ದಾವೀದನೂ ಸೇನಾಪತಿಗಳೂ ಆಸಾಫನ ಸಂತತಿಯವರನ್ನು ವಿಶೇಷವಾದ ಸೇವೆಗೆ ಪ್ರತ್ಯೇಕಿಸಿದರು. ಆಸಾಫನ ಗಂಡುಮಕ್ಕಳು ಹೇಮಾನ್ ಮತ್ತು ಯೆದುತೂನ್. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸುತ್ತಾ ದೇವರ ಸಂದೇಶವನ್ನು ಪ್ರವಾದಿಸುವುದೇ ಇವರ ಸೇವೆಯಾಗಿತ್ತು. ಈ ರೀತಿಯಾಗಿ ದೇವರ ಸೇವೆಯನ್ನು ಮಾಡಿದವರು ಯಾರೆಂದರೆ:
ಆಸಾಫನ ಸಂತತಿಯಲ್ಲಿ: ಜಕ್ಕೂರ, ಯೋಸೇಫ್, ನೆತನ್ಯ ಮತ್ತು ಅಶರೇಲ, ಅರಸನಾದ ದಾವೀದನು ಆಸಾಫನನ್ನು ಪ್ರವಾದಿಸುವುದಕ್ಕಾಗಿ ಆರಿಸಿಕೊಂಡನು. ಆಸಾಫನು ತನ್ನ ಮಕ್ಕಳಿಗೂ ಮಾರ್ಗದರ್ಶನ ನೀಡಿದನು.
ಯೆದುತೂನನ ಸಂತತಿಯವರಲ್ಲಿ: ಗೆದಲ್ಯ, ಜೇರಿ, ಯೆಶಾಯ, ಶಿಮ್ಮೀ, ಹಷಬ್ಯ ಮತ್ತು ಮತ್ತಿತ್ಯ. ಒಟ್ಟು ಅವನ ಆರು ಮಂದಿ ಮಕ್ಕಳು ತಮ್ಮ ತಂದೆಯಾದ ಯೆದುತೂನನೊಂದಿಗೆ ಹಾರ್ಪ್ ವಾದ್ಯಗಳನ್ನು ಬಾರಿಸಿ ದೇವರ ಸಂದೇಶವನ್ನು ತಿಳಿಸಿದರು ಮತ್ತು ದೇವರಿಗೆ ಕೃತಜ್ಞತಾಸ್ತುತಿಯನ್ನು ಅರ್ಪಿಸಿದರು.
ಇವರೆಲ್ಲರೂ ಹೇಮಾನನ ಮಕ್ಕಳು. ಹೇಮಾನನು ದಾವೀದನ ಪ್ರವಾದಿಯಾಗಿದ್ದನು. ಅವನನ್ನು ಬಲಿಷ್ಠನನ್ನಾಗಿ ಮಾಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳೂ ಮೂವರು ಹೆಣ್ಣುಮಕ್ಕಳೂ ಹುಟ್ಟಿದರು.
ಹೇಮಾನನು ತನ್ನ ಮಕ್ಕಳೆಲ್ಲರನ್ನು ದೇವಾಲಯದಲ್ಲಿ ಹಾಡುವದಕ್ಕಾಗಿ ಬಳಸಿಕೊಂಡನು. ಅವರು ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ತಾಳಗಳನ್ನೂ ಬಾರಿಸಿದರು. ಹೀಗೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಅರಸನಾದ ದಾವೀದನು ಅವರನ್ನು ಆರಿಸಿಕೊಂಡನು.
ಪ್ರತಿಯೊಬ್ಬರಿಗೂ ಕೆಲಸಗಳನ್ನು ಗೊತ್ತುಪಡಿಸಲು ಚೀಟುಹಾಕಿ ನೇಮಕ ಮಾಡಿದರು. ಅವರು ಯಾವ ಪಕ್ಷಪಾತವನ್ನೂ ಮಾಡಲಿಲ್ಲ. ದೊಡ್ಡವರು, ಚಿಕ್ಕವರು, ಉಪಾಧ್ಯಾಯರು, ವಿದ್ಯಾರ್ಥಿಗಳು ಎಂಬ ಬೇಧಭಾವವಿಲ್ಲದೆ ಆರಿಸಲ್ಪಟ್ಟರು.