗೆ ಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು. ಬಾಲಕನನ್ನು ಕರೆಯುತ್ತಿರುವವನು ಯೆಹೋವನೆಂಬುದು ಏಲಿಗೆ ಆಗ ಅರ್ಥವಾಯಿತು.
ಏಲಿಯು ಸಮುವೇಲನಿಗೆ, “ಹೋಗಿ ಮಲಗಿಕೊ. ನಿನ್ನನ್ನು ಮತ್ತೆ ಕರೆದರೆ, ‘ಅಪ್ಪಣೆಯಾಗಲಿ, ಯೆಹೋವನೇ ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ’ ಎಂದು ಉತ್ತರಿಸು” ಎಂಬುದಾಗಿ ಹೇಳಿದನು. ಸಮುವೇಲನು ತನ್ನ ಸ್ಥಳದಲ್ಲಿ ಮಲಗಲು ಹೋದನು.
ಯೆಹೋವನು ಅಲ್ಲಿ ಪ್ರತ್ಯಕ್ಷನಾಗಿ ನಿಂತು ಮೊದಲು ಕರೆದಂತೆಯೇ “ಸಮುವೇಲನೆ, ಸಮುವೇಲನೆ” ಎಂದು ಕರೆದನು. ಸಮುವೇಲನು, “ಅಪ್ಪಣೆಯಾಗಲಿ, ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ” ಎಂದನು.
ಏಲಿಯ ಕುಟುಂಬವನ್ನು ನಿತ್ಯದಂಡನೆಗೆ ಗುರಿಪಡಿಸುತ್ತೇನೆಂದು ನಾನು ಏಲಿಗೆ ಹೇಳಿರುವೆನು. ಏಲಿಯ ಮಕ್ಕಳು ನನಗೆ ವಿರೋಧವಾಗಿ ಮಾತಾಡಿದ್ದರಿಂದ ಮತ್ತು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನಾನು ಇದನ್ನು ಮಾಡುತ್ತೇನೆ. ಅಲ್ಲದೆ ಅವರನ್ನು ಹತೋಟಿಯಲ್ಲಿಡಲು ಏಲಿಗೆ ಸಾಧ್ಯವಾಗಲಿಲ್ಲ.
ಏಲಿಯು, “ಯೆಹೋವನು ನಿನಗೆ ಹೇಳಿದ್ದೇನು? ನನ್ನೊಂದಿಗೆ ಅದನ್ನು ಮುಚ್ಚಿಡಬೇಡ. ಆತನು ನಿನ್ನೊಂದಿಗೆ ಆಡಿದ ಮಾತುಗಳಲ್ಲಿ ಏನನ್ನಾದರೂ ಮುಚ್ಚಿಟ್ಟರೆ ಆತನು ನಿನ್ನನ್ನು ಶಿಕ್ಷಿಸುತ್ತಾನೆ” ಎಂದು ತಿಳಿಸಿದನು.