(1-3) ರೂಬೇನನು ಇಸ್ರೇಲನ ಚೊಚ್ಚಲಮಗ. ಅವನು ಚೊಚ್ಚಲಮಗನಿಗೆ ಸಿಗಬೇಕಾಗಿದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಅವನು ತನ್ನ ತಂದೆಯ ಉಪಪತ್ನಿಯೊಡನೆ ಸಂಭೋಗಿಸಿದ್ದರಿಂದ ಅವನ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ಆದ್ದರಿಂದ ವಂಶಾವಳಿಯಲ್ಲಿ ಚೊಚ್ಚಲ ಮಗನ ಸ್ಥಾನ ಅವನಿಗೆ ದೊರೆಯಲಿಲ್ಲ. ಯೆಹೂದನು ತನ್ನ ಎಲ್ಲಾ ಸಹೋದರರಿಗಿಂತ ಬಲಾಢ್ಯನಾದನು. ಆದ್ದರಿಂದ ಅವನ ಕುಲದಿಂದಲೇ ನಾಯಕರುಗಳು ಬಂದರು. ಆದರೆ ಚೊಚ್ಚಲ ಮಗನಿಗೆ ಸಿಗಬೇಕಾಗಿದ್ದ ಇತರ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ರೂಬೇನನ ಮಕ್ಕಳು ಯಾರೆಂದರೆ: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
ಸೌಲನು ಅರಸನಾಗಿದ್ದ ಸಮಯದಲ್ಲಿ ಬೆಳನ ಜನರು ಹಗ್ರೀಯರೊಂದಿಗೆ ಯುದ್ಧಮಾಡಿ ಅವರ ಗುಡಾರಗಳಲ್ಲಿ ವಾಸಮಾಡಿದರು. ಆ ಗುಡಾರಗಳಲ್ಲಿ ವಾಸಮಾಡುತ್ತಾ ಗಿಲ್ಯಾದಿನ ಪೂರ್ವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದರು.
ಗಿಲ್ಯಾದ್ ಪ್ರಾಂತ್ಯದಲ್ಲಿ ಗಾದ್ ಕುಟುಂಬದ ಜನರು ವಾಸಿಸಿದರು. ಅವರು ಬಾಷಾನ್ ಪ್ರಾಂತ್ಯದಲ್ಲಿಯೂ ಅದರ ಸುತ್ತಮುತ್ತಲಿದ್ದ ಊರುಗಳಲ್ಲಿಯೂ ಶಾರೋನ್ ಪ್ರಾಂತ್ಯದ ಹುಲ್ಲುಗಾವಲುಗಳ ಗಡಿಗಳವರೆಗೂ ನೆಲೆಸಿದರು.
ಯೋತಾವು ಮತ್ತು ಯಾರೊಬ್ಬಾಮನ ಕಾಲದಲ್ಲಿ ಇವರ ಹೆಸರುಗಳನ್ನೆಲ್ಲಾ ಗಾದ್ಯರ ಸಂತಾನ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಯೋತಾವುನು ಯೆಹೂದದ ಅರಸನಾಗಿದ್ದನು ಮತ್ತು ಯಾರೊಬ್ಬಾಮನು ಇಸ್ರೇಲರ ಅರಸನಾಗಿದ್ದನು.
ರೂಬೇನ್, ಮನಸ್ಸೆ, ಗಾದ್ ಕುಲಗಳ ಯೋಧರು ಯುದ್ಧಮಾಡುವಾಗ ದೇವರಲ್ಲಿ ಪ್ರಾರ್ಥಿಸಿದರು. ಅವರು ದೇವರ ಮೇಲೆ ಭರವಸೆಯಿಟ್ಟು ಸಹಾಯಕ್ಕಾಗಿ ಬೇಡಿಕೊಂಡದ್ದರಿಂದ ದೇವರು ಅವರಿಗೆ ಜಯವನ್ನು ಕೊಟ್ಟನು.
ವೈರಿಗಳಲ್ಲಿದ್ದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳು, ಎರಡು ಸಾವಿರ ಕತ್ತೆಗಳು ಅಲ್ಲದೆ ಒಂದು ಲಕ್ಷ ಸೆರೆಯಾಳುಗಳನ್ನು ತೆಗೆದುಕೊಂಡರು.
ದೇವರು ಅವರಿಗೆ ಜಯವನ್ನು ಕೊಟ್ಟಿದ್ದರಿಂದ ಹಗ್ರೀಯರಲ್ಲಿ ಬಹಳ ಮಂದಿಯನ್ನು ಕೊಂದರು. ಆ ಹಗ್ರೀಯರ ಪ್ರದೇಶದಲ್ಲಿ ರೂಬೇನ್, ಗಾದ್, ಮನಸ್ಸೆ ಕುಲಗಳವರು ಸಹ ವಾಸಿಸಿದರು. ಬಾಬಿಲೋನಿನ ಅರಸನು ಇಸ್ರೇಲರನ್ನು ಸೆರೆಹಿಡಿದು ಕೊಂಡೊಯ್ಯುವ ತನಕ ಅವರು ಅಲ್ಲಿಯೇ ವಾಸಮಾಡಿದರು.
ಆದರೆ ಆ ಅಧಿಪತಿಗಳು ತಮ್ಮ ಪೂರ್ವಿಕರು ಆರಾಧಿಸುತ್ತಿದ್ದ ದೇವರನ್ನು ಬಿಟ್ಟು ಬೇರೆ ದೇವರುಗಳನ್ನು ಪೂಜಿಸತೊಡಗಿ ತಮ್ಮ ದೇವರ ವಿರುದ್ಧವಾಗಿ ಪಾಪಮಾಡಿದರು. ತಾವು ಸೋಲಿಸಿದ ಅನ್ಯಜನಾಂಗದವರ ದೇವರುಗಳನ್ನು ಇವರು ಆರಾಧಿಸಿದರು.
ಇಸ್ರೇಲರ ದೇವರು ಅಶ್ಯೂರದ ರಾಜನಾದ ಪೂಲ್ (ತಿಗ್ಲತ್ಪಿಲೆಸರ್) ಅವರ ಮೇಲೆ ಯುದ್ಧಕ್ಕೆ ಹೋಗುವಂತೆ ಮಾಡಿದನು. ಅವರು ಬಂದು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರೊಂದಿಗೆ ಯುದ್ಧ ಮಾಡಿದರು. ಯುದ್ಧದಲ್ಲಿ ಅವರನ್ನು ಸೋಲಿಸಿ, ಸೆರೆಹಿಡಿದು ಹಲಹ, ಹಾಬೋರ್, ಹಾರ ಮತ್ತು ಗೋಜಾನ್ ನದಿಯ ಸಮೀಪದ ಸ್ಥಳಕ್ಕೆ ಕೈದಿಗಳನ್ನಾಗಿ ಕೊಂಡೊಯ್ದರು. ಅಂದಿನಿಂದ ಇಂದಿನ ತನಕವೂ ಇಸ್ರೇಲರು ಆ ಸ್ಥಳಗಳಲ್ಲಿ ವಾಸಮಾಡುತ್ತಿರುವರು.